
ಮುಂಬೈ[ಏ.03]: ಐಪಿಎಲ್ 12ನೇ ಆವೃತ್ತಿಯ ಪಂದ್ಯಗಳು ಒಂದಕ್ಕಿಂತ ಒಂದು ರೋಚಕಗೊಳ್ಳುತ್ತಿದ್ದು, ಬುಧವಾರ ಈ ಆವೃತ್ತಿಯ ಬಹುನಿರೀಕ್ಷಿತ ಪಂದ್ಯಕ್ಕೆ ಇಲ್ಲಿನ ವಾಂಖೇಡೆ ಕ್ರೀಡಾಂಗಣದಲ್ಲಿ ವೇದಿಕೆ ಸಜ್ಜಾಗಿದೆ.
ತಲಾ 3 ಬಾರಿ ಟ್ರೋಫಿ ಗೆದ್ದಿರುವ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಮುಂಬೈ ಇಂಡಿಯನ್ಸ್ ತಂಡಗಳ ನಡುವೆ ಪ್ರತಿ ಬಾರಿಯೂ ಭಾರೀ ಪೈಪೋಟಿ ನಡೆದಿದ್ದು, ಈ ಸಲವೂ ರೋಚಕತೆಗೆ ಕೊರತೆ ಇರುವುದಿಲ್ಲ. ಈಗಾಗಲೇ ಹಲವು ವಿಚಾರಗಳಿಂದ ಈ ಪಂದ್ಯ ಮಹತ್ವ ಪಡೆದುಕೊಂಡಿದ್ದು, ಅಭಿಮಾನಿಗಳಲ್ಲಿ ಕುತೂಹಲ ಹೆಚ್ಚಿಸಿದೆ.
ಧೋನಿ CSK ಪರ ಅಬ್ಬರಿಸುವುದರ ಹಿಂದಿನ ಗುಟ್ಟೇನು..?
ಚೆನ್ನೈ ಗೆಲುವಿನ ಓಟ: ಈ ಆವೃತ್ತಿಯಲ್ಲಿ ಅಜೇಯವಾಗಿ ಉಳಿದಿರುವ ಏಕೈಕ ತಂಡ ಚೆನ್ನೈ ಸೂಪರ್ ಕಿಂಗ್ಸ್. ಆಡಿರುವ ಮೂರೂ ಪಂದ್ಯಗಳಲ್ಲಿ ತಂಡ ಸಾಂಘಿಕ ಪ್ರದರ್ಶನ ತೋರಿದೆ. ಬ್ಯಾಟಿಂಗ್ ಹಾಗೂ ಬೌಲಿಂಗ್‌ನಲ್ಲಿ ಸಮತೋಲನ ಕಾಯ್ದುಕೊಂಡಿರುವ ಸಿಎಸ್‌ಕೆ, ಕೆಲ ಸಮಸ್ಯೆಗಳನ್ನೂ ಎದುರಿಸುತ್ತಿದೆ. ಆರಂಭಿಕ ಅಂಬಟಿ ರಾಯುಡು ರನ್ ಗಳಿಸಲು ಪರದಾಡುತ್ತಿದ್ದಾರೆ. ಶೇನ್ ವಾಟ್ಸನ್ ಸ್ಥಿರತೆ ಕಾಯ್ದುಕೊಂಡಿಲ್ಲ. ತಂಡ ತನ್ನ ವೇಗಿಗಳಿಗಿಂತ ತ್ರಿವಳಿ ಸ್ಪಿನ್ನರ್‌ಗಳಾದ ಇಮ್ರಾನ್ ತಾಹಿರ್, ರವೀಂದ್ರ ಜಡೇಜಾ ಹಾಗೂ ಮಿಚೆಲ್ ಸ್ಯಾಂಟ್ನರ್ ಮೇಲೆ ಹೆಚ್ಚು ವಿಶ್ವಾಸವಿರಿಸಿದೆ. ಕೇದಾರ್ ಜಾಧವ್, ಸುರೇಶ್ ರೈನಾ ಸಹ ಕೆಲ ಓವರ್‌ಗಳನ್ನು ಬೌಲ್ ಮಾಡಬಲ್ಲರು. ಅನುಭವಿ ಹರ್ಭಜನ್ ಸಿಂಗ್ ಈ ಮೊದಲು ಹಲವು ವರ್ಷಗಳ ಕಾಲ ಮುಂಬೈ ತಂಡದಲ್ಲಿ ಆಡಿದ್ದು, ಬಹುತೇಕ ಆಟಗಾರರ ಬಲಾಬಲ ತಿಳಿದಿದ್ದಾರೆ. ಹೀಗಾಗಿ ಈ ಪಂದ್ಯದಲ್ಲಿ ಅವರಿಗೆ ಅವಕಾಶ ನೀಡಿದರೆ ಅಚ್ಚರಿಯಿಲ್ಲ.
ಧೋನಿಯೇ ಟ್ರಂಪ್‌ಕಾರ್ಡ್: ಎಂ.ಎಸ್.ಧೋನಿ ಕಳೆದ ಪಂದ್ಯದಲ್ಲಿ ಬ್ಯಾಟ್ ಬೀಸಿದ ರೀತಿ ಎದುರಾಳಿಗಳಲ್ಲಿ ಭಯ ಹುಟ್ಟಿಸಿದೆ. ರೈನಾ, ಡ್ವೇನ್ ಬ್ರಾವೋ ಯಾವುದೇ ಬಲಿಷ್ಠ ಎದುರಾಳಿಯನ್ನು ಸಮರ್ಥವಾಗಿ ಎದುರಿಸಬಲ್ಲರು. ಟಿ20 ಮಾದರಿಯಲ್ಲಿ ಇಬ್ಬರೂ ಅಪಾರ ಅನುಭವ ಹೊಂದಿದ್ದಾರೆ. ಕ್ಷೇತ್ರರಕ್ಷಣೆಯಲ್ಲಿ ಚೆನ್ನೈನ ಕೆಲ ಆಟಗಾರರು ಚುರುಕಿಲ್ಲ. ಇದು ಸಮಸ್ಯೆಯಾಗಬಹುದು.
ಒತ್ತಡದಲ್ಲಿ ಮುಂಬೈ: ಎರಡು ಸೋಲುಗಳ ಮಧ್ಯೆ ಒಂದು ಗೆಲುವು ಕಂಡಿರುವ ಮುಂಬೈ ಇಂಡಿಯನ್ಸ್, ಪ್ರತಿ ಬಾರಿಯಂತೆ ಪಂದ್ಯಾವಳಿಯ ಆರಂಭದಲ್ಲೇ ಒತ್ತಡಕ್ಕೆ ಸಿಲುಕಿದೆ. ಆದರೆ ಐದಾರು ಪಂದ್ಯಗಳ ಬಳಿಕ ಲಯ ಕಂಡುಕೊಳ್ಳುವುದು ಮುಂಬೈನ ವಿಶೇಷತೆ. ಈ ಬಾರಿಯೂ ನಾಯಕ ರೋಹಿತ್ ಶರ್ಮಾ ಕೆಲ ಪ್ರಯೋಗಗಳನ್ನು ನಡೆಸುತ್ತಾ, ಸರಿಯಾದ ಆಡುವ ಹನ್ನೊಂದರ ಬಳಗವನ್ನು ಸಿದ್ಧಪಡಿಸಿಕೊಳ್ಳುತಿರುವಂತಿದೆ.
ವಿಂಡೀಸ್ ಆಲ್ರೌಂಡರ ಕೀರನ್ ಪೊಲ್ಲಾರ್ಡ್ ಸತತ ವೈಫಲ್ಯ ಅನುಭವಿಸುತ್ತಿದ್ದು, ಅವರ ಬದಲಿಗೆ ಆಸ್ಪ್ರೇಲಿಯಾದ ಬೆನ್ ಕಟ್ಟಿಂಗ್ ಆಡಿಸುವ ಸಾಧ್ಯತೆ ಇದೆ. ಲಸಿತ್ ಮಾಲಿಂಗ ಅಲಭ್ಯರಾಗಲಿದ್ದು, ಅವರ ಸ್ಥಾನವನ್ನು ವಿಂಡೀಸ್‌ನ ಅಲ್ಜಾರಿ ಜೋಸೆಫ್ ಪಡೆಯುವ ನಿರೀಕ್ಷೆ ಇದೆ. ತಂಡ ಕ್ವಿಂಟನ್ ಡಿ ಕಾಕ್ ಹಾಗೂ ರೋಹಿತ್ ಶರ್ಮಾ ಮೇಲೆ ಹೆಚ್ಚು ಅವಲಂಬಿತಗೊಂಡಿದೆ. ಮಧ್ಯಮ ಕ್ರಮಾಂಕದಲ್ಲಿ ವೇಗವಾಗಿ ಬ್ಯಾಟ್ ಮಾಡುವ ಸಾಮರ್ಥ್ಯವುಳ್ಳ ಆಟಗಾರರಿದ್ದರೂ ಉಪಯೋಗವಾಗುತ್ತಿಲ್ಲ. ಅನುಭವಿ ಸ್ಪಿನ್ನರ್‌ನ ಕೊರತೆ ತಂಡವನ್ನು ಬಲವಾಗಿ ಕಾಡುತ್ತಿದೆ.
ಒಟ್ಟು ಮುಖಾಮುಖಿ: 24
ಚೆನ್ನೈ: 13
ಮುಂಬೈ: 11
ಸಂಭವನೀಯ ಆಟಗಾರರ ಪಟ್ಟಿ
ಚೆನ್ನೈ: ಫಾಫ್ ಡು ಪ್ಲೆಸಿ, ಅಂಬಟಿ ರಾಯುಡು, ಸುರೇಶ್ ರೈನಾ, ಕೇದಾರ್ ಜಾಧವ್, ಎಂ.ಎಸ್.ಧೋನಿ(ನಾಯಕ), ಡ್ವೇನ್ ಬ್ರಾವೋ, ರವೀಂದ್ರ ಜಡೇಜಾ, ದೀಪಕ್ ಚಾಹರ್, ಶಾರ್ದೂಲ್, ಮಿಚೆಲ್ ಸ್ಯಾಂಟ್ನರ್, ಇಮ್ರಾನ್ ತಾಹಿರ್.
ಮುಂಬೈ: ರೋಹಿತ್ ಶರ್ಮಾ(ನಾಯಕ), ಕ್ವಿಂಟನ್ ಡಿ ಕಾಕ್, ಸೂರ್ಯಕುಮಾರ್, ಯುವರಾಜ್ ಸಿಂಗ್, ಬೆನ್ ಕಟ್ಟಿಂಗ್, ಹಾರ್ದಿಕ್, ಕೃನಾಲ್, ಮೆಕ್ಲನಾಘನ್, ಮಯಾಂಕ್ ಮರ್ಕಂಡೆ, ಅಲ್ಜಾರಿ ಜೋಸೆಫ್, ಜಸ್‌ಪ್ರೀತ್ ಬುಮ್ರಾ.
ಪಿಚ್ ರಿಪೋರ್ಟ್
ವಾಂಖೇಡೆ ಕ್ರೀಡಾಂಗಣದ ಪಿಚ್ ಬ್ಯಾಟ್ಸ್‌ಮನ್ ಸ್ನೇಹಿಯಾಗಿದ್ದು, ಇಲ್ಲಿ ರನ್ ಹೊಳೆ ಹರಿಯಲಿದೆ. ಈ ಆವೃತ್ತಿಯ ಮೊದಲ ಪಂದ್ಯದಲ್ಲಿ ಡೆಲ್ಲಿ ತಂಡ 213 ರನ್‌ಗಳ ಬೃಹತ್ ಮೊತ್ತ ಕಲೆಹಾಕಿತ್ತು.
ಮುಂಬೈ ಸಹ ಗುರಿ ತಲುಪುವ ಹತ್ತಿರಕ್ಕೆ ಬಂದಿತ್ತು. ಸ್ವಿಂಗ್ ಬೌಲಿಂಗ್‌ಗೆ ನೆರವು ಸಿಗಲಿದ್ದು, ಪಿಚ್‌ನಲ್ಲಿ ಉತ್ತಮ ಬೌನ್ಸ್ ಇರಲಿದೆ. ಮೊದಲು ಬ್ಯಾಟ್ ಮಾಡುವ ತಂಡ 200 ರನ್ ಗಳಿಸಿದರೂ ರಕ್ಷಿಸಿಕೊಳ್ಳುವ ಸಾಧ್ಯತೆ ಕಡಿಮೆ.
ಸ್ಥಳ: ಮುಂಬೈ
ಪಂದ್ಯ ಆರಂಭ: ರಾತ್ರಿ 8ಕ್ಕೆ,
ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್ 1
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.