
ಬೆಂಗಳೂರು[ಆ.29]: ಭಾರತ ಜಗತ್ತಿಗೆ ಪರಿಚಯಿಸಿದ ಅಸಾಮಾನ್ಯ ಕ್ರೀಡಾಪಟುಗಳಲ್ಲಿ ಹಾಕಿ ದಂತಕತೆ ಮೇಜರ್ ಧ್ಯಾನ್ ಚಂದ್ ಅಗ್ರಸ್ಥಾನದಲ್ಲಿ ನಿಲ್ಲುತ್ತಾರೆ. ಮಾಂತ್ರಿಕ ಹಾಕಿಪಟು ಧ್ಯಾನ್ ಚಂದ್ ಅವರ 113ನೇ ಜನ್ಮದಿನವನ್ನು ದೇಶಾದ್ಯಂತ ಇಂದು ರಾಷ್ಟ್ರೀಯ ಕ್ರೀಡಾದಿನವನ್ನಾಗಿ ಆಚರಿಸಲಾಗುತ್ತಿದೆ.
ಹಾಕಿ ಮಾಂತ್ರಿಕ ಎಂದೇ ಹೆಸರಾಗಿರುವ ಮೇಜರ್ ಧ್ಯಾನ್ ಚಂದ್ 29 ಆಗಸ್ಟ್ 1905ರಲ್ಲಿ ಅಹಮದಾಬಾದ್’ನಲ್ಲಿ ಜನಿಸಿದರು. 1928, 1932 ಹಾಗೂ 1936ರ ಒಲಿಂಪಿಕ್ಸ್’ನಲ್ಲಿ ಭಾರತಕ್ಕೆ ಹಾಕಿಯಲ್ಲಿ ಚಿನ್ನದ ಪದಕ ಗೆಲ್ಲಲು ಧ್ಯಾನ್ ಚಂದ್ ಪ್ರಮುಖ ಪಾತ್ರವಹಿಸಿದ್ದರು. 1926ರಿಂದ 1948ರ ಅವಧಿಯಲ್ಲಿ ಧ್ಯಾನ್ ಚಂದ್ 400ಕ್ಕೂ ಹೆಚ್ಚು ಗೋಲು ಗಳಿಸಿದ್ದರು. ದೇಶದ ಕೀರ್ತಿಯನ್ನು ಜಗತ್ತಿನಾದ್ಯಂತ ಪಸರಿಸಿದ ಹಾಲಿ ಧ್ಯಾನ್ ಚಂದ್ ಅವರಿಗೆ ಭಾರತ ರತ್ನ ಪ್ರಶಸ್ತಿ ನೀಡಬೇಕು ಎಂಬ ಆಗ್ರಹ ಜೋರಾಗಿ ಕೇಳಿ ಬರುತ್ತಿದ್ದರೂ, ಇದುವರೆಗೆ ಯಾವ ಸರ್ಕಾರವೂ ಈ ಬಗ್ಗೆ ಅಷ್ಟಾಗಿ ತಲೆಕೆಡಿಸಿಕೊಳ್ಳದೇ ಇರುವುದು ನಿಜಕ್ಕೂ ದುರಾದೃಷ್ಟಕರ. ’ಕ್ರಿಕೆಟ್ ದೇವರು’ ಖ್ಯಾತಿಯ ಸಚಿನ್ ತೆಂಡುಲ್ಕರ್ ಅವರಿಗೆ ಭಾರತ ರತ್ನ ನೀಡಲು ತೋರಿದ ಆತುರ, ಧ್ಯಾನ್ ಚಂದ್ ಅವರ ಕುರಿತಾಗಿ ಸರ್ಕಾರಕ್ಕೆ ಇಲ್ಲದಿರುವುದು ನೋಡಿದಾಗ ನಿಜಕ್ಕೂ ಬೇಸರವಾಗುತ್ತದೆ.
ಇದನ್ನು ಓದಿ: ಧ್ಯಾನ್ ಚಂದ್'ಗೆ ಭಾರತ ರತ್ನ ನೀಡಲು ಮನವಿ ಮಾಡಿದ ಗೊಯಲ್
ಧ್ಯಾನ್ ಚಂದ್ 1948ರಲ್ಲಿ ತಮ್ಮ ಕೊನೆಯ ಅಂತರಾಷ್ಟ್ರೀಯ ಪಂದ್ಯವನ್ನಾಡಿದ್ದರು. ಇನ್ನು ಡಿಸೆಂಬರ್ 03, 1979ರಲ್ಲಿ ಇಹಲೋಕ ತ್ಯಜಿಸಿದರು. ಪ್ರತಿ ವರ್ಷ ಆಗಸ್ಟ್ 29ರಂದು ರಾಷ್ಟ್ರೀಯ ಕ್ರೀಡಾ ದಿನವನ್ನಾಗಿ ಆಚರಿಸಲಾಗುತ್ತಿದ್ದು, ರಾಷ್ಟ್ರಪತಿ ಭವನದಲ್ಲಿ ಕ್ರೀಡೆಯಲ್ಲಿ ಮಹತ್ತರ ಸಾಧನೆ ಮಾಡಿದ ಕ್ರೀಡಾಪಟುಗಳಿಗೆ ಅರ್ಜುನ್, ಖೇಲ್ ರತ್ನ, ದ್ರೋಣಾಚಾರ್ಯ ಪ್ರಶಸ್ತಿಗಳನ್ನು ರಾಷ್ಟ್ರಪತಿಯವರು ಪ್ರದಾನ ಮಾಡುತ್ತಾರೆ. ಆದರೆ ಈ ಬಾರಿ ಭಾರತೀಯ ಕ್ರೀಡಾಪಟುಗಳು ಏಷ್ಯನ್ ಗೇಮ್ಸ್’ನಲ್ಲಿ ಸ್ಪರ್ಧಿಸುತ್ತಿರುವುದರಿಂದ ಈ ಕಾರ್ಯಕ್ರಮವನ್ನು ಸೆಪ್ಟೆಂಬರ್ 25ಕ್ಕೆ ಮುಂದೂಡಲಾಗಿದೆ.
ಮಾಂತ್ರಿಕ ಹಾಕಿ ಪಟುವಿನ ಜನ್ಮದಿನಕ್ಕೆ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಹಲವು ದಿಗ್ಗಜರು ಶುಭಕೋರಿದ್ದಾರೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.