ರಬಾಡ ದಾಳಿಗೆ ಶರಣೆಂದ ಕಾಂಗರೂ ಪಡೆ

By Suvarna Web DeskFirst Published Nov 7, 2016, 6:21 AM IST
Highlights

ಅಂತಿಮ ದಿನವಾದ ಇಂದು ಕಾಂಗರೂ ಪಡೆ 361 ರನ್ ಮೊತ್ತಕ್ಕೆ ತನ್ನೆಲ್ಲಾ ವಿಕೆಟ್ ಕಳೆದುಕೊಂಡಿತು. ಈ ಮೂಲಕ, ಹರಿಣಗಳ ಪಡೆ 177 ರನ್‌ಗಳ ದೊಡ್ಡ ಗೆಲುವು ದಾಖಲಿಸಿತು.

 

ಪರ್ತ್(ನ.07): ಯುವ ವೇಗಿ ಕಗಿಸೋ ರಬಾಡಾ (92ಕ್ಕೆ ಐದು ವಿಕೆಟ್) ದಾಳಿಗೆ ನಲುಗಿದ ಆಸ್ಟ್ರೇಲಿಯಾ ತಂಡ, ತನ್ನ ತವರಿನಲ್ಲೇ ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಹೀನಾಯ ಸೋಲು ಕಂಡಿದೆ.

Latest Videos

ಪಂದ್ಯದ ನಾಲ್ಕನೇ ದಿನವಾದ ಭಾನುವಾರ, ಗೆಲುವಿಗಾಗಿ ದಾಖಲೆಯ 539 ರನ್ ಗುರಿಯೊಂದಿಗೆ ತನ್ನ ದ್ವಿತೀಯ ಇನಿಂಗ್ಸ್ ಆರಂಭಿಸಿದ್ದ ಆಸ್ಟ್ರೇಲಿಯಾ, ಅಂತಿಮ ದಿನವಾದ ಇಂದು ಕಾಂಗರೂ ಪಡೆ 361 ರನ್ ಮೊತ್ತಕ್ಕೆ ತನ್ನೆಲ್ಲಾ ವಿಕೆಟ್ ಕಳೆದುಕೊಂಡಿತು. ಈ ಮೂಲಕ, ಹರಿಣಗಳ ಪಡೆ 177 ರನ್‌ಗಳ ದೊಡ್ಡ ಗೆಲುವು ದಾಖಲಿಸಿತು.

ಭಾನುವಾರ ದಿನಾಂತ್ಯಕ್ಕೆ ವೈಯಕ್ತಿಕ 58 ರನ್ ಗಳಿಸಿ ಮಿಚೆಲ್ ಮಾರ್ಷ್ ಅವರೊಂದಿಗೆ ಅಜೇಯರಾಗುಳಿದಿದ್ದ ಊಸ್ಮನ್ ಖವಾಜಾ, ಭಾನುವಾರ ಇನಿಂಗ್ಸ್ ಆರಂಭಿಸಿದರು. ಆದರೆ, ಮಾರ್ಷ್ ಬೇಗನೇ ವಿಕೆಟ್ ಒಪ್ಪಿಸಿ ಹೊರನಡೆದರು. ಆಗ ಕ್ರೀಸ್‌ಗೆ ಆಗಮಿಸಿದ ನೆವಿಲ್ ಮಾತ್ರ ತಮ್ಮ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನಿಭಾಯಿಸಿದರು. 6ನೇ ವಿಕೆಟ್‌ಗೆ ಈ ಜೋಡಿ 50 ರನ್ ಪೇರಿಸಿತು. ಇನಿಂಗ್ಸ್‌ನ ಮೊತ್ತ 246 ರನ್ ಆಗಿದ್ದಾಗ ಖವಾಜಾ ಅವರು ಡುಮಿನಿ ಅವರಿಗೆ ವಿಕೆಟ್ ಒಪ್ಪಿಸಿ ಹೊರನಡೆದರು.

ಖವಾಜಾ ಹೊರನಡೆದ ನಂತರ ಬಂದವರಲ್ಲಿ ಯಾರೂ ಗಟ್ಟಿಯಾಗಿ ಕ್ರೀಸ್‌ನಲ್ಲಿ ನಿಲ್ಲದೇ ಇದ್ದದ್ದು ಆಸೀಸ್‌ಗೆ ಮುಳುವಾಯಿತು. ಮಿಚೆಲ್ ಸ್ಟಾರ್ಕ್ (13), ಪೀಟರ್ ಸಿಡ್ಲ್ (13) ಬೇಗನೇ ಪೆವಿಲಿಯನ್‌ನತ್ತ ಮುಖ ಮಾಡಿದರೆ, ಹ್ಯಾಜೆಲ್‌ವುಡ್ (29) ಮಾತ್ರ ಕೊಂಚ ಹೋರಾಡಿದರಷ್ಟೇ. ಇನಿಂಗ್ಸ್‌ನ ಮೊತ್ತ 345 ರನ್ ಆಗಿದ್ದಾಗ ಅವರೂ ವಿಕೆಟ್ ಚೆಲ್ಲಿದರು. ಅಲ್ಲಿಂದ ಮುಂದಕ್ಕೆ 16 ರನ್‌ಗಳು ತಂಡದ ಮೊತ್ತಕ್ಕೆ ಸೇರುವಷ್ಟರಲ್ಲಿ ಅಂತಿಮ ಬ್ಯಾಟ್ಸ್‌ಮನ್ ಲಿಯಾನ್ (8) ಔಟಾಗುವ ಮೂಲಕ ಆಸೀಸ್ ಇನಿಂಗ್ಸ್ ಅಂತ್ಯಗೊಂಡಿತು. 60 ರನ್ ಗಳಿಸಿದ ನೆವಿಲ್ ಮಾತ್ರ ಅಜೇಯರಾಗುಳಿದರು.

ಸಂಕ್ಷಿಪ್ತ ಸ್ಕೋರ್:

ದಕ್ಷಿಣ ಆಫ್ರಿಕಾ ಪ್ರಥಮ ಇನಿಂಗ್ಸ್ 242;

ಆಸ್ಟ್ರೇಲಿಯಾ ಪ್ರಥಮ ಇನಿಂಗ್ಸ್ 244;

ದಕ್ಷಿಣ ಆಫ್ರಿಕಾ ದ್ವಿತೀಯ ಇನಿಂಗ್ಸ್ 540ಕ್ಕೆ 8;

ಆಸ್ಟ್ರೇಲಿಯಾ ದ್ವಿತೀಯ ಇನಿಂಗ್ಸ್ 361 (ಭಾನುವಾರ ದಿನಾಂತ್ಯಕ್ಕೆ 169ಕ್ಕೆ 4)

(ನೆವಿಲ್ 60*, ಹ್ಯಾಜೆಲ್‌ವುಡ್ 29; ಕಾಗಿಸೊ ರಬಾಡಾ 92ಕ್ಕೆ 5).

ಪಂದ್ಯಶ್ರೇಷ್ಠ: ಕಾಗಿಸೊ ರಬಾಡಾ.

 

click me!