ಬಾಂಗ್ಲಾವನ್ನು ವೈಟ್'ವಾಶ್ ಮಾಡಿದ ಕಿವೀಸ್

By Suvarna Web DeskFirst Published Dec 31, 2016, 12:38 PM IST
Highlights

3 ಪಂದ್ಯಗಳ ಏಕದಿನ ಸರಣಿಯಲ್ಲಿ ಆತಿಥೇಯ ನ್ಯೂಜಿಲೆಂಡ್ 3-0ಯಿಂದ ಸರಣಿ ಜಯಿಸುವ ಮೂಲಕ ಪ್ರವಾಸಿ ಬಾಂಗ್ಲಾವನ್ನು ವೈಟ್‌'ವಾಶ್‌ ಮಾಡಿದೆ.

ನೆಲ್ಸನ್(ಡಿ.31): ಮಧ್ಯಮ ಕ್ರಮಾಂಕದಲ್ಲಿ ನಾಯಕ ಕೇನ್ ವಿಲಿಯಮ್ಸನ್ (95) ಮತ್ತು ನೀಲ್ ಬ್ರೂಮ್ (97) ನೆರವಿನಿಂದ ನ್ಯೂಜಿಲೆಂಡ್ ತಂಡ, ಮೂರನೇ ಏಕದಿನ ಪಂದ್ಯದಲ್ಲಿ ಬಾಂಗ್ಲಾದೇಶದ ವಿರುದ್ಧ 8 ವಿಕೆಟ್‌'ಗಳ ಗೆಲುವು ಸಾಧಿಸಿದೆ. ಇದರೊಂದಿಗೆ 3 ಪಂದ್ಯಗಳ ಏಕದಿನ ಸರಣಿಯಲ್ಲಿ ಆತಿಥೇಯ ನ್ಯೂಜಿಲೆಂಡ್ 3-0ಯಿಂದ ಸರಣಿ ಜಯಿಸುವ ಮೂಲಕ ಪ್ರವಾಸಿ ಬಾಂಗ್ಲಾವನ್ನು ವೈಟ್‌'ವಾಶ್‌ ಮಾಡಿದೆ.

ಇಲ್ಲಿನ ಸಾಕ್ಸಟನ್ ಓವಲ್ ಕ್ರೀಡಾಂಗಣದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಬಾಂಗ್ಲಾದೇಶ 50 ಓವರ್‌ಗಳಲ್ಲಿ 9 ವಿಕೆಟ್‌ಗೆ 236ರನ್‌'ಗಳಿಸಿತು. ನಂತರ ಬ್ಯಾಟಿಂಗ್ ಮಾಡಿದ ನ್ಯೂಜಿಲೆಂಡ್ 41.2 ಓವರ್‌ಗಳಲ್ಲಿ 2 ವಿಕೆಟ್‌ಗೆ 239ರನ್‌'ಗಳಿಸಿ ಭರ್ಜರಿ ಜಯ ದಾಖಲಿಸಿತು.

ಅಷ್ಟೇನು ಸವಾಲಿನ ಗುರಿಯಲ್ಲದ ಮೊತ್ತವನ್ನು ಬೆನ್ನಟ್ಟಿದ ನ್ಯೂಜಿಲೆಂಡ್ ತಂಡ ಆರಂಭದಲ್ಲಿ ಆಘಾತ ಅನುಭವಿಸಿತು. ಆರಂಭಿಕ ಬ್ಯಾಟ್ಸ್‌ಮನ್ ಟಾಮ್ ಲಥಾಮ್ (4)ರನ್‌'ಗಳಿಸಿದ್ದಾಗ ಮುಸ್ತಾಫಿಜುರ್ ಬೌಲಿಂಗ್‌'ನಲ್ಲಿ ಎಲ್‌'ಬಿ ಬಲೆಗೆ ಬಿದ್ದರು. ನಂತರ ಮಾರ್ಟಿನ್ ಗುಪ್ಟಿಲ್ (6)ರನ್‌'ಗಳಿಸಿದ್ದಾಗ ಮಂಡಿರಜ್ಜು ಗಾಯದ ಸಮಸ್ಯೆಗೆ ಸಿಲುಕಿ ನಿವೃತ್ತಿ ಪಡೆದರು. ಹೀಗೆ 16ರನ್‌'ಗಳಿಸುವಷ್ಟರಲ್ಲಿ ಇಬ್ಬರು ಬ್ಯಾಟ್ಸ್‌ಮನ್‌'ಗಳು ಪೆವಿಲಿಯನ್ ಸೇರಿದ್ದರು. ಈ ವೇಳೆ ಜತೆಯಾದ ನಾಯಕ ಕೇನ್ ವಿಲಿಯಮ್ಸನ್ ಮತ್ತು ನೀಲ್ ಬ್ರೂಮ್ ಬಾಂಗ್ಲಾ ಬೌಲರ್‌ಗಳನ್ನು ಸಮರ್ಥವಾಗಿ ಎದುರಿಸಿದರು.

ನಾಯಕ ಮೊರ್ತಜಾ ಪದೇ ಪದೆ ಬೌಲಿಂಗ್‌ನಲ್ಲಿ ಬದಲಾವಣೆ ತಂದರೂ ವಿಕೆಟ್‌ಗಳು ಬೀಳಲಿಲ್ಲ. ಈ ಇಬ್ಬರು ಆಟಗಾರರು 2ನೇ ವಿಕೆಟ್‌ಗೆ 179ರನ್‌'ಗಳ ಜತೆಯಾಟ ನಿರ್ವಹಿಸಿದರು. ಭರ್ಜರಿ ಬ್ಯಾಟಿಂಗ್ ಮಾಡಿದ ಬ್ರೂಮ್ 97ರನ್‌'ಗಳಿಸಿದ್ದಾಗ ಮುಸ್ತಾಫಿಜುರ್ ಬೌಲಿಂಗ್‌ನಲ್ಲಿ ಮೊರ್ತಜಾಗೆ ಕ್ಯಾಚ್ ನೀಡಿ ನಿರ್ಗಮಿಸಿದರು. ಈ ಮೂಲಕ ಕೇವಲ 3 ರನ್‌ಗಳಿಂದ ಏಕದಿನ ಕ್ರಿಕೆಟ್‌ನಲ್ಲಿನ ಎರಡನೇ ಶತಕದಿಂದ ವಂಚಿತರಾದರು. ನಂತರ ಜೇಮ್ಸ್ ನಿಶಾಮ್ ಜತೆಯಾದ, ವಿಲಿಯಮ್ಸನ್ ಮುರಿಯದ ಮೂರನೇ ವಿಕೆಟ್‌ಗೆ 44ರನ್‌'ಗಳನ್ನು ಕಲೆಹಾಕಿ ಇನ್ನು 8.4 ಓವರ್ ಎಸೆತ ಬಾಕಿ ಇರುವಂತೆಯೇ ಜಯ ತಂದುಕೊಟ್ಟರು. ವಿಲಿಯಮ್ಸನ್ (95), ನಿಶಾಮ್ (28) ಅಜೇಯರಾಗುಳಿದರು. ಬಾಂಗ್ಲಾ ಪರ ಮುಸ್ತಾಫಿಜುರ್ 2 ವಿಕೆಟ್ ಪಡೆದರು.

ಇದಕ್ಕೂ ಮುನ್ನ ಬ್ಯಾಟಿಂಗ್ ಮಾಡಿದ ಬಾಂಗ್ಲಾದೇಶ ತಂಡ ಉತ್ತಮ ಆರಂಭ ಪಡೆಯಿತು. ಓಪನರ್ ಬ್ಯಾಟ್ಸ್‌'ಮನ್ ತಮೀಮ್ ಇಕ್ಬಾಲ್ ಮತ್ತು ಇಮ್ರುಲ್ ಖಯ್ಯಾಸ್ ಮೊದಲ ವಿಕೆಟ್‌ಗೆ ಶತಕದ ಜತೆಯಾಟ ನಿರ್ವಹಿಸಿ ಭದ್ರ ಬುನಾದಿ ಹಾಕಿದರು. ಇಮ್ರುಲ್ (44)ರನ್‌ಗಳಿಸಿದ್ದಾಗ ಸಾಂಟ್ನರ್‌'ಗೆ ವಿಕೆಟ್ ಒಪ್ಪಿಸಿದರು. 6ರನ್‌'ಗಳಿಂದ ಇಮ್ರುಲ್ ಅರ್ಧಶತಕ ವಂಚಿತರಾದರು. ನಂತರದ ಆಟದಲ್ಲಿ ಬಾಂಗ್ಲಾದೇಶದ ಬ್ಯಾಟ್ಸ್‌ಮನ್‌ಗಳು ನಿರಂತರವಾಗಿ ವಿಕೆಟ್ ಒಪ್ಪಿಸುತ್ತಾ ಸಾಗಿದರು. ಶಬ್ಬೀರ್ ರಹಮಾನ್ (19), ಮಹಮದುಲ್ಲ (3), ಶಕೀಬಲ್ ಹಸನ್ (18), ಮೊಸ್ದೇಕ್ ಹುಸೇನ್ (11)ರನ್‌'ಗಳಿಸಿ ನಿರಾಸೆ ಮೂಡಿಸಿದರು.

ಭರವಸೆಯ ಬ್ಯಾಟಿಂಗ್‌ನಿಂದ ಗಮನಸೆಳೆದಿದ್ದ ತಮೀಮ್ ಇಕ್ಬಾಲ್ (59)ರನ್‌'ಗಳಿಸಿ ಔಟ್ ಆದರು. ಕೊನೆಯಲ್ಲಿ ನುರುಲ್ ಹಸನ್ (44)ರನ್‌'ಗಳಿಸಿ ಗಮನ ಸೆಳೆದರು. ಇನ್ನು ತನ್ಬೀರ್ ಹೈದರ್ (3), ಮೊರ್ಷಾಫೆ ಮೊರ್ತಜಾ (14)ರನ್‌'ಗಳಿಸಿದರೆ, ಟಸ್ಕಿನ್ 4, ಮುಸ್ತಾಫಿಜುರ್ ಖಾತೆ ತೆರೆಯದೆ ಕ್ರೀಸ್‌ನಲ್ಲಿದ್ದರು. ಕಿವೀಸ್ ಪರ ಪ್ರಭಾವಿ ಬೌಲಿಂಗ್ ಪ್ರದರ್ಶಿಸಿದ ಮಿಚೆಲ್ ಸಾಂಟ್ನರ್, ಮ್ಯಾಟ್ ಹೆನ್ರಿ ತಲಾ 2 ವಿಕೆಟ್ ಪಡೆದರು.

ಸಂಕ್ಷಿಪ್ತ ಸ್ಕೋರ್

ಬಾಂಗ್ಲಾದೇಶ 50 ಓವರ್‌'ಗಳಲ್ಲಿ 9 ವಿಕೆಟ್‌ಗೆ 236

(ತಮೀಮ್ 59, ನುರುಲ್ 44, ಸಾಂಟ್ನರ್ 38ಕ್ಕೆ 2)

ನ್ಯೂಜಿಲೆಂಡ್ 41.2 ಓವರ್‌'ಗಳಲ್ಲಿ 2 ವಿಕೆಟ್‌ಗೆ 239

(ಬ್ರೂಮ್ 97, ವಿಲಿಯಮ್ಸನ್ ಅಜೇಯ 95, ಮುಸ್ತಾಫಿಜುರ್ 23ಕ್ಕೆ 2)

ಫಲಿತಾಂಶ: ನ್ಯೂಜಿಲೆಂಡ್‌ಗೆ 8 ವಿಕೆಟ್‌ಗಳ ಜಯ

ಪಂದ್ಯಶ್ರೇಷ್ಠ: ಕೇನ್ ವಿಲಿಯಮ್ಸನ್ (ನ್ಯೂಜಿಲೆಂಡ್)

click me!