
ಮುಂಬೈ(ಜ.10):ಭಾರತ ಕ್ರಿಕೆಟ್ ಕಂಡ ಯಶಸ್ವಿ ನಾಯಕ ಎಂ.ಎಸ್. ಧೋನಿಯ ಸಾರಥ್ಯದ ಕಡೇ ಆಟಕ್ಕೆ ವೇದಿಕೆ ಸಜ್ಜಾಗಿದ್ದು, ಇಂದು ನಡೆಯಲಿರುವ ಪ್ರವಾಸಿ ಇಂಗ್ಲೆಂಡ್ ವಿರುದ್ಧದ ಮೊದಲ ಅಭ್ಯಾಸ ಪಂದ್ಯದಲ್ಲಿ ರಾಂಚಿ ಕ್ರಿಕೆಟಿಗ ಭಾರತ ‘ಎ' ತಂಡವನ್ನು ಮುನ್ನಡೆಸಲಿದ್ದಾರೆ.
ಸೀಮಿತ ಓವರ್‌ಗಳ ಟೀಂ ಇಂಡಿಯಾ ನಾಯಕನ ಸ್ಥಾನದಿಂದ ಕೆಳಗಿಳಿಯುವ ನಿರ್ಧಾರವನ್ನು ಕಳೆದ ಬುಧವಾರ ಪ್ರಕಟಿಸಿ ಇಡೀ ಕ್ರಿಕೆಟ್ ವಲಯವನ್ನೇ ಚಕಿತಗೊಳಿಸಿದ್ದ ಧೋನಿ, ಮೂರೂ ಪ್ರಕಾರದ ಕ್ರಿಕೆಟ್'ನಲ್ಲಿ ವಿರಾಟ್ ಕೊಹ್ಲಿಗೆ ಸಾರಥ್ಯ ಕಟ್ಟಲು ನೆರವಾಗಿದ್ದರು. ಇಲ್ಲಿನ ಬ್ರೆಬೋರ್ನ್ ಕ್ರೀಡಾಂಗಣದಲ್ಲಿ ನಡೆಯಲಿರುವ ಪಂದ್ಯದಲ್ಲಿ ಧೋನಿಯ ಕಡೆಯ ನಾಯಕತ್ವದ ಆಟವನ್ನು ಕಣ್ತುಂಬಿಕೊಳ್ಳಲು ಕ್ರಿಕೆಟ್ ಪ್ರೇಮಿಗಳು ಕಾತರದಲ್ಲಿದ್ದಾರೆ. ಅಂದಹಾಗೆ ಈ ಪಂದ್ಯದಲ್ಲಿ ಕೊಹ್ಲಿ ಆಡುತ್ತಿಲ್ಲ ಎಂಬುದು ಗಮನೀಯ. ನಾಯಕತ್ವ ತ್ಯಜಿಸಿದ ಮೊದಲ ಪಂದ್ಯಕ್ಕೆ ಅಣಿಯಾಗಿರುವ ಧೋನಿ, ತಂಡವನ್ನು ಗೆಲುವಿನತ್ತ ಮುನ್ನಡೆಸುವ ಗುರಿ ಹೊತ್ತಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಕ್ರಿಕೆಟ್ ಪ್ರೇಮಿಗಳು ಆಗಮಿಸುವ ನಿರೀಕ್ಷೆಯಿಂದಾಗಿ ವ್ಯಾಪಕ ಪೊಲೀಸ್ ಭದ್ರತೆ ಕಲ್ಪಿಸಲಾಗಿದೆ. ಅಂದಹಾಗೆ 12ರಂದು ನಡೆಯಲಿರುವ ಎರಡನೇ ಹಾಗೂ ಕೊನೆಯ ಅಭ್ಯಾಸ ಪಂದ್ಯದಲ್ಲಿ ಅಜಿಂಕ್ಯ ರಹಾನೆ ತಂಡವನ್ನು ಮುನ್ನಡೆಸಲಿದ್ದಾರೆ.
ಯುವಿ, ನೆಹ್ರಾಗೆ ಪರೀಕ್ಷೆ: ಮೂರು ವರ್ಷಗಳ ಬಳಿಕ ಏಕದಿನ ಸರಣಿಯಲ್ಲಿ ಆಡುತ್ತಿರುವ ಯುವರಾಜ್ ಸಿಂಗ್ ಹಾಗೂ ಐಸಿಸಿ ವಿಶ್ವ ಟಿ20ಯಲ್ಲಿ ಆಕರ್ಷಕ ಪ್ರದರ್ಶನ ನೀಡಿದ್ದ ಎಡಗೈ ವೇಗಿ ಆಶೀಶ್ ನೆಹ್ರಾ ಸೇರಿದಂತೆ ದೆಹಲಿ ಬ್ಯಾಟ್ಸ್‌ಮನ್ ಶಿಖರ್ ಧವನ್ ಮೇಲೂ ಎಲ್ಲರ ಗಮನ ಹರಿದಿದೆ. ಈ ಋುತುವಿನ ರಣಜಿಯಲ್ಲಿ ಭರ್ಜರಿ ಪ್ರದರ್ಶನ ನೀಡಿರುವ ಆಲ್ರೌಂಡರ್ ಯುವರಾಜ್, ಕಳೆದ ವರ್ಷಾಂತ್ಯದಲ್ಲಿ ರೂಪದರ್ಶಿ ಹಾಗೂ ನಟಿ ಹ್ಯಾಜಲ್ ಕೀಚ್ ಅವರನ್ನು ವಿವಾಹವಾಗಿದ್ದರು. ಹೀಗಾಗಿ ಮದುವೆಯ ನಂತರ ಅವರು ಆಡುತ್ತಿರುವ ಮೊದಲ ಪಂದ್ಯ ಇದಾಗಿದೆ. ಇನ್ನು ಹದಿನೈದರಿಂದ ಆರಂಭವಾಗುತ್ತಿರುವ ಮೂರು ಏಕದಿನ ಮತ್ತು ಮೂರು ಟಿ20 ಪಂದ್ಯ ಸರಣಿಗೆ ಧೋನಿ, ನೆಹ್ರಾ ಹಾಗೂ ಯುವಿ ಪೈಕಿ ನೆಹ್ರಾ ಚುಟುಕು ಪಂದ್ಯ ಸರಣಿಗಷ್ಟೇ ಆಯ್ಕೆಯಾಗಿದ್ದಾರೆ. 37ರ ಹರೆಯದ ನೆಹ್ರಾ ರಣಜಿ ಪಂದ್ಯಾವಳಿಯಲ್ಲಿ ಆಡಿಲ್ಲ. ಹೀಗಾಗಿ ಅವರು ತಮ್ಮ ದೈಹಿಕ ಕ್ಷಮತೆಯನ್ನು ಸಾಬೀತುಪಡಿಸಬೇಕಾದ ಅನಿವಾರ್ಯತೆ ಇದೆ. ಇತ್ತ, ಗಾಯದ ಸಮಸ್ಯೆಯಿಂದಾಗಿ ಇಂಗ್ಲೆಂಡ್ ಟೆಸ್ಟ್ ಸರಣಿಯಲ್ಲಿ ಪೂರ್ಣ ಪ್ರಮಾಣದಲ್ಲಿ ಭಾಗವಹಿಸಲು ವಿಫಲವಾದ ಧವನ್ ಕೂಡ ಇದೇ ಪರೀಕ್ಷೆ ಎದುರಿಸಬೇಕಿದೆ.
ಮಾರ್ಗನ್ ಪಡೆಗೆ ಜಯದ ಗುರಿ: ಐದು ಟೆಸ್ಟ್ ಪಂದ್ಯ ಸರಣಿಯಲ್ಲಿ 0-4ರ ಹಿನ್ನಡೆ ಅನುಭವಿಸಿದ ಅಲಸ್ಟೈರ್ ಕುಕ್ ನೇತೃತ್ವದ ಇಂಗ್ಲೆಂಡ್ ತಂಡ, ಇದೀಗ ಸೀಮಿತ ಓವರ್‌ಗಳ ಸರಣಿಗೆ ಇಯಾನ್ ಮಾರ್ಗನ್ ಸಾರಥ್ಯದಲ್ಲಿ ಯುವ ಆಟಗಾರರೊಂದಿಗೆ ಸಜ್ಜಾಗಿದ್ದು, ಅಭ್ಯಾಸ ಪಂದ್ಯಗಳೆರಡನ್ನೂ ಗೆಲ್ಲುವುದರೊಂದಿಗೆ ಸರಣಿಯಲ್ಲಿ ಜಯಭೇರಿ ಬಾರಿಸುವ ಗುರಿ ಹೊತ್ತಿದೆ. ಅಲೆಕ್ಸ್ ಹೇಲ್ಸ್, ಜೇಸನ್ ರಾಯ್ ಹಾಗೂ ಡೇವಿಡ್ ವಿಲ್ಲೆ ಆಸ್ಪ್ರೇಲಿಯಾದಲ್ಲಿ ನಡೆದ ಬಿಗ್'ಬ್ಯಾಶ್ ಟಿ20 ಟೂರ್ನಿಯಲ್ಲಿ ಭಾಗವಹಿಸಿದರೆ, ಮಿಕ್ಕ ಒಂಬತ್ತು ಮಂದಿ ಆಟಗಾರರು ಟೆಸ್ಟ್ ತಂಡದ ಭಾಗವಾಗಿದ್ದರು. ಟೆಸ್ಟ್ ಸರಣಿಯಲ್ಲಾದ ಹೀನಾಯ ಸೋಲಿಗೆ ಪ್ರತಿಯಾಗಿ ಈ ಸೀಮಿತ ಓವರ್‌ಗಳ ಸರಣಿಯನ್ನು ಗೆಲ್ಲುವ ಗುರಿ ಹೊತ್ತಿರುವ ಪ್ರವಾಸಿ ತಂಡ, ಸದ್ಯದ ಮಟ್ಟಿಗೆ ಅಭ್ಯಾಸ ಪಂದ್ಯಗಳನ್ನು ಗುರಿಯಾಗಿಸಿಕೊಂಡಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.