
ತುಮಕೂರು(ಜೂ.04): ಗುಜರಾತ್‌ನಲ್ಲಿ ನಡೆದ ಫೆಡರೇಷನ್ ಕಪ್ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನ 110 ಮೀ. ಹರ್ಡಲ್ಸ್‌ನಲ್ಲಿ ಚಿನ್ನದ ಪದಕ ಗೆದ್ದ ತುಮಕೂರಿನ ಕೃಷಿಕ್ ಮಂಜುನಾಥ್ ಕೊಲಂಬಿಯಾದಲ್ಲಿ ಆ.1ರಿಂದ 6ರ ವರೆಗೂ ನಡೆಯಲಿರುವ ವಿಶ್ವ ಅಂಡರ್-20 ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ಗೆ ಆಯ್ಕೆಯಾಗಿದ್ದಾರೆ.
ವಿಶ್ವ ಚಾಂಪಿಯನ್‌ಶಿಪ್‌ಗೆ ಅರ್ಹತೆ ಪಡೆಯಲು 14.20 ಸೆಕೆಂಡ್‌ಗಳಲ್ಲಿ ಗುರಿ ತಲುಪಬೇಕಿತ್ತು. ಕೃಷಿಕ್ 14.02 ಸೆಕೆಂಡ್‌ಗಳಲ್ಲಿ ಓಟ ಪೂರ್ಣಗೊಳಿಸಿ ಅರ್ಹತೆ ಪಡೆದಿದ್ದಾರೆ. ನಗರದ ಸಿದ್ಧಗಂಗಾ ತಾಂತ್ರಿಕ ವಿಶ್ವವಿದ್ಯಾನಿಲಯದಲ್ಲಿ ಮೊದಲ ವರ್ಷದ ಎಂಜಿನಿಯರಿಂಗ್ ವಿದ್ಯಾರ್ಥಿಯಾಗಿರುವ ಅವರು, ಕಳೆದ ತಿಂಗಳು ಬೆಂಗಳೂರಿನಲ್ಲಿ ನಡೆದ ಖೇಲೋ ಇಂಡಿಯಾ ವಿವಿ ಗೇಮ್ಸ್‌ನಲ್ಲಿ ಕಂಚಿನ ಪದಕ ಗೆದ್ದಿದ್ದರು. ಶನಿವಾರದಿಂದ ಹರಾರಯಣದ ಪಂಚಕುಲದಲ್ಲಿ ಆರಂಭವಾಗಲಿರುವ ಖೇಲೋ ಇಂಡಿಯಾ ಕಿರಿಯರ ಕ್ರೀಡಾಕೂಟದಲ್ಲಿ ಕೃಷಿಕ್ ರಾಜ್ಯವನ್ನು ಪ್ರತಿನಿಧಿಸಲಿದ್ದಾರೆ. ರಾಜ್ಯ ಯುವಜನ ಸೇವಾ ಕ್ರೀಡಾ ಇಲಾಖೆಯ ತುಮಕೂರು ಜಿಲ್ಲಾ ಅಥ್ಲೆಟಿಕ್ಸ್ ತರಬೇತುದಾರಾಗಿರುವ ಶಿವಪ್ರಸಾದ್ ಎಂ.ಆರ್. ಅವರು ಕಳೆದ ಏಳು ವರ್ಷಗಳಿಂದ ಕೃಷಿಕ್ ಅವರಿಗೆ ತರಬೇತಿ ನೀಡುತ್ತಿದ್ದಾರೆ.
2ನೇ ಬಾರಿ ವಿಶ್ವ ಅಥ್ಲೆಟಿಕ್ಸ್‌ಗೆ ಪ್ರಿಯಾ
ಕರ್ನಾಟಕದ 19 ವರ್ಷದ ಪ್ರಿಯಾ ಮೋಹನ್ 400 ಮೀ. ಸ್ಪರ್ಧೆಗೆ ಅರ್ಹತೆ ಗಿಟ್ಟಿಸಿದ್ದಾರೆ. ವಿಶ್ವ ಚಾಂಪಿಯನ್‌ಶಿಪ್‌ಗೆ ಅರ್ಹತೆ ಪಡೆಯಲು 55.20 ಸೆಕೆಂಡ್‌ಗಳಲ್ಲಿ ಗುರಿ ತಲುಪಬೇಕಿತ್ತು. ಶುಕ್ರವಾರ ನಡೆದ ಸ್ಪರ್ಧೆಯಲ್ಲಿ ಅವರು 52.49 ಸೆಕೆಂಡ್‌ಗಳಲ್ಲಿ ಕ್ರಮಿಸಿದರು. ಪ್ರಿಯಾ ಕಳೆದ ವರ್ಷ ಕೀನ್ಯಾದಲ್ಲಿ ನಡೆದಿದ್ದ ವಿಶ್ವ ಕಿರಿಯರ ಕೂಟದಲ್ಲೂ ಸ್ಪರ್ಧಿಸಿದ್ದರು. 4*400 ರಿಲೇಯಲ್ಲಿ ಕಂಚು ಗೆದ್ದಿದ್ದರು.
5 ವರ್ಷದ ಬಳಿಕ ಚಿನ್ನ ಗೆದ್ದ ಕುಸ್ತಿಪಟು ಸಾಕ್ಷಿ
ಆಲ್ಮಟಿ(ಕಜಕಿಸ್ತಾನ): ಭಾರತದ ತಾರಾ ಕುಸ್ತಿಪಟು ಸಾಕ್ಷಿ ಮಲಿಕ್ ಅವರು 5 ವರ್ಷಗಳ ಬಳಿಕ ಅಂತಾರಾಷ್ಟ್ರೀಯ ಕೂಟದಲ್ಲಿ ಚಿನ್ನದ ಪದಕ ಗೆದ್ದಿದ್ದಾರೆ. ಕಜಕಸ್ತಾನದ ಆಲ್ಮಟಿ ಎಂಬಲ್ಲಿ ನಡೆಯುತ್ತಿರುವ ಯುನೈಟೆಡ್ ವಿಶ್ವ ಕುಸ್ತಿಯ ರಾರಯಂಕಿಂಗ್ ಸೀರಿಸ್‌ನಲ್ಲಿ ಸಾಕ್ಷಿ ಮಹಿಳೆಯರ 62 ಕೆ.ಜಿ. ವಿಭಾಗದ ಫೈನಲ್‌ನಲ್ಲಿ ಕಜಕಸ್ತಾನದ ಐರಿನಾ ವಿರುದ್ಧ 7-4 ಅಂತರದಲ್ಲಿ ಜಯಗಳಿಸಿದರು.
Khelo India: ಇಂದಿನಿಂದ ಖೇಲೋ ಇಂಡಿಯಾ ಗೇಮ್ಸ್ ಶುರು
2017ರಲ್ಲಿ ಅವರು ಕೊನೆ ಬಾರಿ ಕಾಮನ್‌ವೆಲ್ತ್ ಚಾಂಪಿಯನ್‌ಶಿಪ್‌ನಲ್ಲಿ ಬಂಗಾರ ಗೆದ್ದಿದ್ದರು. ಇನ್ನು, ಕೂಟದಲ್ಲಿ 57 ಕೆ.ಜಿ. ವಿಭಾಗದಲ್ಲಿ ಮಾನ್ಶಿ ಹಾಗೂ 68 ಕೆ.ಜಿ. ವಿಭಾಗದಲ್ಲಿ ದಿವ್ಯಾ ಕೂಡಾ ಚಿನ್ನದ ಪದಕ ಗೆದ್ದಿದ್ದಾರೆ. ಪೂಜಾ(76 ಕೆ.ಜಿ.) ಕಂಚಿನ ಪದಕ ಪಡೆದರು.
ಶೂಟಿಂಗ್ ವಿಶ್ವಕಪ್‌ನಲ್ಲಿ ಭಾರತಕ್ಕೆ ಮತ್ತೆರಡು ಬೆಳ್ಳಿ
ನವದೆಹಲಿ: ಅಜರ್‌ಬೈಜಾನ್‌ನ ಬಾಕುನಲ್ಲಿ ನಡೆಯುತ್ತಿರುವ ಐಎಸ್‌ಎಸ್‌ಎಫ್ ಶೂಟಿಂಗ್ ವಿಶ್ವಕಪ್‌ನಲ್ಲಿ ಭಾರತ ಮತ್ತೆರಡು ಬೆಳ್ಳಿ ಪದಕಗಳನ್ನು ಗೆದ್ದಿದ್ದು, ಒಟ್ಟು 4 ಪದಕಗಳೊಂದಿಗೆ ಪಟ್ಟಿಯಲ್ಲಿ 3ನೇ ಸ್ಥಾನಕ್ಕೇರಿದೆ. ಶುಕ್ರವಾರ ನಡೆದ ಮಹಿಳೆಯರ 50 ಮೀ. ರೈಫಲ್ 3 ಪೊಸಿಷನ್‌ನಲ್ಲಿ ಅಂಜುಮ್ ಮೌದ್ಗಿಲ್ ಡೆನ್ಮಾರ್ಕ್ನ ಇಬ್ಸೆನ್ ವಿರುದ್ಧ ಫೈನಲ್‌ನಲ್ಲಿ 12-16 ಅಂತರದಲ್ಲಿ ಸೋತು ಬೆಳ್ಳಿಗೆ ತೃಪ್ತಿಪಟ್ಟರು. ಬಳಿಕ ಪುರುಷರ 50 ಮೀ. ರೈಫಲ್ 3 ಪೊಸಿಷನ್‌ನಲ್ಲಿ ದೀಪಕ್, ಸ್ವಪ್ನಿಲ್ ಹಾಗೂ ಗುರ್ಜರ್ ಅವರನ್ನೊಳಗೊಂಡ ತಂಡ ಕ್ರೊವೇಷಿಯಾ ವಿರುದ್ಧ ಸೋತು ಬೆಳ್ಳಿ ಪಡೆಯಿತು.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.