
ಕೋಲ್ಕತಾ(ಏ.28): ಕನ್ನಡಿಗ ರಾಬಿನ್ ಉತ್ತಪ್ಪ(59) ಹಾಗೂ ನಾಯಕ ಗೌತಮ್ ಗಂಭೀರ್ ಅವರ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ ಕೋಲ್ಕತ ನೈಟ್'ರೈಡರ್ಸ್ ತಂಡ ಏಳು ವಿಕೆಟ್'ಗಳ ಭರ್ಜರಿ ಜಯ ದಾಖಲಿಸಿದೆ.
ಇಲ್ಲಿನ ಈಡನ್ ಗಾರ್ಡನ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಗಂಭೀರ್, ಡೆಲ್ಲಿ ಡೇರ್'ಡೆವಿಲ್ಸ್ ತಂಡವನ್ನು ಬ್ಯಾಟಿಂಗ್ ಮಾಡಲು ಆಮಂತ್ರಿಸಿದರು.
ಡೆಲ್ಲಿ ಡೇರ್'ಡೆವಿಲ್ಸ್ ನಿಗದಿತ 20 ಓವರ್'ಗಳಲ್ಲಿ 6 ವಿಕೆಟ್ ನಷ್ಟಕ್ಕೆ 160ರನ್'ಗಳ ಗೌರವಾನ್ವಿತ ಮೊತ್ತ ಕಲೆಹಾಕಿತು. ಡೆಲ್ಲಿ ನೀಡಿದ ಗುರಿಯನ್ನು ನೈಟ್'ರೈಡರ್ಸ್ ತಂಡ ಕೇವಲ ಮೂರು ವಿಕೆಟ್ ಕಳೆದುಕೊಂಡು ಗೆಲುವಿನ ನಗೆ ಬೀರಿತು. ಡೆಲ್ಲಿ ನೀಡಿದ ಸ್ಪರ್ಧಾತ್ಮಕ ಗುರಿ ಬೆನ್ನತ್ತಿದ ನೈಟ್'ರೈಡರ್ಸ್ ಆರಂಭದಲ್ಲೇ ಆಘಾತ ಎದುರಿಸಿತು. ಹಿಂದಿನ ಕೆಲವು ಪಂದ್ಯಗಳಲ್ಲಿ ಸ್ಫೋಟಕ ಬ್ಯಾಟಿಂಗ್ ನಡೆಸುವ ಮೂಲಕ ಅಭಿಮಾನಿಗಳನ್ನು ರಂಜಿಸುತ್ತಿದ್ದ ಸುನೀಲ್ ನರೈನ್ ಅವರನ್ನು ಕಗಿಸೋ ರಬಾಡ ಎರಡನೇ ಓವರ್'ನಲ್ಲೇ ಪೆವಿಲಿಯನ್'ಗೆ ಕಳುಹಿಸುವಲ್ಲಿ ಯಶಸ್ವಿಯಾದರು. ನಂತರ ಜತೆಯಾದ ಗಂಭೀರ್ ಹಾಗೂ ಉತ್ತಪ್ಪ ಜೋಡಿ ಡೆಲ್ಲಿ ಬೌಲರ್'ಗಳನ್ನು ಇನ್ನಿಲ್ಲದಂತೆ ಕಾಡಿದರು. ಎರಡನೇ ವಿಕೆಟ್'ಗೆ ಶತಕದ ಜತೆಯಾಟವಾಡಿದ ಗಂಭೀರ್-ಉತ್ತಪ್ಪ ಜೋಡಿ ಕೋಲ್ಕತಾಗೆ ಮತ್ತೊಂದು ಗೆಲುವು ತಂದುಕೊಡುವಲ್ಲಿ ಯಶಸ್ವಿಯಾದರು. ಸ್ಫೋಟಕ ಇನಿಂಗ್ಸ್ ಕಟ್ಟಿದ ರಾಬಿನ್ ಉತ್ತಪ್ಪ ಕೇವಲ 33 ಎಸೆತಗಳಲ್ಲಿ 59ರನ್ ಬಾರಿಸಿದರು. ಅವರ ಈ ಇನಿಂಗ್ಸ್'ನಲ್ಲಿ 5 ಬೌಂಡರಿ ಹಾಗೂ 4 ಮನಮೋಹಕ ಸಿಕ್ಸರ್'ಗಳೂ ಸೇರಿದ್ದವು. ಇನ್ನೊಂದೆಡೆ ನಾಯಕನ ಆಟವಾಡಿದ ಗಂಭೀರ್ ಅಜೇಯರಾಗಿ 71ರನ್ ಸಿಡಿಸಿ ತಂಡವನ್ನು ಜಯದ ದಡ ಸೇರಿಸಿದರು. ಈ ಗೆಲುವಿನೊಂದಿಗೆ ಕೋಲ್ಕತಾ ನೈಟ್'ರೈಡರ್ಸ್ ತಂಡ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿ ಮುಂದುವರೆದಿದೆ.
ಇನ್ನು ಮೊದಲು ಬ್ಯಾಟಿಂಗ್ ನಡೆಸಿದ ಡೆಲ್ಲಿ ಪರ ಮಿಂಚಿನ ಬ್ಯಾಟಿಂಗ್ ನಡೆಸಿದ ಸಂಜು ಸ್ಯಾಮ್ಸನ್ ಕೇವಲ 38 ಎಸೆತಗಳಲ್ಲಿ ನಾಲ್ಕು ಬೌಂಡರಿ ಹಾಗೂ ಮೂರು ಅದ್ಭುತ ಸಿಕ್ಸರ್'ಗಳ ನೆರವಿನಿಂದ 60ರನ್ ಬಾರಿಸಿದರು. ಇವರಿಗೆ ತಕ್ಕ ನೀಡಿದ ಶ್ರೇಯಸ್ ಐಯ್ಯರ್ 47ರನ್ ಬಾರಿಸಿ ತಂಡದ ಮೊತ್ತ ಹೆಚ್ಚಿಸಲು ನೆರವಾದರು. ಒಂದು ಹಂತದಲ್ಲಿ ಡೆವಿಲ್ಸ್ ಪಡೆ 200 ರನ್ ಕಲೆಹಾಕಬಹುದೇನೋ ಎಂದು ಅಂದಾಜಿಸಲಾಗಿತ್ತು. ಆದರೆ ನಾಥನ್ ಕೌಲ್ಟರ್-ನಿಲ್ ಅವರ ಕರಾರುವಕ್ಕಾದ ದಾಳಿಗೆ ತತ್ತರಿಸಿದ ಡೇರ್ ಡೆವಿಲ್ಸ್ ಪಡೆ 160ರನ್ ಗಳಿಸಲಷ್ಟೇ ಶಕ್ತವಾಯಿತು.
ಸಂಕ್ಷಿಪ್ತ ಸ್ಕೋರ್:
ಡೆಲ್ಲಿ ಡೇರ್'ಡೆವಿಲ್ಸ್: 160/6
ಸಂಜು ಸ್ಯಾಮ್ಸನ್ : 60
ಶ್ರೇಯಸ್ ಐಯ್ಯರ್ : 47
ನಾಥನ್ ಕೌಲ್ಟರ್'ನಿಲ್ : 34/3
ಕೋಲ್ಕತಾ ನೈಟ್'ರೈಡರ್ಸ್ : 161
ಗೌತಮ್ ಗಂಭೀರ್ : 71*
ರಾಬಿನ್ ಉತ್ತಪ್ಪ : 59
ಕಗಿಸೋ ರಬಾಡ : 20/2
ಪಂದ್ಯಪುರುಷೋತ್ತಮ: ಗೌತಮ್ ಗಂಭೀರ್
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.