
ಸೋನಿಪತ್(ಜೂ.05): ಭಾರತೀಯ ಕುಸ್ತಿ ಫೆಡರೇಶನ್(ಡಬ್ಲ್ಯುಎಫ್ಐ) ಅಧ್ಯಕ್ಷ ಬ್ರಿಜ್ಭೂಷಣ್ ಸಿಂಗ್ ವಿರುದ್ಧದ ಕುಸ್ತಿಪಟುಗಳ ಹೋರಾಟ ಬೆಂಬಲಿಸಿ ರೈತರು ಹರ್ಯಾಣದಲ್ಲೂ ‘ಮಹಾ ಪಂಚಾಯತ್’ ಹೋರಾಟ ನಡೆಸಿದ್ದಾರೆ. ಇದು ಕಳೆದ 4 ದಿನಗಳಲ್ಲಿ ನಡೆದ 3ನೇ ಮಹಾ ಪಂಚಾಯತ್.
ಪಾರ್ಲಿಮೆಂಟ್ಗೆ ಘೇರಾವ್ ಹಾಕುವ ಪ್ರಯತ್ನದಲ್ಲಿದ್ದಾಗ ಕುಸ್ತಿಪಟುಗಳನ್ನು ಇತ್ತೀಚೆಗೆ ಪೊಲೀಸರು ತಡೆದು, ತಮ್ಮ ವಶಕ್ಕೆ ಪಡೆದಿದ್ದ ಭಾರೀ ಹೈಡ್ರಾಮ ಸೃಷ್ಟಿಸಿತ್ತು. ಆ ಬಳಿಕ ಘಟನೆ ಖಂಡಿಸಿ ಉತ್ತರ ಪ್ರದೇಶದ ಮುಜಫ್ಫರ್ ನಗರದಲ್ಲಿ ಮಹಾ ಪಂಚಾಯತ್ ಹೆಸರಿನಲ್ಲಿ ಬೃಹತ್ ಪ್ರತಿಭಟನೆ ಆಯೋಜಿಸಿದ್ದರು. ಜೂನ್ 3ರಂದು ಹರ್ಯಾಣದ ಕುರುಕ್ಷೇತ್ರದಲ್ಲಿ ವಿವಿಧ ಭಾಗಗಳ ರೈತರು ಮಹಾ ಪಂಚಾಯತ್ ನಡೆಸಿದ್ದರು. ‘ಮಹಾಪಂಚಾಯತ್’ ನಡೆಸುತ್ತಿರುವ ರೈತ ನಾಯಕರು ಸರ್ಕಾರಕ್ಕೆ ಬ್ರಿಜ್‌ಭೂಷಣ್‌ರನ್ನು ಬಂಧಿಸಲು ಜೂ.9ರ ಗಡುವು ನೀಡಿದ್ದು, ಇಲ್ಲದಿದ್ದರೆ ದೇಶದೆಲ್ಲೆಡೆ ಹೋರಾಟ ಆರಂಭಿಸು ಎಚ್ಚರಿಕೆ ನೀಡಿದ್ದಾರೆ.
ರಾಜ್ಯ ಅಥ್ಲೆಟಿಕ್ಸ್: ಶಶಿಕಾಂತ್ಗೆ ಚಿನ್ನ
ಬೆಂಗಳೂರು: ರಾಜ್ಯ ಹಿರಿಯರ ಮುಕ್ತ ಅಥ್ಲೆಟಿಕ್ಸ್ ಚಾಂಪಿಯನ್ಶಿಪ್ನಲ್ಲಿ ಬೆಂಗಳೂರಿನ ಶಶಿಕಾಂತ್ ನೂತನ ಕೂಟ ದಾಖಲೆಯೊಂದಿಗೆ ಚಿನ್ನದ ಪದಕ ಗೆದ್ದಿದ್ದಾರೆ. ನಗರದ ಕಂಠೀರವ ಕ್ರೀಡಾಂಗಣದಲ್ಲಿ ಭಾನುವಾರ ಮುಕ್ತಾಯಗೊಂಡ ಕೂಟದಲ್ಲಿ ಪುರುಷರ 200 ಮೀ. ಓಟದಲ್ಲಿ ಶಶಿಕಾಂತ್ 20.8 ಸೆಕೆಂಡ್ಗಳಲ್ಲಿ ಗುರಿ ತಲುಪಿ ಮೊದಲ ಸ್ಥಾನ ಪಡೆದರೆ, ಉಡುಪಿಯ ಅಭಿನ್ ದೇವಾಡಿಗ(20.8 ಸೆ.) 2ನೇ ಸ್ಥಾನ ಗಿಟ್ಟಿಸಿಕೊಂಡರು. ಇನ್ನು, ಮಹಿಳೆಯರ 400 ಮೀ. ಹರ್ಡಲ್ಸ್ನಲ್ಲಿ ಸಿಂಚಲ್ ಕಾವೇರಮ್ಮ 1:00.1 ನಿಮಿಷಗಳಲ್ಲಿ ಕ್ರಮಿಸಿ ಚಿನ್ನ ಗೆದ್ದರೆ, 200 ಮೀ. ಓಟದಲ್ಲಿ ಕಾವೇರಿ ಪಾಟೀಲ್ 24.6 ಸೆಕೆಂಡ್ಗಳಲ್ಲಿ ಗುರಿ ತಲುಪಿ ಬಂಗಾರ ಪಡೆದರು.
French Open: 17ನೇ ಫ್ರೆಂಚ್ ಕ್ವಾರ್ಟರ್ಗೆ ಜೋಕೋವಿಚ್ ಲಗ್ಗೆ!
ಮಹಿಳೆಯರ ಲಾಂಗ್ಜಂಪ್ನಲ್ಲಿ ಸಾಯ್ ಬೆಂಗಳೂರಿನ ಪವನಾ ನಾಗರಾಜ್ 5.84 ಮೀ. ದೂರಕ್ಕೆ ಜಿಗಿದು ಅಗ್ರಸ್ಥಾನಿಯಾದರೆ, ಪೌಲ್ ವಾಲ್ಟ್ನಲ್ಲಿ ಬುಡಾದ ಸಿಂಧುಶ್ರೀ, 800 ಮೀ. ಓಟದಲ್ಲಿ ಶಿವಮೊಗ್ಗದ ಅರ್ಪಿತಾ, 10000 ಮೀ. ಓಟದಲ್ಲಿ ಕೆಎಸ್ಪಿಯ ತೇಜಸ್ವಿ ಎನ್.ಎಲ್., ಹ್ಯಾಮರ್ ಎಸೆತದಲ್ಲಿ ದಕ್ಷಿಣ ಕನ್ನಡದ ಅಮ್ರೀನ್, ಹೈಜಂಪ್ನಲ್ಲಿ ದ.ಕನ್ನಡದ ಸಿಂಚನಾ ಚಿನ್ನ ಗೆದ್ದರು. ಪುರುಷರ ಹ್ಯಾಮರ್ ಎಸೆತದಲ್ಲಿ ಕೊಪ್ಪಳದ ಸಚಿನ್, 3000 ಮೀ. ಸ್ಟೀಪಲ್ಚೇಸ್ನಲ್ಲಿ ಧಾರವಾಡದ ನಾಗರಾಜ್, 800 ಮೀ. ಓಟದಲ್ಲಿ ಮೈಸೂರಿನ ರಾಹುಲ್ ಚೌಧರಿ ಚಿನ್ನ ಗೆದ್ದರು.
ಏಷ್ಯನ್ ಅಥ್ಲೆಟಿಕ್ಸ್ನಲ್ಲಿ ಭಾರತಕ್ಕೆ 2 ಚಿನ್ನದ ಪದಕ
ಯೆಕೋನ್(ಕೊರಿಯಾ): ಇಲ್ಲಿ ನಡೆಯುತ್ತಿರುವ ಅಂಡರ್-20 ಏಷ್ಯನ್ ಅಥ್ಲೆಟಿಕ್ಸ್ ಚಾಂಪಿಯನ್ಶಿಪ್ನ ಮೊದಲ ದಿನ ಭಾರತದ ರೆಝೋನಾ ಮಲಿಕ್ ಹಾಗೂ ಭರತ್ಪ್ರೀತ್ ಸಿಂಗ್ ಚಿನ್ನದ ಪದಕ ಗೆದ್ದಿದ್ದಾರೆ. ಭಾನುವಾರ ನಡೆದ ಮಹಿಳೆಯರ 400 ಮೀ. ಓಟದ ಸ್ಪರ್ಧೆಯಲ್ಲಿ ರೆಝೋನಾ 53.31 ಸೆಕೆಂಡ್ಗಳಲ್ಲಿ ಗುರಿ ತಲುಪಿ ಮೊದಲ ಸ್ಥಾನ ಪಡೆದರು.
ಕೂಟದಲ್ಲಿ ಮಲಿಕ್ ತಮ್ಮ ಶ್ರೇಷ್ಠ ವೈಯಕ್ತಿಕ ಪ್ರದರ್ಶನ(53.22 ಸೆಕೆಂಡ್) ಮಟ್ಟವನ್ನು ತಲುಪದಿದ್ದರೂ ಚಿನ್ನ ಪಡೆಯುವಲ್ಲಿ ಯಶಸ್ವಿಯಾದರು. ಇನ್ನು, ಪುರುಷರ ಡಿಸ್ಕಸ್ ಎಸೆತದಲ್ಲಿ ಭರತ್ಪ್ರೀತ್ 55.66 ಮೀ. ದೂರಕ್ಕೆ ಎಸೆದು ಸ್ವರ್ಣ ತಮ್ಮದಾಗಿಸಿಕೊಂಡರು. ಇದೇ ವೇಳೆ ಮಹಿಳೆಯರ 5,000ಮೀ. ರೇಸ್ನಲ್ಲಿ 17 ನಿಮಿಷ 17.11 ಸೆಕೆಂಡ್ಗಳಲ್ಲಿ ಕ್ರಮಿಸಿದ ಅಂತಿಮ ಪಾಲ್ ಕಂಚಿನ ಪದಕ ಗೆದ್ದರು.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.