25ನೇ ಗ್ರ್ಯಾನ್ ಸ್ಲಾಂ ಗೆಲ್ಲುವ ನೋವಾಕ್ ಜೋಕೋವಿಚ್ ಅವರ ಕನಸು ನುಚ್ಚುನೂರಾಗಿದೆ. 24 ಟೆನಿಸ್ ಗ್ರ್ಯಾನ್‌ಸ್ಲಾಂ ಒಡೆಯ ಜೋಕೋ ಇದೀಗ 13ನೇ ಬಾರಿಗೆ ಪ್ರಶಸ್ತಿ ಸುತ್ತಿನಲ್ಲಿ ಮುಗ್ಗರಿಸುವ ಮೂಲಕ ಬೇಡದ ದಾಖಲೆಗೆ ಪಾತ್ರರಾಗಿದ್ದಾರೆ.
ಲಂಡನ್: ವಿಂಬಲ್ಡನ್ ಫೈನಲ್‌ನಲ್ಲಿ ಕಾರ್ಲೊಸ್ ಆಲ್ಕರಜ್ ವಿರುದ್ಧ ಜೋಕೋವಿಚ್ ಸೋಲನುಭವಿಸಿದ್ದಾರೆ. ಜೋಕೋವಿಚ್ ಈ ವರೆಗೂ 37 ಬಾರಿ ಗ್ರ್ಯಾನ್‌ಸ್ಲಾಂ ಫೈನಲ್ ಆಡಿದ್ದಾರೆ. ಈ ಪೈಕಿ 24 ಬಾರಿ ಗೆದ್ದಿದ್ದರೆ, 13 ಬಾರಿ ಸೋತಿದ್ದಾರೆ. ಈ ಮೂಲಕ ಟೆನಿಸ್ ಗ್ರ್ಯಾನ್ ಸ್ಲಾಂ ಇತಿಹಾಸದಲ್ಲಿ ಹದಿಮೂರು ಫೈನಲ್ ಪಂದ್ಯಗಳನ್ನು ಸೋತ ಮೊದಲ ಟೆನಿಸಿಗ ಎನ್ನುವ ಕುಖ್ಯಾತಿಗೆ ಜೋಕೋ ಪಾತ್ರರಾಗಿದ್ದಾರೆ.
ಫ್ರೆಂಚ್ ಓಪನ್‌ನಲ್ಲಿ 4, ವಿಂಬಲ್ಡನ್‌ನಲ್ಲಿ 3 ಹಾಗೂ ಯುಎಸ್ ಓಪನ್‌ನಲ್ಲಿ 6 ಬಾರಿ ಫೈನಲ್‌ನಲ್ಲಿ ಸೋತಿದ್ದಾರೆ. ಆಸ್ಟ್ರೇಲಿಯನ್ ಓಪನ್‌ನ ಫೈನಲ್‌ಗಳಲ್ಲಿ ಮಾತ್ರ ಅಜೇಯ ದಾಖಲೆ ಹೊಂದಿದ್ದಾರೆ. ಟೂರ್ನಿಯಲ್ಲಿ 10 ಬಾರಿ ಫೈನಲ್‌ಗೇರಿದ್ದು, ಒಂದರಲ್ಲೂ ಸೋತಿಲ್ಲ.
undefined
ಗ್ರ್ಯಾನ್‌ಸ್ಲಾಂ ಫೈನಲ್‌ನಲ್ಲಿ ಸೋಲೇ ಕಾಣದ ಕಾರ್ಲೊಸ್
ಆಲ್ಕರಜ್ ಗ್ರ್ಯಾನ್‌ಸ್ಲಾಂ ಟೂರ್ನಿಗಳಲ್ಲಿ ಫೈನಲ್‌ಗೇರಿದ ಎಲ್ಲಾ ಬಾರಿಯೂ ಪ್ರಶಸ್ತಿ ಗೆದ್ದು ಅಜೇಯ ಓಟ ಮುಂದುವರಿಸಿದ್ದಾರೆ. 2022ರ ಯುಎಸ್ ಓಪನ್, 2023ರ ವಿಂಬಲ್ಡನ್ ಹಾಗೂ 2024ರ ಫ್ರೆಂಚ್ ಓಪನ್‌ನಲ್ಲಿ ಗೆದ್ದಿದ್ದ ಆಲ್ಕರಜ್, ಇದೀಗ 2024ರ ವಿಂಬಲ್ಡನ್ ಫೈನಲ್‌ನಲ್ಲಿ ಗೆದ್ದು ಸಂಭ್ರಮಿಸಿದ್ದಾರೆ.
ಕಿಂಗ್ ಕಾರ್ಲೋಸ್: ಸತತ 2ನೇ ವಿಂಬಲ್ಡನ್ ಗೆದ್ದ ಯುವ ಸೂಪರ್ ಸ್ಟಾರ್
3ನೇ ಸಲ ವಿಂಬಲ್ಡನ್ ಫೈನಲ್‌ನಲ್ಲಿ ಸೋಲು
ಜೋಕೋವಿಚ್ 3ನೇ ಬಾರಿ ವಿಂಬಲ್ಡನ್ ಟೂರ್ನಿಯ ಫೈನಲ್‌ನಲ್ಲಿ ಸೋಲನುಭವಿಸಿದರು. ಈ ಮೊದಲು 2013 ಹಾಗೂ 2023ರ ಫೈನಲ್‌ನಲ್ಲಿ ಪರಾಭವಗೊಂಡು ರನ್ನರ್-ಅಪ್ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದ್ದರು.
ಈ ವರ್ಷ ಜೋಕೋಗೆ ನಿರಾಸೆ!
ಜೋಕೋವಿಚ್ 25ನೇ ಗ್ರ್ಯಾನ್‌ಸ್ಲಾಂ ಗೆಲ್ಲಲು ಇನ್ನಷ್ಟು ಸಮಯ ಕಾಯಬೇಕಿದೆ. ಅವರು ಕಳೆದ ವರ್ಷ ಯುಎಸ್ ಓಪನ್ ಮೂಲಕ 24ನೇ ಗ್ರ್ಯಾನ್‌ಸ್ಲಾಂ ಪ್ರಶಸ್ತಿ ತಮ್ಮದಾಗಿಸಿಕೊಡಿದ್ದರು. ಈ ವರ್ಷ ಆಸ್ಟ್ರೇಲಿಯನ್ ಓಪನ್‌ನ ಸೆಮಿಫೈನಲ್‌ನಲ್ಲಿ ಸೋತಿದ್ದರೆ, ಫ್ರೆಂಚ್ ಓಪನ್‌ನ ಕ್ವಾರ್ಟರ್ ಫೈನಲ್‌ಗೂ ಮುನ್ನ ಗಾಯದಿಂದಾಗಿ ಟೂರ್ನಿಯಿಂದ ಹೊರನಡೆದಿದ್ದರು. ಈ ವರ್ಷ ಯುಎಸ್ ಓಪನ್ ಬಾಕಿ ಇದ್ದು, ಅಲ್ಲಿ ದಾಖಲೆಯ 25ನೇ ಗ್ರ್ಯಾನ್ ಸ್ಲಾಂ ಗೆಲ್ಲುವ ಅವಕಾಶ ಸಿಗಲಿದೆ.
ಒಂದೇ ವರ್ಷ ಫ್ರೆಂಚ್ ಓಪನ್, ವಿಂಬಲ್ಡನ್ ಗೆದ್ದ 6ನೇ ಆಟಗಾರ!
1968ರ ನಂತರ ಒಂದೇ ವರ್ಷ ಫ್ರೆಂಚ್ ಓಪನ್ ಹಾಗೂ ವಿಂಬಲ್ಡನ್ ಎರಡೂ ಗ್ರ್ಯಾನ್ ಸ್ಲಾಂಗಳನ್ನು ಗೆದ್ದ ಕೇವಲ 6ನೇ ಆಟಗಾರ ಆಲ್ಕರಜ್. ಈ ಮೊದಲು 1969ರಲ್ಲಿ ರಾಡ್ ಲೇವರ್, 1978-80ರಲ್ಲಿ ಬೊರ್ನ್ ಬೊರ್ಗ್, 2009ರಲ್ಲಿ ರೋಜರ್ ಫೆಡರರ್, 2008, 2010ರಲ್ಲಿ ರಾಫೆಲ್ ನಡಾಲ್, 2021ರಲ್ಲಿ ನೋವಾಕ್ ಜೋಕೋವಿಚ್ ಒಂದೇ ವರ್ಷದಲ್ಲಿ ಫ್ರೆಂಚ್ ಓಪನ್, ವಿಂಬಲ್ಡನ್ ಗೆದ್ದಿದ್ದರು. ಈ ಆರು ಆಟಗಾರರ ಪೈಕಿ ಅತಿಕಿರಿಯ ವಯಸ್ಸಿನಲ್ಲಿ ಈ ಸಾಧನೆ ಮಾಡಿದ ಆಟಗಾರ ಎನ್ನುವ ದಾಖಲೆಯನ್ನು ಆಲ್ಕರಜ್ ಬರೆದಿದ್ದಾರೆ.
ನಡಾಲ್‌ರ ದಾಖಲೆ ಸರಿಗಟ್ಟಿದ ಕಾರ್ಲೋಸ್!
ಜೋಕೋವಿಚ್‌ರನ್ನು ಗ್ರ್ಯಾಂಡ್‌ಸ್ಲಾಂ ಫೈನಲ್‌ಗಳಲ್ಲಿ ಸತತ 2 ವರ್ಷ ಸೋಲಿಸಿದ ಕೇವಲ 2ನೇ ಆಟಗಾರ ಆಲ್ಕರಜ್. ಈ ಸಾಧನೆಯನ್ನು ಆಲ್ಕರಜ್‌ಗೂ ಮೊದಲು ರಾಫೆಲ್ ನಡಾಲ್ ಮಾತ್ರ ಮಾಡಿದ್ದರು. ಫ್ರೆಂಚ್, ಯುಎಸ್ ಓಪನ್‌ನಲ್ಲಿ ನಡಾಲ್ ಒಂದಕ್ಕಿಂತ ಹೆಚ್ಚು ಬಾರಿ ಜೋಕೋವಿಚ್‌ರನ್ನು ಸೋಲಿಸಿದ್ದಾರೆ.
ಜೋಕೋವಿಚ್‌ರಂಥ ದಿಗ್ಗಜನ ವಿರುದ್ಧ ಸತತ 2ನೇ ವರ್ಷವೂ ಗೆದ್ದಿರುವುದು ಬಹಳ ಖುಷಿ ನೀಡಿದೆ. ವಿಂಬಲ್ಡನ್ ಗೆಲ್ಲಬೇಕು ಎನ್ನುವುದು ನನ್ನ ಬಾಲ್ಯದ ಕನಸಾಗಿತ್ತು. 11-12 ವರ್ಷವಿದ್ದಾಗ ನಾನು ವಿಂಬಲ್ಡನ್ ಗೆಲ್ಲುವ ಕನಸು ಕಂಡಿದೆ. ಆ ಕನಸು 2 ಬಾರಿ ಈಡೇರಿದೆ.
- ಕಾರ್ಲೋಸ್ ಆಲ್ಕರಜ್
ಆಲ್ಕರಜ್ ಈ ಗೆಲುವಿಗೆ ಅರ್ಹರು. ಫೈನಲ್ ಪಂದ್ಯ ಒನ್ ಮ್ಯಾನ್ ಶೋನಂತಿತ್ತು. 21ರ ಕಾರ್ಲೋಸ್ ಇನ್ನಷ್ಟು ಪ್ರಶಸ್ತಿ ಗೆಲ್ಲುವುದನ್ನು ನಾವು ನೋಡಲಿದ್ದೇವೆ. 1 ತಿಂಗಳ ಹಿಂದೆ ನಾನಿದ್ದ ಪರಿಸ್ಥಿತಿಯಿಂದ ವಿಂಬಲ್ಡನ್ ಫೈನಲ್ ಪ್ರವೇಶಿಸಿದ್ದು ಹೆಮ್ಮೆ ತರಿಸಿದೆ.
- ನೋವಾಕ್ ಜೋಕೋವಿಚ್
₹28 ಕೋಟಿ: ಪ್ರಶಸ್ತಿ ಗೆದ್ದ ಕಾರ್ಲೋಸ್ ಆಲ್ಕರಜ್‌ಗೆ ಸಿಕ್ಕ ಬಹುಮಾನ ಮೊತ್ತ.
₹14 ಕೋಟಿ: ರನ್ನರ್-ಅಪ್ ನೋವಾಕ್ ಜೋಕೋವಿಚ್‌ಗೆ ಸಿಕ್ಕ ಬಹುಮಾನ ಮೊತ್ತ.
19 ವರ್ಷಗಳಲ್ಲಿ ಮೊದಲ ಸಲ ಪ್ರಶಸ್ತಿ ಇಲ್ಲದೆ ಆಗಸ್ಟ್ ತಿಂಗಳಿಗೆ ಕಾಲಿಡಲಿರುವ ಜೋಕೋವಿಚ್!
24 ಗ್ರ್ಯಾನ್‌ಸ್ಲಾಂ ಸೇರಿ ಜೋಕೋವಿಚ್ ಒಟ್ಟು 98 ಪ್ರಶಸ್ತಿಗಳನ್ನು ಗೆದ್ದಿದ್ದಾರೆ. 2006ರಲ್ಲಿ ಡಚ್ ಓಪನ್ ಗೆಲ್ಲುವ ಮೂಲಕ ಚೊಚ್ಚಲ ಪ್ರಶಸ್ತಿ ಜಯಿಸಿದ್ದ ಜೋಕೋವಿಚ್, 19 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಒಂದೂ ಪ್ರಶಸ್ತಿ ಗೆಲ್ಲದೆ ವರ್ಷವೊಂದರ ಆಗಸ್ಟ್ ತಿಂಗಳಿಗೆ ಪ್ರವೇಶಿಸಲಿದ್ದಾರೆ. 2004ರಲ್ಲಿ ಜೋಕೋವಿಚ್ ಇನ್ನೂ ಒಂದು ಪ್ರಶಸ್ತಿ ಗೆದ್ದಿಲ್ಲ.