ಓಪನ್ ಅಥ್ಲೆಟಿಕ್ಸ್‌ ಚಾಂಪಿಯನ್‌ಶಿಪ್‌ಗೆ ಸಿಎಂ ಬಸವರಾಜ ಬೊಮ್ಮಾಯಿ ಚಾಲನೆ

By Kannadaprabha News  |  First Published Oct 16, 2022, 9:49 AM IST

61ನೇ ರಾಷ್ಟ್ರೀಯ ಮುಕ್ತ ಅಥ್ಲೆಟಿಕ್ಸ್‌ ಚಾಂಪಿಯನ್‌ಶಿಪ್‌ಗೆ  ಸಿಎಂ ಬೊಮ್ಮಾಯಿ ಚಾಲನೆ
ಬೆಂಗಳೂರು ಸಮೀಪ ಸೆಂಟರ್‌ ಫಾರ್‌ ಎಕ್ಸಲೆನ್ಸ್‌ ಕೇಂದ್ರ ಸ್ಥಾಪಿಸಲಾಗಿದೆ ಎಂದ ಬೊಮ್ಮಾಯಿ
ಮಹಿಳೆಯರ ಪೋಲ್‌ ವಾಲ್ಟ್‌ ಸ್ಪರ್ಧೆಯಲ್ಲಿ ತಮಿಳುನಾಡಿನ ರೋಸಿ ಮೀನಾ ಪಾಲ್‌ರಾಜ್‌ ರಾಷ್ಟ್ರೀಯ ದಾಖಲೆ


ಬೆಂಗಳೂರು(ಅ.16): 61ನೇ ರಾಷ್ಟ್ರೀಯ ಮುಕ್ತ ಅಥ್ಲೆಟಿಕ್ಸ್‌ ಚಾಂಪಿಯನ್‌ಶಿಪ್‌ಗೆ ಶನಿವಾರ ನಗರದ ಕಂಠೀರವ ಕ್ರೀಡಾಂಗಣದಲ್ಲಿ ಚಾಲನೆ ದೊರೆಯಿತು. 5 ದಿನಗಳ ಕೂಟವನ್ನು ಕರ್ನಾಟಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ‘ರಾಜ್ಯದಲ್ಲಿ ಕ್ರೀಡಾಕ್ಷೇತ್ರಕ್ಕೆ ಹಿಂದಿಗಿಂತಲೂ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗುತ್ತಿದೆ. ದೇಶದಲ್ಲೂ ಕ್ರೀಡೆ ಬೆಳೆಯುತ್ತಿದ್ದು, ವಿಶ್ವ ಮಟ್ಟದಲ್ಲಿ ಹಲವು ಸಾಧನೆಗಳನ್ನು ನಮ್ಮ ಅಥ್ಲೀಟ್‌ಗಳು ಮಾಡುತ್ತಿದ್ದಾರೆ. ರಾಜ್ಯದ ಕ್ರೀಡಾ ಬೆಳವಣಿಗೆಗಾಗಿ ಬೆಂಗಳೂರು ಸಮೀಪ ಸೆಂಟರ್‌ ಫಾರ್‌ ಎಕ್ಸಲೆನ್ಸ್‌ ಕೇಂದ್ರ ಸ್ಥಾಪಿಸಲಾಗಿದೆ. ಇಲ್ಲಿ ಅತ್ಯುತ್ತಮ ತರಬೇತಿ, ವಿಶ್ವದರ್ಜೆಯ ಸೌಲಭ್ಯಗಳನ್ನು ಒದಗಿಸಲಾಗುತ್ತದೆ’ ಎಂದರು. 

ಇದೇ ವೇಳೆ ‘ರಾಜ್ಯದ ಅಥ್ಲೀಟ್‌ಗಳ ತರಬೇತಿಗೆ ಸೂಕ್ತ ವ್ಯವಸ್ಥೆ ಸಿಗದಿರುವುದು ಗಮನಕ್ಕೆ ಬಂದಿದೆ. ನಮ್ಮ ಕ್ರೀಡಾಪಟುಗಳ ತರಬೇತಿಗೆ ಸರಿಯಾದ ವ್ಯವಸ್ಥೆ ಕಲ್ಪಿಸುವುದು ಸರ್ಕಾರದ ಜವಾಬ್ದಾರಿ. ಈ ಬಗ್ಗೆ ಗಮನ ಹರಿಸುತ್ತೇವೆ’ ಎಂದು ಸಿಎಂ ಭರವಸೆ ನೀಡಿದರು. ಕ್ರೀಡಾಕೂಟ ಆಯೋಜನಾ ಸಮಿತಿ ಮುಖ್ಯಸ್ಥರಾಗಿರುವ ಸಚಿವ ಡಾ.ಅಶ್ವಥ್‌ನಾರಾಯಣ್‌ ಸೇರಿ ಪ್ರಮುಖರು ಹಾಜರಿದ್ದರು.

ಮಾನ್ಯ ಮುಖ್ಯಮಂತ್ರಿ ಅವರು ಇಂದು ಬೆಂಗಳೂರಿನಲ್ಲಿ 61 ನೆ ರಾಷ್ಟ್ರೀಯ ಅಥ್ಲೆಟಿಕ್ಸ್ ಚಾಂಪಿಯನ್ ಶಿಪ್ -2022 ಉದ್ಘಾಟಿಸಿ ಮಾತನಾಡಿದರು. pic.twitter.com/1pbxxIQ1md

— CM of Karnataka (@CMofKarnataka)

"ಕ್ರೀಡೆಗೆ ಹಿಂದೆಂದಿಗಿಂತ ಹೆಚ್ಚಿನ ಪ್ರೋತ್ಸಾಹವನ್ನು ನಮ್ಮ ಸರ್ಕಾರ ನೀಡುತ್ತಾ ಬಂದಿದೆ. ಕರ್ನಾಟಕದ 75 ಮಂದಿ ಕ್ರೀಡಾಳುಗಳನ್ನು ಗುರುತಿಸಿ ಅವರಿಗೆ ಪ್ಯಾರಿಸ್ ನಲ್ಲಿ ನಡೆಯುವ ಒಲಿಂಪಿಕ್ಸ್ ಗೆ ಈಗಾಗಲೇ ತರಬೇತಿ ನೀಡಲಾಗುತ್ತಿದೆ." ಮುಖ್ಯಮಂತ್ರಿ : pic.twitter.com/t464KyenGN

— CM of Karnataka (@CMofKarnataka)

Tap to resize

Latest Videos

ಪೋಲ್‌ ವಾಲ್ಟ್‌: ರೋಸಿ ನೂತನ ರಾಷ್ಟ್ರೀಯ ದಾಖಲೆ!

ಕೂಟದ ಮೊದಲ ದಿನವೇ ರಾಷ್ಟೀಯ ದಾಖಲೆ ನಿರ್ಮಾಣವಾಯಿತು. ಮಹಿಳೆಯರ ಪೋಲ್‌ ವಾಲ್ಟ್‌ ಸ್ಪರ್ಧೆಯಲ್ಲಿ ತಮಿಳುನಾಡಿನ ರೋಸಿ ಮೀನಾ ಪಾಲ್‌ರಾಜ್‌ 4.21 ಮೀ. ಎತ್ತರಕ್ಕೆ ಜಿಗಿದರು. ಈ ಮೂಲಕ ಕೆಲ ದಿನಗಳ ಹಿಂದಷ್ಟೇ ಗುಜರಾತ್‌ನಲ್ಲಿ ನಡೆದ ನ್ಯಾಷನಲ್‌ ಗೇಮ್ಸ್‌ನಲ್ಲಿ ತಾವೇ ನಿರ್ಮಿಸಿದ್ದ 4.20 ಮೀ. ರಾಷ್ಟ್ರೀಯ ದಾಖಲೆಯನ್ನು ಉತ್ತಮಗೊಳಿಸಿಕೊಂಡರು.

ಸ್ವತಃ ನೀರಜ್ ಚೋಪ್ರಾ ಬಂದ್ರೂ ಅಭ್ಯಾಸಕ್ಕೆ ಅವಕಾಶ ಇಲ್ಲ, ಏನಿದು ಕಂಠೀರವ ಕ್ರೀಡಾಂಗಣದ ವಿವಾದ!

ಇನ್ನು, ಮಹಿಳೆಯರ 20 ಕಿಮೀ ವೇಗ ನಡಿಗೆಯಲ್ಲಿ ಕರ್ನಾಟಕದ ವಂದನಾ ಬೆಳ್ಳಿ ಪದಕ ಗೆದ್ದರು. ಚಿನ್ನ ರೈಲ್ವೇಸ್‌ನ ರವಿನಾ ಪಾಲಾಯಿತು. ಪುರುಷರ ವಿಭಾಗದಲ್ಲಿ ಉತ್ತರಾಖಂಡ್‌ನ ಸೂರಜ್‌ ಪನ್ವಾರ್‌, ಮಹಿಳೆಯರ ಡಿಸ್ಕಸ್‌ ಎಸೆತದಲ್ಲಿ ರೈಲ್ವೇಸ್‌ನ ಪರಮ್‌ಜೋತ್‌ ಕೌರ್‌ ಬಂಗಾರ ತಮ್ಮದಾಗಿಸಿಕೊಂಡರು.

ಶೂಟಿಂಗ್‌ ವಿಶ್ವಕಪ್‌ನಲ್ಲಿ ಭಾರತಕ್ಕೆ ಮತ್ತೆ 3 ಚಿನ್ನ

ಕೈರೋ: ಐಎಸ್‌ಎಸ್‌ಎಫ್‌ ಶೂಟಿಂಗ್‌ ವಿಶ್ವಕಪ್‌ನಲ್ಲಿ ಭಾರತ ಮತ್ತೆ 3 ಚಿನ್ನದ ಪದಗಳನ್ನು ಬಾಚಿಕೊಂಡಿದೆ. ಕೈರೋನಲ್ಲಿ ನಡೆಯುತ್ತಿರುವ ಕೂಟದಲ್ಲಿ ಕಿರಿಯ ಪುರುಷರ ವಿಭಾಗದ 25 ಮೀ. ಪಿಸ್ತೂಲ್‌ ಸ್ಪರ್ಧೆಯಲ್ಲಿ ಉದಯ್‌ವೀರ್‌ ಸಿಂಗ್‌ 580 ಅಂಕಗಳೊಂದಿಗೆ ಚಿನ್ನದ ಪದಕಕ್ಕೆ ಕೊರಳೊಡ್ಡಿದರು. 25 ಮೀ. ಸ್ಟಾಂಡರ್ಡ್‌ ಪಿಸ್ತೂಲ್‌ ಸ್ಪರ್ಧೆಯಲ್ಲೂ ಉದಯ್‌ವೀರ್‌ ಸ್ವರ್ಣ ಪದಕ ಗೆದ್ದರು. ಇದರಲ್ಲಿ ಸಮೀರ್‌ ಕಂಚಿನ ಪದಕ ತಮ್ಮದಾಗಿಸಿಕೊಂಡರು. 

ಕಿರಿಯ ಮಹಿಳಾ ವಿಭಾಗದ 25 ಮೀ. ಪಿಸ್ತೂಲ್‌ ಸ್ಪರ್ಧೆಯಲ್ಲಿ ಈಶಾ ಸಿಂಗ್‌ಗೆ ಬಂಗಾರ ಒಲಿಯಿತು. ಇನ್ನು, ಮಹಿಳೆಯರ 25 ಮೀ. ಸ್ಟಾಂಡರ್ಡ್‌ ಪಿಸ್ತೂಲ್‌ನಲ್ಲಿ ತೇಜಸ್ವಿನಿ ಕಂಚು ಗೆದ್ದರು. ಭಾರತ ಸದ್ಯ 4 ಚಿನ್ನ, 3 ಕಂಚಿನೊಂದಿಗೆ ಪದಕ ಪಟ್ಟಿಯಲ್ಲಿ 2ನೇ ಸ್ಥಾನದಲ್ಲಿದೆ.

ನ್ಯಾಷನಲ್‌ ಗೇಮ್ಸ್‌ ಚಿನ್ನ ಗೆದ್ದ ಹಾಕಿ ತಂಡಕ್ಕೆ ಸನ್ಮಾನ

ಬೆಂಗಳೂರು: 98 ವರ್ಷಗಳ ರಾಷ್ಟ್ರೀಯ ಕ್ರೀಡಾಕೂಟದ ಇತಿಹಾಸದಲ್ಲೇ ಮೊದಲ ಬಾರಿ ಚಿನ್ನದ ಪದಕ ಗೆದ್ದ ಕರ್ನಾಟಕ ಹಾಕಿ ತಂಡದ ಆಟಗಾರರಿಗೆ ಶನಿವಾರ ಕರ್ನಾಟಕ ಹಾಕಿ ಸಂಸ್ಥೆಯ ವತಿಯಿಂದ ಸನ್ಮಾನ ಮಾಡಲಾಯಿತು. ಬೆಂಗಳೂರಿನಲ್ಲಿರುವ ಹಾಕಿ ಸಂಸ್ಥೆಯ ಕಚೇರಿಯಲ್ಲಿ ನಡೆದ ಕಾರ‍್ಯಕ್ರಮದಲ್ಲಿ ಎಸ್‌.ವಿ.ಸುನಿಲ್‌ ಸೇರಿದಂತೆ ಎಲ್ಲಾ ಆಟಗಾರರನ್ನು ಶಾಲು ಹೊದಿಸಿ ಸನ್ಮಾನಿಸಲಾಯಿತು. ಇದೇ ವೇಳೆ ಆಟಗಾರರು ಹಾಕಿ ಅಂಗಳದ ರೂಪದ ಕೇಕ್‌ ಕತ್ತರಿಸಿ ಸಂಭ್ರಮಿಸಿದರು. ಮಂಗಳವಾರ ನಡೆದಿದ್ದ ಕ್ರೀಡಾಕೂಟದ ಫೈನಲ್‌ನಲ್ಲಿ ರಾಜ್ಯ ತಂಡ ಉತ್ತರ ಪ್ರದೇಶ ವಿರುದ್ಧ 7-6 ಗೋಲುಗಳ ರೋಚಕ ಗೆಲುವು ಸಾಧಿಸಿತ್ತು.


 

click me!