Kenya's Kelvin Kiptum: ಮ್ಯಾರಥಾನ್‌ನಲ್ಲಿ ವಿಶ್ವದಾಖಲೆ ನಿರ್ಮಿಸಿದ್ದ ಅಥ್ಲೀಟ್‌ ಅಪಘಾತದಲ್ಲಿ ದುರ್ಮರಣ..!

By Naveen KodaseFirst Published Feb 12, 2024, 9:05 AM IST
Highlights

ಈ ಅಪಘಾತವು ಸ್ಥಳೀಯ ಕಾಲಮಾನ ರಾತ್ರಿ 11 ಗಂಟೆಗೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ ಎಂದು AFP ನ್ಯೂಸ್ ಏಜೆನ್ಸಿ ವರದಿ ಮಾಡಿದೆ. ವೇಗವಾಗಿ ಚಲಿಸುತ್ತಿದ್ದ ಕಾರು ನಿಯಂತ್ರಣ ತಪ್ಪಿ ಈ ಅವಘಡ ಸಂಭವಿಸಿದೆ. ಇನ್ನು ಕಾರಿನಲ್ಲಿದ್ದ ಮಹಿಳೆ ಗಂಭೀರವಾಗಿ ಗಾಯಗೊಂಡಿದ್ದು, ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಕೀನ್ಯಾ(ಫೆ.12): ಪುರುಷರ ಮ್ಯಾರಥಾನ್‌ನಲ್ಲಿ ವಿಶ್ವದಾಖಲೆ ಸರದಾರ 24 ವರ್ಷದ ಕೀನ್ಯಾದ ಕೆಲ್ವಿನ್‌ ಕಿಪ್ಟಮ್, ಭಾನುವಾರ ರಸ್ತೆ ಅಪಘಾತದಲ್ಲಿ ಕೊನೆಯುಸಿರೆಳೆದಿದ್ದಾರೆ. ಕೆಲ್ವಿನ್‌ ಕಿಪ್ಟಮ್ ಜತೆಗೆ ಕಾರಿನಲ್ಲಿ ಪ್ರಯಾಣ ಬೆಳೆಸಿದ್ದ ಆತನ ಕೋಚ್ ರವಾಂಡದ ಗ್ರೇವಿಸ್ ಹಕಿಝಿಮನ ಕೂಡಾ ಬಲಿಯಾಗಿದ್ದಾರೆ.

ಪಶ್ಚಿಮ ಕೀನ್ಯಾದ ಭಾಗದಲ್ಲಿ ಈ ದುರಂತ ಸಂಭವಿಸಿದೆ. ಕೆಲ್ವಿನ್‌ ಕಿಪ್ಟಮ್ 2023ರಲ್ಲಿ ಸಹಸ್ಪರ್ಧಿ ಹಾಗೂ ಅತ್ಯುತ್ತಮ ಮ್ಯಾರಥಾನ್ ರನ್ನರ್ ಆಗಿರುವ ಎಲಿಯುಡ್ ಕಿಪ್‌ಚೋಗೆ ಅವರನ್ನು ಹಿಂದಿಕ್ಕುವಲ್ಲಿ ಯಶಸ್ವಿಯಾಗಿದ್ದರು. ಕಳೆದ ಅಕ್ಟೋಬರ್‌ನಲ್ಲಿ ಚಿಕಾಗೋದಲ್ಲಿ ನಡೆದ ಮ್ಯಾರಥಾನ್ ಸ್ಪರ್ಧೆಯಲ್ಲಿ ಕೆಲ್ವಿನ್‌ ಕಿಪ್ಟಮ್ ವಿಶ್ವದಾಖಲೆ ನಿರ್ಮಿಸಿದ್ದರು. ಸುಮಾರು 21.1 ಮೈಲಿ(42 ಕಿಲೋಮೀಟರ್) ದೂರವನ್ನು ಕೆಲ್ವಿನ್‌ ಕಿಪ್ಟಮ್ ಕೇವಲ 2 ಗಂಟೆ 35  ಸೆಕೆಂಡ್‌ಗಳಲ್ಲಿ ಗುರಿ ತಲುಪಿ ವಿಶ್ವದಾಖಲೆ ನಿರ್ಮಿಸಿದ್ದರು.

World Athletics is deeply saddened to hear that marathon world record-holder Kelvin Kiptum died in a road traffic accident on Sunday at the age of 24.

Obit: 🔗 https://t.co/0CF1NbAzgw pic.twitter.com/TgWepi0cok

— World Athletics (@WorldAthletics)

Latest Videos

ಈ ಇಬ್ಬರು ಅಥ್ಲೀಟ್‌ಗಳು ಮುಂಬರುವ 2024ರ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಕೀನ್ಯಾದ ಮ್ಯಾರಥಾನ್ ತಂಡದಲ್ಲಿ ಸ್ಥಾನ ಕಲ್ಪಿಸಲಾಗಿತ್ತು. ಆದರೆ ಇದೀಗ ಕೆಲ್ವಿನ್‌ ಕಿಪ್ಟಮ್ ರಸ್ತೆ ಅಪಘಾತದಲ್ಲಿ ಕೊನೆಯುಸಿರೆಳೆಯುವ ಮೂಲಕ ಸಣ್ಣ ವಯಸ್ಸಿನಲ್ಲೇ ಇಹಲೋಕ ಯಾತ್ರೆ ತ್ಯಜಿಸಿದ್ದಾರೆ.

ಇನ್ನು ಕೆಲ್ವಿನ್‌ ಕಿಪ್ಟಮ್ ನಿಧನಕ್ಕೆ ಸಾಕಷ್ಟು ಸಂತಾಪಗಳು ವ್ಯಕ್ತವಾಗಿವೆ. ಕೀನ್ಯಾದ ಕ್ರೀಡಾ ಸಚಿವರಾದ ಅಬಾಬು ನಮಾಬ್ವಾ ಸಾಮಾಜಿಕ ಜಾಲತಾಣವಾದ ಎಕ್ಸ್‌ನಲ್ಲಿ, "ಕೀನ್ಯಾ ಅಪರೂಪದ ಮುತ್ತನ್ನು ಕಳೆದುಕೊಂಡಿದೆ. ಮಾತೇ ಬರುತ್ತಿಲ್ಲ" ಎಂದು ಕಂಬನಿ ಸುರಿಸಿದ್ದಾರೆ.

14 ವರ್ಷಗಳ ಬಳಿಕ ಅಂಡರ್ 19 ಕಿರೀಟ ಗೆದ್ದ ಆಸ್ಟ್ರೇಲಿಯಾ, ಟೀಂ ಇಂಡಿಯಾಗೆ ನಿರಾಸೆ!

ಇನ್ನು ಕೀನ್ಯಾದ ವಿರೋಧ ಪಕ್ಷದ ನಾಯಕ ಹಾಗೂ ಮಾಜಿ ಪ್ರಧಾನಿ ರೈಲಾ ಓಡಿಂಗ, "ದೇಶವು ಒಬ್ಬ ನಿಜವಾದ ಹೀರೋನನ್ನು ಕಳೆದುಕೊಂಡಿದೆ. ಅವರೊಬ್ಬರು ವ್ಯಕ್ತಿಯಾಗಿ ಅದ್ಭುತ ಸಾಧನೆ ಮಾಡಿದ್ದರು. ಅವರು ಕೀನ್ಯಾದ ಅಥ್ಲೆಟಿಕ್ಸ್ ಐಕಾನ್ ಆಗಿದ್ದರು" ಎಂದು ಹೇಳಿದ್ದಾರೆ.

ಈ ಅಪಘಾತವು ಸ್ಥಳೀಯ ಕಾಲಮಾನ ರಾತ್ರಿ 11 ಗಂಟೆಗೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ ಎಂದು AFP ನ್ಯೂಸ್ ಏಜೆನ್ಸಿ ವರದಿ ಮಾಡಿದೆ. ವೇಗವಾಗಿ ಚಲಿಸುತ್ತಿದ್ದ ಕಾರು ನಿಯಂತ್ರಣ ತಪ್ಪಿ ಈ ಅವಘಡ ಸಂಭವಿಸಿದೆ. ಇನ್ನು ಕಾರಿನಲ್ಲಿದ್ದ ಮಹಿಳೆ ಗಂಭೀರವಾಗಿ ಗಾಯಗೊಂಡಿದ್ದು, ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಕೆಲ್ವಿನ್‌ ಕಿಪ್ಟಮ್ ನಾಲ್ಕು ವರ್ಷಗಳ ಹಿಂದಷ್ಟೇ ಮೊದಲ ಬಾರಿಗೆ ಮಹತ್ವದ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದರು. ಕಿತ್ತು ತಿನ್ನುವ ಬಡತನದ ಹಿನ್ನೆಲೆಯಲ್ಲಿ ಜನಿಸಿದ್ದ ಕೆಲ್ವಿನ್‌ ಕಿಪ್ಟಮ್, ಬೇರೆಯವರಿಗೆ ಶೂ ಪಡೆದುಕೊಂಡು ಮ್ಯಾರಥಾನ್‌ನಲ್ಲಿ ಪಾಲ್ಗೊಂಡು ಗಮನಾರ್ಹ ಪ್ರದರ್ಶನ ತೋರಿದ್ದರು. ಆ ಸ್ಪರ್ಧೆಯಲ್ಲಿ ಪಾಲ್ಗೊಳ್ಳುವಾಗ ಕೆಲ್ವಿನ್‌ ಕಿಪ್ಟಮ್ ಅವರಿಗೆ ಶೂ ಕೊಂಡುಕೊಳ್ಳಲು ಹಣವಿರಲಿಲ್ಲ. 
 

click me!