ಗ್ರ್ಯಾನ್‌ ಪ್ರಿ ಬ್ಯಾಡ್ಮಿಂಟನ್‌ ಲೀಗ್‌ಗೆ ಹೈಕೋರ್ಟ್ ರಿಲೀಫ್‌!

By Kannadaprabha News  |  First Published Jul 25, 2023, 11:36 AM IST

2ನೇ ಆವೃತ್ತಿಯ ಗ್ರ್ಯಾನ್‌ ಪ್ರಿ ಬ್ಯಾಡ್ಮಿಂಟನ್‌ ಲೀಗ್‌ಗೆ ಇದ್ದ ಆತಂಕ ನಿವಾರಣೆ
ಭಾರತೀಯ ಶಟ್ಲರ್‌ಗಳು ಪಾಲ್ಗೊಳ್ಳಲು ಕರ್ನಾಟಕ ಹೈಕೋರ್ಟ್‌ ಒಪ್ಪಿಗೆ
ಖಾಸಗಿ ಲೀಗ್‌ನಲ್ಲಿ ಆಡದಂತೆ ಬಿಎಐ ಆಟಗಾರರಿಗೆ ಸೂಚಿಸಿತ್ತು


ಬೆಂಗಳೂರು(ಜು.25): 2ನೇ ಆವೃತ್ತಿಯ ಗ್ರ್ಯಾನ್‌ ಪ್ರಿ ಬ್ಯಾಡ್ಮಿಂಟನ್‌ ಲೀಗ್‌(ಜಿಬಿಪಿಎಲ್‌)ನಲ್ಲಿ ಭಾರತೀಯ ಶಟ್ಲರ್‌ಗಳು ಪಾಲ್ಗೊಳ್ಳಲು ಕರ್ನಾಟಕ ಹೈಕೋರ್ಟ್‌ ಒಪ್ಪಿಗೆ ನೀಡಿದ್ದು, ಶಟ್ಲರ್‌ಗಳಿಗೆ ಟೂರ್ನಿಯಿಂದ ದೂರವಿರುವಂತೆ ತಾಕೀತು ಮಾಡಿ ಭಾರತೀಯ ಬ್ಯಾಡ್ಮಿಂಟನ್‌ ಸಂಸ್ಥೆ(ಬಿಎಐ) ನೀಡಿದ್ದ ಸೂಚನೆಗೆ ತಡೆ ನೀಡಿದೆ.

ಟೂರ್ನಿಯಲ್ಲಿ ಪಾಲ್ಗೊಳ್ಳುವ ಆಟಗಾರರು, ಕೋಚ್‌, ಸಹಾಯಕ ಸಿಬ್ಬಂದಿ ಮೇಲೆ ಯಾವುದೇ ಕ್ರಮ ಕೈಗೊಳ್ಳುವಂತಿಲ್ಲ ಎಂದು ನ್ಯಾಯಾಲಯವು ನಿದೇರ್ಶನ ನೀಡಿದೆ. ಮಾನ್ಯತೆ ಇಲ್ಲದ ಖಾಸಗಿ ಲೀಗ್‌ನಲ್ಲಿ ಆಡದಂತೆ ಬಿಎಐ ಆಟಗಾರರಿಗೆ ಸೂಚಿಸಿತ್ತು. ಆಯೋಜಕರು ಇದರ ವಿರುದ್ಧ ಹೈಕೋರ್ಟ್‌ ಮೆಟ್ಟಿಲೇರಿದ್ದರು.

Latest Videos

undefined

ಕಳೆದ ವರ್ಷ ಜಿಬಿಪಿಎಲ್‌ನಲ್ಲಿ ಕೇವಲ ಕರ್ನಾಟಕ ಶಟ್ಲರ್‌ಗಳಷ್ಟೇ ಪಾಲ್ಗೊಂಡಿದ್ದರು. ಆದರೆ ಈ ಬಾರಿ ರಾಷ್ಟ್ರೀಯ, ಅಂತಾರಾಷ್ಟ್ರೀಯ ಆಟಗಾರರಿಗೂ ಅವಕಾಶ ನೀಡಲಾಗಿದ್ದು, 56 ಅಂ.ರಾ. ಆಟಗಾರರು ಸೇರಿ ಒಟ್ಟು 450ಕ್ಕೂ ಹೆಚ್ಚು ಶಟ್ಲರ್‌ಗಳು ಹರಾಜಿನಲ್ಲಿ ಪಾಲ್ಗೊಳ್ಳಲು ನೋಂದಣಿ ಮಾಡಿಕೊಂಡಿದ್ದಾರೆ.

Korea Open 2023: ಸಾತ್ವಿಕ್‌-ಚಿರಾಗ್ ಜೋಡಿಯ ಮುಡಿಗೆ ಕೊರಿಯಾ ಓಪನ್‌ ಗರಿ..!

ತಾರಾ ಶಟ್ಲರ್‌ಗಳಾದ ಬಿ.ಸಾಯಿಪ್ರಣೀತ್‌, ಮಿಥುನ್ ಮಂಜುನಾಥ್‌, ಪ್ರಿಯಾನ್ಶು ರಾಜಾವತ್‌, ಬೆಲ್ಜಿಯಂನ ಜೂಲಿಯನ್‌ ಕರ್ರಾಗಿ, ರಷ್ಯಾದ ಡಬಲ್ಸ್‌ ಆಟಗಾರರಾದ ಇವನೊವ್, ಸೊಜೊನೊವ್‌ ಸೇರಿ ಹಲವು ಟೂರ್ನಿಯಲ್ಲಿ ಆಡಲು ಆಸಕ್ತಿ ತೋರಿದ್ದು, ಬಿಐಎ ಸೂಚನೆ ಬಳಿಕ ಹರಾಜಿನಲ್ಲಿ ಪಾಲ್ಗೊಳ್ಳಲು ಹಿಂಜರಿದಿದ್ದರು. 2ನೇ ಆವೃತ್ತಿಯಲ್ಲಿ 10 ತಂಡಗಳು ಪಾಲ್ಗೊಳ್ಳುವ ನಿರೀಕ್ಷೆ ಇದ್ದು, ಸದ್ಯದಲ್ಲೇ ಆಟಗಾರರ ಹರಾಜು ಪ್ರಕ್ರಿಯೆ ನಡೆಯಲಿದೆ.

ವಿಶ್ವ ಈಜು: ಸೆಮಿಫೈನಲ್‌ ಪ್ರವೇಶಿಸಲು ಶ್ರೀಹರಿ ವಿಫಲ

ಫುಕುಒಕಾ(ಜಪಾನ್‌): ಭಾರತದ ಅಗ್ರ ಈಜುಪಟು, ಕರ್ನಾಟಕದ ಶ್ರೀಹರಿ ನಟರಾಜ್‌ ಇಲ್ಲಿ ನಡೆಯುತ್ತಿರುವ ವಿಶ್ವ ಈಜು ಚಾಂಪಿಯನ್‌ಶಿಪ್‌ನ 100 ಬ್ಯಾಕ್‌ಸ್ಟ್ರೋಕ್‌ ಸ್ಪರ್ಧೆಯ ಹೀಟ್ಸ್‌ನಲ್ಲೇ ಹೊರಬಿದ್ದಿದ್ದಾರೆ. ತಾವು ಸ್ಪರ್ಧಿಸಿದ ಹೀಟ್ಸ್‌ನಲ್ಲಿ ಕೊನೆಯ ಸ್ಥಾನ ಪಡೆದ ಶ್ರೀಹರಿ, ಒಟ್ಟಾರೆ 31ನೇ ಸ್ಥಾನಕ್ಕೆ ತೃಪ್ತಿಪಟ್ಟು ಸೆಮಿಫೈನಲ್‌ ಪ್ರವೇಶಿಸಲು ವಿಫಲರಾದರು. ಒಟ್ಟು 7 ಹೀಟ್ಸ್‌ ಸೇರಿ ಮೊದಲ 18 ಸ್ಥಾನ ಪಡೆದ ಈಜುಪಟುಗಳು ಸೆಮೀಸ್‌ಗೇರಿದರು. 22 ವರ್ಷದ ಶ್ರೀಹರಿ, 55.60 ಸೆಕೆಂಡ್‌ಗಳಲ್ಲಿ ಗುರಿ ತಲುಪಿದರು. ಇದು ಈ ಋತುವಿನಲ್ಲಿ ಅವರ ಶ್ರೇಷ್ಠ ಪ್ರದರ್ಶನ ಎನಿಸಿತು. ಮುಂಬರುವ ಏಷ್ಯನ್‌ ಗೇಮ್ಸ್‌ನಲ್ಲಿ ರಾಜ್ಯದ ಈಜುತಾರೆ ಭಾರತವನ್ನು ಪ್ರತಿನಿಧಿಸಲಿದ್ದಾರೆ.

ಸೆಕ್ಸಿ ಫೋಟೋಗಳನ್ನು ಹಂಚಿಕೊಂಡ ಮಾಜಿ ವಿಂಬಲ್ಡನ್‌ ಚಾಂಪಿಯನ್‌ ಮರಿಯಾ ಶೆರಪೋವಾ..!

ಇಂದಿನಿಂದ ಜಪಾನ್‌ ಓಪನ್‌ ಬ್ಯಾಡ್ಮಿಂಟನ್‌

ಟೋಕಿಯೋ: ಕೊರಿಯಾ ಓಪನ್‌ ಗೆದ್ದ ಸಂಭ್ರಮದಲ್ಲಿರುವ ಭಾರತದ ತಾರಾ ಶಟ್ಲರ್‌ಗಳಾದ ಸಾತ್ವಿಕ್‌ ಸಾಯಿರಾಜ್‌ ಹಾಗೂ ಚಿರಾಗ್‌ ಶೆಟ್ಟಿ, ಮಂಗಳವಾರದಿಂದ ಇಲ್ಲಿ ಆರಂಭಗೊಳ್ಳಲಿರುವ ಜಪಾನ್‌ ಓಪನ್‌ ಸೂಪರ್‌ 750 ಬ್ಯಾಡ್ಮಿಂಟನ್‌ ಟೂರ್ನಿಯಲ್ಲೂ ಪ್ರಶಸ್ತಿ ಮೇಲೆ ಕಣ್ಣಿಟ್ಟಿದ್ದಾರೆ. ಇನ್ನು ವಿಶ್ವ ರ್‍ಯಾಂಕಿಂಗ್‌ನಲ್ಲಿ 17ನೇ ಸ್ಥಾನಕ್ಕೆ ಕುಸಿದಿರುವ ಪಿ.ವಿ.ಸಿಂಧು ಹಾಗೂ ಮಾಜಿ ವಿಶ್ವ ನಂ.1 ಕಿದಂಬಿ ಶ್ರೀಕಾಂತ್‌ ವರ್ಷದ ಮೊದಲ ಪ್ರಶಸ್ತಿಗಾಗಿ ಹುಡುಕಾಟ ಮುಂದುವರಿಸಲಿದ್ದು, ಎಚ್‌.ಎಸ್‌.ಪ್ರಣಯ್‌, ಲಕ್ಷ್ಯ ಸೇನ್‌ ಸಹ ಸುಧಾರಿತ ಪ್ರದರ್ಶನದ ನಿರೀಕ್ಷೆಯಲ್ಲಿದ್ದಾರೆ.

ಸ್ಪೇನ್‌ ಟೂರ್ನಿಯಲ್ಲಿ ಭಾರತ ಹಾಕಿ ತಂಡಗಳು ಕಣಕ್ಕೆ

ನವದೆಹಲಿ: ಸ್ಪ್ಯಾನಿಶ್‌ ಹಾಕಿ ಫೆಡರೇಶನ್‌ ಸ್ಥಾಪನೆಗೊಂಡು 100 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಆಹ್ವಾನಿತ ಟೂರ್ನಿಯೊಂದನ್ನು ಆತಿಥೇಯ ಫೆಡರೇಶನ್‌ ಆಯೋಜಿಸಿದ್ದು, ಭಾರತ ಪುರುಷ ಹಾಗೂ ಮಹಿಳಾ ಹಾಕಿ ತಂಡಗಳು ಸ್ಪರ್ಧಿಸಲಿವೆ. ಮುಂಬರುವ ಏಷ್ಯನ್‌ ಗೇಮ್ಸ್‌ಗೆ ಸಿದ್ಧತೆ ನಡೆಸಲು ಈ ಟೂರ್ನಿಯನ್ನು ಬಳಸಿಕೊಳ್ಳಲು ತಂಡಗಳು ಎದುರು ನೋಡುತ್ತಿವೆ. ಟೂರ್ನಿಯಲ್ಲಿ ಭಾರತ ಪುರುಷರ ತಂಡ ಸ್ಪೇನ್‌, ಬಲಿಷ್ಠ ನೆದರ್‌ಲೆಂಡ್ಸ್‌ ಹಾಗೂ ಇಂಗ್ಲೆಂಡ್‌ ತಂಡಗಳನ್ನು ಎದುರಿಸಲಿದೆ. ಮಹಿಳಾ ತಂಡವು ಸ್ಪೇನ್‌ ಹಾಗೂ ಇಂಗ್ಲೆಂಡ್‌ ವಿರುದ್ಧ ಆಡಲಿದೆ.

ಫಿನ್‌ಲ್ಯಾಂಡ್‌ ಟೆನಿಸ್‌ ಟೂರ್ನಿ ಗೆದ್ದ ನಗಾಲ್‌

ಟ್ಯಾಂಪಿರೆ(ಫಿನ್‌ಲ್ಯಾಂಡ್‌): ಭಾರತದ ಯುವ ಟೆನಿಸಿಗ ಸುಮಿತ್‌ ನಗಾಲ್‌ ಟ್ಯಾಂಪಿರೆ ಓಪನ್ ಪುರುಷರ ಸಿಂಗಲ್ಸ್‌ನ ಚಾಂಪಿಯನ್‌ ಆಗಿದ್ದಾರೆ. ಇದು ಅವರ ವೃತ್ತಿಬದುಕಿನ 4ನೇ, ಈ ವರ್ಷದ 2ನೇ ಎಟಿಪಿ ಚಾಲೆಂಜರ್‌ ಟ್ರೋಫಿ ಗೆಲುವು. ಶನಿವಾರ ನಡೆದ ಫೈನಲ್‌ನಲ್ಲಿ ನಗಾಲ್‌, ಚೆಕ್‌ ಗಣರಾಜ್ಯದ ದಲಿಬೊರ್‌ ಸ್ವಿರ್ಕಿನಾ ವಿರುದ್ಧ 6-4, 7-5 ಸೆಟ್‌ಗಳಲ್ಲಿ ಜಯಿಸಿದರು. ನಗಾಲ್‌ ಈ ವರ್ಷ ರೋಮ್‌ನಲ್ಲಿ ನಡೆದಿದ್ದ ಗಾರ್ಡನ್‌ ಓಪನ್‌ನಲ್ಲೂ ಪ್ರಶಸ್ತಿ ಗೆದ್ದಿದ್ದರು. ಯುರೋಪಿಯನ್‌ ಟೂರ್‌ನಲ್ಲಿ 2 ಪ್ರಶಸ್ತಿ ಜಯಿಸಿದ ಮೊದಲ ಭಾರತೀಯ ಎನ್ನುವ ದಾಖಲೆಯನ್ನು ನಗಾಲ್‌ ಬರೆದಿದ್ದಾರೆ.

click me!