ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿ ದಶಕದ ಕ್ರಿಕೆಟಿಗ ಪ್ರಶಸ್ತಿಗೆ ನಾಮನಿರ್ದೇಶನಗೊಂಡ ಹೆಸರನ್ನು ಪ್ರಕಟಿಸಿದ್ದು, ದಶಕದ ಕ್ರಿಕೆಟಿಗ ರೇಸ್‌ನಲ್ಲಿ ವಿರಾಟ್ ಕೊಹ್ಲಿ, ಎಬಿ ಡಿವಿಲಿಯರ್ಸ್, ಕುಮಾರ್ ಸಂಗಕ್ಕರ ಸೇರಿದಂತೆ ದಿಗ್ಗಜ ಆಟಗಾರರು ಸ್ಥಾನ ಪಡೆದಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ
ದುಬೈ(ನ.25): ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಹಾಗೂ ತಾರಾ ಸ್ಪಿನ್ನರ್ ಆರ್.ಅಶ್ವಿನ್, ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿ (ಐಸಿಸಿ)ಯ ದಶಕದ ಕ್ರಿಕೆಟಿಗ ಪ್ರಶಸ್ತಿಗೆ ನಾಮನಿರ್ದೇಶನಗೊಂಡಿದ್ದಾರೆ. ಪ್ರಶಸ್ತಿ ರೇಸ್‌ನಲ್ಲಿ ಒಟ್ಟು 7 ಆಟಗಾರರಿದ್ದಾರೆ. ಅಂತಾರಾಷ್ಟ್ರೀಯ ಫುಟ್ಬಾಲ್ ಸಂಸ್ಥೆ (ಫಿಫಾ) ನಡೆಸುವ ರೀತಿಯಲ್ಲೇ ಆನ್‌ಲೈನ್‌ನಲ್ಲಿ ಮತದಾನ ನಡೆಯಲಿದ್ದು, ಅತಿಹೆಚ್ಚು ಮತಗಳನ್ನು ಪಡೆಯಲಿರುವ ಆಟಗಾರ ಪ್ರಶಸ್ತಿ ಜಯಿಸಲಿದ್ದಾರೆ.
ಮಂಗಳವಾರ ಐಸಿಸಿ ತನ್ನ ವೆಬ್‌ಸೈಟ್‌ನಲ್ಲಿ ದಶಕದ ಕ್ರಿಕೆಟಿಗ, ದಶಕದ ಟೆಸ್ಟ್, ಏಕದಿನ, ಟಿ20 ಕ್ರಿಕೆಟಿಗ, ದಶಕದ ಕ್ರೀಡಾ ಸ್ಫೂರ್ತಿ ಪ್ರಶಸ್ತಿ ಪಟ್ಟಿಯನ್ನು ಪ್ರಕಟಿಸಿತು. ಎಲ್ಲ 5 ಪಟ್ಟಿಯಲ್ಲೂ ಕೊಹ್ಲಿ ಸ್ಥಾನ ಪಡೆದಿದ್ದಾರೆ.
ದಿಗ್ಗಜ ಕಪಿಲ್ XI ಕನಸಿನ ಏಕದಿನ ತಂಡ ಪ್ರಕಟ; ದಾದಾಗಿಲ್ಲ ಸ್ಥಾನ..!
ಕೊಹ್ಲಿ ಕಳೆದೊಂದು ದಶಕದಲ್ಲಿ ಟೆಸ್ಟ್‌ನಲ್ಲಿ 7000ಕ್ಕೂ ಹೆಚ್ಚು, ಏಕದಿನದಲ್ಲಿ 11000ಕ್ಕೂ ಹೆಚ್ಚು, T20ಯಲ್ಲಿ 2600ಕ್ಕೂ ಹೆಚ್ಚು ರನ್ ದಾಖಲಿಸಿದ್ದಾರೆ. ಕಳೆದ 10 ವರ್ಷಗಳಲ್ಲಿ ತೋರಿದ ಪ್ರದರ್ಶನವನ್ನು ಪರಿಗಣಿಸಿ ಪಟ್ಟಿ ಅಂತಿಮಗೊಳಿಸಲಾಗಿದೆ. ಇದೇ ವೇಳೆ ಮಹಿಳಾ ಕ್ರಿಕೆಟಿಗರನ್ನೂ ನಾಮನಿರ್ದೇಶನ ಮಾಡಿದ್ದು, ದಶಕದ ಆಟಗಾರ್ತಿ ರೇಸ್‌ನಲ್ಲಿ ಭಾರತದ ಮಿಥಾಲಿ ರಾಜ್ ಇದ್ದರೆ, ದಶಕದ ಏಕದಿನ ಆಟಗಾರ್ತಿ ರೇಸ್‌ನಲ್ಲಿ ಮಿಥಾಲಿ ಜೊತೆ ಜೂಲನ್ ಗೋಸ್ವಾಮಿ ಸಹ ಇದ್ದಾರೆ.
ನಾಮನಿರ್ದೇಶನಗೊಂಡಿರುವ ಆಟಗಾರರ ಪಟ್ಟಿ
ದಶಕದ ಕ್ರಿಕೆಟಗ: ಕೊಹ್ಲಿ, ಅಶ್ವಿನ್, ಜೋ ರೂಟ್, ಕೇನ್ ವಿಲಿಯಮ್ಸನ್, ಸ್ಟೀವ್ ಸ್ಮಿತ್, ಎಬಿ ಡಿ ವಿಲಿಯರ್ಸ್, ಕುಮಾರ್ ಸಂಗಕ್ಕರ.
ದಶಕದ ಟೆಸ್ಟ್ ಕ್ರಿಕೆಟಿಗ: ಕೊಹ್ಲಿ, ರೂಟ್, ವಿಲಿಯಮ್ಸನ್, ಸ್ಮಿತ್, ಜೇಮ್ಸ್ ಆ್ಯಂಡರ್‌ಸನ್, ರಂಗನಾ ಹೆರಾತ್, ಯಾಸಿರ್ ಶಾ.
ದಶಕದ ಏಕದಿನ ಕ್ರಿಕೆಟಿಗ: ಕೊಹ್ಲಿ, ಲಸಿತ್ ಮಾಲಿಂಗ, ಮಿಚೆಲ್ ಸ್ಟಾರ್ಕ್, ಡಿವಿಲಿಯರ್ಸ್, ರೋಹಿತ್ ಶರ್ಮಾ, ಎಂ.ಎಸ್.ಧೋನಿ, ಸಂಗಕ್ಕರ.
ದಶಕದ ಟಿ20 ಕ್ರಿಕೆಟಿಗ: ಕೊಹ್ಲಿ, ರೋಹಿತ್, ಮಾಲಿಂಗ, ರಶೀದ್ ಖಾನ್, ಇಮ್ರಾನ್ ತಾಹಿರ್, ಆ್ಯರೋನ್ ಫಿಂಚ್, ಕ್ರಿಸ್ ಗೇಲ್.
ದಶಕದ ಕ್ರೀಡಾ ಸ್ಫೂರ್ತಿ: ಕೊಹ್ಲಿ, ವಿಲಿಯಮ್ಸನ್, ಬ್ರೆಂಡನ್ ಮೆಕ್ಕಲಂ, ಮಿಸ್ಬಾ ಉಲ್-ಹಕ್, ಎಂ.ಎಸ್.ಧೋನಿ, ಆನ್ಯಾ ಶ್ರಬ್‌ಸೋಲ್, ಕ್ಯಾಥರೀನ್ ಬ್ರಂಟ್, ಮಹೇಲಾ ಜಯವರ್ಧನೆ, ಡೇನಿಯಲ್ ವೆಟ್ಟೋರಿ.