KPL 2019: ಸೋಲಿನಿಂದ ಕಂಗೆಟ್ಟಿದ್ದ ಬೆಳಗಾವಿಗೆ ಗೆಲುವಿನ ಒಯಸಿಸ್!

By Web DeskFirst Published Aug 23, 2019, 8:01 PM IST
Highlights

ಬೆಂಗಳೂರು ಬ್ಲಾಸ್ಟರ್ಸ್ ಕಳಪೆ ಬ್ಯಾಟಿಂಗ್ ತಂಡಕ್ಕೆ ಮುಳುವಾಗಿದೆ. ಬೆಂಗಳೂರು ಚರಣದ ಕೊನೆಯ ಪಂದ್ಯದಲ್ಲಿ ಬೆಂಗಳೂರು ಬ್ಲಾಸ್ಟರ್ ಮುಗ್ಗರಿಸಿದೆ. ಆದರೆ ಸತತ ಸೋಲಿನಿಂದ ಬೇಸರಗೊಂಡಿದ್ದ  ಬೆಳಗಾವಿ ಪ್ಯಾಂಥರ್ಸ್ ಕೊನೆಗೂ  ಗೆಲುವಿನ ಗೆರೆ ದಾಟಿದೆ. ರೋಚಕ ಪಂದ್ಯದ ಹೈಲೈಟ್ಸ್ ಇಲ್ಲಿದೆ.
 

ಬೆಂಗಳೂರು(ಆ.23): ಕರ್ನಾಟಕ ಪ್ರಿಮಿಯರ್ ಲೀಗ್ ಟೂರ್ನಿಯಲ್ಲಿ ಹ್ಯಾಟ್ರಿಕ್ ಸೋಲಿನಿಂದ ಕಂಗೆಟ್ಟಿದ್ದ ಬೆಳಗಾವಿ ಪ್ಯಾಂಥರ್ಸ್ ಕೊನೆಗೂ ಗೆಲುವಿನ ಸಿಹಿ ಕಂಡಿದೆ. ಬೆಂಗಳೂರು ಬ್ಲಾಸ್ಟರ್ಸ್ ವಿರುದ್ದ ನಾಯಕ ಮನೀಶ್ ಪಾಂಡೆ ಅವರ ಜವಾಬ್ದಾರಿಯುತ ಬ್ಯಾಟಿಂಗ್ ಹಾಗೂ  ಶಿಸ್ತಿನ ಬೌಲಿಂಗ್ ನೆರವಿನಿಂದ  ಬೆಳಗಾವಿ  8 ವಿಕೆಟ್ ಗೆಲುವು ಸಾಧಿಸಿದೆ.  

ಇದನ್ನೂ ಓದಿ: KPL ಕ್ರಿಕೆಟ್: ನೆರೆ ಸಂತ್ರಸ್ತರಿಗೆ ಬೆಳಕಾದ ಬೆಳಗಾವಿ ಪ್ಯಾಂಥರ್ಸ್!

ಬೆಳಗಾವಿ ಪ್ಯಾಂಥರ್ಸ್ ವಿರುದ್ಧದ ಕರ್ನಾಟಕ ಪ್ರೀಮಿಯರ್ ಲೀಗ್ ಪಂದ್ಯದಲ್ಲಿ ಬೆಂಗಳೂರು ಬ್ಲಾಸ್ಟರ್ಸ್ ಮನೆಯಂಗಣದ ತನ್ನ ಕೊನೆಯ ಪಂದ್ಯದಲ್ಲಿ ನೀರಸ ಬ್ಯಾಟಿಂಗ್ ಪ್ರದರ್ಶಿಸಿ ಕೇವಲ 110 ರನ್ ಗೆ ತೃಪ್ತಿಪಟ್ಟಿತು.  ಟಾಸ್ ಗೆದ್ದು ಫೀಲ್ಡಿಂಗ್ ಆಯ್ದುಕೊಂಡ ಬೆಳಗಾವಿ ಪ್ಯಾಂಥರ್ಸ್ ತಂಡದ ನಾಯಕನ ಆಯ್ಕೆಗೆ ಬೌಲರ್ ಗಳು ಉತ್ತಮ ರೀತಿಯಲ್ಲಿ ಸ್ಪಂದಿಸಿದರು. ದರ್ಶನ್ ಎಂ.ಬಿ. (27ಕ್ಕೆ 3), ಜಹೂರ್ ಫರೂಕಿ (23ಕ್ಕೆ 2) ಹಾಗೂ ರಿತೇಶ್ ಭಟ್ಕಳ್ 3 ಓವರ್ ಗಳಲ್ಲಿ ಕೇವಲ 7 ರನ್ ನೀಡಿ 2 ವಿಕೆಟ್ ಗಳಿಸುವುದರೊಂದಿಗೆ ಬೆಂಗಳೂರು ಬ್ಲಾಸ್ಟರ್ಸ್ ತಂಡದ ಬೃಹತ್ ಮೊತ್ತದ ಕನಸು ದೂರವಾಯಿತು. 20 ಓವರ್ ಗಳಲ್ಲಿ 8 ವಿಕೆಟ್ ನಷ್ಟಕ್ಕೆ 110 ರನ್ ಗಳಿಸಿತು.

ಇದನ್ನೂ ಓದಿ: ಚೆಂಡೆ ನುಡಿಸಿ ಭೇಷ್‌ ಎನಿಸಿಕೊಂಡ ಬ್ರಾಡ್‌ ಹಾಗ್‌!

111 ರನ್ ಗಳ ಸುಲಭ ಜಯದ ಗುರಿಯನ್ನು ಹೊಂದಿದ್ದ ಪ್ಯಾಂಥರ್ಸ್ ತಂಡ ಮನೀಶ್ ಪಾಂಡೆ (58 ನಾಟೌಟ್) ಹಾಗೂ ಅಭಿನವ್ ಮನೋಹರ್ (22 ನಾಟೌಟ್) ಅವರ 76 ರನ್ ಗಳ ಜತೆಯಾಟದಿಂದ ಇನ್ನೂ 8.1 ಓವರ್ ಬಾಕಿ ಇರುವಾಗಲೇ  ಗುರಿ ತಲುಪಿತು. ಹಿಂದಿನ ಪಂದ್ಯದಲ್ಲಿ ಮನೀಶ್ ಪಾಂಡೆ ಅಜೇಯ 102 ರನ್ ಗಳಿಸಿಯೂ ಹುಬ್ಬಳ್ಳಿಯ ಟೈಗರ್ಸ್ ವಿರುದ್ಧ ತಂಡ ಅಚ್ಚರಿಯ ಆಘಾತ ಕಂಡಿತ್ತು ನಾಯಕ ಪಾಂಡೆ ಆಗಮನದ ನಂತರ ಪ್ಯಾಂಥರ್ಸ್ ಪಡೆ ಉತ್ತಮ ಹೋರಾಟ ನೀಡುತ್ತಿದ್ದು, ತಂಡದ ಮನೋಬಲ ಹೆಚ್ಚಿರುವುದು ಸ್ಪಷ್ಟವಾಗಿದೆ. 
 

click me!