KPL 2019: ಇಲ್ಲಿದೆ ಆಟಗಾರರ ಹರಾಜಿನ ಸಂಪೂರ್ಣ ಲಿಸ್ಟ್ !

By Web Desk  |  First Published Jul 28, 2019, 9:51 AM IST

ಕರ್ನಾಟಕ ಪ್ರಿಮಿಯರ್ ಲೀಗ್ ಟೂರ್ನಿಗೆ ಸಿದ್ಥತೆಗಳು ಭರದಿಂದ ಸಾಗಿದೆ. ಆಗಸ್ಟ್ 16 ರಿಂದ 8ನೇ ಆವೃತ್ತಿ KPL ಟೂರ್ನಿ ಆರಂಭಗೊಳ್ಳಲಿದೆ. ಈ ಟೂರ್ನಿಗಾಗಿ ಆಟಗಾರರ ಹರಾಜು ಪ್ರಕ್ರಿಯೆ ಮುಗಿದಿದೆ. ಬೆಂಗಳೂರಿನ ಖಾಸಗಿ ಹೊಟೆಲ್‌ನಲ್ಲಿ ನಡೆದ ಹರಾಜು ಪ್ರಕ್ರಿಯೆಯಲ್ಲಿ ಯುವ ಕ್ರಿಕೆಟಿಗರು ದೊಡ್ಡ ಮೊತ್ತಕ್ಕೆ ಹರಾಜಾದರೆ, ಸ್ಟಾರ್ ಕ್ರಿಕೆಟಿಗರು ನಿರಾಸೆ ಮೂಡಿಸಿದರು. ಇಲ್ಲಿದೆ ಕೆಪಿಎಲ್ ಹರಾಜಿನ ಸಂಪೂರ್ಣ ಲಿಸ್ಟ್.


ಬೆಂಗಳೂರು(ಜು.28): ಕರ್ನಾಟಕ ಪ್ರೀಮಿಯರ್‌ ಲೀಗ್‌ (ಕೆಪಿಎಲ್‌) 8ನೇ ಆವೃತ್ತಿಯ ಹರಾಜು ಪ್ರಕ್ರಿಯೆ ಸಾಕಷ್ಟುಅಚ್ಚರಿಗೆ ಕಾರಣವಾಯಿತು. ನಿರೀಕ್ಷೆ ಮೂಡಿಸಿದ್ದ ಆಟಗಾರರು ಕಡಿಮೆ ಮೊತ್ತಕ್ಕೆ ಖರೀದಿಯಾದರೆ, ಯುವ ಆಟಗಾರರು ದೊಡ್ಡ ಮೊತ್ತ ಜೇಬಿಗಿಳಿಸಿಕೊಂಡರು. ಕೆಪಿಎಲ್‌ ನಡೆಯುವ ವೇಳೆಯಲ್ಲಿ ಇತರೆ ಟೂರ್ನಿಗಳು ನಡೆಯುವದರಿಂದ ಕೆಲ ಆಟಗಾರರು ಹರಾಜಾಗದೆ ಉಳಿದರು. ಶನಿವಾರ ಇಲ್ಲಿನ ಖಾಸಗಿ ಹೋಟೆಲ್‌ನಲ್ಲಿ ನಡೆದ ಹರಾಜು ಪ್ರಕ್ರಿಯೆಯಲ್ಲಿ 7 ಫ್ರಾಂಚೈಸಿಗಳು ತಲಾ 16 ಆಟಗಾರರನ್ನು ಖರೀದಿಸಿದವು. ಒಟ್ಟು 112 ಆಟಗಾರರು ಬಿಕರಿಯಾದರು. ಹರಾಜಿಗೂ ಮುನ್ನ ಪ್ರತಿ ತಂಡವೂ ತಲಾ ಇಬ್ಬರು ಆಟಗಾರರನ್ನು ರೀಟೈನ್‌ ಮಾಡಿಕೊಂಡಿದ್ದವು. ಸದ್ಯ ಪ್ರತಿ ತಂಡದಲ್ಲಿ 18 ಆಟಗಾರರಿದ್ದಾರೆ.

ಪವನ್‌ಗೆ ಭಾರೀ ಬೇಡಿಕೆ: ‘ಎ’ ಗುಂಪಿನಲ್ಲಿದ್ದ ಎಡಗೈ ಬ್ಯಾಟ್ಸ್‌ಮನ್‌ ಪವನ್‌ ದೇಶಪಾಂಡೆ (.7.30 ಲಕ್ಷ) ಶಿವಮೊಗ್ಗ ಲಯನ್ಸ್‌ ಪಾಲಾಗುವ ಮೂಲಕ ಈ ಬಾರಿಯ ಹರಾಜಿನಲ್ಲಿ ಬಂಪರ್‌ ಮೊತ್ತ ಪಡೆದರು. ಅನಿರುದ್ಧ ಜೋಶಿ (7.10 ಲಕ್ಷ) ಮೈಸೂರು ವಾರಿಯರ್ಸ್‌ ಸೇರುವ ಮೂಲಕ 2ನೇ ಅತಿ ದೊಡ್ಡ ಮೊತ್ತವನ್ನು ಜೇಬಿಗಿಳಿಸಿದರು. ಉಳಿದಂತೆ ಮೊಹಮದ್‌ ತಾಹ (5.70 ಲಕ್ಷ) ಹುಬ್ಬಳ್ಳಿ ತಂಡ ಖರೀದಿಸಿತು. ಅಮಿತ್‌ ವರ್ಮಾರನ್ನು ಖರೀದಿಸಲು ಹುಬ್ಬಳ್ಳಿ ಮತ್ತು ಬೆಂಗಳೂರು ತಂಡಗಳು ಉತ್ತಮ ಪೈಪೋಟಿ ನಡೆಸಿದವು. ಅಂತಿಮವಾಗಿ ಹುಬ್ಬಳ್ಳಿ 5.20 ಲಕ್ಷಕ್ಕೆ ಬಿಡ್‌ ಕೊನೆಗೊಳಿಸಿತು. ರೈಟ್‌ ಟು ಮ್ಯಾಚ್‌ ಕಾರ್ಡ್‌ನಲ್ಲಿ ಮೈಸೂರು ಅಮಿತ್‌ರನ್ನು ತನ್ನಲ್ಲೇ ಉಳಿಸಿಕೊಂಡಿತು. ವೇಗಿ ಅಭಿಮನ್ಯು ಮಿಥುನ್‌ರನ್ನು ಮೈಸೂರು 3.60 ಲಕ್ಷಕ್ಕೆ ಬಿಡ್‌ ಕೂಗಿತ್ತು. ಆದರೆ ಶಿವಮೊಗ್ಗ ರೈಟ್‌ ಟು ಮ್ಯಾಚ್‌ನಲ್ಲಿ ಮಿಥುನ್‌ರನ್ನು ಉಳಿಸಿಕೊಂಡಿತು. ನವೀನ್‌ ಎಂ.ಜಿ ಅವರನ್ನು ಬಿಜಾಪುರ ಬುಲ್ಸ್‌ 3.50 ಲಕ್ಷಕ್ಕೆ ರೈಟ್‌ ಟು ಮ್ಯಾಚ್‌ ಕಾರ್ಡ್‌ ಬಳಸಿ ಖರೀದಿಸಿತು.

Tap to resize

Latest Videos

undefined

ಜೋನಾಥನ್‌ಗೆ ಬಂಪರ್‌: ‘ಬಿ’ ಗುಂಪಿನಲ್ಲಿದ್ದ ಆಟಗಾರರ ಪೈಕಿ ಜೋನಾಥನ್‌ (.6.00 ಲಕ್ಷ) ಅತಿ ಹೆಚ್ಚು ಮೊತ್ತಕ್ಕೆ ಬೆಂಗಳೂರು ಬ್ಲಾಸ್ಟರ್ಸ್‌ ಸೇರಿಕೊಂಡರು. ಶೋಯೆಬ್‌ ಮ್ಯಾನೇಜರ್‌ (4.65 ಲಕ್ಷ) ಮೈಸೂರು ವಾರಿಯರ್ಸ್‌ ಸೇರುವ ಮೂಲಕ 2ನೇ ಗರಿಷ್ಠ ಮೊತ್ತ ಪಡೆದರು. ಉಳಿದಂತೆ ಅಬ್ರಾರ್‌ ಖಾಜಿ (4.60 ಲಕ್ಷ) ಬಳ್ಳಾರಿ ಟಸ್ಕರ್ಸ್‌, ಅಭಿನವ್‌ ಮನೋಹರ್‌ (4.60 ಲಕ್ಷ) ಬೆಳಗಾವಿ ಪ್ಯಾಂಥರ್ಸ್‌ ಸೇರಿದರು. ಸುನೀಲ್‌ ರಾಜು (4.10 ಲಕ್ಷ) ಬಿಜಾಪುರ ಬುಲ್ಸ್‌ ಪಾಲಾದರು. ಆಶ್‌ರ್‍ದೀಪ್‌ ಸಿಂಗ್‌ ಬ್ರಾರ್‌ (4.00 ಲಕ್ಷ) ಬೆಳಗಾವಿ ಸೇರಿಕೊಂಡರು. ಅಂಡರ್‌ 19 ಭಾರತ ತಂಡದಲ್ಲಿ ಆಡುತ್ತಿರುವ ರಾಯಚೂರು ಮೂಲದ ಕ್ರಿಕೆಟಿಗ ವಿದ್ಯಾಧರ್‌ ಪಾಟೀಲ್‌ (2.45 ಲಕ್ಷ) ಹುಬ್ಬಳ್ಳಿ ಟೈಗರ್ಸ್‌ ಪಾಲಾಗುವ ಮೂಲಕ ಅಚ್ಚರಿ ಮೂಡಿಸಿದರು.

ಪಾಂಡೆ, ಗೌತಮ್‌ಗೆ ಶಾಕ್‌!: ಹಲವು ವರ್ಷಗಳ ಕಾಲ ಐಪಿಎಲ್‌ನಲ್ಲಿ ಆಡಿರುವ ಅನುಭವವಿರುವ ತಾರಾ ಆಟಗಾರರಾದ ಮನೀಶ್‌ ಪಾಂಡೆ, ಕೆ.ಗೌತಮ್‌ ಸಾಧಾರಣ ಮೊತ್ತಕ್ಕೆ ಬಿಕರಿಯಾದರು. ಗೌತಮ್‌ .1.9 ಲಕ್ಷಕ್ಕೆ ಬಳ್ಳಾರಿ ಟಸ್ಕ​ರ್‍ಸ್ ತಂಡ ಸೇರಿದರೆ, ಪಾಂಡೆ ಮೊದಲ ಸುತ್ತಿನಲ್ಲಿ ಬಿಕರಿಯಾಗದೆ ಉಳಿದಿದ್ದರು. ಬಳಿಕ 2ನೇ ಸುತ್ತಿನಲ್ಲಿ .2 ಲಕ್ಷಕ್ಕೆ ಬೆಳಗಾವಿ ಪ್ಯಾಂಥ​ರ್‍ಸ್ ತಂಡ ಸೇರಿಕೊಂಡರು. ಸ್ಪಿನ್ನರ್‌ ಶಿವಿಲ್‌ ಕೌಶಿಕ್‌ .75 ಸಾವಿರಕ್ಕೆ ಹುಬ್ಬಳ್ಳಿ , ಆರ್‌.ಸಮಥ್‌ರ್‍ .2.1 ಲಕ್ಷಕ್ಕೆ ಬೆಳಗಾವಿ ಪಾಲಾದರು.

ಬಿಕರಿಯಾಗದ ತಾರೆಗಳು
ಆ.17ರಿಂದ ಸೆ.7ರ ವರೆಗೂ ನಡೆಯಲಿರುವ ದುಲೀಪ್‌ ಟ್ರೋಫಿಯಲ್ಲಿ ಕರ್ನಾಟಕದ ಶ್ರೇಯಸ್‌ ಗೋಪಾಲ್‌, ಕರುಣ್‌ ನಾಯರ್‌, ರೋನಿತ್‌ ಮೋರೆ ಆಡುವ ಸಾಧ್ಯತೆ ಇದೆ. ಕೆಪಿಎಲ್‌ ಸಹ ಇದೇ ಸಮಯದಲ್ಲಿ ನಡೆಯಲಿರುವ ಕಾರಣ, ಈ ಮೂವರು ತಾರಾ ಆಟಗಾರರನ್ನು ಯಾವ ತಂಡವೂ ಖರೀದಿಸಲಿಲ್ಲ.

ಕೇರಳಕ್ಕೆ ಹೋದ ಉತ್ತಪ್ಪ ಕೆಪಿಎಲ್‌ಗಿಲ್ಲ!
ಕಳೆದ 2 ವರ್ಷ ಸೌರಾಷ್ಟ್ರ ರಣಜಿ ತಂಡದಲ್ಲಿ ಆಡಿದ್ದ ರಾಜ್ಯದ ಆಟಗಾರ ರಾಬಿನ್‌ ಉತ್ತಪ್ಪ, ಈ ರಣಜಿ ಋುತುವಿನಲ್ಲಿ ಕೇರಳ ತಂಡದೊಂದಿಗೆ ಒಪ್ಪಂದ ಮಾಡಿಕೊಂಡಿದ್ದಾರೆ. ಕೆಪಿಎಲ್‌ ಹರಾಜಿನಲ್ಲಿ ಉತ್ತಪ್ಪರನ್ನು ‘ಎ’ ಗುಂಪಿನಲ್ಲಿ ಹೆಸರಿಸಲಾಗಿತ್ತು. ಪ್ರಕ್ರಿಯೆ ಆರಂಭವಾಗುವ ಕೊನೆಯ ಕ್ಷಣದಲ್ಲಿ ಉತ್ತಪ್ಪ ಅಲಭ್ಯತೆ ಗೊತ್ತಾಗಿದ್ದರಿಂದ ಆಯೋಜಕರು ಅವರ ಹೆಸರನ್ನು ಕೈಬಿಟ್ಟರು. ಫ್ರಾಂಚೈಸಿಗಳು ಉತ್ತಪ್ಪರನ್ನು ಖರೀದಿಸಲು ಮುಂದಾದಾಗ, ಆಯೋಜಕರು ಅಲಭ್ಯತೆಯ ಬಗ್ಗೆ ತಿಳಿಸಿದರು. ಕೆಪಿಎಲ್‌ ನಡೆಯುವ ವೇಳೆ, ಕೇರಳ ತಂಡದ ಶಿಬಿರ ನಡೆಯಲಿದ್ದು, ಈ ಕಾರಣಕ್ಕೆ ಅವರು ಟೂರ್ನಿಯಲ್ಲಿ ಆಡಲು ಸಾಧ್ಯವಿಲ್ಲ ಎನ್ನಲಾಗಿದೆ.

112 ಆಟಗಾರರು
ಹರಾಜು ಪ್ರಕ್ರಿಯೆಯಲ್ಲಿ ಒಟ್ಟು 112 ಆಟಗಾರರು ಖರೀದಿಯಾದರು.

16 ಆಟಗಾರರು
7 ಫ್ರಾಂಚೈಸಿಗಳು ತಲಾ 16 ಆಟಗಾರರನ್ನು ಖರೀದಿಸಿದವು.

2 ಕೋಟಿ
ಹರಾಜಿನಲ್ಲಿ ಆಟಗಾರರನ್ನು ಖರೀದಿಸಲು ಎಲ್ಲಾ ತಂಡಗಳು ಸೇರಿ 2 ಕೋಟಿ ಖರ್ಚು ಮಾಡಿದವು.

ಗರಿಷ್ಠ ಮೊತ್ತ ಪಡೆದ ಟಾಪ್‌ 5 ಆಟಗಾರರು

ಆಟಗಾರ ಮೊತ್ತ ತಂಡ
ಪವನ್‌ ದೇಶಪಾಂಡೆ 7.30 ಲಕ್ಷ ಶಿವಮೊಗ್ಗ ಲಯನ್ಸ್‌
ಅನಿರುದ್ಧ ಜೋಶಿ 7.10 ಲಕ್ಷ ಮೈಸೂರು ವಾರಿಯ​ರ್ಸ್
ಜೋನಾಥನ್‌ ಆರ್‌ 6.00 ಲಕ್ಷ     ಬೆಂಗಳೂರು ಬ್ಲಾಸ್ಟ​ರ್ಸ್
ಪ್ರಸಿದ್ಧ್ ಕೃಷ್ಣ 5.80 ಲಕ್ಷ     ಬಳ್ಳಾರಿ ಟಸ್ಕರ್ಸ್‌
ಮೊಹಮದ್‌ ತಾಹ 5.70 ಲಕ್ಷ ಹುಬ್ಬಳ್ಳಿ ಟೈಗರ್ಸ್‌

ತಾರಾ ಆಟಗಾರರಿಗೆ ಸಿಕ್ಕಿದೆಷ್ಟು?

ಮನೀಶ್‌ ಪಾಂಡೆ 2 ಲಕ್ಷ ಬೆಳಗಾವಿ ಪ್ಯಾಂಥ​ರ್ಸ್
ಕೆ.ಗೌತಮ್‌ 1.9 ಲಕ್ಷ ಬಳ್ಳಾರಿ ಟಸ್ಕ​ರ್ಸ್
ಆರ್‌.ಸಮರ್ಥ್ 2.1 ಲಕ್ಷ ಬೆಳಗಾವಿ ಪ್ಯಾಂಥ​ರ್ಸ್
ಅಭಿಮನ್ಯು ಮಿಥುನ್‌ 3.60 ಲಕ್ಷ ಶಿವಮೊಗ್ಗ ಲಯನ್ಸ್‌
ಅಮಿತ್‌ ವರ್ಮಾ 5.20 ಲಕ್ಷ ಮೈಸೂರು ವಾರಿಯರ್ಸ್‌

ಟಾಪ್‌ 5 ಅಚ್ಚರಿ ಬಿಡ್‌!

ಆಟಗಾರ ಮೊತ್ತ ತಂಡ
ಶೋಯೆಬ್‌ ಮ್ಯಾನೇಜರ್‌ 4.65ಲಕ್ಷ     ಮೈಸೂರು ವಾರಿಯರ್ಸ್‌
ಅಭಿನವ್‌ ಮನೋಹರ್‌ 4.60 ಲಕ್ಷ ಬೆಳಗಾವಿ ಪ್ಯಾಂಥರ್ಸ್‌
ಸುನೀಲ್‌ ರಾಜು 4.10 ಲಕ್ಷ ಬಿಜಾಪುರ ಬುಲ್ಸ್‌
ಆರ್ಶದೀಪ್ ಸಿಂಗ್ 4.00 ಲಕ್ಷ ಬೆಳಗಾವಿ ಪ್ಯಾಂಥರ್ಸ್‌
ರಿತೇಶ್‌ ಭಟ್ಕಳ್‌ 3.05 ಲಕ್ಷ ಬೆಳಗಾವಿ ಪ್ಯಾಂಥರ್ಸ್‌

 

click me!