ಬೆಂಗಳೂರಿನಿಂದ ರಾಷ್ಟ್ರೀಯ ಅಥ್ಲೆಟಿಕ್ಸ್ ರಾಂಚಿಗೆ ಎತ್ತಂಗಡಿ..!

By Kannadaprabha NewsFirst Published Sep 7, 2019, 4:30 PM IST
Highlights

ಬರೋಬ್ಬರಿ 15 ವರ್ಷಗಳ ಬಳಿಕ ರಾಷ್ಟ್ರೀಯ ಓಪನ್‌ ಅಥ್ಲೆ​ಟಿಕ್ಸ್‌ ಆತಿಥ್ಯ ವಹಿಸಿದ್ದ ಬೆಂಗಳೂರಿನ ಕಂಠೀರವ ಸ್ಟೇಡಿಯಂನಲ್ಲಿ ಸಿಂಥೆಟಿಕ್‌ ಟ್ರ್ಯಾಕ್‌ ದುರಸ್ಥಿಯಾಗದ ಕಾರಣದಿಂದಾಗಿ ರಾಂಚಿಗೆ ಸ್ಥಳಾಂತರಗೊಂಡಿದೆ. ಈ ಕುರಿತಾದ ವರದಿ ಇಲ್ಲಿದೆ ನೋಡಿ... 

ಬೆಂಗಳೂರು(ಸೆ.07]: ಕಂಠೀರವ ಕ್ರೀಡಾಂಗಣದಲ್ಲಿನ ಸಿಂಥೆಟಿಕ್‌ ಟ್ರ್ಯಾಕ್‌ ದುರಸ್ಥಿಯಾಗದ ಕಾರಣದಿಂದ ಅಕ್ಟೋಬರ್‌ 10 ರಿಂದ 13 ರವರೆಗೆ ಬೆಂಗಳೂರಿನಲ್ಲಿ ನಡೆಯಬೇಕಿದ್ದ 59ನೇ ರಾಷ್ಟ್ರೀಯ ಓಪನ್‌ ಅಥ್ಲೆಟಿಕ್ಸ್‌ ಚಾಂಪಿಯನ್‌ಶಿಪ್‌ ರಾಂಚಿಗೆ ಸ್ಥಳಾಂತರವಾಗಿದೆ. 15 ವರ್ಷಗಳ ಬಳಿಕ ಬೆಂಗ​ಳೂ​ರಿಗೆ ರಾಷ್ಟ್ರೀಯ ಓಪನ್‌ ಅಥ್ಲೆ​ಟಿಕ್ಸ್‌ ಆತಿಥ್ಯ ಸಿಕ್ಕಿತ್ತು. ಆದರೆ ಟ್ರ್ಯಾಕ್‌ ಸಮಸ್ಯೆಯಿಂದಾಗಿ ಅವ​ಕಾಶ ಕೈಜಾ​ರಿಗೆ. ಈ ಬೆಳ​ವ​ಣಿಗೆಯಿಂದ ಕರ್ನಾ​ಟಕ ರಾಜ್ಯ ಕ್ರೀಡಾ ಇಲಾ​ಖೆಗೆ ಭಾರೀ ಮುಜು​ಗರ ಉಂಟಾ​ಗಿದೆ.

ಕಂಠೀರವದಲ್ಲಿ ಫುಟ್ಬಾಲ್‌ ವಿರೋಧಿಸಿ ಪ್ರತಿಭಟನೆ

ಗುಂಡಿಬಿದ್ದ ಸಿಂಥೆಟಿಕ್‌ ಟ್ರ್ಯಾಕ್‌ನಲ್ಲಿ ಕ್ರೀಡಾಕೂಟ ಆಯೋಜಿಸುವುದು ಅಸಾಧ್ಯವಾಗಿರುವ ಕಾರಣದಿಂದ ರಾಜ್ಯ ಅಥ್ಲೆಟಿಕ್ಸ್‌ ಸಂಸ್ಥೆಗೆ ಆತಿಥ್ಯದ ಅವಕಾಶ ಕೈ ತಪ್ಪಿದಂತಾಗಿದೆ. ಕಂಠೀರವ ಕ್ರೀಡಾಂಗಣದ ಹಾಳಾಗಿರುವ ಸಿಂಥೆಟಿಕ್‌ ಟ್ರ್ಯಾಕ್‌ ಸೇರಿದಂತೆ, ಕ್ರೀಡಾಂಗಣದ ಇತರೆ ಸಮಸ್ಯೆಗಳ ಬಗ್ಗೆ ಸುವರ್ಣ ನ್ಯೂಸ್.ಕಾಂ ಸಹೋದರ ಸಂಸ್ಥೆ ‘ಕನ್ನಡಪ್ರಭ’ ಸರಣಿ ವರದಿ ಪ್ರಕಟಿಸಿತ್ತು. ಆ ಬಳಿಕ ಆಗಿನ ರಾಜ್ಯ ಲೆಕ್ಕಪತ್ರ ಸಮಿತಿ ಅಧ್ಯಕ್ಷ ಆರ್‌. ಅಶೋಕ್‌ ಸೇರಿದಂತೆ ಸಮಿತಿ ಸದಸ್ಯರು ಕ್ರೀಡಾಂಗಣಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಕೂಡಲೇ ಸ್ಥಳದಲ್ಲಿದ್ದ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡು, ಮೂಲಭೂತ ಸೌಕರ್ಯಗಳಿಗೆ 15 ದಿನ ಹಾಗೂ ಸಿಂಥೆಟಿಕ್‌ ಟ್ರ್ಯಾಕ್‌ ಟೆಂಡರ್‌ ಪ್ರಕ್ರಿಯೆಗೆ 1 ತಿಂಗಳ ಗಡುವು ನೀಡಿದ್ದರು.

ಕ್ರೀಡಾಂಗಣದಲ್ಲಿ ಅಥ್ಲೀಟ್‌ಗಳು ಉಪಯೋಗಿಸಲಿರುವ ಶೌಚಾಲಯ, ಜಿಮ್‌ ಸಮಸ್ಯೆಗಳು ತಡ​ವಾ​ಗಿ​ಯಾ​ದರೂ ಬಗೆಹರಿ​ದಿವೆ. ಆದರೆ ಸಿಂಥೆ​ಟಿಕ್‌ ಟ್ರ್ಯಾಕ್‌ ಅಳ​ವ​ಡಿಕೆ ಕಾರ್ಯ ಮಾತ್ರ ಆಮೆಗತಿ​ಯಲ್ಲಿ ಸಾಗು​ತ್ತಿದೆ. ಸಿಂಥೆಟಿಕ್‌ ಟ್ರ್ಯಾಕ್‌ ಅಳ​ವ​ಡಿಕೆಗೆ ಇಲಾಖೆ ಕಳೆದ ಕೆಲ ತಿಂಗಳಿಂದ ವಿವಿಧ ಕಾರಣಗಳನ್ನು ನೀಡುತ್ತಿದೆ. ಟೆಂಡರ್‌ ಪ್ರಕ್ರಿಯೆ ಪೂರ್ಣಗೊಂಡು ಸುಮಾರು 2 ತಿಂಗಳಾದರೂ ಇನ್ನೂ ಕಾಮಗಾರಿ ಆರಂಭವಾಗಿಲ್ಲ. ಲೆಕ್ಕಪತ್ರ ಸಮಿತಿ ದಾಳಿ ಮಾಡಿದ್ದ ಸಮಯದಲ್ಲಿ ಮಳೆಗಾಲದ ಮುಂಚಿತವಾಗಿಯೇ ಟ್ರ್ಯಾಕ್‌ ಅಳ​ವ​ಡಿಕೆ ಮಾಡುವ ಬಗ್ಗೆ ಅಥ್ಲೆಟಿಕ್ಸ್‌ ಸಂಸ್ಥೆಯೊಂದಿಗೆ ಚರ್ಚೆ ನಡೆಸಲಾಗಿತ್ತು. ಇದೀಗ ಮಳೆಗಾಲ ಆರಂಭವಾದರೂ ಟ್ರ್ಯಾಕ್‌ ಕಾಮಗಾರಿಯ ಸುಳಿವು ಇಲ್ಲದಂತಾಗಿದೆ. ಈಗ ಮಳೆ ನೆಪವೊಡ್ಡಿ ಟ್ರ್ಯಾಕ್‌ ಅಳವಡಿಕೆ ಕಾರ್ಯವನ್ನು ಮತ್ತಷ್ಟುತಿಂಗಳುಗಳ ಕಾಲ ಮುಂದೂಡುವ ಸಾಧ್ಯತೆಯಿದೆ.

ಗುಂಡಿ ಬಿದ್ದ ಟ್ರ್ಯಾಕ್‌ನಲ್ಲಿ ಅಭ್ಯಾಸ!

ಅಥ್ಲೀಟ್‌ಗಳು ಈಗಲೂ ಗುಂಡಿಬಿದ್ದ ಟ್ರ್ಯಾಕ್‌ನಲ್ಲಿ ಅಭ್ಯಾಸ ನಡೆಸುತ್ತಿದ್ದಾರೆ. ಇತ್ತೀಚೆಗಷ್ಟೇ ಹಿರಿಯರ ಅಥ್ಲೆಟಿಕ್ಸ್‌ ಚಾಂಪಿಯನ್‌ಶಿಪ್‌ನ ಆಯ್ಕೆ ಪ್ರಕ್ರಿಯೆಯನ್ನು ಕಂಠೀರವ ಕ್ರೀಡಾಂಗಣದಲ್ಲಿ ನಡೆಸಿದ್ದರಿಂದ ಹಾಳಾಗಿರುವ ಟ್ರ್ಯಾಕ್‌ಗೆ ತಜ್ಞರಲ್ಲದ ಕ್ರೀಡಾಂಗಣದ ಸಿಬ್ಬಂದಿಗಳಿಂದ ತೇಪೆ ಹಾಕುವ ಕಾರ್ಯ ನಡೆಸಲಾಗಿತ್ತು. ಸದ್ಯ ತೇಪೆ ಹಾಕಿರುವ ಟ್ರ್ಯಾಕ್‌ ಕೂಡ ಕಿತ್ತು ಹೋಗಿದೆ. ಅಥ್ಲೀಟ್‌ಗಳು ಹಾಳಾಗಿರುವ ಟ್ರ್ಯಾಕ್‌ನಲ್ಲಿ ಅಭ್ಯಾಸದಲ್ಲಿ ನಿರತರಾಗಿದ್ದಾರೆ.

ಸಿಂಥೆಟಿಕ್‌ ಟ್ರ್ಯಾಕ್‌ ಮರು ಅಳವಡಿಕೆಗೆ ನಿರೀಕ್ಷಿತ ಮೊತ್ತಕ್ಕಿಂತ ಹೆಚ್ಚಿನ ಹಣ ವ್ಯಯವಾಗಲಿದೆ ಎಂದು ಅಂದಾಜಿಸಿರುವ ಕಾರಣದಿಂದ ಸರ್ಕಾರಕ್ಕೆ ಮತ್ತೊಮ್ಮೆ ಮನವಿ ಸಲ್ಲಿಸಲಾಗಿದೆ. ಹೀಗಾಗಿ ಟ್ರ್ಯಾಕ್‌ ಅಳವಡಿಕೆ ಕಾರ್ಯ ವಿಳಂಬವಾಗಿದೆ.

- ರಮೇಶ್‌ ಎಂ.ಎಸ್‌. ಕ್ರೀಡಾ ಇಲಾಖೆ ಜಂಟಿ ನಿರ್ದೇಶಕ

ಸರ್ಕಾರ ಬದಲಾಯಿತು. ಇಬ್ಬರು ಆಯು​ಕ್ತ​ರು ಬದಲಾದರು. ಹೀಗಾಗಿ ಸಿಂಥೆಟಿಕ್‌ ಟ್ರ್ಯಾಕ್‌ ಮರು ಅಳವಡಿಕೆಯ ಟೆಂಡರ್‌ ಕಾರ್ಯ ಮತ್ತಷ್ಟುವಿಳಂಬವಾಯಿತು. ಇದರಿಂದಾಗಿ ಪ್ರತಿಷ್ಠಿತ ಕ್ರೀಡಾಕೂಟ ಕೈ ತಪ್ಪಿದ್ದು ಬೇಸರ ಮೂಡಿ​ಸಿದೆ.

- ಎ. ರಾಜವೇಲು, ರಾಜ್ಯ ಅಥ್ಲೆ​ಟಿಕ್ಸ್‌ ಸಂಸ್ಥೆ ಕಾರ್ಯದರ್ಶಿ
 

click me!