ಜೊಹೊರ್ ಬಹ್ರು (ಮಲೇಷ್ಯಾ)(ಸೆ.27): ಪ್ರತಿಷ್ಠಿತ ಎಎಫ್ಸಿ ಫುಟ್ಬಾಲ್ ಟೂರ್ನಿಯ ಸೆಮಿಫೈನಲ್ಗೆ ಕಾಲಿಟ್ಟಿರುವ ಭಾರತದ ಮೂರನೇ ತಂಡವೆಂಬ ಹೆಗ್ಗಳಿಕೆ ಪಡೆದಿರುವ ಬೆಂಗಳೂರು ಫುಟ್ಬಾಲ್ ಕ್ಲಬ್ (ಬಿಎಫ್ಸಿ) ಬುಧವಾರ ನಡೆಯಲಿರುವ ತನ್ನ ಉಪಾಂತ್ಯ ಹಂತದ ಮೊದಲ ಲೆಗ್ ಪಂದ್ಯದಲ್ಲಿ ಜೊಹೊರ್ ಡರುಲ್ ಟಾಝಿಮ್ (ಜೆಡಿಟಿ) ತಂಡವನ್ನು ಎದುರಿಸಲಿದೆ.
ಇಲ್ಲಿ ಲಾರ್ಕಿನ್ ಕ್ರೀಡಾಂಗಣದಲ್ಲಿ ನಡೆಯಲಿರುವ ಈ ಪಂದ್ಯದಲ್ಲಿ ಬಿಎಫ್ಸಿ ವಿರುದ್ಧ ಕಣಕ್ಕಿಳಿಯಲಿರುವ ಜೆಡಿಟಿ ತಂಡವು ಇತ್ತೀಚೆಗಷ್ಟೇ ನಡೆದಿದ್ದ ಮಲೇಷ್ಯಾ ಲೀಗ್ ಫುಟ್ಬಾಲ್ ಪಂದ್ಯಾವಳಿಯಲ್ಲಿ ಪ್ರಶಸ್ತಿ ಜಯಿಸಿ ಉತ್ಸಾಹದಲ್ಲಿದೆ. ಅಲ್ಲದೆ, ಸ್ವದೇಶದಲ್ಲಿಯೇ ಆ ತಂಡ ಬೆಂಗಳೂರು ಪಡೆಯನ್ನು ಎದುರಿಸುತ್ತಿರುವುದರಿಂದ ಸಹಜವಾಗಿಯೇ ಅದರ ಆತ್ಮವಿಶ್ವಾಸವೂ ಬೆಟ್ಟದಷ್ಟಾಗಿದೆ. ಈ ಹಿನ್ನೆಲೆಯಲ್ಲಿ, ಬ್ಲೂ ಬಾಯ್್ಸ ಪಡೆ ಇಲ್ಲಿ ಯಾವ ರೀತಿಯ ಪ್ರದರ್ಶನ ನೀಡಲಿದೆ ಎಂಬುದು ಕುತೂಹಲಕಾರಿ.
ಪಂದ್ಯದ ಬಗ್ಗೆ ಮಾತನಾಡಿದ ಬಿಎಫ್ಸಿ ತಂಡದ ಪ್ರಧಾನ ಕೋಚ್ ರೋಕಾ, ‘‘ಎದುರಾಳಿ ತಂಡದ ಬಲದ ಬಗ್ಗೆ ನಮಗೆ ಸ್ಪಷ್ಟವಾದ ಅರಿವಿದೆ. ಅಲ್ಲದೆ, ತಮ್ಮದೇ ನೆಲದಲ್ಲಿ ಬಿಎಫ್ಸಿ ತಂಡವನ್ನು ಎದುರಿಸುತ್ತಿರುವ ಆ ತಂಡದ ಮನೋಬಲವೂ ಸದೃಢವಾಗಿದ್ದು, ಅತ್ಯಲ್ಪ ಅಜಾರೂಕತೆಯೂ ಬ್ಲೂ ಬಾಯ್್ಸ ಪಡೆಗೆ ಅಪಾಯಕಾರಿಯಾಗಿ ಪರಿಣಮಿಸಬಹುದು. ಹಾಗಾಗಿ, ಎಚ್ಚರಿಕೆಯಿಂದ ಆಡಬೇಕಿದೆ. ಬ್ಲೂ ಬಾಯ್್ಸ ಪಡೆಗೆ ಇದೊಂದು ಸುಂದರ ಸವಾಲು’’ ಎಂದು ತಿಳಿಸಿದರು.