* ನ್ಯಾಷನಲ್ ಗೇಮ್ಸ್‌ನಲ್ಲಿ ಗುರುವಾರ ಕರ್ನಾಟಕದ ಪಾಲಾದ 11 ಪದಕಗಳು
* ಶಟ್ಲರ್‌ಗಳು ಹಾಗೂ ಈಜುಪಟುಗಳು ಭರ್ಜರಿ ಪದಕ ಬೇಟೆ
* 17 ಚಿನ್ನ, 18 ಬೆಳ್ಳಿ, 29 ಕಂಚಿನೊಂದಿಗೆ ಒಟ್ಟು 64 ಪದಕ ಗೆದ್ದಿರುವ ಕರ್ನಾಟಕ
ಅಹಮದಾಬಾದ್(ಅ.07): 36ನೇ ರಾಷ್ಟ್ರೀಯ ಗೇಮ್ಸ್‌ನಲ್ಲಿ ಕರ್ನಾಟಕ ಗುರುವಾರ 11 ಪದಕಗಳನ್ನು ಬಾಚಿಕೊಂಡಿತು. ಶಟ್ಲರ್‌ಗಳು ಹಾಗೂ ಈಜುಪಟುಗಳು ಪದಕ ಬೇಟೆ ನಡೆಸಿದರು. 17 ಚಿನ್ನ, 18 ಬೆಳ್ಳಿ, 29 ಕಂಚಿನೊಂದಿಗೆ ಒಟ್ಟು 64 ಪದಕ ಗೆದ್ದಿರುವ ಕರ್ನಾಟಕ, ಪದಕ ಪಟ್ಟಿಯಲ್ಲಿ 6ನೇ ಸ್ಥಾನಕ್ಕೇರಿದೆ.
ಬ್ಯಾಡ್ಮಿಂಟನ್ ಮಿಶ್ರ ಡಬಲ್ಸ್‌ನಲ್ಲಿ ಅಂ.ರಾ. ತಾರೆ ಅಶ್ವಿನಿ ಪೊನ್ನಪ್ಪ, ಸಾಯಿ ಪ್ರತೀಕ್ ಜೊತೆ ಸೇರಿ ಫೈನಲಲ್ಲಿ ದೆಹಲಿಯ ರೋಹನ್-ಕನಿಕಾ ವಿರುದ್ಧ 21-15, 21-13ರಲ್ಲಿ ಗೆದ್ದು ಚಿನ್ನಕ್ಕೆ ಮುತ್ತಿಟ್ಟರು. ಪುರುಷರ ಸಿಂಗಲ್ಸ್‌ನಲ್ಲಿ ತೆಲಂಗಾಣದ ಸಾಯಿ ಪ್ರಣೀತ್ ವಿರುದ್ಧ ಮಿಥುನ್ ಮಂಜುನಾಥ್ 11-21, 21-12, 16-21ರಲ್ಲಿ ಸೋತು ಬೆಳ್ಳಿ ತೃಪ್ತಿಪಟ್ಟರೆ, ಮಹಿಳೆಯರ ಡಬಲ್ಸ್‌ನಲ್ಲಿ ತೆಲಂಗಾಣದ ಸಿಕ್ಕಿ ರೆಡ್ಡಿ-ಗಾಯತ್ರಿ ಗೋಪಿಚಂದ್ ವಿರುದ್ಧ 14-21, 11-21ರಲ್ಲಿ ಸೋತ ಶಿಖಾ ಗೌತಮ್ ಹಾಗೂ ಅಶ್ವಿನಿ ಭಟ್ ಸಹ ಬೆಳ್ಳಿಗೆ ಸಮಾಧಾನಪಟ್ಟುಕೊಂಡರು. ಇನ್ನು ಪುರುಷರ ಸಿಂಗಲ್ಸ್ ಸೆಮೀಸ್‌ನಲ್ಲಿ ಸೋತ ರಘು ಎಂ., ಪುರುಷರ ಡಬಲ್ಸ್‌ನಲ್ಲಿ ನಿತಿನ್-ವೈಭವ್, ಮಹಿಳಾ ಸಿಂಗಲ್ಸ್‌ನಲ್ಲಿ ತಾನ್ಯಾ ಹೇಮಂತ್‌ಗೆ ಕಂಚು ದೊರೆಯಿತು.
ಒಲಿಂಪಿಯನ್ ಶ್ರೀಹರಿ ನಟರಾಜ್ 100 ಮೀ. ಬ್ಯಾಕ್‌ಸ್ಟ್ರೋಕ್‌ನಲ್ಲಿ ರಾಷ್ಟ್ರೀಯ ದಾಖಲೆ(55.80 ಸೆಕೆಂಡ್)ಯೊಂದಿಗೆ ಚಿನ್ನ ಗೆದ್ದರೆ, ಇದೇ ವಿಭಾಗದಲ್ಲಿ ಎಸ್.ಶಿವಾ ಬೆಳ್ಳಿ ಜಯಿಸಿದರು. ಮಹಿಳೆಯರ 50 ಮೀ. ಬಟರ್‌ಫ್ಲೈ ವಿಭಾಗದಲ್ಲಿ 28.38 ಸೆಕೆಂಡ್‌ಗಳಲ್ಲಿ ಗುರಿ ತಲುಪಿದ ನೀನಾ ವೆಂಕಟೇಶ್ ನೂತನ ರಾಷ್ಟ್ರೀಯ ದಾಖಲೆ ಬರೆದು ಚಿನ್ನಕ್ಕೆ ಮುತ್ತಿಟ್ಟರು. ಇದೇ ಸ್ಪರ್ಧೆಯಲ್ಲಿ ತನಿಶಿ ಗುಪ್ತಾ ಕಂಚು ಪಡೆದರು. 100 ಮೀ. ಬ್ಯಾಕ್‌ಸ್ಟ್ರೋಕ್‌ನಲ್ಲಿ ರಿಧಿಮಾ ಬೆಳ್ಳಿ, 1500 ಮೀ. ಫ್ರೀ ಸ್ಟೈಲ್‌ನಲ್ಲಿ ಹಾಶಿಕಾ ಕಂಚು ಗೆದ್ದರು.
ರಾಷ್ಟ್ರೀಯ ಕ್ರೀಡಾಕೂಟ: ದಿವ್ಯಾಗೆ ಶೂಟಿಂಗ್ ಕಂಚು
ಅಹಮದಾಬಾದ್: ಕರ್ನಾಟಕದ ದಿವ್ಯಾ ಟಿ.ಎಸ್. ಇಲ್ಲಿ ನಡೆಯುತ್ತಿರುವ ರಾಷ್ಟ್ರೀಯ ಕ್ರೀಡಾಕೂಟದಲ್ಲಿ ಕಂಚಿನ ಪದಕ ಗೆದ್ದಿದ್ದಾರೆ. ಮಹಿಳೆಯರ ಶೂಟಿಂಗ್ 10 ಮೀ. ಏರ್ ಪಿಸ್ತೂಲ್ ಸ್ಪರ್ಧೆಯ ಫೈನಲ್‌ನಲ್ಲಿ ಅವರು 248.3 ಅಂಕಗಳೊಂದಿಗೆ 3ನೇ ಸ್ಥಾನ ಪಡೆದರು. ಅರ್ಹತಾ ಸುತ್ತಿನಲ್ಲಿ 8ನೇ ಸ್ಥಾನ ಪಡೆದು ಫೈನಲ್ ಪ್ರವೇಶಿಸಿದ್ದ ದಿವ್ಯಾ, ಪದಕ ಸುತ್ತಿನಲ್ಲಿ ಉತ್ತಮ ಪ್ರದರ್ಶನ ತೋರಿದರು. ಆಗಸ್ಟ್‌ನಲ್ಲಿ ನಡೆದಿದ್ದ ರಾಷ್ಟ್ರೀಯ ಶೂಟಿಂಗ್ ಆಯ್ಕೆ ಟ್ರಯಲ್ಸ್‌ನಲ್ಲಿ ದಿವ್ಯಾ ಚಿನ್ನ ಜಯಿಸಿದ್ದರು.
ಭಾರತದ ಕೋಚ್‌ಗಳಿಗೆ ವಾರ್ಷಿಕ ಹಾಕಿ ಪ್ರಶಸ್ತಿ
ನವದೆಹಲಿ: ಭಾರತ ಪುರುಷರ ತಂಡದ ಕೋಚ್ ಗ್ರಹಾಮ್ ರೀಡ್, ಮಹಿಳಾ ತಂಡದ ಕೋಚ್ ಯಾನೆಕ್ ಸ್ಕಾಪ್‌ಮನ್ ಅಂತಾರಾಷ್ಟ್ರೀಯ ಹಾಕಿ ಫೆಡರೇಷನ್(ಎಫ್‌ಐಎಚ್)ನ ವರ್ಷದ ಶ್ರೇಷ್ಠ ಕೋಚ್ ಪ್ರಶಸ್ತಿಗೆ ಭಾಜನರಾಗಿದ್ದಾರೆ. ರೀಡ್ ಸತತ 2ನೇ ವರ್ಷ ಈ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಅವರ ಮಾರ್ಗದರ್ಶನದಲ್ಲಿ ಭಾರತ ತಂಡ ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕ ಜಯಿಸಿತ್ತು.
National Games 2022: ಮತ್ತೆ ಎಂಟು ಪದಕ ಬಾಚಿಕೊಂಡ ಕರ್ನಾಟಕ..!
ಆನ್‌ಲೈನ್‌ನಲ್ಲಿ ನಡೆದ ಮತದಾನದಲ್ಲಿ ಅವರಿಗೆ ಶೇ.31.4 ಅಂಕಗಳು ದೊರೆತಿವೆ. ಇನ್ನು ಸ್ಕಾಪ್‌ಮನ್ ಶೇ.38.2 ಅಂಕ ಪಡೆದಿದ್ದಾರೆ. ಒಲಿಂಪಿಕ್ಸ್‌ನಲ್ಲಿ ಐತಿಹಾಸಿಕ 4ನೇ ಸ್ಥಾನ ಪಡೆದಿದ್ದ ಮಹಿಳಾ ತಂಡ, ಕಾಮನ್ವೆಲ್ತ್ ಗೇಮ್ಸ್‌ನಲ್ಲಿ ಕಂಚು ಗೆದ್ದಿತ್ತು.