
ಮೌಂಟ್ ಮೌಂಗನ್ಯುಯಿ(ಫೆ.03): ಭಾರತ ಅಂಡರ್ 19 ತಂಡ 4ನೇ ಬಾರಿ ವಿಶ್ವಕಪ್ ಗೆಲ್ಲುವುದರೊಂದಿಗೆ ನೂತನ ದಾಖಲೆ ನಿರ್ಮಿಸಿದೆ.
ನ್ಯೂಜಿಲ್ಯಾಂಡ್'ನ ಮೌಂಟ್ ಮೌಂಗನ್ಯುಯಿಯಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಬಲಿಷ್ಟ ಆಸ್ಟ್ರೇಲಿಯಾ ತಂಡವನ್ನು ಟೀಂ ಇಂಡಿಯಾ 8 ವಿಕೇಟ್'ಗಳಿಂದ ಮಣಿಸಿದರು. ಆರಂಭಿಕ ಆಟಗಾರ ಮನ್'ಜೋತ್ ಖಾಲ್ರಾ ಭರ್ಜರಿ ಅಜೇಯ ಶತಕ ಹಾಗೂ ಮಧ್ಯಮ ಕ್ರಮಾಂಕದ ಆಟಗಾರ ಹೆಚ್.ಎಂ. ದೇಸಾಯಿ ಅವರ ಸಮಯೋಚಿತ ಆಟದ ನೆರವಿನಿಂದ ಸತತ 2ನೇ ಬಾರಿ ವಿಶ್ವಕಪ್ ಕಿರೀಟವನ್ನು ಮುಡಿಗೇರಿಸಿಕೊಂಡರು.
ಟಾಸ್ ಗೆದ್ದು ಪಂದ್ಯ ಸೋತರು
ಟಾಸ್ ಗೆದ್ದ ಆಸ್ಟ್ರೇಲಿಯಾ ತಂಡದ ನಾಯಕ ಜೆಜೆಎಸ್ ಸಂಘಾ ಬ್ಯಾಟಿಂಗ್ ಆಯ್ದುಕೊಂಡರು. ಆರಂಭದ 5 ಓವರ್'ಗಳವರೆಗೂ ಎಡ್ವರ್ಡ್ಸ್ ಹಾಗೂ ಬ್ರ್ಯಾಂತ್ ಬಿರುಸಿನ ಆಟವಾಡಿದರೂ ಪೋರೆಲ್ ದಾಳಿಗೆ ಇಬ್ಬರೂ ವಿಕೇಟ್ ಒಪ್ಪಿಸಿದರು. ಮೊದಲ ಕ್ರಮಾಂಕದಲ್ಲಿ ಆಗಮಿಸಿದ ಸಂಘಾ ಕೂಡ ಹೆಚ್ಚು ಹೊತ್ತು ನಿಲ್ಲಲಿಲ್ಲ. ಮಧ್ಯಮ ಕ್ರಮಾಂಕದ ಆಟಗಾರ ಮೆರ್ಲೋ(76) ಹಾಗೂ ಉಪ್ಪಲ್(34) 4ನೇ ವಿಕೆಟ್ ನಷ್ಟಕ್ಕೆ 95 ರನ್ ಪೇರಿಸಿದ ಕಾರಣ ಆಸಿಸ್ ತಂಡ ಸಾಧಾರಣ ಮೊತ್ತ ಕಲೆ ಹಾಕಲು ಸಾಧ್ಯವಾಯಿತು.
ಅನಂತರ ಆಗಮಿಸಿದ ಬ್ಯಾಟ್ಸ್'ಮೆನ್'ಗಳ್ಯಾರು ಭಾರತೀಯ ಬೌಲರ್'ಗಳ ದಾಳಿಗೆ ಹೆಚ್ಚು ಹೊತ್ತು ನಿಲ್ಲಲಿಲ್ಲ. ಅಂತಿಮವಾಗಿ 47.2 ಓವರ್'ಗಳಲ್ಲಿ ಆಸ್ಟ್ರೇಲಿಯಾ ತಂಡ 216 ರನ್'ಗಳಿಗೆ ಆಲ್'ಔಟ್ ಆಯಿತು. ಭಾರತದ ಪರ ಪೋರಲ್ 46/1,ಶಿವ ಸಿಂಗ್ 36/2, ರಾಯ್ 32/2 , ನಾಗರ ಕೋಟಿ 41/2 ವಿಕೇಟ್ ಪಡೆದು ಯಶಸ್ವಿ ಬೌಲರ್ ಎನಿಸಿದರು.
ಮನ್'ಜೋತ್ ಶತಕಕ್ಕೆ ಬೆದರಿದ ಆಸ್ಟ್ರೇಲಿಯಾ ಪಡೆ
217 ರನ್'ಗಳ ಸಾಧಾರಣ ಗುರಿ ಬೆನ್ನತ್ತಿದ ಭಾರತ ತಂಡ ಆರಂಭದಲ್ಲಿ ಉತ್ತಮ ಅಡಿಪಾಯ ದೊರೆಯಿತು. ನಾಯಕ ಶಾ ಹಾಗೂ ಮನ್'ಜೋತ್ ಖರ್ಲಾ ಅವರು 11.4 ಓವರ್'ಗಳಲ್ಲಿ ಮೊದಲ ವಿಕೇಟ್ ನಷ್ಟಕ್ಕೆ 71 ರನ್ ಬಾರಿಸಿದರಾದರೂ 12 ನೇ ಓವರ್'ನಲ್ಲಿ ಶಾ(29) ಸುಟರ್'ಲ್ಯಾಂಡ್ ಬೌಲಿಂಗ್'ನಲ್ಲಿ ಬೌಲ್ಡ್ ಆದರು.
ನಂತರ ಆಗಮಿಸಿದ ಮೊದಲ ಕ್ರಮಾಂಕದ ಆಟಗಾರ ಶುಬ್ಮಾನ್ ಗಿಲ್ ಕೂಡ ಮಂಜೋತ್'ಗೆ ಉತ್ತಮ ಸಾತ್ ನೀಡಿದರು. ಇವರಿಬ್ಬರು 2ನೇ ವಿಕೇಟ್ ನಷ್ಟಕ್ಕೆ 60 ರನ್ ಪೇರಿಸಿದರು. ಉಪ್ಪಲ್ ಬೌಲಿಂಗ್'ನಲ್ಲಿ 22 ಓವರ್'ನಲ್ಲಿ ಔಟಾದ ನಂತರ ಮಧ್ಯಮ ಕ್ರಮಾಂಕದ ಆಟಗಾರ ಹೆಚ್'ಎಂ.ದೇಸಾಯಿ ಮುರಿಯದ 89 ರನ್'ಗಳ ಜೊತೆಯಾಟದಿಂದ 38.5 ಓವರ್'ಗಳಲ್ಲಿ ಆಟವನ್ನು ಮುಕ್ತಾಯಗೊಳಿಸಿದರು. 102 ಎಸೆತಗಳನ್ನು ಎದುರಿಸಿದ ಮನ್ಜೋತ್ ಖಾರ್ಲಾ 8 ಬೌಂಡರಿ ಹಾಗೂ 3 ಅಮೋಘ ಸಿಕ್ಸ್'ರ್'ನೊಂದಿಗೆ ಅಜೇಯ 101 ರನ್ ಬಾರಿಸಿದರು. ದೇಸಾಯಿ 61 ಎಸತಗಳಿಗೆ 5 ಬೌಂಡರಿಗಳೊಂದಿಗೆ ಅಜೇಯ 47 ರನ್ ಗಳಿಸಿದರು.
ಶತಕ ಗಳಿಸಿದ ಮನ್'ಜೋತ್ ಕಾಲ್ರಾ ಪಂದ್ಯ ಶ್ರೇಷ್ಟ ಪುರಸ್ಕಾರಕ್ಕೆ ಪಾತ್ರರಾದರೆ, ಸರಣಿಯುದ್ದಕ್ಕೂ ಉತ್ತಮ ಆಟವಾಡಿದ್ದ ಶುಬ್ಮಾನ್ ಗಿಲ್ ಸರಣಿ ಶ್ರೇಷ್ಠರಾದರು.
ಸ್ಕೋರ್
ಆಸ್ಟ್ರೇಲಿಯಾ 47.2 ಓವರ್'ಗಳಲ್ಲಿ 216/10
(ಜೆ.ಮೆರ್ಲೋ 76, ಉಪ್ಪಲ್ 34, ಪೋರೆಲ್ 30/2, ರಾಯ್ 32/2, ಶಿವ ಸಿಂಗ್ 36/2, ನಾಗರ ಕೋಟಿ 41/2)
ಭಾರತ 38.5 ವರ್'ಗಳಲ್ಲಿ 220/2
(ಮನ್'ಜೋತ್ ಅಜೇಯ 101, ದೇಸಾಯಿ ಅಜೇಯ 47)
ಫಲಿತಾಂಶ: ಭಾರತಕ್ಕೆ 8 ವಿಕೇಟ್'ಗಳ ಜಯ
ಪಂದ್ಯ ಶ್ರೇಷ್ಠ: ಮನ್'ಜೋತ್ ಕಾರ್ಲಾ
ಸರಣಿ ಶ್ರೇಷ್ಠ: ಶುಬ್ಮಾನ್ ಗಿಲ್
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.