ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕೆಪಿಎಲ್ ಟ್ರೋಫಿ ಅನಾವರಣ

By Web DeskFirst Published Aug 13, 2018, 8:33 PM IST
Highlights

ಕರ್ನಾಟಕ ಪ್ರೀಮಿಯರ್ ಲೀಗ್ ಟೂರ್ನಿ ಆರಂಭಕ್ಕೆ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ ಸಕಲ ರೀತಿಯಲ್ಲೂ ಸಜ್ಜಾಗಿದೆ. ಇದೀಗ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕೆಪಿಎಲ್ ಟ್ರೋಫಿ ಅನಾವರಣ ಮಾಡಲಾಗಿದೆ. ಈ ಸುಂದರ ಸಮಾರಂಭ ಹೇಗಿತ್ತು? ಇಲ್ಲಿದೆ.

ಬೆಂಗಳೂರು(ಆ.13): 7ನೇ ಆವೃತ್ತಿ ಕರ್ನಾಟಕ ಪ್ರೀಮಿಯರ್ ಲೀಗ್ ಟೂರ್ನಿಗೆ ಕ್ಷಣಗಣನೆ ಆರಂಭವಾಗಿದೆ. ಇದರ ಅಂಗವಾಗಿ ಇಂದು ಬೆಂಗಳೂರಿನ ಚಿನ್ನಸ್ವಾಮಿ ಕೀಡಾಂಗಣದಲ್ಲಿ ಕೆಪಿಎಲ್ ಟ್ರೋಫಿ ಅನಾವರಣ ಮಾಡಲಾಯಿತು.

ಆಗಸ್ಟ್ 15 ರಂದು ಕೆಪಿಎಲ್ ಅದ್ದೂರಿಯಾಗಿ ಉದ್ಘಾಟನೆಗೊಳ್ಳಲಿದೆ. ಟೂರ್ನಿ ಆರಂಭಕ್ಕೆ ಇನ್ನೆರಡು ದಿನ ಬಾಕಿ ಇರುವಾಗ ಕೆಪಿಎಲ್ ಟ್ರೋಫಿಯನ್ನ ಅನಾವರಣ ಮಾಡಲಾಗಿದೆ. ಮೈಸೂರು ರಾಜವಂಶಸ್ಥರಾದ ಪ್ರಮೋದಾ ದೇವಿ ಒಡೆಯರ್ ಹಾಗೂ ನ್ಯೂಜಿಲೆಂಡ್ ಮಾಜಿ ಕ್ರಿಕೆಟಿಗ ಸ್ಕಾಟ್ ಸ್ಟೈರಿಶ್ ಟ್ರೋಫಿ ಅನಾವರಣ ಮಾಡಿದರು.

ಸುಂದರ ಸಮಾರಂಭದಲ್ಲಿ ಕೆಪಿಎಲ್ ಟೂರ್ನಿಯ 7 ತಂಡದ ನಾಯಕರು ಹಾಗೂ ಫ್ರಾಂಚೈಸಿ ಮಾಲೀಕರು, ಆಟಗಾರರು ಭಾಗಿಯಾಗಿದ್ದರು. ರಾಬಿನ್ ಉತ್ತಪ್ಪ, ವಿನಯ್ ಕುಮಾರ್, ಸ್ಟುವರ್ಟ್ ಬಿನ್ನಿ ಸೇರಿದಂತೆ ಹೆಮ್ಮೆಯ ಕನ್ನಡಿಗರು ಪಾಲ್ಗೊಂಡಿದ್ದರು. 

ಕೆಪಿಎಲ್ ಟೂರ್ನಿ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಮೊದಲ 3 ಪಂದ್ಯಗಳು(ಆ.15-17) ನಡೆಯಲಿದ್ದು, ಮೊದಲ ಪಂದ್ಯದಲ್ಲಿ ಬೆಂಗಳೂರು ಬ್ಲಾಸ್ಟರ್ಸ್‌ ಹಾಗೂ ಬೆಳಗಾವಿ ಪ್ಯಾಂಥರ್ಸ್‌ ತಂಡಗಳು ಸೆಣಸಲಿವೆ. 2ನೇ ಚರಣ ಆ.19-26ರ ವರೆಗೂ ಹುಬ್ಬಳ್ಳಿಯಲ್ಲಿ ನಡೆದರೆ, ಆ.28-ಸೆ.6ರ ವರೆಗೂ ನಡೆಯಲಿರುವ ಅಂತಿಮ ಚರಣಕ್ಕೆ ಮೈಸೂರು ಆತಿಥ್ಯ ವಹಿಸಲಿದೆ.  ಸೆ.3ಕ್ಕೆ ಲೀಗ್ ಹಂತ ಮುಕ್ತಾಯಗೊಳ್ಳಲಿದ್ದು, ಸೆ.4 ಹಾಗೂ ಸೆ.5ರಂದು ಸೆಮಿಫೈನಲ್ಸ್, ಸೆ.6ಕ್ಕೆ ಫೈನಲ್ ಪಂದ್ಯ ನಡೆಯಲಿದೆ.

click me!