
ನವದೆಹಲಿ(ಫೆ. 26): ಪುಣೆಯಲ್ಲಿ ಆಸ್ಟ್ರೇಲಿಯಾ ವಿರುದ್ಧ ನಡೆದ ಮೊದಲ ಕ್ರಿಕೆಟ್ ಟೆಸ್ಟ್ ಪಂದ್ಯದಲ್ಲಿ ಹೀನಾಯ ಸೋಲನುಭವಿಸಿದ ಟೀಮ್ ಇಂಡಿಯಾ ಸಾಕಷ್ಟು ಟೀಕೆಗೆ ತುತ್ತಾಗಿದೆ. ಮುಂದಿನ ಪಂದ್ಯವು ಬೆಂಗಳೂರಿನಲ್ಲಿ ನಡೆಯಲಿದ್ದು, ತಂಡವು ಗೆಲ್ಲಬೇಕಾದರೆ ಇಬ್ಬರು ಆಟಗಾರರನ್ನು ಕೈಬಿಡಬೇಕು ಎಂದು ಮಾಜಿ ಕ್ಯಾಪ್ಟನ್ ಮೊಹಮ್ಮದ್ ಅಜರುದ್ದೀನ್ ಸಲಹೆ ನೀಡಿದ್ದಾರೆ. ಪಿಟಿಐ ಸುದ್ದಿಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ಅಜರುದ್ದೀನ್ ಅವರು ಜಯಂತ್ ಯಾದವ್ ಮತ್ತು ಇಶಾಂತ್ ಶರ್ಮಾ ಅವರನ್ನ ಡ್ರಾಪ್ ಮಾಡಲು ಸಲಹೆ ನೀಡಿದ್ದಾರೆ.
ಅವರಿಬ್ಬರ ಬದಲು ಕರ್ನಾಟಕದ ಕರುಣ್ ನಾಯರ್ ಹಾಗೂ ಸ್ವಿಂಗ್ ಬೌಲರ್ ಭುವನೇಶ್ವರ್ ಕುಮಾರ್ ಅವರನ್ನು ತಂಡಕ್ಕೆ ಸೇರಿಸಿಕೊಳ್ಳಬೇಕು ಎಂದೂ ಅಜರುದ್ದೀನ್ ಕೋರಿಕೊಂಡಿದ್ದಾರೆ.
ಏನು ಕಾರಣ?
ಭಾರತದ ಬ್ಯಾಟಿಂಗ್'ಗೆ ಪುಷ್ಟಿ ನೀಡುವ ಅಗತ್ಯವಿದೆ. ಒಬ್ಬ ಹೆಚ್ಚುವರಿ ಬ್ಯಾಟುಗಾರ ತಂಡಕ್ಕೆ ಅವಶ್ಯವಾಗಿ ಬೇಕಾಗಿದೆ. ಈ ಹಿನ್ನೆಲೆಯಲ್ಲಿ ಕರ್ನಾಟಕದ ಹುಡುಗ ಕರುಣ್ ನಾಯರ್ ಅವರಿಗೆ ಅವಕಾಶ ನೀಡುವುದು ಒಳ್ಳೆಯದು. ಮೊದಲ ಪಂದ್ಯದಲ್ಲಿ ಜಯಂತ್ ಯಾದವ್ ಪ್ರದರ್ಶನ ತೀರಾ ನಿರಾಶೆ ತಂದಿತ್ತು. ಅವರ ಸ್ಥಾನಕ್ಕೆ ಕರುಣ್ ನಾಯರ್ ಅವರನ್ನು ಆಡಿಸಬೇಕು ಎಂದು ಅಜರುದ್ದೀನ್ ಅಭಿಪ್ರಾಯಪಟ್ಟಿದ್ದಾರೆ.
ಇನ್ನು, ಇಶಾಂತ್ ಶರ್ಮಾ ಬೌಲಿಂಗ್ ಬಗ್ಗೆ ಮಾತನಾಡಿದ ಅಜರುದ್ದೀನ್, ಸರಣಿಯಲ್ಲಿ ಆಡಲಾಗುತ್ತಿರುವ ಪಿಚ್'ಗಳು ಇಶಾಂತ್ ಬೌಲಿಂಗ್ ಶೈಲಿಗೆ ಸೂಕ್ತವಾಗಿಲ್ಲ. ಭುವನೇಶ್ವರ್ ಅವರ ಸ್ವಿಂಗ್ ಬೌಲಿಂಗ್'ಗೆ ಈ ಪಿಚ್'ಗಳು ಹೆಚ್ಚು ಅನುಕೂಲವಾಗಬಹುದು. ಹೀಗಾಗಿ, ಇಶಾಂತ್ ಬದಲು ಭುವನೇಶ್ವರ್ ಅವರನ್ನು ಆಡಿಸಬೇಕು ಎಂದು ಮಾಜಿ ಕ್ರಿಕೆಟಿಗರಾದ ಅಜರುದ್ದೀನ್ ಹೇಳಿದ್ದಾರೆ.
ಇದೇ ವೇಳೆ, ಪುಣೆ ಟೆಸ್ಟ್'ನಲ್ಲಿ ಭಾರತೀಯ ಸ್ಪಿನ್ನರ್'ಗಳನ್ನು, ಅದರಲ್ಲೂ ರವೀಂದ್ರ ಜಡೇಜಾ ಅವರ ಬೌಲಿಂಗ್ ಪ್ರದರ್ಶನವನ್ನು ಅಜರುದ್ದೀನ್ ಟೀಕಿಸಿದ್ದಾರೆ. ಆ ಪಂದ್ಯದಲ್ಲಿ 12 ವಿಕೆಟ್ ಕಬಳಿಸಿದ ಸ್ಟೀವ್ ಓಕೀಫೆ ಅವರಿಂದ ಭಾರತೀಯ ಸ್ಪಿನ್ನರ್'ಗಳು ಪಾಠ ಕಲಿಯಬೇಕಿದೆ ಎಂದು ಅಜರುದ್ದೀನ್ ಕುಟುಕಿದ್ದಾರೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.