
ಇಂದೋರ್(ಜ.10):ಬರೋಬ್ಬರಿ ಅರವತ್ತಾರು ವರ್ಷಗಳ ಬಳಿಕ ರಣಜಿ ಕ್ರಿಕೆಟ್ ಪಂದ್ಯಾವಳಿಯ ಫೈನಲ್ ತಲುಪಿರುವ ಗುಜರಾತ್, ಮೊದಲ ಬಾರಿಗೆ ರಣಜಿ ಟ್ರೋಫಿ ಎತ್ತಿಹಿಡಿಯುವ ಕನವರಿಕೆಯಲ್ಲಿದ್ದರೆ, ಇತ್ತ ದಾಖಲೆಯ 42ನೇ ಟ್ರೋಫಿ ಗೆಲ್ಲುವ ತುಡಿತದಲ್ಲಿದೆ ಮುಂಬೈ.
ಇಲ್ಲಿನ ಹೋಳ್ಕರ್ ಮೈದಾನದಲ್ಲಿ ನಡೆಯಲಿರುವ ಪ್ರಶಸ್ತಿ ಸುತ್ತಿನ ಸೆಣಸಾಟದಲ್ಲಿ ಮುಂಬೈ ಗೆಲ್ಲುವ ಫೇವರಿಟ್ ಎನಿಸಿದರೂ, ಈ ಋುತುವಿನಲ್ಲಿ ಆಕರ್ಷಕ ಪ್ರದರ್ಶನ ನೀಡುತ್ತಾ 1950-51ರ ಬಳಿಕ ಫೈನಲ್'ಗೆ ಧಾವಿಸಿಬಂದ ಪಾರ್ಥೀವ್ ಪಟೇಲ್ ಸಾರಥ್ಯದ ಗುಜರಾತ್ ತಂಡವು ಇತಿಹಾಸ ನಿರ್ಮಿಸುವ ಗುರಿ ಹೊತ್ತಿದೆ. ಅಂದಹಾಗೆ ಮೊದಲ ಹಂತದ ಫೈನಲ್'ನಲ್ಲಿ ಗುಜರಾತ್, ಹೋಳ್ಕರ್ ತಂಡದೆದುರು ಸೋಲನುಭವಿಸಿ ರನ್ನರ್'ಅಪ್ ಸ್ಥಾನಕ್ಕೆ ತೃಪ್ತವಾಗಿತ್ತು.
ಸೆಮಿಫೈನಲ್ ಹಂತದಲ್ಲಿ ಮುಂಬೈ, ತಮಿಳುನಾಡು ವಿರುದ್ಧ ಗೆಲುವು ಪಡೆದರೆ, ಜಾರ್ಖಂಡ್ ವಿರುದ್ಧ ಭರ್ಜರಿ ಗೆಲುವು ಪಡೆದ ಗುಜರಾತ್ ಪ್ರಶಸ್ತಿ ಸುತ್ತಿಗೆ ಲಗ್ಗೆ ಹಾಕಿವೆ.
ಅನುಭವವೇ ಆಯುಧ:
41 ಬಾರಿ ಟ್ರೋಫಿ ಗೆದ್ದು ರಣಜಿ ಇತಿಹಾಸದಲ್ಲೇ ಅದ್ವಿತೀಯ ಸಾಧನೆ ಮಾಡಿರುವ ಮುಂಬೈ, ಈ ಬಾರಿ ಆದಿತ್ಯ ತಾರೆ ನಾಯಕತ್ವದಲ್ಲಿ ಟ್ರೋಫಿ ಗೆಲ್ಲಲು ಸಜ್ಜಾಗಿದೆ. ನಾಯಕ ಆದಿತ್ಯ ತಾರೆ ಸೇರಿದಂತೆ ಶ್ರೇಯಸ್ ಅಯ್ಯರ್, ಸೂರ್ಯಕುಮಾರ್ ಯಾದವ್'ರಂಥ ಪ್ರಚಂಡ ಬ್ಯಾಟ್ಸ್‌ಮನ್'ಗಳು ಮುಂಬೈನ ಬ್ಯಾಟಿಂಗ್ ಕ್ರಮಾಂಕವನ್ನು ಬಲಿಷ್ಠಗೊಳಿಸಿದ್ದಾರೆ. ಇನ್ನು ತಮಿಳುನಾಡು ವಿರುದ್ಧದ ಪಂದ್ಯದಲ್ಲಿ ಅಮೋಘ ಶತಕ ಬಾರಿಸಿದ 17ರ ಯುವಕ ಪೃಥ್ವಿ ಶಾ ಮತ್ತೊಂದು ಮನೋಜ್ಞ ಇನ್ನಿಂಗ್ಸ್‌ಗೆ ಅಣಿಯಾಗಿದ್ದಾರೆ. ಇನ್ನು ಬೌಲಿಂಗ್‌ನಲ್ಲಿ ಎಡಗೈ ಸ್ಪಿನ್ನರ್ ವಿಜಯ್ ಗೋಹೆಲ್ 27 ವಿಕೆಟ್ ಗಳಿಸಿ ತಂಡದ ಪರ ಗರಿಷ್ಠ ವಿಕೆಟ್ ಪಡೆದಾತ ಎನಿಸಿದ್ದಾರೆ.
ವಿಶ್ವಾಸದಲ್ಲಿ ಪಾರ್ಥೀವ್ ಪಡೆ: ಐತಿಹಾಸಿಕ ಹೊಸ್ತಿಲಲ್ಲಿರುವ ಗುಜರಾತ್ ಒಂದು ಹಂತದಲ್ಲಿ ಬಲಿಷ್ಠ ಮುಂಬೈ ವಿರುದ್ಧ ಒತ್ತಡಕ್ಕೆ ಸಿಲುಕಿದೆಯಾದರೂ, ಅಚ್ಚರಿಯ ಫಲಿತಾಂಶ ನೀಡುವ ವಿಶ್ವಾಸದಲ್ಲಿದೆ. ಟೂರ್ನಿಯಲ್ಲಿ ಒಂದು ತ್ರಿಶತಕ ಸೇರಿದಂತೆ ಪ್ರಿಯಾಂಕ್ ಪಾಂಚಲ್, ಈ ಋುತುವಿನ ರಣಜಿಯಲ್ಲಿ 1270 ರನ್ ಕಲೆಹಾಕಿದ್ದಾರೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.