16ರ ಹರೆಯದ ಯುವ ಆಟಗಾರನ ಬಲಿ ಪಡೆದ ಬಾಸ್ಕೆಟ್‌ಬಾಲ್ ಕಂಬ

Published : Nov 26, 2025, 03:36 PM IST
basketball players tragic death in Rohtak

ಸಾರಾಂಶ

basketball player death:ತುಕ್ಕು ಹಿಡಿದಿದ್ದ ಬಾಸ್ಕೆಟ್‌ಬಾಲ್ ಕಂಬ ಕುಸಿದು ಬಿದ್ದು, 16ರ ಹರೆಯದ ಯುವ ಆಟಗಾರನೋರ್ವ ಸಾವನ್ನಪಿದ ಆಘಾತಕಾರಿ ಘಟನೆ ಹರ್ಯಾಣದ ರೋಹ್ಟಕ್‌ನಲ್ಲಿ ನಡೆದಿದೆ.

ಬಾಸ್ಕೆಟ್‌ಬಾಲ್ ಕಂಬ ಕುಸಿದು ಬಿದ್ದು ಯುವ ಆಟಗಾರ ಸಾವು:

ಆಟವಾಡುತ್ತಿದ್ದಾಗಲೇ ಬಾಸ್ಕೆಟ್‌ಬಾಲ್‌ನ ಕಂಬ ಬಿದ್ದು, ಯುವ ಆಟಗಾರನೋರ್ವ ಸಾವನ್ನಪ್ಪಿದ ಆಘಾತಕಾರಿ ಘಟನೆ ನಡೆದಿದೆ. ಅಭ್ಯಾಸದ ಸಮಯದಲ್ಲಿ ಬ್ಯಾಸ್ಕೆಟ್‌ಬಾಲ್ ಕಂಬವು ಎದೆಯ ಮೇಲೆ ಬಿದ್ದು ಈ ದುರಂತ ಸಂಭವಿಸಿದೆ. ರಾಷ್ಟ್ರೀಯ ಮಟ್ಟದ ಬ್ಯಾಸ್ಕೆಟ್‌ಬಾಲ್ ಆಟಗಾರ 16 ವರ್ಷದ ಹಾರ್ದಿಕ್ ರಥಿ ಸಾವನ್ನಪ್ಪಿದ ಆಟಗಾರ. ಹರಿಯಾಣದ ರೋಹ್ಟಕ್‌ನಲ್ಲಿ ಈ ದುರಂತ ನಡೆದಿದೆ. ಹಾರ್ದಿಕ್ ರಥಿ ನಿನ್ನೆ ಲಖನ್ ಮಜ್ರಾದ ಕೋರ್ಟ್‌ನಲ್ಲಿ ಬಾಸ್ಕೆಟ್‌ಬಾಲ್ ಅಭ್ಯಾಸ ಮಾಡುತ್ತಿದ್ದಾಗ, ಬಲವಾಗಿ ನೆಟ್ಟಿರದ ಕಬ್ಬಿಣದ ಕಂಬವೊಂದು ಸೀದಾ ಬಂದು ಅವರ ಎದೆಮೇಲೆ ಬಿದ್ದಿದ್ದು, ಅವರು ಗಂಭೀರ ಗಾಯಗೊಂಡಿದ್ದಾರೆ. ಕೂಡಲೇ ಅವರನ್ನು ಅವರ ಗೆಳೆಯರು ಆಸ್ಪತ್ರೆಗೆ ಸಾಗಿಸಿದರಾದರು ಅವರನ್ನು ಬದುಕುಳಿಸಲಾಗಲಿಲ್ಲ.

ನಿರ್ವಹಣೆ ಇಲ್ಲದೇ ತುಕ್ಕು ಹಿಡಿದಿದ್ದ ಕಂಬ:

ಈ ದುರಂತ ಘಟನೆ ಅಲ್ಲೇ ಇದ್ದ ಸಿಸಿಟಿವಿಯಲ್ಲಿ ಸೆರೆಯಾಗಿದೆ. ದೃಶ್ಯಾವಳಿಗಳಲ್ಲಿ ಹಾರ್ದಿಕ್ ಬಾಸ್ಕೆಟ್‌ಬಾಲ್‌ ಕೋರ್ಟ್‌ನಲ್ಲಿ ಒಬ್ಬಂಟಿಯಾಗಿ ಅಭ್ಯಾಸ ಮಾಡುತ್ತಿರುವುದು ಕಾಣುತ್ತಿದೆ. ವೈರಲ್ ಆದ ವೀಡಿಯೋದಲ್ಲಿ ಹಾರ್ದಿಕ್ ಕೋರ್ಟ್‌ನ ಮಧ್ಯದಿಂದ ಹೋಗಿ ಬಾಲ್ ಎಸೆಯುವ ಈ ಕಬ್ಬಿಣದ ಸ್ಟ್ಯಾಂಡ್‌ನ್ನು ಕೈಯಲ್ಲಿ ಹಿಡಿದು ನೇತಾಡುವುದಕ್ಕೆ ಮೇಲೆ ಜಿಗಿದಿದ್ದು, ಅಷ್ಟರಲ್ಲಿ ಸ್ಟ್ಯಾಂಡ್ ಕೆಳಗೆ ಕುಸಿದು ಅವರ ಮೇಲೆ ಬಿದ್ದಿದೆ. ಈ ಬಾಸ್ಕೆಟ್‌ಬಾಲ್ ಕಂಬ ತುಕ್ಕು ಹಿಡಿದಿತ್ತು ಎಂದು ವರದಿಯಾಗಿದೆ.

ಈ ಕಬ್ಬಿಣದ ಸ್ಟ್ಯಾಂಡ್ ಸೀದಾ ಬಂದು ಅವರ ಮೇಲೆ ಬಿದ್ದಿದ್ದರಿಂದ ಅದರ ಸಂಪೂರ್ಣ ಭಾರ ಹಾರ್ದಿಕ್ ಮೇಲೆ ಬಿದ್ದಿದೆ. ಕೂಡಲೇ ಅವರ ಸ್ನೇಹಿತರು ಹಾಗೂ ಸಹ ಆಟಗಾರರು ಆತನ ಸಹಾಯಕ್ಕೆ ಧಾವಿಸಿ ಬಂದಿದ್ದು,ಅವರು ಕಂಬವನ್ನು ಎತ್ತಿ ಹಾರ್ದಿಕ್ ಅನ್ನು ರಕ್ಷಿಸಿದ್ದರಾದರು ತೀವ್ರವಾದ ಗಾಯಗಳಿಂದಾಗಿ ಅವರು ಬದುಕುಳಿಯಲಿಲ್ಲ ಘಟನೆಯಿಂದಾಗಿ 16 ವರ್ಷದ ಕ್ರೀಡಾ ಪ್ರತಿಭೆ ಸ್ಥಳದಲ್ಲೇ ನಿಧನರಾಗಿದ್ದಾರೆ.

ರಾಷ್ಟ್ರೀಯ ಬಾಸ್ಕೆಟ್‌ಬಾಲ್ ತಂಡಕ್ಕೆ ಆಯ್ಕೆಯಾಗಿದ್ದ ಹಾರ್ದಿಕ್:

ಹಾರ್ದಿಕ್ ಅವರು ರಾಷ್ಟ್ರೀಯ ಬಾಸ್ಕೆಟ್‌ಬಾಲ್ ತಂಡಕ್ಕೆ ಆಯ್ಕೆಯಾಗಿದ್ದರು ಹಾಗೂ ಇತ್ತೀಚೆಗಷ್ಟೇ ಅವರು ತರಬೇತಿ ಶಿಬಿರದಿಂದ ಹಿಂತಿರುಗಿದ್ದರು ಎಂದು ಅವರ ನೆರೆಮನೆಯವರು ಹೇಳಿದ್ದಾರೆ. ಮಕ್ಕಳು ಕ್ರೀಡಾಲೋಕದಲ್ಲಿ ಸಾಧನೆ ಮಾಡಬೇಕು ಎಂಬ ಆಶಯದಿಂದ ಹಾರ್ದಿಕ್ ಅವರ ತಂದೆ ಸಂದೀಪ್ ರಥಿ ಅವರು ಹಾರ್ದಿಕ್ ಹಾಗೂ ಅವರ ಸೋದರನನ್ನು ಮನೆಯ ಹತ್ತಿರದ ಕ್ರೀಡಾ ಕ್ಲಬ್‌ಗೆ ಸೇರಿಸಿದ್ದರು. ಆದರೆ ಈ ದುರಂತದಿಂದಾಗಿ ಈಗ ಅವರ ಕುಟುಂಬದ ಕನಸು ಭಗ್ನವಾಗಿದೆ. ದುರಂತದ ನಂತರ ಪೊಲೀಸರು ಹಾರ್ದಿಕ್‌ ಶವವನ್ನು ವಶಕ್ಕೆ ಪಡೆದು ಮರಣೋತ್ತರ ಪರೀಕ್ಷೆ ನಡೆಸಿ ಕುಟುಂಬಕ್ಕೆ ಹಸ್ತಾಂತರಿಸಿದ್ದಾರೆ ಘಟನೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಿಸಲಾಗಿದೆ.

ಬಹದ್ದೂರ್‌ಗಢ ಜಿಲ್ಲೆಯ ಘಟನೆ ಮಾಸುವ ಮೊದಲೇ ಮತ್ತೊಂದು ದುರಂತ:

ಆಘಾತಕಾರಿ ಸಂಗತಿಯೆಂದರೆ, ಹರಿಯಾಣದ ಬಹದ್ದೂರ್‌ಗಢ ಜಿಲ್ಲೆಯಲ್ಲಿಯೂ ಇದೇ ರೀತಿಯ ಘಟನೆ ನಡೆದಿತ್ತು. ಹದಿನೈದು ವರ್ಷದ ಅಮನ್ ಎಂಬ ಬಾಲಕ ಕ್ರೀಡಾಂಗಣದಲ್ಲಿ ಅಭ್ಯಾಸ ಮಾಡುತ್ತಿದ್ದಾಗ ಬ್ಯಾಸ್ಕೆಟ್‌ಬಾಲ್ ಕಂಬವೊಂದು ಆತನ ಮೇಲೆ ಬಿದ್ದ ಪರಿಣಾಮ ಬಾಲಕ ಅಮನ್ ಸಾವನ್ನಪ್ಪಿದ್ದ. ಕಂಬ ಬಿದ್ದ ನಂತರ ಗಂಭೀರ ಗಾಯಗೊಂಡಿದ್ದ ಆತನನ್ನು ರೋಹ್ಟಕ್‌ನ ಪಂಡಿತ್ ಭಾಗವತ್ ದಯಾಳ್ ಶರ್ಮಾ ಸ್ನಾತಕೋತ್ತರ ವೈದ್ಯಕೀಯ ವಿಜ್ಞಾನ ಸಂಸ್ಥೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಆತ ಸೋಮವಾರವಷ್ಟೇ ಸಾವನ್ನಪ್ಪಿದ್ದ. ಆ ಘಟನೆ ಮಾಸುವ ಮೊದಲೇ ಈಗ ಮತ್ತೊಂದು ದುರಂತ ನಡೆದಿದೆ.

ಅಮನ್ 10 ನೇ ತರಗತಿಯ ವಿದ್ಯಾರ್ಥಿಯಾಗಿದ್ದು, ಇತ್ತೀಚೆಗೆ ತನ್ನ ಶಾಲೆಯ ವಾರ್ಷಿಕ ಕ್ರೀಡಾಕೂಟದಲ್ಲಿ ಪದಕ ಗೆದ್ದಿದ್ದ. ದೇಶದ ಹಲವು ಅತ್ಯುತ್ತಮ ಕ್ರೀಡಾಪಟುಗಳಿಗೆ ನೆಲೆಯಾಗಿರುವ ಹರಿಯಾಣದಲ್ಲಿ, ಸತತವಾಗಿ ನಡೆದ ಇಬ್ಬರು ಭರವಸೆಯ ಬ್ಯಾಸ್ಕೆಟ್‌ಬಾಲ್ ಆಟಗಾರರ ಸಾವುಗಳು, ರಾಜ್ಯದಲ್ಲಿ ಸಾರ್ವಜನಿಕ ಕ್ರೀಡಾ ಮೂಲಸೌಕರ್ಯ ಮತ್ತು ಅದರ ನಿರ್ವಹಣೆಯ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿವೆ. ಆದರೆ ಈ ಘಟನೆಯ ವಿವರಗಳು ತಮಗೆ ತಿಳಿದಿಲ್ಲ ಎಂದು ಹರಿಯಾಣ ಮುಖ್ಯಮಂತ್ರಿ ನಯಾಬ್ ಸೈನಿ ಹೇಳಿದ್ದಾರೆ. ನಿಮ್ಮ ಮೂಲಕ, ಬ್ಯಾಸ್ಕೆಟ್‌ಬಾಲ್ ಆಟಗಾರನ ಸಾವಿನ ಬಗ್ಗೆ ನನಗೆ ತಿಳಿದು ಬಂದಿದೆ. ನಾನು ವಿಚಾರಿಸಿ ಅದಕ್ಕೆ ಅನುಗುಣವಾಗಿ ಕ್ರಮ ಕೈಗೊಳ್ಳುತ್ತೇನೆ ಎಂದು ಅವರು ಮಾಧ್ಯಮಗಳಿಗೆ ತಿಳಿಸಿದ್ದಾರೆ.

 

 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಮೇಲ್ಮನವಿ ಅರ್ಜಿ ವಜಾಗೊಳಿಸಿದ ಹೈಕೋರ್ಟ್, ಡಿ.7ಕ್ಕೆ ಕರ್ನಾಟಕ ಕ್ರಿಕೆಚ್ ಸಂಸ್ಥೆ ಚುನಾವಣೆ
ಕಾಂಗರೂ ನಾಡಲ್ಲಿ ಶತಕದ ಬರ ನೀಗಿಸಿಕೊಂಡ ಜೋ ರೂಟ್! ಕೊನೆಗೂ ತಪ್ಪಿದ ಹೇಡನ್ 'ಬೆತ್ತಲೆ ಸೇವೆ'!