ಕಿಂಗ್ ಕೊಹ್ಲಿ: ವಿರಾಟ್ ಪ್ರದರ್ಶನಕ್ಕೆ ’ಜೈ ಹೋ’ ಎಂದ ವಿದೇಶಿ ಮಾಧ್ಯಮಗಳು

By Web DeskFirst Published Aug 4, 2018, 2:27 PM IST
Highlights

ಇಂಗ್ಲೆಂಡ್ ವಿರುದ್ಧ ಮೊದಲ ಟೆಸ್ಟ್‌ನಲ್ಲಿ ಹೋರಾಟದ ಶತಕ ಸಿಡಿಸಿ ಮಿಂಚಿದ ಭಾರತ ತಂಡದ ನಾಯಕ ವಿರಾಟ್ ಕೊಹ್ಲಿಯನ್ನು ವಿದೇಶಿ ಮಾಧ್ಯಮಗಳು ಕೊಂಡಾಡಿವೆ. ಬಾಲಂಗೋಚಿ ಬ್ಯಾಟ್ಸ್‌ಮನ್‌ಗಳೊಂದಿಗೆ ಅಮೋಘ ಇನ್ನಿಂಗ್ಸ್ ಕಟ್ಟಿ, ಇಂಗ್ಲೆಂಡ್ ನೆಲದಲ್ಲಿ ಚೊಚ್ಚಲ ಶತಕ ದಾಖಲಿಸಿದ ಕೊಹ್ಲಿ ಆಟವನ್ನು ‘ಟೆಸ್ಟ್ ಕ್ರಿಕೆಟ್‌ನ ಶ್ರೇಷ್ಠ ಇನ್ನಿಂಗ್ಸ್‌ಗಳಲ್ಲಿ ಒಂದು’ ಎಂದು ಬಣ್ಣಿಸಲಾಗಿದೆ. 

ನವದೆಹಲಿ(ಆ.04]: ಇಂಗ್ಲೆಂಡ್ ವಿರುದ್ಧ ಮೊದಲ ಟೆಸ್ಟ್‌ನಲ್ಲಿ ಹೋರಾಟದ ಶತಕ ಸಿಡಿಸಿ ಮಿಂಚಿದ ಭಾರತ ತಂಡದ ನಾಯಕ ವಿರಾಟ್ ಕೊಹ್ಲಿಯನ್ನು ವಿದೇಶಿ ಮಾಧ್ಯಮಗಳು ಕೊಂಡಾಡಿವೆ. ಬಾಲಂಗೋಚಿ ಬ್ಯಾಟ್ಸ್‌ಮನ್‌ಗಳೊಂದಿಗೆ ಅಮೋಘ ಇನ್ನಿಂಗ್ಸ್ ಕಟ್ಟಿ, ಇಂಗ್ಲೆಂಡ್ ನೆಲದಲ್ಲಿ ಚೊಚ್ಚಲ ಶತಕ ದಾಖಲಿಸಿದ ಕೊಹ್ಲಿ ಆಟವನ್ನು ‘ಟೆಸ್ಟ್ ಕ್ರಿಕೆಟ್‌ನ ಶ್ರೇಷ್ಠ ಇನ್ನಿಂಗ್ಸ್‌ಗಳಲ್ಲಿ ಒಂದು’ ಎಂದು ಬಣ್ಣಿಸಲಾಗಿದೆ.

ಆಸ್ಟ್ರೇಲಿಯಾ ಕ್ರಿಕೆಟ್ ಸಂಸ್ಥೆಯ ಅಧಿಕೃತ ವೆಬ್‌ಸೈಟ್ ವಿರಾಟ್ ರನ್ನು ‘ಕಿಂಗ್ ಕೊಹ್ಲಿ’ ಎಂದು ಕರೆದಿದೆ. ಬ್ರಿಟನ್‌ನ ‘ದಿ ಗಾರ್ಡಿಯನ್’ ಪತ್ರಿಕೆ, ‘ಕೊಹ್ಲಿ ಇನ್ನಿಂಗ್ಸ್ ಸಾರ್ವಕಾಲಿಕ ಶ್ರೇಷ್ಠ ಶತಕಗಳಲ್ಲಿ ಒಂದು. ಏಕಾಂಗಿಯಾಗಿ ಹೋರಾಡಿದ ರೀತಿ ಅಮೋಘ’ ಎಂದು ಬರೆದಿದೆ. ‘ಡೈಲಿ ಮೇಲ್’ ಪತ್ರಿಕೆ, ‘ಕೊಹ್ಲಿಯ ಬ್ಯಾಟಿಂಗ್ ಟೆಸ್ಟ್ ಕ್ರಿಕೆಟ್‌ಗೆ ಅದ್ಭುತ ಪ್ರಚಾರ. ವಿರಾಟ್ ಒಬ್ಬ ಹೆವಿವೇಟ್ ಚಾಂಪಿಯನ್’ ಎಂದು ಬಣ್ಣಿಸಿದೆ. ನ್ಯೂಜಿಲೆಂಡ್ ನ ಸ್ಟಫ್ ವೆಬ್‌ಸೈಟ್, ‘ಕೊಹ್ಲಿಯ ಮನಮೋಹಕ ಶತಕದಿಂದ ಭಾರತದ ಮಾನ ಉಳಿಯಿತು’ ಎಂದು ಬರೆದಿದೆ. 

ಪತ್ರಿಕೆ, ವೆಬ್‌ಸೈಟ್‌ಗಳು ಮಾತ್ರವಲ್ಲದೆ ಮಾಜಿ ಕ್ರಿಕೆಟಿಗರು ಸಹ ಟ್ವೀಟರ್‌ನಲ್ಲಿ ಕೊಹ್ಲಿ ಮೇಲೆ ಹೊಗಳಿಕೆ ಮಳೆ ಸುರಿಸಿದ್ದಾರೆ. ಇಂಗ್ಲೆಂಡ್ ಮಾಜಿ ನಾಯಕ ಕೆವಿನ್ ಪೀಟರ್‌ಸನ್, ‘ಕೊಹ್ಲಿ ಒಬ್ಬ ದೊರೆ’ ಎಂದು ಬರೆದಿದ್ದಾರೆ. ‘ಕೊಹ್ಲಿ ಏಕಾಂಗಿಯಾಗಿ ಹೋರಾಡಿದ ರೀತಿ ಸ್ಫೂರ್ತಿದಾಯಕ’ ಎಂದು ಮೈಕಲ್ ವಾನ್ ಬರೆದರೆ, ‘ಭಾರತದ ಟೆಸ್ಟ್ ದಿಗ್ಗಜರ ಪೈಕಿ ಕೊಹ್ಲಿಗೆ ಯಾವ ಸ್ಥಾನ ಸಿಗಲಿದೆ ಎನ್ನುವ ಕುತೂಹಲ ಶುರುವಾಗಿದೆ’ ಎಂದು ದ.ಆಫ್ರಿಕಾ ಸ್ಪಿನ್ನರ್ ರಾಬಿನ್ ಪೀಟರ್‌ಸನ್ ಟ್ವೀಟ್ ಮಾಡಿದ್ದಾರೆ. ಸಚಿನ್, ಹರ್ಭಜನ್, ಯುವರಾಜ್ ಸೇರಿ ಭಾರತೀಯ ಕ್ರಿಕೆಟಿಗರು ಸಹ ಕೊಹ್ಲಿಯನ್ನು ಕೊಂಡಾಡಿದ್ದಾರೆ. 

click me!