ರಾಜ್ಯದ ಕ್ರೀಡಾಪಟುಗಳು ತಮ್ಮ ಕ್ಷೇತ್ರದಲ್ಲಿ ಅತ್ಯುತ್ತಮ ಸಾಧನೆ ಮಾಡಿದವರನ್ನು ಪೊಲೀಸ್ ಇಲಾಖೆಯಲ್ಲಿ ನೇರ ನೇಮಕ ಮಾಡಲು ಕರ್ನಾಟಕ ಸರ್ಕಾರ ಸಮ್ಮತಿ ಸೂಚಿಸಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ
ಬೆಂಗಳೂರು(ನ.25): ರಾಜ್ಯದ ಪ್ರತಿಭಾವಂತ ಕ್ರೀಡಾಪಟುಗಳಿಗೆ ವಿವಿಧ ಇಲಾಖೆಗಳಲ್ಲಿ ಉದ್ಯೋಗ ಕಲ್ಪಿಸಲು ಮುಂದಾಗಿರುವ ರಾಜ್ಯ ಸರ್ಕಾರ, ಮೊದಲ ಹಂತವಾಗಿ ಪೊಲೀಸ್ ಇಲಾಖೆಯಲ್ಲಿ ಕಾನ್ಸ್‌ಟೇಬಲ್ ಹುದ್ದೆಯಿಂದ ಆರಕ್ಷಕ ಉಪಾಧೀಕ್ಷಕರ ಹುದ್ದೆವರೆಗೂ ಶೇ.2ರಷ್ಟುನೇರ ನೇಮಕಾತಿ ನೀಡಲು ಸಮ್ಮತಿಸಿದೆ. ಈ ಕುರಿತು ಕರಡು ನಿಯಮಾವಳಿಗಳನ್ನು ನ.23ರಂದು ಗೆಜೆಟ್‌ನಲ್ಲಿ ಪ್ರಕಟಿಸಿದೆ. ಸರ್ಕಾರದ ಈ ನಿರ್ಧಾರವನ್ನು ಕರ್ನಾಟಕ ಒಲಿಂಪಿಕ್ ಸಂಸ್ಥೆ (ಕೆಒಎ) ಸ್ವಾಗತಿಸಿದೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಕೆಒಎ ಅಧ್ಯಕ್ಷ ಕೆ.ಗೋವಿಂದರಾಜು ‘ಕಳೆದ 6-7 ವರ್ಷಗಳಿಂದ ಒಲಿಂಪಿಕ್ಸ್, ಪ್ಯಾರಾಲಿಂಪಿಕ್ಸ್, ಏಷ್ಯನ್, ಕಾಮನ್ವೆಲ್ತ್, ವಿಶ್ವ ಚಾಂಪಿಯನ್‌ಶಿಪ್, ಸಾರ್ಕ್ ಚಾಂಪಿಯನ್‌ಶಿಪ್, ಡೇವಿಸ್ ಕಪ್, ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ನಡೆದ ಕ್ರೀಡಾಕೂಟಗಳಲ್ಲಿ ವಿಜೇತರಾದ ಹಾಗೂ ಭಾಗವಹಿಸಿದ ಪ್ರತಿಭಾವಂತ ಕ್ರೀಡಾಪಟುಗಳಿಗೆ ಸರ್ಕಾರ ತನ್ನ ವಿವಿಧ ಇಲಾಖೆಗಳಲ್ಲಿ ಹಾಗೂ ನಿಗಮ ಹಾಗೂ ಮಂಡಳಿಗಳಲ್ಲಿ ಕ್ರೀಡಾ ಕೋಟಾದಡಿ ನೇರ ನೇಮಕ ಮಾಡಬೇಕು ಎಂದು ಮನವಿ ಸಲ್ಲಿಸುತ್ತಾ ಬಂದಿತ್ತು’ ಎಂದಿದ್ದಾರೆ.
ವಿರಾಟ್ ಕೊಹ್ಲಿಗೆ ಐಸಿಸಿ ದಶಕದ ಕ್ರಿಕೆಟಿಗ ಪ್ರಶಸ್ತಿ..?
ಕ್ರೀಡಾಪಟುಗಳಿಗೆ ಸಹಕಾರಿಯಾಗುವಂತಹ ನಿರ್ಧಾರ ಕೈಗೊಂಡ ಸಿಎಂ, ಗೃಹ ಸಚಿವರು ಹಾಗೂ ಎಲ್ಲ ಕ್ಯಾಬಿನೇಟ್ ಸಚಿವರಿಗೆ ಧನ್ಯವಾದ ಹೇಳುತ್ತೇನೆ ಎಂದು ಗೋವಿಂದರಾಜು ಹೇಳಿದ್ದಾರೆ.