
ಕೊಲಂಬೊ(ಮಾ.12): ಆರಂಭಿಕ ಆಘಾತದ ಹೊರತಾಗಿಯೂ ಆಕರ್ಷಕ ಬ್ಯಾಟಿಂಗ್ ನಡೆಸಿದ ಟೀಂ ಇಂಡಿಯಾ ಶ್ರೀಲಂಕಾ ವಿರುದ್ಧ 6 ವಿಕೆಟ್'ಗಳ ಜಯಭೇರಿ ಬಾರಿಸುವುದರೊಂದಿಗೆ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ.
ಶ್ರೀಲಂಕಾವನ್ನು ಕೇವಲ 152 ರನ್'ಗಳಿಗೆ ನಿಯಂತ್ರಿಸಿದ ಟೀಂ ಇಂಡಿಯಾ ಬ್ಯಾಟಿಂಗ್'ನಲ್ಲಿ ಆರಂಭದಲ್ಲೇ ಮುಗ್ಗರಿಸಿತು. ರೋಹಿತ್ ಶರ್ಮಾ ಕೇವಲ 11 ಬಾರಿಸಿ ಮತ್ತೊಮ್ಮೆ ನಿರಾಸೆ ಮೂಡಿಸಿದರೆ, ಧವನ್ ಆಟ ಕೇವಲ 8 ರನ್'ಗಳಿಗೆ ಸೀಮಿತವಾಯಿತು. ಟೀಂ ಇಂಡಿಯಾ 22 ರನ್'ಗಳಿಸುವಷ್ಟರಲ್ಲಿ ಆರಂಭಿಕರಿಬ್ಬರೂ ಪೆವಿಲಿಯನ್ ಸೇರಿದ್ದರು.
ಬಲ ತುಂಬಿದ ಮಧ್ಯಮ ಕ್ರಮಾಂಕ:
ಮೂರನೇ ವಿಕೆಟ್'ಗೆ ರಾಹುಲ್ ಹಾಗೂ ರೈನಾ 40 ರನ್'ಗಳ ಜತೆಯಾಟವಾಡುವ ಮೂಲಕ ತಂಡಕ್ಕೆ ಆಸರೆಯಾದರು. ಸ್ಫೋಟಕ ಬ್ಯಾಟಿಂಗ್ ನಡೆಸಿದ ರೈನಾ ಕೇವಲ 15 ಎಸೆತಗಳಲ್ಲಿ ತಲಾ 2 ಬೌಂಡರಿ ಹಾಗೂ ಸಿಕ್ಸರ್'ಗಳ ನೆರವಿನಿಂದ 27 ರನ್ ಸಿಡಿಸಿ ವಿಕೆಟ್ ಒಪ್ಪಿಸಿದರು. ತಾಳ್ಮೆಯ ಆಟವಾಡುತ್ತಿದ್ದ ರಾಹುಲ್(18) ಜೀವನ್ ಮೆಂಡಿಸ್ ಬೌಲಿಂಗ್'ನಲ್ಲಿ ಹಿಟ್'ವಿಕೆಟ್'ಗೆ ಬಲಿಯಾಗಿ ಪೆವಿಲಿಯನ್ ಸೇರಿದರು. ಟಿ20 ಕ್ರಿಕೆಟ್'ನಲ್ಲಿ ಹಿಟ್'ವಿಕೆಟ್ ಆದ ಮೊದಲ ಭಾರತೀಯ ಕ್ರಿಕೆಟಿಗ ಎಂಬ ಕುಖ್ಯಾತಿಗೆ ರಾಹುಲ್ ಪಾತ್ರರಾದರು.
ಪಾಂಡ್ಯ-ಕಾರ್ತಿಕ್ ಅಜೇಯ ಜತೆಯಾಟ:
ರಾಹುಲ್ ಔಟ್ ಆಗುವ ವೇಳೆ ಟೀಂ ಇಂಡಿಯಾ 85/4 ಇನ್ನೂ ಸಂಕಷ್ಟದಿಂದ ಪಾರಾಗಿರಲಿಲ್ಲ. ಈ ವೇಳೆ ಜತೆಯಾದ ಪಾಂಡ್ಯ-ದಿನೇಶ್ ಕಾರ್ತಿಕ್ ಜೋಡಿ 68 ರನ್'ಗಳ ಅಜೇಯ ಜತೆಯಾಟವಾಡುವ ಮೂಲಕ ತಂಡವನ್ನು ಗೆಲುವಿನ ದಡ ಸೇರಿಸಿದರು. ಕಾರ್ತಿಕ್ 39* ರನ್ ಸಿಡಿಸಿದರೆ, ಪಾಂಡ್ಯ 42* ರನ್ ಬಾರಿಸಿ ಟೀಂ ಇಂಡಿಯಾ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು.
ಇದಕ್ಕೂ ಮೊದಲು ಶಾರ್ದೂಲ್ ಠಾಕೂರ್ ಮಾರಕ ದಾಳಿಯ ನೆರವಿನಿಂದ ಟೀಂ ಇಂಡಿಯಾ ಶ್ರೀಲಂಕಾವನ್ನು 152 ರನ್'ಗಳಿಗೆ ನಿಯಂತ್ರಿಸಿತು.
ಸಂಕ್ಷಿಪ್ತ ಸ್ಕೋರ್:
ಶ್ರೀಲಂಕಾ: 152
ಕುಸಾಲ್ ಮೆಂಡಿಸ್: 55
ಶಾರ್ದೂಲ್ ಠಾಕೂರ್: 27/4
ಭಾರತ: 153/4
ಮನೀಶ್ ಪಾಂಡೆ: 42*
ಅಕಿಲಾ ಧನಂಜಯ: 19/2
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.