
ಕೊಲಂಬೋ(ಮಾ.12): ಯುವ ವೇಗಿ ಶಾರ್ದೂಲ್ ಠಾಕೂರ್ ಮಾರಕ ದಾಳಿಗೆ ತತ್ತರಿಸಿದ ಶ್ರೀಲಂಕಾ 152 ರನ್ ಬಾರಿಸಿದೆ. ಇದಕ್ಕುತ್ತರವಾಗಿ ಬ್ಯಾಟಿಂಗ್ ಆರಂಭಿಸಿದ ಭಾರತ 22 ರನ್'ಗಳಿಗೆ 2 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದೆ.
ಟಾಸ್ ಗೆದ್ದು ಫೀಲ್ಡಿಂಗ್ ಆಯ್ದುಕೊಂಡ ಟೀಂ ಇಂಡಿಯಾ ಉತ್ತಮ ಆರಂಭವನ್ನೇ ಪಡೆಯಿತು. ಪಂದ್ಯದ 3ನೇ ಓವರ್'ನಲ್ಲೇ ಗುಣತಿಲಕರನ್ನು ಪೆವಿಲಿಯನ್'ಗೆ ಅಟ್ಟುವಲ್ಲಿ ಶಾರ್ದೂಲ್ ಠಾಕೂರ್ ಯಶಸ್ವಿಯಾದರು. ಇದರ ಬೆನ್ನಲ್ಲೇ ಕೆಟ್ಟಹೊಡೆತಕ್ಕೆ ಕೈ ಹಾಕಿ ಕುಸಾಲ ಪೆರೇರಾ ಪೆವಿಲಿಯನ್ ಸೇರಿದರು. ಈ ವೇಳೆ ಕುಸಾಲ್ ಮೆಂಡೀಸ್ ಹಾಗೂ ತರಂಗಾ ತಂಡಕ್ಕೆ ಅಲ್ಪ ಚೇತರಿಕೆ ನೀಡಿದರು. ಅರ್ಧಶತಕದ ಜತೆಯಟವಾಡಿದ ಈ ಜೋಡಿಯನ್ನು ವಿಜಯ್ ಶಂಕರ್ ಬೇರ್ಪಡಿಸಿದರು. ತರಂಗಾ 22 ಬಾರಿಸಿ ಕ್ಲೀನ್ ಬೌಲ್ಡ್ ಆದರು. ನಂತರ ಕ್ರೀಸ್'ಗಿಳಿದ ನಾಯಕ ತಿಸಾರ ಪೆರೇರಾ ಸತತ 2 ಸಿಕ್ಸರ್ ಸಿಡಿಸಿ ಸ್ಫೋಟಕ ಬ್ಯಾಟಿಂಗ್ ಮಾಡುವ ಮುನ್ಸೂಚನೆ ನೀಡಿದರು. ಆದರೆ ಮತ್ತೆ ದಾಳಿಗಿಳಿದ ಠಾಕೂರ್ ಪೆರೇರಾ ಅವರನ್ನು ಪೆವಿಲಿಯನ್'ಗೆ ಅಟ್ಟುವಲ್ಲಿ ಸಫಲವಾದರು. ಒಂದು ಕಡೆ ವಿಕೆಟ್ ಬೀಳುತ್ತಿದ್ದರೂ ಮತ್ತೊಂದೆಡೆ ಕುಸಾಲ್ ಮೆಂಡಿಸ್ ಕೇವಲ 38 ಎಸೆತಗಳಲ್ಲಿ 55 ರನ್ ಬಾರಿಸಿ ತಂಡಕ್ಕೆ ಆಸರೆಯಾದರು. ಕುಸಾಲ್ ಮೆಂಡೀಸ್ ವಿಕೆಟ್ ಬೀಳುತ್ತಿದ್ದಂತೆ ದಿಢೀರ್ ಕುಸಿತ ಕಂಡ ಲಂಕಾ ನಿಗದಿತ 19 ಓವರ್'ಗಳಲ್ಲಿ 152 ರನ್'ಗಳನ್ನಷ್ಟೇ ಕಲೆಹಾಕಲು ಶಕ್ತವಾಯಿತು.
ಭಾರತ ಪರ ಶಾರ್ದೂಲ್ ಠಾಕೂರ್ 4 ವಿಕೆಟ್ ಪಡೆದರೆ, ವಾಷಿಂಗ್ಟನ್ ಸುಂದರ್ 2, ಉನಾದ್ಕತ್,ಚಾಹಲ್ ಹಾಗೂ ವಿಜಯ್ ಶಂಕರ್ ತಲಾ ಒಂದು ವಿಕೆಟ್ ಪಡೆದರು.
ಸಂಕ್ಷಿಪ್ತ ಸ್ಕೋರ್:
ಶ್ರೀಲಂಕಾ: 152/9
ಕುಸಾಲ್ ಮೆಂಡಿಸ್: 55
ಶಾರ್ದೂಲ್ ಠಾಕೂರ್: 27/4
(* ವಿವರ ಅಪೂರ್ಣ)
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.