ಕಟ್ಟಿಗೆ ಹೊರುತ್ತಿದ್ದ ಹೆಣ್ಣು ಮಗಳು ಚಿನ್ನದ ಪದಕಗಳನ್ನೇ ಎತ್ತಿ ಬಿಟ್ಟಳು.. ಒಂದಲ್ಲ.. ಎರಡಲ್ಲ.. ಒಂಬತ್ತು!

Published : Jul 30, 2026, 12:14 PM IST
Mirabai Chanu

ಸಾರಾಂಶ

ಮಣಿಪುರದ ಮೀರಾಬಾಯಿ ಚಾನು, ಬಡತನದಲ್ಲಿ ಬೆಳೆದು ಕಾಡಿನಿಂದ ಕಟ್ಟಿಗೆ ಹೊತ್ತು ತರುತ್ತಿದ್ದ ಹುಡುಗಿ. ತನ್ನ ಕಠಿಣ ಪರಿಶ್ರಮದಿಂದ ವೇಟ್ ಲಿಫ್ಟಿಂಗ್’ನಲ್ಲಿ ದೇಶಕ್ಕೆ ಕೀರ್ತಿ ತಂದಿದ್ದು, ಕಾಮನ್‌ವೆಲ್ತ್ ಗೇಮ್ಸ್, ವಿಶ್ವ ಚಾಂಪಿಯನ್‌ಷಿಪ್ ಸೇರಿದಂತೆ ಹಲವು ಸ್ಪರ್ಧೆಗಳಲ್ಲಿ ಚಿನ್ನದ ಪದಕಗಳನ್ನು ಗೆದ್ದಿದ್ದಾರೆ. ಲಾರಿ ಹತ್ತಿ ತರಬೇತಿಗೆ ಹೋಗುತ್ತಿದ್ದ ಅವರ ಸ್ಪೂರ್ತಿದಾಯಕ ಪಯಣದ ಕಥೆಯಿದು.

  • ಸುದರ್ಶನ್, ಏಷ್ಯಾನೆಟ್ ಸುವರ್ಣನ್ಯೂಸ್

ಮಣಿಪುರ. ಮಹಾಭಾರತದಲ್ಲಿ ಮಹಾಯೋಧ ಅರ್ಜುನನನ್ನೇ ಸೋಲಿಸಿದ ವೀರ ಬಬ್ರುವಾಹನಿಗೆ ಜನ್ಮಕೊಟ್ಟ ಮಹಾತಾಯಿ ಚಿತ್ರಾಂಗದೆ ಹುಟ್ಟಿದ್ದೂ ಅದೇ ನೆಲದಲ್ಲಿ. ಆಧುನಿಕ ಮಹಾಭಾರತದಲ್ಲಿ ಹೆಣ್ಣುಮಗಳೊಬ್ಬಳ ವಸ್ತ್ರ ಕಳಚಿ ಮೆರವಣಿಗೆ ಮಾಡಿದ್ದೂ ಅದೇ ನೆಲದಲ್ಲಿ. ಇತಿಹಾಸವೂ ಅಲ್ಲೇ. ಸತ್ಯನಾಶವೂ ಅಲ್ಲೇ.

ಅಂಥಾ ನೆಲದಿಂದ ಬಂದ ಗಟ್ಟಿಗಿತ್ತಿ ಹೆಣ್ಣು ಮಗಳು ಸೈಖೋಮ್ ಮೀರಾಬಾಯಿ ಚಾನು. ದೇಶದ ಅಗ್ರಮಾನ್ಯ ಮಹಿಳಾ ಲಿಫ್ಟರ್. ಸ್ಕಾಟ್ಲೆಂಡ್’ನ ಗ್ಲಾಸ್ಗೋದಲ್ಲಿ ನಡೆಯುತ್ತಿರುವ ಈ ವರ್ಷದ ಕಾಮನ್’ವೆಲ್ತ್ ಗೇಮ್ಸ್’ನಲ್ಲಿ ಮೀರಾಬಾಯಿ ಮತ್ತೊಮ್ಮೆ ಚಿನ್ನದ ಪದಕ ಗೆದ್ದಿದ್ದಾಳೆ. 2018, 2022, 2026. ಹೀಗೆ ಸತತ ಮೂರು ಕಾಮನ್ವೆಲ್ತ್ ಗೇಮ್ಸ್’ಗಳಲ್ಲಿ ಹ್ಯಾಟ್ರಿಕ್ ಚಿನ್ನದ ಒಡತಿ. ವಿಶ್ವಚಾಂಪಿಯನ್’ಷಿಪ್, ಕಾಮನ್ವೆಲ್ತ್ ಗೇಮ್ಸ್, ಕಾಮನ್ವೆಲ್ತ್ ಚಾಂಪಿಯನ್’ಷಿಪ್, ಸೌತ್ ಏಷ್ಯನ್ ಗೇಮ್ಸ್’ಗಳಲ್ಲಿ ಗೆದ್ದದ್ದನ್ನೆಲ್ಲಾ ಲೆಕ್ಕ ಹಾಕಿದರೆ ಇದು ಒಂಬತ್ತನೇ ಚಿನ್ನದ ಪದಕ. ಆ ಒಂಬತ್ತನೇ ಪದಕವನ್ನು ಕೊರಳಲ್ಲಿ ತೊಟ್ಟು, ಹಿನ್ನೆಲೆಯಲ್ಲಿ ರಾಷ್ಟ್ರಗೀತೆ ಮೊಳಗುತ್ತಿದ್ದಂತೆ ಕಣ್ಣೀರಾದರು ಮೀರಾಬಾಯಿ.

ಕಾಡಿನಿಂದ ಕಟ್ಟಿಗೆ ಹೊತ್ತು ತರುತ್ತಿದ್ದ ಮೀರಾಬಾಯಿ ಚಾನು

ಆಕೆ ಗೆದ್ದ ಅಷ್ಟೂ ಚಿನ್ನದ ಪದಕಗಳ ತೂಕವಿದೆಯಲ್ಲಾ. ಅವಳು ಎತ್ತಿದ್ದು ಭಾರತವನ್ನು ಗೆಲ್ಲಿಸಿದ ಭಾರವನ್ನು. ಮೀರಾಬಾಯಿ ಚಾನು ಮಣಿಪುರದ ನೊಂಕ್ಪೊಕ್ ಕಕ್ಚಿಂಗ್ ಎಂಬ ಊರಿನವಳು. ಆರು ಮಂದಿ ಮಕ್ಕಳಲ್ಲಿ ಇವಳೇ ಕೊನೆಯವಳು. ತಂದೆ ದಿನಗೂಲಿ ಕಾರ್ಮಿಕ. ಮನೆ ಪಕ್ಕದ ರಸ್ತೆ ಬದಿಯಲ್ಲಿ ಟೀ ಅಂಗಡಿಯೊಂದನ್ನು ನಡೆಸುತ್ತಿದ್ದ ತಾಯಿ. ಮನೆಯ ಪರಿಸ್ಥಿತಿ ಹೇಗಿದ್ದಿರಬಹುದೆಂಬುದನ್ನು ಬಿಡಿಸಿ ಹೇಳಬೇಕಿಲ್ಲ. ಸಣ್ಣ ವಯಸ್ಸಲ್ಲೇ ಮಕ್ಕಳು ದುಡಿಯಬೇಕಿತ್ತು.. ಆ ಮಕ್ಕಳಿಗೆ ಊರಿನ ಪಕ್ಕದ ಕಾಡಿಗೆ ಹೋಗಿ ಕಟ್ಟಿಗೆ ಹೊತ್ತು ತರುವ ಕೆಲಸ. ಕಾಡಿನಿಂದ ದೊಡ್ಡ ದೊಡ್ಡ ಕಟ್ಟಿಗೆಗಳನ್ನು ಹೊತ್ತು ತರಬೇಕಿತ್ತು.

16ನೇ ವಯಸ್ಸಿನ ಅಣ್ಣ ಸೈಖೋಮ್ ಸನತೊಂಬ ಮೈಟೈ ಮರದ ದಿಮ್ಮಿಯನ್ನು ಎತ್ತಲು ಸಾಧ್ಯವಾಗದೆ ಕುಸಿದು ಬೀಳುತ್ತಿದ್ದ ಸಮಯದಲ್ಲಿ 12 ವರ್ಷದ ಹುಡುಗಿ ಮೀರಾಬಾಯಿ ಅದೇ ದಿಮ್ಮಿಯನ್ನು ಅನಾಯಾಸವಾಗಿ ಎತ್ತಿ ತಲೆಯ ಮೇಲಿಟ್ಟುಕೊಳ್ಳುತ್ತಿದ್ದಳು. ಬರಿಗಾಲಲ್ಲಿ ಕನಿಷ್ಠ 3 ಕಿ.ಮೀ ನಡೆದು ಕಟ್ಟಿಗೆಗಳನ್ನು ಹೊತ್ತು ತಂದು ಮನೆಯ ಮುಂದೆ ಹಾಕುತ್ತಿದ್ದಳು ಮೀರಾಬಾಯಿ. 20 ವರ್ಷಗಳ ಹಿಂದೆ ಹುಡುಗಿ ಹೊರುತ್ತಿದ್ದ ಭಾರವನ್ನು ನೋಡಿ ತಂದೆ-ತಾಯಿ ಅಚ್ಚರಿ ಪಟ್ಟಿದ್ದರೆ, ಅಂದಿನ ಅದೇ ಹುಡುಗಿ ಇಂದು ಎತ್ತಿದ ಭಾರವನ್ನು ನೋಡಿ ಇಡೀ ದೇಶವೇ ಹೆಮ್ಮೆ ಪಡುತ್ತಿದೆ.

ಮೀರಾಬಾಯಿ ಚಾನು ರಟ್ಟೆಗಳಲ್ಲಿ ಅಸಾಧ್ಯ ಶಕ್ತಿಯನ್ನು ಹೊಂದಿದ್ದ ಹುಡುಗಿ. ದೇಶಕ್ಕೆ ಹೆಮ್ಮೆ ತಂದ ವೇಟ್ ಲಿಫ್ಟರ್ ಮಹಿಳೆಯ ಮೊದಲ ಪ್ರೀತಿ ಬಿಲ್ಗಾರಿಕೆ. ಆದರೆ ಇಂಫಾಲ್’ನಲ್ಲಿರುವ ‘ಸ್ಪೋರ್ಟ್ಸ್ ಅಥಾರಿಟಿ ಆಫ್ ಇಂಡಿಯಾ’ಗೆ ಒಮ್ಮೆ ಭೇಟಿ ಕೊಡುತ್ತಾಳೆ. ಅದು ಅವಳ ಗುರಿಯನ್ನೇ ಬದಲಿಸಿ ಬಿಡುತ್ತದೆ. ಬಿಲ್ಲು ಹಿಡಿಯಲು ಬಯಸಿದಳಾದರೂ ಆ ದಿನ ಅಲ್ಲಿ ಬಿಲ್ಗಾರಿಕೆಯ ತರಬೇತಿ ಇರಲಿಲ್ಲ. ಅಲ್ಲಿ ವೇಟ್ ಲಿಫ್ಟರ್’ಗಳ ಒಂದು ಗುಂಪು ಭಾರ ಎತ್ತುವುದನ್ನು ನೋಡುತ್ತಾಳೆ. ಅವರು ಅಭ್ಯಾಸ ನಡೆಸುತ್ತಿರುವ ರೀತಿಯನ್ನು ನೋಡಿ ಮಂತ್ರಮುಗ್ಧಳಾಗಿ ನಿಂತು ಬಿಡುತ್ತಾಳೆ.

ಈ ಹುಡುಗಿ ಕಾಡಿನಿಂದ ಕಟ್ಟಿಗೆ ಹೊತ್ತು ತರುತ್ತಿದ್ದ ದಿನಗಳಲ್ಲೇ ಎರಡು ಬಾರಿ ಕಾಮನ್ವೆಲ್ತ್ ಗೇಮ್ಸ್ ಚಿನ್ನ ಗೆದ್ದಿದ್ದ ಕುಂಜರಾಣಿ ದೇವಿಯ ಕಥೆ ಕೇಳಿ ರೋಮಾಂಚನಗೊಳ್ಳುತ್ತಾಳೆ. ಕುಂಜರಾಣಿ ದೇವಿ ಅದೇ ಮಣಿಪುರದಿಂದ ಬಂದ ಲೆಜೆಂಡರಿ ಮಹಿಳಾ ವೇಟ್’ಲಿಫ್ಟರ್. ಭಾರ ಎತ್ತಲು ನಿಂತು ಬಿಡುತ್ತಾಳೆ ಮೀರಾಬಾಯಿ. ಆರಂಭದಲ್ಲಿ ಭಾರ ಎತ್ತುವ ವೃತ್ತಿಪರ ಸಾಧನಗಳಿರಲಿಲ್ಲ ಆಕೆಯ ಬಳಿ. ಬಿದಿರಿನ ದೊಡ್ಡ ಕಾಂಡಗಳನ್ನೇ ಎತ್ತಲಾರಂಭಿಸಿದಳು.

ಟ್ರೈನಿಂಗ್‌ಗಾಗಿ ಮರಳು ಲಾರಿ ಹತ್ತಿ ಹೊರಡುತ್ತಿದ್ದ ಗಟ್ಟಿಗಿತ್ತಿ

ಟ್ರೈನಿಂಗ್’ಗಾಗಿ ಮನೆಯಿಂದ 40 ಕಿ.ಮೀ ದೂರದಲ್ಲಿದ್ದ ಖುಮನ್ ಲಾಂಪಕ್ ಸ್ಪೋರ್ಟ್ಸ್ ಕಾಂಪ್ಲೆಕ್ಸ್’ಗೆ ಹೋಗಬೇಕಿತ್ತು. ಒಂದು ಸೈಕಲ್ ಕೂಡ ಇಲ್ಲದ ಮನೆ. ಆ ದಿನಗಳಲ್ಲಿ ಅವಳ ಪಾಲಿನ ಐರಾವತವಾಗಿದ್ದು ಮರಳು ತುಂಬಿದ ಲಾರಿಗಳು. ಬೆಳಗ್ಗೆ ನಾಲ್ಕು ಗಂಟೆಗೇ ಎದ್ದು ಮನೆಯಿಂದ ಸ್ವಲ್ಪ ದೂರದಲ್ಲಿದ್ದ ರಸ್ತೆಗೆ ಬಂದು ನಿಲ್ಲುತ್ತಿದ್ದ ಮೀರಾಬಾಯಿ, ಇಂಫಾಲ್ ಕಡೆ ಸಾಗುತ್ತಿದ್ದ ಮರಳಿನ ಲಾರಿಗಳನ್ನು ಹತ್ತಿ ಬಿಡುತ್ತಿದ್ದಳು.

ನಸುಕಿನ ಜಾವ.. ಗುರುತು-ಪರಿಚಯವಿಲ್ಲದ ಲಾರಿ ಡ್ರೈವರ್’ಗಳು. ಒಬ್ಬಂಟಿ ಹೆಣ್ಣು. ಧೈರ್ಯವೇ ಬೆಚ್ಚಿ ಬೀಳುವಂಥಾ ವಾತಾವರಣ. ಹೃದಯ ಕಂಪಿಸಲು ಏನೆಲ್ಲಾ ಇರಬೇಕಿತ್ತೋ ಅಷ್ಟೂ ಇರುತ್ತಿತ್ತು ಅಲ್ಲಿ. ಆದರೆ ಈ ಹೆಣ್ಣು ಮಗಳಿಗೆ ಭಯವೇ ಆಗುತ್ತಿರಲಿಲ್ಲವಂತೆ. ಸ್ವಭಾವತಃ ಗಟ್ಟಿಗಿತ್ತಿ. ಲಾರಿ ಹತ್ತಿ ಬಿಡುತ್ತಿದ್ದ ಮೀರಾಬಾಯಿ ಡ್ರೈವರ್, ಕ್ಲೀನರ್’ಗಳನ್ನು "ಅಣ್ಣಾ" ಎಂದು ಬಿಡುತ್ತಿದ್ದಳಂತೆ. ಮೂರು ವರ್ಷಗಳ ಹಿಂದೆ ಮಣಿಪುರದಲ್ಲಿ ಮಹಿಳೆಯೊಬ್ಬಳ ವಸ್ತ್ರ ಕಳಚಿದ ದುಶ್ಯಾಸನರೆಲ್ಲಿ..? ಈ ಪುಟ್ಟ ತಂಗಿಯನ್ನು ಅಷ್ಟೂ ವರ್ಷ ಜೋಪಾನವಾಗಿ ಕರೆ ತಂದು ಖುಮನ್ ಲಾಂಪಕ್ ಸ್ಪೋರ್ಟ್ಸ್ ಕಾಂಪ್ಲೆಕ್ಸ್’ಗೆ ಬಿಡುತ್ತಿದ್ದ ಆ ಅಣ್ಣಂದಿರೆಲ್ಲಿ? ಅವರೆಲ್ಲಾ ಈಗ ಅವಳ ಕೊರಳಲ್ಲಿ ಮಿನುಗುತ್ತಿರುವ ಚಿನ್ನದ ಪದಕಗಳನ್ನು ನೋಡಿ ಹೆಮ್ಮೆ ಪಡುತ್ತಿರಬಹುದು.

 

ಮೀರಾಬಾಯಿ ಚಾನು ಗೆದ್ದ ಚಿನ್ನದ ಪದಕಗಳು

ಕಾಮನ್‌ವೆಲ್ತ್ ಗೇಮ್ಸ್ 2018 (ಗೋಲ್ಡ್ ಕೋಸ್ಟ್)

ಕಾಮನ್‌ವೆಲ್ತ್ ಗೇಮ್ಸ್ 2022 (ಬರ್ಮಿಂಗ್’ಹ್ಯಾಮ್)

ಕಾಮನ್‌ವೆಲ್ತ್ ಗೇಮ್ಸ್ 2018 (ಗ್ಲಾಸ್ಗೊ)

ವಿಶ್ವ ಚಾಂಪಿಯನ್‌ಷಿಪ್ 2017 (ಕ್ಯಾಲಿಫೋರ್ನಿಯಾ)

ಕಾಮನ್‌ವೆಲ್ತ್ ಚಾಂಪಿಯನ್‌ಷಿಪ್ 2013 (ಪೆನಾಂಗ್)

ಕಾಮನ್‌ವೆಲ್ತ್ ಚಾಂಪಿಯನ್‌ಷಿಪ್ 2017 (ಗೋಲ್ಡ್ ಕೋಸ್ಟ್)

ಕಾಮನ್‌ವೆಲ್ತ್ ಚಾಂಪಿಯನ್‌ಷಿಪ್ 2019 (ಅಪಿಯಾ)

ಕಾಮನ್‌ವೆಲ್ತ್ ಚಾಂಪಿಯನ್‌ಷಿಪ್ 2025 (ಅಹ್ಮದಾಬಾದ್)

ಸೌತ್ ಏಷ್ಯನ್ ಗೇಮ್ಸ್ 2026 (ಗುವಾಹಟಿ)

ಇಷ್ಟೂ ಸಾಧನೆಗಳಿಗೆ ಕಳಶವಿಟ್ಟಂತೆ 2020ರ ಟೋಕಿಯೊ ಒಲಿಂಪಿಕ್ಸ್’ನಲ್ಲಿ ಬೆಳ್ಳಿ ಪದಕ. ಒಲಿಂಪಿಕ್ಸ್ ಪದಕ ಗೆದ್ದ ನಂತರ ಹುಟ್ಟೂರು ನೊಂಕ್ಪೊಕ್ ಕಕ್ಚಿಂಗ್’ಗೆ ಬಂದಿದ್ದ ಮೀರಾಬಾಯಿ, ತನ್ನನ್ನು ಉಚಿತವಾಗಿ ಟ್ರೈನಿಂಗ್’ಗೆ ಕರೆದೊಯ್ಯುತ್ತಿದ್ದ ಅಷ್ಟೂ ಮಂದಿ ಲಾರಿ ಡ್ರೈವರ್’ಗಳನ್ನು ಹುಡುಕಿ ಮನೆಗೆ ಕರೆಸಿ ಉಡುಗೊರೆ ಕೊಟ್ಟು ಕಳುಹಿಸಿದ್ದಳು. 20 ವರ್ಷಗಳ ಹಿಂದೆ ಕಟ್ಟಿಗೆ ಹೊರುತ್ತಿದ್ದ ಹೆಣ್ಣು ಮಗಳದ್ದು ಎಂಥಾ ಸಾಧನೆ

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಯಾವ ಬೌಲರ್‌ ಎದುರಿಸೋದು ಕಷ್ಟ? - ವೈಭವ್ ಸೂರ್ಯವಂಶಿ ಕೊಟ್ಟ 4 ಪದಗಳ ಖಡಕ್ ಉತ್ತರ ವೈರಲ್!
ಲಂಕಾ ಎದುರಿನ ಟೆಸ್ಟ್ ಸರಣಿಯಿಂದ ಔಟ್; ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ದಿಢೀರ್ ಗುಡ್ ಬೈ ಹೇಳಿದ ಟೀಂ ಇಂಡಿಯಾ ಸ್ಟಾರ್ ಕ್ರಿಕೆಟಿಗ