ಲುಸ್ಸಾನ್ ಡೈಮಂಡ್ ಲೀಗ್ ಟೂರ್ನಿಯಲ್ಲಿ ಚಿನ್ನ ಗೆದ್ದ ನೀರಜ್ ಚೋಪ್ರಾ
ಕಳೆದ ತಿಂಗಳು ಅಭ್ಯಾಸ ನಡೆಸುವ ವೇಳೆ ಸ್ನಾಯು ಸೆಳೆತಕ್ಕೆ ಒಳಗಾಗಿದ್ದ ನೀರಜ್ ಚೋಪ್ರಾ
ಚಿನ್ನ ಗೆದ್ದ ಬೆನ್ನಲ್ಲೇ ಯೂರೋಪ್‌ನಲ್ಲೇ ಉಳಿಯಲು ತೀರ್ಮಾನಿಸಿದ ಚಿನ್ನದ ಹುಡುಗ
ನವದೆಹಲಿ(ಜು.01): ಒಲಿಂಪಿಕ್ ಚಿನ್ನದ ಪದಕ ವಿಜೇತ ಜಾವೆಲಿನ್ ಥ್ರೋ ಪಟು ನೀರಜ್ ಚೋಪ್ರಾ, ಮುಂಬರುವ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್ ಹಾಗೂ ಏಷ್ಯನ್ ಗೇಮ್ಸ್ ಟೂರ್ನಿಯನ್ನು ಗಮನದಲ್ಲಿಟ್ಟುಕೊಂಡು ಅಭ್ಯಾಸ ಮಾಡುವ ಉದ್ದೇಶದಿಂದ ಯೂರೋಪಿನಲ್ಲಿಯೇ ಉಳಿಯಲು ತೀರ್ಮಾನಿಸಿದ್ದಾರೆ.
25 ವರ್ಷದ ನೀರಜ್ ಚೋಪ್ರಾ, ಕಳೆದ ತಿಂಗಳು ಅಭ್ಯಾಸ ನಡೆಸುವ ವೇಳೆ ಸ್ನಾಯು ಸೆಳೆತಕ್ಕೆ ಒಳಗಾಗಿದ್ದರು. ಹೀಗಾಗಿ ಕಳೆದೊಂದು ತಿಂಗಳಿನಲ್ಲಿ ನೀರಜ್ ಚೋಪ್ರಾ ಮೂರು ಪ್ರಮುಖ ಸ್ಪರ್ಧೆಗಳಿಂದ ಹೊರಗುಳಿದಿದ್ದರು. ಇದೀಗ ಲುಸ್ಸಾನ್ ಡೈಮಂಡ್ ಲೀಗ್ ಸ್ಪರ್ಧೆಯ 5ನೇ ಪ್ರಯತ್ನದಲ್ಲಿ ನೀರಜ್ ಚೋಪ್ರಾ 87.66 ಮೀಟರ್ ದೂರ ಜಾವೆಲಿನ್ ಎಸೆಯುವ ಮೂಲಕ ಚಿನ್ನದ ಪದಕವನ್ನು ತಮ್ಮದಾಗಿಸಿಕೊಳ್ಳುವಲ್ಲಿ ಯಶಸ್ವಿಯಾದರು.
𝐆𝐎𝐋𝐃𝐄𝐍 𝐛𝐨𝐲 𝐨𝐟 𝐈𝐍𝐃𝐈𝐀🇮🇳, 𝐍𝐞𝐞𝐫𝐚𝐣 𝐂𝐡𝐨𝐩𝐫𝐚 𝐰𝐨𝐧 𝐭𝐡𝐞 𝐋𝐚𝐮𝐬𝐚𝐧𝐧𝐞 𝐃𝐢𝐚𝐦𝐨𝐧𝐝 𝐋𝐞𝐚𝐠𝐮𝐞 𝐰𝐢𝐭𝐡 𝐚 𝐛𝐞𝐬𝐭 𝐭𝐡𝐫𝐨𝐰 𝐨𝐟 𝟖𝟕.𝟔𝟔𝐦. pic.twitter.com/odyRCAhYZw
— Doordarshan Sports (@ddsportschannel)
ನೀರಜ್ ಚೋಪ್ರಾ, ಮೊದಲ ಪ್ರಯತ್ನದಲ್ಲಿ ಪೌಲ್ ಮಾಡಿದರು. ಇದಾದ ಬಳಿಕ ಎರಡನೇ ಪ್ರಯತ್ನದಲ್ಲಿ 83.52 ಮೀಟರ್ ದೂರ ಜಾವೆಲಿನ್ ಎಸೆದರು. ಇನ್ನು ಮೂರನೇ ಪ್ರಯತ್ನದಲ್ಲಿ ನೀರಜ್ ಚೋಪ್ರಾ 85.04 ಮೀಟರ್ ದೂರ ಜಾವೆಲಿನ್ ಥ್ರೋ ಮಾಡಿದರು. ಇನ್ನು ನೀರಜ್ ಚೋಪ್ರಾ ಅವರ ನಾಲ್ಕನೇ ಪ್ರಯತ್ನ ಪೌಲ್ ಆಯಿತು. ಇನ್ನು ಐದನೇ ಪ್ರಯತ್ನದಲ್ಲಿ ನೀರಜ್ ಚೋಪ್ರಾ 87.66 ಮೀಟರ್ ದೂರ ಜಾವೆಲಿನ್ ಥ್ರೋ ಮಾಡುವ ಮೂಲಕ ನಂ.1 ಸ್ಥಾನಕ್ಕೆ ಲಗ್ಗೆಯಿಟ್ಟರು. ಇನ್ನು ಆರನೇ ಪ್ರಯತ್ನದಲ್ಲಿ ನೀರಜ್ ಚೋಪ್ರಾ 84.15 ಮೀಟರ್ ದೂರ ಎಸೆಯುವ ಮೂಲಕ ತಮ್ಮ ಕೊನೆಯ ಪ್ರಯತ್ನ ಮುಗಿಸಿದರು.
ಸತತ ಎರಡನೇ ಬಾರಿಗೆ ಡೈಮಂಡ್ ಲೀಗ್‌ನಲ್ಲಿ ಚಿನ್ನ ಗೆದ್ದ ನೀರಜ್ ಚೋಪ್ರಾ; ಅಭಿನಂದಿಸಿದ ಪ್ರಧಾನಿ ಮೋದಿ
ಮಿಷನ್ ಒಲಿಂಪಿಕ್ ಒಲಿಂಪಿಕ್ ಸೆಲ್ ಇದೀಗ ಜರ್ಮನಿಯಲ್ಲಿ ಅಭ್ಯಾಸ ನಡೆಸಲು ಕ್ರೀಡಾ ಸಚಿವಾಲಯವು ಅಗತ್ಯ ಹಣಕಾಸಿನ ನೆರವು ಒದಗಿಸಲು ಒಪ್ಪಿಗೆ ಸೂಚಿಸಿದೆ. ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್ ಕ್ರೀಡಾಕೂಟವು ಬುಡಾಪೆಸ್ಟ್‌ನಲ್ಲಿ ಆಗಸ್ಟ್ 19ರಿಂದ 27ರ ವರೆಗೆ ನಡೆಯಲಿದೆ. ಏಷ್ಯನ್ ಗೇಮ್ಸ್ ಕ್ರೀಡಾಕೂಟವು ಸೆಪ್ಟೆಂಬರ್ 23ರಿಂದ ಅಕ್ಟೋಬರ್ 08ರವರೆಗೆ ಹ್ಯಾಂಗ್ಝೂನಲ್ಲಿ ನಡೆಯಲಿದೆ.
ಸದ್ಯ ಜರ್ಮನಿಯಲ್ಲಿರುವ ನೀರಜ್ ಚೋಪ್ರಾ, ಸಾರ್ಬೊಕ್ಕಿನ್‌ನಲ್ಲಿ ಜುಲೈ 05ಕ್ಕೆ ತೆರಳಲಿದ್ದಾರೆ. ಇನ್ನು ಮ್ಯಾಗಲಿಜಿನ್‌ಗೆ ಆಗಸ್ಟ್ 01 ಕ್ಕೆ ತೆರಳಲಿರುವ ನೀರಜ್ ಚೋಪ್ರಾ ಅಲ್ಲಿ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ಗೆ ಅಭ್ಯಾಸ ನಡೆಸಲಿದ್ದಾರೆ. ಇದರರ್ಥ ನೀರಜ್ ಚೋಪ್ರಾ ಏಷ್ಯನ್ ಗೇಮ್ಸ್ ಮುಕ್ತಾಯದ ಬಳಿಕವಷ್ಟೇ ಭಾರತಕ್ಕೆ ವಾಪಸ್ಸಾಗಲಿದ್ದಾರೆ.