ಖೋ-ಖೋ ವಿಶ್ವಕಪ್‌ನಲ್ಲಿ ಚಾಂಪಿಯನ್ ಆದ ಭಾರತ ಪುರುಷ ಹಾಗೂ ಮಹಿಳಾ ತಂಡಗಳಲ್ಲಿದ್ದ ಮಹಾರಾಷ್ಟ್ರದ 9 ಆಟಗಾರರಿಗೆ ತಲಾ 2.25 ಕೋಟಿ ರು. ನಗದು ಬಹುಮಾನ ಹಾಗೂ ಸರ್ಕಾರಿ ನೌಕರಿ ಭರವಸೆ ನೀಡಲಾಗಿದೆ. ರಾಷ್ಟ್ರೀಯ ಕ್ರೀಡಾಕೂಟದಲ್ಲಿ ಕರ್ನಾಟಕದ ಈಜುಪಟುಗಳು 9 ಚಿನ್ನ ಸೇರಿ 17 ಪದಕ ಗೆದ್ದಿದ್ದಾರೆ.
ಮುಂಬೈ: ಇತ್ತೀಚೆಗೆ ನವದೆಹಲಿಯಲ್ಲಿ ನಡೆದ ಚೊಚ್ಚಲ ಆವೃತ್ತಿಯ ಖೋ-ಖೋ ವಿಶ್ವಕಪ್‌ನಲ್ಲಿ ಚಾಂಪಿಯನ್ ಆದ ಭಾರತ ಪುರುಷ ಹಾಗೂ ಮಹಿಳಾ ತಂಡಗಳಲ್ಲಿದ್ದ ಮಹಾರಾಷ್ಟ್ರ ಆಟಗಾರರಿಗೆ, ಅಲ್ಲಿನ ಸರ್ಕಾರ ಬಂಪರ್ ಬಹುಮಾನ ನೀಡಿದೆ.
ಪುರುಷ, ಮಹಿಳಾ ತಂಡದಲ್ಲಿ ಮಹಾರಾಷ್ಟ್ರದ ಒಟ್ಟು 9 ಆಟಗಾರರು ಇದ್ದರು. ಆ 9 ಮಂದಿಗೆ ತಲಾ 2.25 ಕೋಟಿ ರು. ನಗದು ಬಹುಮಾನವನ್ನು ಮಹಾರಾಷ್ಟ್ರ ಸರ್ಕಾರ ನೀಡಿದೆ ಎಂದು ಭಾರತೀಯ ಖೋ-ಖೋ ಫೆಡರೇಶನ್ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ. ಇದಲ್ಲದೇ ಮಹಾರಾಷ್ಟ್ರ ಮೂಲದ ಕೋಚ್‌ಗಳಿಗೆ ತಲಾ 22.5 ಲಕ್ಷ ರು. ಬಹುಮಾನ ನೀಡಲಾಗಿದೆ.
ಭಾರತ ಪುರುಷರ ತಂಡದ ನಾಯಕ ಪ್ರತೀಕ್ ವಾಯ್ಕರ್ ಹಾಗೂ ನಾಯಕಿ ಪ್ರಿಯಾಂಕಾ ಇಂಗ್ಳೆ ಇಬ್ಬರೂ ಮಹಾರಾಷ್ಟ್ರದವರು.
ಅಂಡರ್-19 ಮಹಿಳಾ ಟಿ20 ವಿಶ್ವಕಪ್ ಫೈನಲ್‌ಗೆ ಲಗ್ಗೆಯಿಟ್ಟ ಭಾರತ
ಸರ್ಕಾರಿ ನೌಕರಿ ಭರವಸೆ: ವಿಶ್ವಕಪ್ ಗೆದ್ದ ತಂಡಗಳಲ್ಲಿದ್ದ 9 ಆಟಗಾರರಿಗೂ ಸರ್ಕಾರಿ ನೌಕರಿ ನೀಡುವ ಭರವಸೆಯನ್ನೂ ಮಹಾರಾಷ್ಟ್ರ ಸರ್ಕಾರ ನೀಡಿದೆ. ‘ನಮ್ಮ ಸರ್ಕಾರ ಕ್ರೀಡೆಗೆ ಸದಾ ಪ್ರೋತ್ಸಾಹಿಸುತ್ತದೆ. ವಿಶ್ವಕಪ್ ಗೆದ್ದ ತಂಡದಲ್ಲಿದ್ದ ನಮ್ಮ ರಾಜ್ಯದ ಆಟಗಾರ, ಆಟಗಾರ್ತಿಯರಿಗೆ ಅಭಿನಂದಿಸಿ, ಭವಿಷ್ಯದ ಕೂಟಗಳಿಗೆ ಶುಭ ಕೋರಿದ್ದೇನೆ’ ಎಂದು ಮಹಾರಾಷ್ಟ್ರದ ಡಿಸಿಎಂ ಅಜಿತ್ ಪವಾರ್ ಹೇಳಿದ್ದಾರೆ.
ರಾಜ್ಯಕ್ಕೆ ಈಜಿನಲ್ಲಿ ಮತ್ತೆ 5 ಪದಕ!
ಡೆಹ್ರಾಡೂನ್: 38ನೇ ರಾಷ್ಟ್ರೀಯ ಕ್ರೀಡಾಕೂಟದಲ್ಲಿ ಕರ್ನಾಟಕದ ಈಜುಪಟುಗಳು ಪದಕ ಬೇಟೆ ಮುಂದುವರಿದಿದೆ. ಕೂಟದ 3ನೇ ದಿನವಾದ ಶುಕ್ರವಾರ, ಈಜಿನಲ್ಲಿ ರಾಜ್ಯಕ್ಕೆ ಮತ್ತೆ 5 ಪದಕಗಳು ಸಿಕ್ಕವು. ಕರ್ನಾಟಕ ಒಟ್ಟಾರೆ 9 ಚಿನ್ನ ಸೇರಿ 17 ಪದಕ ಗೆದ್ದಿದ್ದು, ಈ ಪೈಕಿ 15 ಪದಕಗಳು ಈಜಿನಲ್ಲೇ ಸಿಕ್ಕಿವೆ.
ಮಹಿಳೆಯರ 50 ಮೀ. ಫ್ರೀ ಸ್ಟೈಲ್ ವಿಭಾಗದಲ್ಲಿ ಧಿನಿಧಿ ದೇಸಿಂಘು 26.96 ಸೆಕೆಂಡ್‌ಗಳಲ್ಲಿ ಗುರಿ ತಲುಪಿ ಚಿನ್ನದ ಪದಕ ಜಯಿಸಿದರು. ಕೂಟದಲ್ಲಿ ಇದು ಅವರ 4ನೇ ಚಿನ್ನ. 1 ಕಂಚಿನ ಪದಕವನ್ನೂ ಧಿನಿಧಿ ಜಯಿಸಿದ್ದಾರೆ. ಇದೇ ವಿಭಾಗದಲ್ಲಿ ನೀನಾ ವೆಂಕಟೇಶ್‌ಗೆ ಕಂಚಿನ ಪದಕ ದೊರೆಯಿತು.
ರಣಜಿಯಲ್ಲಿ ಕರ್ನಾಟಕದ ನಾಕೌಟ್‌ಗೇರುವ ಕನಸು ಭಗ್ನ!
ಪುರುಷರ 400 ಮೀ. ಮೆಡ್ಲೆ ವಿಭಾಗದಲ್ಲಿ ರಾಜ್ಯದ ಶೋನ್ ಗಂಗೂಲಿ ಚಿನ್ನ ಜಯಿಸಿದರು. ಪುರುಷರ 50 ಮೀ. ಫ್ರೀ ಸ್ಟೈಲ್ ವಿಭಾಗದಲ್ಲಿ ಶ್ರೀಹರಿ ನಟರಾಜ್ ಬೆಳ್ಳಿ ಜಯಿಸಿದರೆ, ಮಹಿಳೆಯರ 800 ಮೀ. ಫ್ರೀ ಸ್ಟೈಲ್ ವಿಭಾಗದಲ್ಲಿ ಶ್ರೀಚರಣಿ ಕಂಚಿನ ಪದಕ ಪಡೆದರು.
ಕರ್ನಾಟಕ ಈ ವರೆಗೂ 9 ಚಿನ್ನ, ತಲಾ 4 ಬೆಳ್ಳಿ ಹಾಗೂ ಕಂಚಿನೊಂದಿಗೆ ಒಟ್ಟು 17 ಪದಕ ಪಡೆದು ಪದಕ ಪಟ್ಟಿಯಲ್ಲಿ 3ನೇ ಸ್ಥಾನದಲ್ಲಿದೆ. 9 ಚಿನ್ನ ಸೇರಿ 19 ಪದಕ ಗೆದ್ದಿರುವ ಮಣಿಪುರ, 9 ಚಿನ್ನ ಸೇರಿ 18 ಪದಕ ಗೆದ್ದಿರುವ ಸರ್ವಿಸಸ್ ಕ್ರಮವಾಗಿ ಮೊದಲೆರಡು ಸ್ಥಾನಗಳಲ್ಲಿವೆ.