ಲೋಧಾ ಶಿಫಾರಸು ಪಾಲಿಸಿ: ಬಿಸಿಸಿಐಗೆ ಸುಪ್ರೀಂ ಖಡಕ್ ಎಚ್ಚರಿಕೆ

By Internet DeskFirst Published Sep 28, 2016, 8:45 AM IST
Highlights

ನವದೆಹಲಿ(ಸೆ.28): ಐಪಿಎಲ್‌ ಸ್ಪಾಟ್‌ ಫಿಕ್ಸಿಂಗ್‌ ಹಾಗೂ ಬೆಟ್ಟಿಂಗ್‌ ಹಗರಣದಿಂದಾಗಿ ಭಾರತೀಯ ಕ್ರಿಕೆಟ್‌ ನಿಯಂತ್ರಣ ಮಂಡಳಿಯ (ಬಿಸಿಸಿಐ) ಆಡಳಿತ ಸ್ವರೂಪದ ಆಮೂಲಾಗ್ರ ಬದಲಾವಣೆಗೆ ನ್ಯಾ. ಲೋಧಾ ನೇತೃತ್ವದ ಸಮಿತಿ ಮಾಡಿರುವ ಶಿಫಾರಸುಗಳ ಅನುಷ್ಠಾನದಲ್ಲಿ ನ್ಯಾಯಾಲಯದ ಆದೇಶವನ್ನು ಉಲ್ಲಂಘಿಸಿರುವ ಬಿಸಿಸಿಐ ಅನ್ನು ತರಾಟೆಗೆ ತೆಗೆದುಕೊಂಡಿರುವ ಸರ್ವೋಚ್ಚ ನ್ಯಾಯಾಲಯ, ಮಾರ್ಗಸೂಚಿಗಳನ್ನು ಪಾಲಿಸಿ ಇಲ್ಲವೇ ಮುಂದಿನ ಆದೇಶಕ್ಕೆ ಸಿದ್ಧರಾಗಿ ಎಂದು ಎಚ್ಚರಿಸಿದೆ.

ಶಿಫಾರಸುಗಳನ್ನು ಅನುಷ್ಠಾನಕ್ಕೆ ತರದೆ ಕಾನೂನನ್ನು ಉಲ್ಲಂಘಿಸುತ್ತಿರುವ ಬಿಸಿಸಿಐ ಅಧ್ಯಕ್ಷ ಅನುರಾಗ್‌ ಠಾಕೂರ್‌ ಮತ್ತು ಕಾರ‍್ಯದರ್ಶಿ ಅಜಯ್‌ ಶಿರ್ಕೆ ಅವರನ್ನಷ್ಟೇ ಅಲ್ಲದೆ, ಇಡೀ ಆಡಳಿತ ಮಂಡಳಿಯ ವಿರುದ್ಧ ಕ್ರಮ ಜರುಗಿಸಬೇಕೆಂದು ಲೋಧಾ ಸಮಿತಿ ಸಲ್ಲಿಸಿದ ಅರ್ಜಿ ವಿಚಾರಣೆಯನ್ನು ಅಕ್ಟೋಬರ್‌ 7ಕ್ಕೆ ಕೈಗೆತ್ತಿಕೊಳ್ಳುವುದಾಗಿ ತಿಳಿಸಿದ ಮುಖ್ಯ ನ್ಯಾಯಮೂರ್ತಿ ಟಿ.ಎಸ್‌. ಠಾಕೂರ್‌ ಅವರಿದ್ದ ನ್ಯಾಯಪೀಠ, ಇದೇ ವೇಳೆ ಬಿಸಿಸಿಐನ ನಡೆಯನ್ನು ಕಟು ನುಡಿಗಳಲ್ಲಿ ಟೀಕಿಸಿತು.

‘‘ತಮಗೆ ತಾವೇ ಕಾನೂನು ಎಂಬಂತೆ ಬಿಸಿಸಿಐ ಭಾವಿಸಿದ್ದೇ ಆದಲ್ಲಿ ಅದು ತಪ್ಪಾಗುತ್ತದೆ. ಒಂದು ಉನ್ನತ ಸಮಿತಿಯು ವರದಿ ಸಲ್ಲಿಸಿ ಆ ಕುರಿತು ನ್ಯಾಯಾಲಯ ತೀರ್ಪು ನೀಡಿದ ಮೇಲೂ ಬಿಸಿಸಿಐನಿಂದ ಇಂಥದ್ದೊಂದು ನಡೆಯನ್ನು ನಾವು ನಿರೀಕ್ಷಿಸಿರಲಿಲ್ಲ. ಕೂಡಲೇ ಶಿಫಾರಸುಗಳನ್ನು ಅನುಷ್ಠಾನಕ್ಕೆ ತನ್ನಿ, ಇಲ್ಲವೇ ಮುಂದಿನ ಆದೇಶಕ್ಕೆ ಅಣಿಯಾಗಿ’’ ಎಂದು ಠಾಕೂರ್‌ ಎಚ್ಚರಿಸಿದರು.

30ಕ್ಕೆ ವಿಶೇಷ ಸಭೆ ಕರೆದ ಬಿಸಿಸಿಐ

‘‘ಸೆ. 21ರಂದು ಬಿಸಿಸಿಐ ನಡೆಸಿದ ವಾರ್ಷಿಕ ಮಹಾಸಭೆ ಕೂಡ ನಮ್ಮ ಶಿಫಾರಸುಗಳ ಸ್ಪಷ್ಟಉಲ್ಲಂಘನೆಯಾಗಿದೆ. 2016-17ನೇ ಸಾಲಿಗೆ ಹಲವಾರು ಸಮಿತಿಗಳನ್ನು ಬಿಸಿಸಿಐ ಆ ಸಭೆಯಲ್ಲಿ ನೇಮಿಸಿದೆ. ಮೊದಲಿಗೆ ಇದೇ 30ರಂದು ಎಲ್ಲ ಶಿಫಾರಸುಗಳು ಅನುಷ್ಠಾನವಾಗಬೇಕೆಂದು ನಾವು ಗಡುವು ನೀಡಿದ್ದೆವು. ಅಂತೆಯೇ ಡಿಸೆಂಬರ್‌ 15ರೊಳಗೆ ಈಗಿನ ಕಾರ‍್ಯಕಾರಿ ಸಮಿತಿ ಬದಲಿಗೆ 9 ಸದಸ್ಯರ ಅಪೆಕ್ಸ್‌ ಸಮಿತಿಯನ್ನು ನೇಮಿಸಲು ಸೂಚಿಸಿದೆ. ಆದರೆ, ಬಿಸಿಸಿಐ ಇದಾವುದರ ಪಾಲನೆಗೂ ಮುಂದಾಗಿಲ್ಲ’’ ಎಂದು ಲೋಧಾ ದೂರಿದ್ದಾರೆ. ಇನ್ನು ಲೋಧಾ ಸಮಿತಿಯ ಶಿಫಾರಸುಗಳ ಅವಲೋಕನಕ್ಕೆ ಸರ್ವೋಚ್ಚ ನ್ಯಾಯಾಲಯದ ಮಾಜಿ ನ್ಯಾಯಮೂರ್ತಿ ಮಾರ್ಕಂಡೇಯ ಕಾಟ್ಜು ಅವರನ್ನು ಬಿಸಿಸಿಐ ನೇಮಿಸಿದೆ. ಅಂತೆಯೇ ಅವರ ಸಲಹೆಯಂತೆ ಶಿಫಾರಸುಗಳ ವಿರುದ್ಧ ಪುನರ್‌ ಪರಿಶೀಲನಾ ಅರ್ಜಿಯನ್ನು ದಾಖಲಿಸಿದೆ. ಆದರೆ, ಬುಧವಾರ ನ್ಯಾಯಾಲಯದ ನಿಲುವಿನಿಂದಾಗಿ ಶುಕ್ರವಾರ (ಸೆ.30) ಬಿಸಿಸಿಐ ವಿಶೇಷ ತುರ್ತು ಸಭೆ ಕರೆದಿದೆ.

click me!