ಮಲೇಷ್ಯಾ ಓಪನ್‌: ಕ್ವಾರ್ಟರ್‌ ಫೈನಲ್‌’ಗೆ ಲಗ್ಗೆಯಿಟ್ಟ ಶ್ರೀಕಾಂತ್‌

By Web DeskFirst Published Apr 5, 2019, 1:25 PM IST
Highlights

ಪುರುಷರ ಸಿಂಗಲ್ಸ್‌ ಪ್ರಿ ಕ್ವಾರ್ಟರ್‌ನಲ್ಲಿ ಶ್ರೀಕಾಂತ್‌ ಥಾಯ್ಲೆಂಡ್‌ನ ಖೊಸಿಟ್‌ ಫೆಟ್‌ಪ್ರದಾಬ್‌ ವಿರುದ್ಧ 21-11, 21-15 ನೇರ ಗೇಮ್‌ಗಳಲ್ಲಿ ಗೆಲುವು ಸಾಧಿಸಿದರು. ಕೇವಲ 30 ನಿಮಿಷಗಳಲ್ಲಿ ಪಂದ್ಯ ಮುಕ್ತಾಯಗೊಳಿಸಿ ಮುನ್ನಡೆದ ಶ್ರೀಕಾಂತ್‌ಗೆ ಅಂತಿಮ 8ರ ಸುತ್ತಿನಲ್ಲಿ ಕಠಿಣ ಸವಾಲು ಎದುರಾಗಲಿದೆ.

ಕೌಲಾಲಂಪುರ(ಏ.05): ಭಾರತದ ತಾರಾ ಶಟ್ಲರ್‌ ಕಿದಂಬಿ ಶ್ರೀಕಾಂತ್‌ ಇಲ್ಲಿ ನಡೆಯುತ್ತಿರುವ ಮಲೇಷ್ಯಾ ಓಪನ್‌ ಬ್ಯಾಡ್ಮಿಂಟನ್‌ ಪಂದ್ಯಾವಳಿಯ ಪುರುಷರ ಸಿಂಗಲ್ಸ್‌ ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿದ್ದಾರೆ. ಆದರೆ ಪಿ.ವಿ.ಸಿಂಧು ಪ್ರಿ ಕ್ವಾರ್ಟರ್‌ ಫೈನಲ್‌ನಲ್ಲಿ ಸೋತು ಹೊರಬಿದ್ದಿದ್ದಾರೆ.

ಗುರುವಾರ ನಡೆದ ಪುರುಷರ ಸಿಂಗಲ್ಸ್‌ ಪ್ರಿ ಕ್ವಾರ್ಟರ್‌ನಲ್ಲಿ ಶ್ರೀಕಾಂತ್‌ ಥಾಯ್ಲೆಂಡ್‌ನ ಖೊಸಿಟ್‌ ಫೆಟ್‌ಪ್ರದಾಬ್‌ ವಿರುದ್ಧ 21-11, 21-15 ನೇರ ಗೇಮ್‌ಗಳಲ್ಲಿ ಗೆಲುವು ಸಾಧಿಸಿದರು. ಕೇವಲ 30 ನಿಮಿಷಗಳಲ್ಲಿ ಪಂದ್ಯ ಮುಕ್ತಾಯಗೊಳಿಸಿ ಮುನ್ನಡೆದ ಶ್ರೀಕಾಂತ್‌ಗೆ ಅಂತಿಮ 8ರ ಸುತ್ತಿನಲ್ಲಿ ಕಠಿಣ ಸವಾಲು ಎದುರಾಗಲಿದೆ. ಭಾರತದ ನಂ.1 ಆಟಗಾರ, ಹಾಲಿ ಒಲಿಂಪಿಕ್‌ ಚಾಂಪಿಯನ್‌, 4ನೇ ಶ್ರೇಯಾಂಕಿತ ಚೀನಾದ ಚೆನ್‌ ಲಾಂಗ್‌ ವಿರುದ್ಧ ಸೆಣಸಲಿದ್ದಾರೆ. ಕಳೆದ ವಾರ ಇಂಡಿಯಾ ಓಪನ್‌ ಫೈನಲ್‌ನಲ್ಲಿ ಸೋಲುಂಡು, 17 ತಿಂಗಳ ಪ್ರಶಸ್ತಿ ಬರ ನೀಗಿಸಿಕೊಳ್ಳುವಲ್ಲಿ ವಿಫಲರಾಗಿದ್ದ ಶ್ರೀಕಾಂತ್‌, ಇಲ್ಲಿ ಪ್ರಶಸ್ತಿ ಮೇಲೆ ಕಣ್ಣಿಟ್ಟಿದ್ದು ಟೂರ್ನಿಯಲ್ಲಿ ಉಳಿದುಕೊಂಡಿರುವ ಭಾರತದ ಏಕೈಕ ಆಟಗಾರ ಎನಿಸಿದ್ದಾರೆ.

ಸಿಂಧುಗೆ ಆಘಾತ: 5ನೇ ಶ್ರೇಯಾಂಕಿತೆ ಪಿ.ವಿ.ಸಿಂಧು ಪ್ರಿ ಕ್ವಾರ್ಟರ್‌ ಫೈನಲ್‌ ಪಂದ್ಯದಲ್ಲಿ ದಕ್ಷಿಣ ಕೊರಿಯಾದ ಸುಂಗ್‌ ಜಿ ಹ್ಯುನ್‌ ವಿರುದ್ಧ 18-21, 7-21 ನೇರ ಗೇಮ್‌ಗಳಲ್ಲಿ ಪರಾಭವಗೊಂಡರು. ವಿಶ್ವ ನಂ.10 ಸುಂಗ್‌ ವಿರುದ್ಧ ಸಿಂಧುಗೆ ಸತತ 3ನೇ ಸೋಲಾಗಿದೆ. ಕಳೆದ ವರ್ಷ ಆಲ್‌ ಇಂಗ್ಲೆಂಡ್‌ ಚಾಂಪಿಯನ್‌ಶಿಪ್‌ ಹಾಗೂ ಹಾಂಕಾಂಗ್‌ ಓಪನ್‌ನ ಮೊದಲ ಸುತ್ತಿನಲ್ಲಿ ಸಿಂಧು, ಸುಂಗ್‌ ಹ್ಯುನ್‌ ವಿರುದ್ಧ ಸೋಲುಂಡಿದ್ದರು.

ಮೊದಲ ಗೇಮ್‌ನಲ್ಲಿ 13-10ರಿಂದ ಮುಂದಿದ್ದ ಸಿಂಧು, ಲಯ ಕಳೆದುಕೊಂಡು ಗೇಮ್‌ ಬಿಟ್ಟುಕೊಟ್ಟರು. ದ್ವಿತೀಯ ಗೇಮ್‌ನಲ್ಲಿ ಭಾರತೀಯ ಆಟಗಾರ್ತಿ ವಿರುದ್ಧ ಸಂಪೂರ್ಣ ಪ್ರಾಬಲ್ಯ ಮೆರೆದ ಸುಂಗ್‌ ಹ್ಯುನ್‌, ಸುಲಭವಾಗಿ ಗೇಮ್‌ ಜಯಿಸಿ ಪಂದ್ಯ ತಮ್ಮದಾಗಿಸಿಕೊಂಡರು.

ಇದೇ ವೇಳೆ ಮಿಶ್ರ ಡಬಲ್ಸ್‌ನ 2ನೇ ಸುತ್ತಿನಲ್ಲಿ ಪ್ರಣವ್‌ ಜೆರ್ರಿ ಚೋಪ್ರಾ ಹಾಗೂ ಸಿಕ್ಕಿ ರೆಡ್ಡಿ ಜೋಡಿ, ಸ್ಥಳೀಯ ಆಟಗಾರರಾದ ಟಾನ್‌ ಕಿಯಾನ್‌ ಮೆಂಗ್‌ ಹಾಗೂ ಲಾಯಿ ಪೆ ಜಿಂಗ್‌ ವಿರುದ್ಧ 21-15, 17-21, 13-21 ಗೇಮ್‌ಗಳಲ್ಲಿ ಸೋಲುಂಡು ಹೊರಬಿತ್ತು.

click me!