
ನವದೆಹಲಿ(ಫೆ.27): ಟೂರ್ನಿಯುದ್ಧಕ್ಕೂ ಬ್ಯಾಟಿಂಗ್ ಹಾಗೂ ಬೌಲಿಂಗ್'ನಲ್ಲಿ ಸಾಂಘಿಕ ಪ್ರದರ್ಶನ ತೋರಿದ ಕರ್ನಾಟಕ ಪ್ರಸಕ್ತ ಸಾಲಿನ ವಿಜಯ್ ಹಜಾರೆ ಟ್ರೋಫಿಯ ಫೈನಲ್ಸ್ ಪಂದ್ಯದಲ್ಲಿ ಸೌರಾಷ್ಟ್ರ ತಂಡವನ್ನು 41 ರನ್'ಗಳ ಅಂತರದಲ್ಲಿ ಮಣಿಸಿ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಈ ಗೆಲುವಿನೊಂದಿಗೆ ಕರ್ನಾಟಕ ಮೂರನೇ ಬಾರಿಗೆ ವಿಜಯ್ ಹಜಾರೆ ಟ್ರೋಫಿಯಲ್ಲಿ ಚಾಂಪಿಯನ್ ಪಟ್ಟ ಅಲಂಕರಿಸಿದಂತಾಗಿದೆ.
ಟಾಸ್ ಸೋತರೂ ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ಕರ್ನಾಟಕ ಮಯಾಂಕ್ ಅಗರ್'ವಾಲ್ ಆಕರ್ಷಕ ಬ್ಯಾಟಿಂಗ್ ನೆರವಿನಿಂದ 253 ರನ್'ಗಳ ಸವಾಲಿನ ಮೊತ್ತ ಕಲೆಹಾಕಿತು. ಈ ಗುರಿಯನ್ನು ಬೆನ್ನತ್ತಿದ ಸೌರಾಷ್ಟ್ರ ಮೊದಲ ಓವರ್'ನಲ್ಲೇ ಸಮರ್ಥ್ ವ್ಯಾಸ್ ವಿಕೆಟ್ ಕಳೆದುಕೊಂಡು ಆಘಾತವೆದುರಿಸಿತು. ಪ್ರಸಿದ್ದ್ ತಾವೆಸೆದ ಎರಡನೇ ಓವರ್'ನಲ್ಲಿ ಧರ್ಮೇಂದ್ರ ಸಿಂಗ್ ಜಡೇಜಾ ಅವರನ್ನೂ ಪೆವಿಲಿಯನ್'ಗೆ ಅಟ್ಟುವ ಮೂಲಕ ಕರ್ನಾಟಕಕ್ಕೆ ಆರಂಭಿಕ ಮುನ್ನಡೆ ಒದಗಿಸಿಕೊಟ್ಟರು. ಆ ಬಳಿಕ ಅವಿ ಬಾರೋಟ್-ಚೇತೇಶ್ವರ ಪೂಜಾರ ಅರ್ಧಶತಕದ ಜತೆಯಾಟದ ಮೂಲಕ ತಂಡಕ್ಕೆ ಆಸರೆಯಾಗಲು ಪ್ರಯತ್ನಿಸಿದರು. ಈ ಜೋಡಿಯನ್ನು ಬಿನ್ನಿ ಬೇರ್ಪಡಿಸಿದರು. ಅವಿ(30) ಶ್ರೇಯಸ್'ಗೆ ಕ್ಯಾಚಿತ್ತು ಪೆವಿಲಿಯನ್ ಸೇರಿದರು. ಇನ್ನೂ ಸ್ಟಾರ್ ಕ್ರಿಕೆಟಿಗ ರವೀಂದ್ರ ಜಡೇಜಾ ಆಟ ಕೇವಲ 15 ರನ್'ಗಳಿಗೆ ಸೀಮಿತವಾಯಿತು. 29ನೇ ಓವರ್'ನಲ್ಲಿ ಕೆ.ಗೌತಮ್ ಎರಡು ವಿಕೆಟ್ ಕಬಳಿಸುವ ಮೂಲಕ ಕರ್ನಾಟಕಕ್ಕೆ ಮತ್ತೆ ಮೇಲುಗೈ ಒದಗಿಸಿಕೊಟ್ಟರು. ಒಂದು ಕಡೆ ವಿಕೆಟ್ ಉರುಳುತ್ತಿದ್ದರೂ ಮತ್ತೊಂದೆಡೆ ನಾಯಕನ ಆಟವಾಡಿದ ಚೇತೇಶ್ವರ ಪೂಜಾರ 94 ರನ್ ಬಾರಿಸಿ ರನೌಟ್'ಗೆ ಬಲಿಯಾದರು. ಅಂತಿಮವಾಗಿ ಸೌರಾಷ್ಟ್ರ 212 ರನ್'ಗಳಿಗೆ ಸರ್ವಪತನ ಕಂಡಿತು.
ಕರ್ನಾಟಕ ಪರ ಪ್ರಸಿದ್ಧ್ ಕೃಷ್ಣ ಹಾಗೂ ಕೆ. ಗೌತಮ್ ತಲಾ 3 ವಿಕೆಟ್ ಪಡೆದರೆ, ಬಿನ್ನಿ ಹಾಗೂ ದೇಶ್'ಪಾಂಡೆ ತಲಾ ಒಂದೊಂದು ವಿಕೆಟ್ ಪಡೆದರು.
ಇದಕ್ಕೂ ಮೊದಲು ಬ್ಯಾಟಿಂಗ್ ಮಾಡಿದ ಕರ್ನಾಟಕದ ಆರಂಭ ಕೂಡಾ ಉತ್ತಮವಾಗಿರಲಿಲ್ಲ. ತಂಡದ ಮೊತ್ತ 5 ರನ್'ಗಳಾಗುವಷ್ಟರಲ್ಲಿ ನಾಯಕ ಕರುಣ್ ನಾಯರ್ ಹಾಗೂ ಕೆ.ಎಲ್ ರಾಹುಲ್ ಶೂನ್ಯ ಸುತ್ತಿ ಪೆವಿಲಿಯನ್ ಸೇರಿದರು. ಆ ಬಳಿಕ ಮಯಾಂಕ್ ಅಗರ್'ವಾಲ್ ಹಾಗೂ ಸಮರ್ಥ್ (136) ಶತಕದ ಜತೆಯಾಟವಾಡುವ ಮೂಲಕ ತಂಡಕ್ಕೆ ಆಸರೆಯಾದರು. ಪ್ರಸಕ್ತ ಸಾಲಿನಲ್ಲಿ ಅದ್ಭುತ ಫಾರ್ಮ್'ನಲ್ಲಿರುವ ಅಗರ್'ವಾಲ್ 90 ರನ್ ಬಾರಿಸಿ ವಿಕೆಟ್ ಒಪ್ಪಿಸಿದರು. ಇದಾದ ಬಳಿಕ ಪವನ್ ದೇಶ್'ಪಾಂಡೆ ಜತೆ ಇನಿಂಗ್ಸ್ ಕಟ್ಟಿದ ಸಮರ್ಥ್ 48 ರನ್ ಬಾರಿಸಿ ವಿಕೆಟ್ ಒಪ್ಪಿಸಿದರು. ದೇಶ್'ಪಾಂಡೆ ಕೇವಲ ಒಂದು ರನ್ ಅಂತರದಲ್ಲಿ ಅರ್ಧಶತಕ ವಂಚಿತರಾದರು. ಇದಾದ ಬಳಿಕ ದಿಢೀರ್ ಕುಸಿತ ಕಂಡ ಕರ್ನಾಟಕ 253 ರನ್'ಗಳಿಗೆ ಸರ್ವಪತನ ಕಂಡಿತು.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.