ಮೊದಲ ದಿನವೇ ಕರ್ನಾಟಕದ ಭರ್ಜರಿ ಮೊತ್ತ: ಮಾಯಾಂಕ್, ಪಾಂಡೆ ಶತಕಗಳಾಟ

By Suvarna Web DeskFirst Published Nov 25, 2017, 6:29 PM IST
Highlights

ನಿರೀಕ್ಷೆ ಮೂಡಿಸಿದ್ದ ಉದಯೋನ್ಮುಖ ಆಟಗಾರ ಡಿ. ನಿಶ್ಚಲ್ಕೂಡ ಕೇವಲ 4 ರನ್ ಗಳಿಸಿ ಪೆವಿಲಿಯನ್'ಗೆ ತೆರಳಿದರು.ಕರುಣಾ ನಾಯರ್(10) ಕೂಡ ಹೆಚ್ಚು ಹೊತ್ತು ನಿಲ್ಲಲಿಲ್ಲ.

ನವದೆಹಲಿ(ನ.25): ಆರಂಭದಲ್ಲಿಯೇ 3 ವಿಕೇಟ್ ಕಳೆದುಕೊಂಡು ಆತಂಕದ ಸ್ಥಿತಿಯಲ್ಲಿದ್ದ ಕರ್ನಾಟಕ ತಂಡ ಸ್ಫೋಟಕ ಆಟಗಾರ ಮಾಯಾಂಕ್ ಅಗರ್'ವಾಲ್ ಹಾಗೂ ಮನೀಶ್ ಪಾಂಡೆ ಅವರ ಭರ್ಜರಿ ಶತಕಗಳ ನೆರವಿನಿಂದ ರೈಲ್ವೇಸ್ ತಂಡದ ವಿರುದ್ಧ 6 ವಿಕೇಟ್ ನಷ್ಟಕ್ಕೆ 355 ರನ್'ಗಳ ಬೃಹತ್ ಮೊತ್ತ ದಾಖಲಿಸಿದೆ.

ನವದೆಹಲಿಯ ಕರ್ನೇಲ್ ಸಿಂಗ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ರಣಜಿ ಪಂದ್ಯದ ಅಂತಿಮ ಲೀಗ್ ಪಂದ್ಯದಲ್ಲಿ  ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ವಿನಯ್ ಕುಮಾರ್ ಪಡೆ ಪ್ರಾರಂಭದಲ್ಲಿಯೇ ಹಿನ್ನಡೆ ಅನುಭವಿಸಿತು. ಆರಂಭಿಕ ಆಟಗಾರ  ಆರ್. ಸಮರ್ಥ್ ಮೊದಲ ಓವರ್'ನಲ್ಲಿಯೇ ಔಟಾದರು. ಕಳೆದ ಉತ್ತರ ಪ್ರದೇಶ ವಿರುದ್ಧದ ಪಂದ್ಯದಲ್ಲಿ 195 ರನ್ ಬಾರಿಸಿ ನಿರೀಕ್ಷೆ ಮೂಡಿಸಿದ್ದ ಉದಯೋನ್ಮುಖ ಆಟಗಾರ ಡಿ. ನಿಶ್ಚಲ್  ಕೂಡ ಕೇವಲ 4 ರನ್ ಗಳಿಸಿ ಪೆವಿಲಿಯನ್'ಗೆ ತೆರಳಿದರು.  ಕರುಣಾ ನಾಯರ್(10) ಕೂಡ ಹೆಚ್ಚು ಹೊತ್ತು ನಿಲ್ಲಲಿಲ್ಲ. ಅನಂತರ ಆಗಮಿಸಿದ ಮನೀಶ್ ಪಾಂಡೆ ಆರಂಭಿಕ ಆಟಗಾರ ಮಾಯಾಂಕ್ ಅಗರ್'ವಾಲ್ ಅವರೊಂದಿಗೆ ಜೊತೆಯಾಗಿ ತಂಡವನ್ನು ಅಪಾಯದಿಂದ ಪಾರು ಮಾಡಿದರು. ಇವರಿಬ್ಬರು 4ನೇ ವಿಕೇಟ್ ನಷ್ಟಕ್ಕೆ 229 ರನ್ ಕಲೆ ಹಾಕಿದರು.

ಮಾಯಾಂಕ್, ಮನೀಶ್ ಭರ್ಜರಿ ಶತಕ

ಈ ಸಾಲಿನ ರಣಜಿ ಋತುವಿನಲ್ಲಿ ಉತ್ತಮ ಆಟವಾಡುತ್ತಿರುವ ಮಾಯಾಂಕ್ ಅಗರ್'ವಾಲ್ 241 ಎಸತಗಳಲ್ಲಿ 17 ಭರ್ಜರಿ ಬೌಂಡರಿ ಹಾಗೂ 1 ಸಿಕ್ಸ್'ರ್'ನೊಂದಿಗೆ 173 ರನ್ ಪೇರಿಸಿದರು. ಕಳೆದ ಪಂದ್ಯದಲ್ಲಿ ದ್ವಿಶತಕ ಬಾರಿಸಿದ್ದ ಮನೀಶ್ ಪಾಂಡೆ ಕೂಡ 169 ಎಸತೆಗಳಲ್ಲಿ  9 ಬೌಂಡರಿ ಹಾಗೂ 2 ಸಿಕ್ಸ್'ರ್'ನೊಂದಿಗೆ 108 ರನ್ ಬಾರಿಸಿದರು. ಪಾಂಡೆ ಔಟಾದ ನಂತರ ಬಿನ್ನಿ 23 ರನ್ ಗಳಿಸಿ ಪೆವಿಲಿಯನ್'ಗೆ ತೆರಳಿದರು. ದಿನದಾಟದ ಕೊನೆಯ ಓವರ್'ನಲ್ಲಿ ಮಾಯಾಂಕ್  ಔಟಾಗಿ, ಸಿ.ಕೆ. ಗೌತಮ್ 25 ರನ್'ನೊಂದಿಗೆ ಅಜೇಯರಾಗಿ ಉಳಿದಿದ್ದರು. ರೈಲ್ವೇಸ್ ಪರ ಮನೀಶ್ ರಾವ್ 65/2 ಯಶಸ್ವಿ ಬೌಲರ್ ಎನಿಸಿದರು.

ಸ್ಕೋರ್

ಕರ್ನಾಟಕ 89.2 ಓವರ್'ಗಳಲ್ಲಿ 355/6

(ಮಾಯಾಂಕ್ ಅಗರ್'ವಾಲ್ 173, ಮನೀಶ್ ಪಾಂಡೆ 108, ಮನೀಶ್ ರಾವ್ 65/2)

ರೈಲ್ವೇಸ್ ವಿರುದ್ಧದ ಪಂದ್ಯ

click me!