National Open Athletics Championship: ಮೊದಲ ದಿನವೇ ಎರಡು ಪದಕ ಗೆದ್ದ ಕರ್ನಾಟಕ

By Kannadaprabha News  |  First Published Oct 17, 2022, 11:54 AM IST

* ಬೆಂಗಳೂರಿನಲ್ಲಿ ನಡೆಯುತ್ತಿದೆ 61ನೇ ರಾಷ್ಟ್ರೀಯ ಓಪನ್‌ ಅಥ್ಲೆಟಿಕ್ಸ್‌ ಚಾಂಪಿಯನ್‌ಶಿಪ್‌
* ಮೊದಲ ದಿನವೇ ಕರ್ನಾಟಕಕ್ಕೆ ಒಲಿದ ಎರಡು ಕಂಚಿನ ಪದಕ
* ಬೆಂಗಳೂರಿನ ಕಂಠೀರವ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಟೂರ್ನಿ


ಬೆಂಗಳೂರು(ಅ.17): 61ನೇ ರಾಷ್ಟ್ರೀಯ ಓಪನ್‌ ಅಥ್ಲೆಟಿಕ್ಸ್‌ ಚಾಂಪಿಯನ್‌ಶಿಪ್‌ನಲ್ಲಿ ಭಾನುವಾರ ಕರ್ನಾಟಕಕ್ಕೆ 2 ಕಂಚಿನ ಪದಕ ಒಲಿಯಿತು. ಪುರುಷರ ವಿಭಾಗದ 400 ಮೀ. ಓಟದಲ್ಲಿ ನಿಹಾಲ್‌ ಜೋಯೆಲ್‌, ಪುರುಷರ ಲಾಂಗ್‌ಜಂಪ್‌ನಲ್ಲಿ ಆರ್ಯ ಪದಕ ಗೆದ್ದರು. 400 ಮೀ. ಓಟದಲ್ಲಿ 47.03 ಸೆಕೆಂಡ್‌ಗಳಲ್ಲಿ ಗುರಿ ತಲುಪಿದ ನಿಹಾಲ್‌ ತೃತೀಯ ಸ್ಥಾನಿಯಾದರು. ರೈಲ್ವೇಸ್‌ ಅಥ್ಲೀಟ್‌ಗಳಾದ ರಾಜೇಶ್‌ ರಮೇಶ್‌ (46.63 ಸೆಕೆಂಡ್‌), ಆಯುಷ್‌ (46.86 ಸೆಕೆಂಡ್‌) ಕ್ರಮವಾಗಿ ಚಿನ್ನ ಮತ್ತು ಬೆಳ್ಳಿ ಗೆದ್ದರು. ಮಹಿಳೆಯರ 400 ಮೀ. ಓಟದಲ್ಲಿ ತಮಿಳುನಾಡಿನ ಶುಭಾ ವೆಂಕಟೇಶನ್‌(52.47 ಸೆ.) ಚಿನ್ನ ಜಯಿಸಿದರೆ, ಕರ್ನಾಟಕದ ಲಿಖಿತಾ (53.57 ಸೆ.) 4ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡರು.

ಲಾಂಗ್‌ಜಂಪ್‌ನಲ್ಲಿ ರಾಜ್ಯದ ಆರ್ಯ 7.49 ಮೀ. ದೂರ ಜಿಗಿದು ಕಂಚು ಗೆದ್ದರು. ರೈಲ್ವೇಸ್‌ನ ಯುಗಾಂತ್‌ ಶೇಖರ್‌(7.59 ಮೀ.), ಕೇರಳದ ಮೊಹಮದ್‌ ಆಸಿಫ್‌(7.57 ಮೀ.) ಕ್ರಮವಾಗಿ ಚಿನ್ನ, ಬೆಳ್ಳಿ ಜಯಿಸಿದರು. ರಾಜ್ಯದ ಪುರುಷೋತ್ತಮ್‌(7.45ಮೀ.) 5ನೇ ಸ್ಥಾನ ಪಡೆದರು.

Tap to resize

Latest Videos

ಪುರುಷರ 100 ಮೀ. ಓಟದಲ್ಲಿ ರೈಲ್ವೇಸ್‌ನ ಎಲಕ್ಕಿಯದಾಸನ್‌, ಮಹಿಳೆಯರ 100 ಮೀ. ಓಟದಲ್ಲಿ ಒಡಿಶಾದ ಸ್ರಬಾನಿ ನಂದಾ ಬಂಗಾರಕ್ಕೆ ಮುತ್ತಿಕ್ಕಿದರು. ಪುರುಷರ 1500 ಮೀ. ಓಟದಲ್ಲಿ ಸರ್ವಿಸಸ್‌ನ ಪರ್ವೇಜ್‌ ಖಾನ್‌, ಮಹಿಳೆಯರ 1500 ಮೀ. ಓಟದಲ್ಲಿ ಮಧ್ಯಪ್ರದೇಶದ ದೀಕ್ಷಾ ಸ್ವರ್ಣ ಗೆದ್ದರು. ಪುರುಷರ ಶಾಟ್‌ಪುಟ್‌ನಲ್ಲಿ ಸರ್ವಿಸಸ್‌ನ ತೇಜಿಂದರ್‌ಪಾಲ್‌ ಸಿಂಗ್‌ ಬಂಗಾರ ಜಯಿಸಿದರು. ಮಹಿಳೆಯರ ಹೆಪ್ಟಥ್ಲಾನ್‌ನಲ್ಲಿ ರೈಲ್ವೇಸ್‌ನ ಸ್ವಪ್ನ ಚಿನ್ನ, ಸೌಮ್ಯಾ ಬೆಳ್ಳಿ, ಸೋನು ಕುಮಾರಿ ಕಂಚು ಗೆದ್ದರು.

ಫಿಫಾ ಯು-17: ಭಾರತಕ್ಕೆ ನಾಳೆ ಬ್ರೆಜಿಲ್‌ ಸವಾಲು

ಭುವನೇಶ್ವರ್‌: ಫುಟ್ಬಾಲ್‌ ವಿಶ್ವಕಪ್‌ನಲ್ಲಿ ಬ್ರೆಜಿಲ್‌ ವಿರುದ್ಧ ಆಡುವುದು ಪ್ರತಿ ತಂಡದ ಕನಸಾಗಿರುತ್ತದೆ. ಭಾರತಕ್ಕೆ ಈ ಅವಕಾಶ ಸಿಗಲಿದೆಯೇ ಎನ್ನುವ ಕುತೂಹಲ ಅಭಿಮಾನಿಗಳಲ್ಲಿತ್ತು. ಆ ಕುತೂಹಲಕ್ಕೆ ಸೋಮವಾರ ತೆರೆ ಬೀಳಲಿದೆ. ಫಿಫಾ ಅಂಡರ್‌-17 ಮಹಿಳಾ ವಿಶ್ವಕಪ್‌ಗೆ ಆತಿಥ್ಯ ವಹಿಸುತ್ತಿರುವ ಭಾರತ ‘ಎ’ ಗುಂಪಿನ ತನ್ನ ಕೊನೆಯ ಪಂದ್ಯದಲ್ಲಿ ಬ್ರೆಜಿಲ್‌ ವಿರುದ್ಧ ಆಡಲಿದೆ. ಮೊದಲೆರಡು ಪಂದ್ಯಗಳಲ್ಲಿ ಸೋತಿರುವ ಭಾರತ, ಈಗಾಗಲೇ ಹೊರಬಿದ್ದಿದ್ದು ಈ ಪಂದ್ಯ ಔಪಚಾರಿಕವಾದರೂ ವಿಶೇಷ ಎನಿಸಿದೆ. ಹಾಲಿ ಚಾಂಪಿಯನ್‌ ಬ್ರೆಜಿಲ್‌ ದೊಡ್ಡ ಗೆಲುವು ಸಾಧಿಸಿ ನಾಕೌಟ್‌ ಪ್ರವೇಶಕ್ಕೆ ಎದುರು ನೋಡುತ್ತಿದೆ.

ಪಂದ್ಯ: ರಾತ್ರಿ 8ಕ್ಕೆ

ಶೂಟಿಂಗ್‌ ವಿಶ್ವಕಪ್‌: 5ನೇ ಚಿನ್ನದ ಪದಕ ಗೆದ್ದ ಭಾರತ

ಕೈರೋ: ಇಲ್ಲಿ ನಡೆಯುತ್ತಿರುವ ಐಎಸ್‌ಎಸ್‌ಎಫ್‌ ಶೂಟಿಂಗ್‌ ವಿಶ್ವಕಪ್‌ನಲ್ಲಿ ಭಾರತದ ಚಿನ್ನದ ಗಳಿಕೆ 5ಕ್ಕೇರಿದೆ. ಭಾನುವಾರ ಪುರುಷರ 10 ಮೀ. ಏರ್‌ ರೈಫಲ್‌ನಲ್ಲಿ ರುದ್ರಾಂಕ್‌್ಷ ಪಾಟೀಲ್‌, ಕಿರಣ್‌ ಜಾಧವ್‌, ಅರ್ಜುನ್‌ ಬಾಬುತಾ ಅವರನ್ನೊಳಗೊಂಡ ತಂಡ ಚೀನಾವನ್ನು 16-10 ಅಂಕಗಳಿಂದ ಮಣಿಸಿ ಬಂಗಾರದ ಪದಕ ಗೆದ್ದುಕೊಂಡಿತು. 

ಓಪನ್ ಅಥ್ಲೆಟಿಕ್ಸ್‌ ಚಾಂಪಿಯನ್‌ಶಿಪ್‌ಗೆ ಸಿಎಂ ಬಸವರಾಜ ಬೊಮ್ಮಾಯಿ ಚಾಲನೆ

ರುದ್ರಾಂಕ್‌್ಷಗೆ ಕೂಟದಲ್ಲಿ ಇದು 2ನೇ ಚಿನ್ನದ ಪದಕ. ಇನ್ನು, ಕಿರಿಯರ 25 ಮೀ. ಸ್ಟಾಂಡರ್ಡ್‌ ಪಿಸ್ತೂಲ್‌ ಮಿಶ್ರ ತಂಡ ವಿಭಾಗದಲ್ಲಿ ಮಾನ್ವಿ ಜೈನ್‌-ಸಮೀರ್‌ ಬೆಳ್ಳಿ ಗೆದ್ದರು. ಮಹಿಳೆಯರ ಏರ್‌ ಪಿಸ್ತೂಲ್‌ ತಂಡ ವಿಭಾಗದಲ್ಲೂ ಭಾರತಕ್ಕೆ ಬೆಳ್ಳಿ ಪದಕ ಒಲಿಯಿತು. ಭಾನುವಾರ 2 ಕಂಚು ಕೂಡಾ ಗೆದ್ದ ಭಾರತ ಒಟ್ಟು 11 ಪದಕಗಳೊಂದಿಗೆ ಪಟ್ಟಿಯಲ್ಲಿ 2ನೇ ಸ್ಥಾನದಲ್ಲಿದೆ.

ವಿಶ್ವ ನಂ.1 ಮ್ಯಾಗ್ನಸ್‌ಗೆ ಸೋಲುಣಿಸಿದ ಅರ್ಜುನ್‌

ಚೆನ್ನೈ: ಭಾರತ ಗ್ರ್ಯಾಂಡ್‌ಮಾಸ್ಟರ್‌ ಅರ್ಜುನ್‌ ಎರಿಗೈಸಿ ಏಮ್‌ಚೆಸ್‌ ರಾರ‍ಯಪಿಡ್‌ ಆನ್‌ಲೈನ್‌ ಚೆಸ್‌ ಟೂರ್ನಿಯಲ್ಲಿ 5 ಬಾರಿ ವಿಶ್ವ ಚಾಂಪಿಯನ್‌, ವಿಶ್ವ ನಂ.1 ನಾರ್ವೆಯ ಮ್ಯಾಗ್ನಸ್‌ ಕಾಲ್‌ರ್‍ಸನ್‌ಗೆ ಸೋಲುಣಿಸಿದ್ದಾರೆ. 19 ವರ್ಷದ ಅರ್ಜುನ್‌ ಟೂರ್ನಿಯ 7ನೇ ಸುತ್ತಿನ ಪಂದ್ಯದಲ್ಲಿ ಕಾಲ್‌ರ್‍ಸನ್‌ ವಿರುದ್ಧ ಜಯಭೇರಿ ಬಾರಿಸಿದರು. 

ಕಳೆದ ತಿಂಗಳು ಅರ್ಜುನ್‌ ಜ್ಯೂಲಿಯಸ್‌ ಬೇರ್‌ ಜನರೇಶನ್‌ ಕಪ್‌ ಆನ್‌ಲೈನ್‌ ಟೂರ್ನಿಯಲ್ಲಿ ಕಾಲ್‌ರ್‍ಸನ್‌ ವಿರುದ್ಧ ಸೋತಿದ್ದರು. ಸದ್ಯ ಅರ್ಜುನ್‌ ಟೂರ್ನಿಯಲ್ಲಿ 5ನೇ ಸ್ಥಾನದಲ್ಲಿದ್ದಾರೆ.

click me!