National gamesನಲ್ಲಿ ಚಿನ್ನ ಗೆದ್ದ ಕನ್ನಡಿಗ ಮನು ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ನೀರಜ್!

By Suvarna News  |  First Published Oct 9, 2022, 5:24 PM IST

ಗುಜರಾತ್‌ನಲ್ಲಿ ನಡೆಯುತ್ತಿರುವ ರಾಷ್ಟ್ರೀಯ ಕ್ರೀಡಾಕೂಟದಲ್ಲಿ ಕನ್ನಡಿಗ ಮನು ಚಿನ್ನದ ಪದಕ ಗೆದ್ದುಕೊಂಡಿದ್ದಾರೆ. ಮನು ಪ್ರದರ್ಶನವನ್ನು ನೀರಜ್ ಚೋಪ್ರಾ ಕೊಂಡಾಡಿದ್ದಾರೆ. ಇಷ್ಟೇ ಅಲ್ಲ ಕಾಮನ್‌ವವೆಲ್ತ್ ಗೇಮ್ಸ್, ಏಷ್ಯನ್ ಗೇಮ್ಸ್ ಮೀರಿಸುವ ರೀತಿಯಲ್ಲಿ ರಾಷ್ಟ್ರೀಯ ಕ್ರೀಡಾಕೂಟ ಆಯೋಜಿಸಲಾಗಿದೆ ಎಂದಿದ್ದಾರೆ.


ಬೆಂಗಳೂರು(ಅ.09): ಗುಜರಾತ್‌ನಲ್ಲಿ ನಡೆಯುತ್ತಿರುವ 36ನೇ ರಾಷ್ಟ್ರೀಯ ಕ್ರೀಡಾಕೂಟದಲ್ಲಿ ಸರ್ವೀಸಸ್ ತಂಡವನ್ನು ಪ್ರತಿನಿಧಿಸಿ ಚಿನ್ನದ ಪದಕ ಗೆದ್ದ ಕರ್ನಾಟಕದ ಯುವ ಜಾವೆಲಿನ್ ಥ್ರೋ ಪಟು ಮನು ಡಿ.ಪಿ. ಬಗ್ಗೆ ಒಲಿಂಪಿಕ್ ಚಾಂಪಿಯನ್ ನೀರಜ್ ಚೋಪ್ರಾ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ರಾಷ್ಟ್ರೀಯ ಗೇಮ್ಸ್‌ನಲ್ಲಿ ಸ್ಪರ್ಧಿಸದಿದ್ದರೂ ಕ್ರೀಡಾಕೂಟದ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಂಡು, ಸ್ಪರ್ಧೆಗಳ ನಡೆಯುತ್ತಿದ್ದ ಸ್ಥಳಗಳಿಗೆ ಭೇಟಿ ನೀಡಿದ ನೀರಜ್ ಯುವ ಕ್ರೀಡಾಪಟುಗಳನ್ನು ಪ್ರೋತ್ಸಾಹಿಸಿದರು. ರಾಷ್ಟ್ರೀಯ ಗೇಮ್ಸ್‌ಗೆ ಭೇಟಿ ನೀಡಿದ ಬಗ್ಗೆ ಮಾಧ್ಯಮಗಳ ಜೊತೆ ವಿಶೇಷ ಸಂದರ್ಶನದಲ್ಲಿ ನೀರಜ್ ತಮ್ಮ ಅನುಭವ ಹಂಚಿಕೊಂಡಿದ್ದಾರೆ.

ಜಾವೆಲಿನ್ ಥ್ರೋನಲ್ಲಿ ಮತ್ತ್ಯಾವ ಭಾರತೀಯ ಅಥ್ಲೀಟ್‌ಗಳ ಪ್ರದರ್ಶನ ನಿಮ್ಮ ಗಮನ ಸೆಳೆದಿದೆ. ಉದಯೋನ್ಮುಖ ಅಥ್ಲೀಟ್‌ಗಳು ಯಾರ‌್ಯಾರು ಎನ್ನುವ ಪ್ರಶ್ನೆಗೆ ಉತ್ತರಿಸಿದ ನೀರಜ್, ‘ಭಾರತದಲ್ಲಿ ಜಾವೆಲಿನ್ ಥ್ರೋ ಪ್ರಗತಿ ಖುಷಿ ನೀಡಿದೆ. ಅನೇಕ ಯುವ ಕ್ರೀಡಾಪಟುಗಳು ಉತ್ತಮ ಪ್ರದರ್ಶನ ತೋರುತ್ತಿದ್ದಾರೆ. ಮನು ಡಿ.ಪಿ, ರೋಹಿತ್ ಯಾದವ್, ಸಾಹಿಲ್ ಸಿಲ್ವಾಲ್ ಈಗಾಗಲೇ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿದ್ದಾರೆ. ಈಗಾಗಲೇ 80 ಮೀ. ದೂರವನ್ನು ದಾಟಿದ್ದಾರೆ. ಸದ್ಯದಲ್ಲೇ ಭಾರತ ಜಾವೆಲಿನ್ ಥ್ರೋನಲ್ಲಿ ಇನ್ನಷ್ಟು ಅಂತಾರಾಷ್ಟ್ರೀಯ ಪದಕಗಳನ್ನು ಗೆಲ್ಲಲಿದೆ ಎನ್ನುವ ಬಗ್ಗೆ ನನಗೆ ಸಂಪೂರ್ಣ ವಿಶ್ವಾಸವಿದೆ’ ಎಂದು ಹೇಳಿದರು.

Tap to resize

Latest Videos

 

ಡೈಮಂಡ್ ಲೀಗ್ ಗೆಲುವಿನ ಬಳಿಕ ರಜೆ ದಿನಗಳನ್ನು ಎಂಜಾಯ್ ಮಾಡುತ್ತಿರುವ ಚಿನ್ನದ ಹುಡುಗ ನೀರಜ್ ಚೋಪ್ರಾ

ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಸ್ಪರ್ಧಿಸಿದ್ದ ಮನು, ತಮ್ಮ ಚೊಚ್ಚಲ ರಾಷ್ಟ್ರೀಯ ಗೇಮ್ಸ್‌ನಲ್ಲಿ 80.71 ಮೀ. ದೂರಕ್ಕೆ ಜಾವೆಲಿನ್ ಎಸೆದು ಚಿನ್ನದ ಪದಕ ಗೆದ್ದರು. ಈ ಹಿಂದೆಯೂ ನೀರಜ್, ಮನು ಅವರ ಪ್ರದರ್ಶನವನ್ನು ಟ್ವೀಟರ್‌ನಲ್ಲಿ ಶ್ಲಾಘಿಸಿದ್ದರು.

ನಾಷನಲ್ ಗೇಮ್ಸ್‌ನ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಂಡ ನೀರಜ್ ನವರಾತ್ರಿ ಸಂಭ್ರಮದಲ್ಲೂ ಭಾಗಿಯಾದರು. ‘ಮೊಟ್ಟ ಮೊದಲ ಬಾರಿಗೆ ಗರ್ಬಾ ನೃತ್ಯ ಮಾಡಿದೆ. ನವರಾತ್ರಿ ಸಂಭ್ರಮದಲ್ಲಿ ಅಷ್ಟೊಂದು ಜನ ಒಟ್ಟಿಗೆ ಸೇರಿದ್ದು ನೋಡಿ ಖುಷಿಯಾಯಿತು’ ಎಂದರು. ಇನ್ನು ಉದ್ಘಾಟನಾ ಸಮಾರಂಭವನ್ನು ಏಷ್ಯನ್ ಗೇಮ್ಸ್ ಹಾಗೂ ಕಾಮನ್‌ವೆಲ್ತ್ ಗೇಮ್ಸ್‌ನ ಸಮಾರಂಭದ ರೀತಿಯಲ್ಲಿ ಆಯೋಜಿಸಲಾಗಿತ್ತು ಎಂದು ಮೆಚ್ಚುಗೆಯ ಮಾತುಗಳನ್ನಾಡಿದರು. ಕೇವಲ 3-4 ತಿಂಗಳುಗಳಲ್ಲಿ ಇಷ್ಟು ದೊಡ್ಡ ಕ್ರೀಡಾಕೂಟವನ್ನು ಆಯೋಜಿಸುವಲ್ಲಿ ಯಶಸ್ವಿಯಾದ ಗುಜರಾತ್ ಸರ್ಕಾರದ ಪರಿಶ್ರಮವನ್ನೂ ನೀರಜ್ ಕೊಂಡಾಡಿದರು.

ಯುವ ಕ್ರೀಡಾಪಟುಗಳು ಬದುಕಿನಲ್ಲಿ ರಾಷ್ಟ್ರೀಯ ಗೇಮ್ಸ್ ಬಹಳ ಮಹತ್ವದ ಪಾತ್ರ ವಹಿಸಲಿದೆ ಎಂದು ಅಭಿಪ್ರಾಯಿಸಿದ ನೀರಜ್, ‘ನಮ್ಮ ನಮ್ಮ ಕ್ರೀಡೆಗಳಲ್ಲಿ ರಾಷ್ಟ್ರೀಯ ಚಾಂಪಿಯನ್‌ಶಿಪ್ ಆಡುವುದು ಬೇರೆ. ನ್ಯಾಷನಲ್ ಗೇಮ್ಸ್ ಒಂದು ರೀತಿಯಲ್ಲಿ ಒಲಿಂಪಿಕ್ಸ್ ಇದ್ದಂತೆ. ಇಷ್ಟೊಂದು ಸಂಖ್ಯೆಯಲ್ಲಿ ಕ್ರೀಡಾಪಟುಗಳು ಒಟ್ಟಿಗೆ ಸೇರುವುದು ಅಪರೂಪ. 2015ರಲ್ಲಿ ನಾನು ಮೊದಲ ಬಾರಿಗೆ ನ್ಯಾಷನಲ್ ಗೇಮ್ಸ್ ಆಡಿದ್ದೆ. ಆ ಅನುಭವ ನನಗೆ ಹಲವು ಪಾಠಗಳನ್ನು ಕಲಿಸಿತು. ಆಗ ನಾನಿನ್ನೂ ಕಿರಿಯ ಅಥ್ಲೀಟ್. ಆ ಬಳಿಕ ನಾನು ವಿವಿಧ ಕ್ರೀಡೆಗಳ ಅನೇಕ ಕ್ರೀಡಾಪಟುಗಳನ್ನು ಭೇಟಿಯಾದೆ. ನ್ಯಾಷನಲ್ ಗೇಮ್ಸ್‌ನಲ್ಲಿ 5ನೇ ಸ್ಥಾನ ಪಡೆದ ನಾನು ಪಟಿಯಾಲಾದಲ್ಲಿ ನಡೆದ ರಾಷ್ಟ್ರೀಯ ಶಿಬಿರಕ್ಕೆ ಆಯ್ಕೆಯಾದೆ. ಹೀಗಾಗಿ ನನ್ನ ಬದುಕಿಗೆ ಹೊಸ ತಿರುವು ಸಿಕ್ಕಿದ್ದೇ ನ್ಯಾಷನಲ್ ಗೇಮ್ಸ್‌ನಲ್ಲಿ ಎನ್ನುವ ಬಗ್ಗೆ ನನಗೆ ಹೆಮ್ಮೆ ಇದೆ’ ಎಂದು ಖುಷಿಯಿಂದ ಹೇಳಿದರು.

ನ್ಯಾಷನಲ್‌ ಗೇಮ್ಸ್‌ನಿಂದ ಹೊರಗುಳಿಯಲು ತೀರ್ಮಾನಿಸಿದ ನೀರಜ್ ಚೋಪ್ರಾ..!

ಟೋಕಿಯೋ ಒಲಿಂಪಿಕ್ಸ್ ಬಳಿಕ ತಮ್ಮ ಜೀವನ ಹೇಗೆ ಬದಲಾಗಿದೆ ಎನ್ನುವುದರ ಬಗ್ಗೆಯೂ ನೀರಜ್ ಮಾಹಿತಿ ಹಂಚಿಕೊಂಡರು. ‘ಒಲಿಂಪಿಕ್ಸ್ ನನಗೆ ಒತ್ತಡವನ್ನು ಹೇಗೆ ನಿಭಾಯಿಸಬೇಕು. ತಾಳ್ಮೆ ಕಾಪಾಡಿಕೊಳ್ಳುವುದು ಹೇಗೆ ಎನ್ನುವುದನ್ನು ಕಲಿಸಿತು. ಒಲಿಂಪಿಕ್ಸ್ ಬಳಿಕ ನಾನು ಸ್ಪರ್ಧಿಸಿದ ಬಹುತೇಕ ಎಲ್ಲಾ ಕೂಟಗಳಲ್ಲೂ ನಾನು ಪದಕ ಗೆದ್ದಿದ್ದೇನೆ. ಒಲಿಂಪಿಕ್ಸ್‌ನಿಂದ ಗಳಿಸಿದ ಅನುಭವ ಒಬ್ಬ ಕ್ರೀಡಾಪಟುವಾಗಿ ನನ್ನಲ್ಲಿ ಹಲವು ಬದಲಾವಣೆಗೆ ಕಾರಣವಾಗಿದೆ’ ಎಂದು ನೀರಜ್ ಹೇಳಿಕೊಂಡರು.

ದೇಶದಲ್ಲಿ ಕ್ರೀಡೆಗೆ ಈಗ ಸಿಗುತ್ತಿರುವ ಪ್ರೋತ್ಸಾಹದ ಬಗ್ಗೆ ಸಂತಸ ವ್ಯಕ್ತಪಡಿಸಿದ ನೀರಜ್, ಹಲವು ಸಂಸ್ಥೆಗಳು ಕ್ರೀಡಾಪಟುಗಳಿಗೆ ಪ್ರಾಯೋಜಕತ್ವ ನೀಡುತ್ತಿವೆ. ಟಾರ್ಗೆಟ್ ಒಲಿಂಪಿಕ್ ಪೋಡಿಯಂ ಯೋಜನೆ(ಟಾಪ್ಸ್) ಮೂಲಕ ಕೇಂದ್ರ ಸರ್ಕಾರ ಕ್ರೀಡಾಪಟುಗಳ ತರಬೇತಿಗೆ ಬೇಕಿರುವ ಅಗತ್ಯ ಸೌಲಭ್ಯಗಳನ್ನು ಒದಗಿಸುತ್ತಿದೆ. ಈ ಹಿಂದೆಯೂ ಸರ್ಕಾರ ಪ್ರೋತ್ಸಾಹ ನೀಡುತ್ತಿತ್ತು. ಆದರೆ ಈಗ ಪ್ರಮಾಣ ಹೆಚ್ಚಿದೆ ಎಂದು ನೀರಜ್ ಹೇಳಿದರು.

click me!