
ಅಹಮದಾಬಾದ್(ಅ.08): ಸಂಘಟಿತ ಹೋರಾಟ ತೋರಿದ ಬಾಂಗ್ಲಾದೇಶ ತಂಡ, ವಿಶ್ವಕಪ್ ಕಬಡ್ಡಿ ಟೂರ್ನಿಯ ಲೀಗ್ ಹಂತದ ಪಂದ್ಯದಲ್ಲಿ ಇಂಗ್ಲೆಂಡ್ ಎದುರು ಭರ್ಜರಿ ಗೆಲುವು ಸಾಧಿಸಿತು.
ಇಲ್ಲಿನ ಟ್ರಾನ್ಸ್ ಸ್ಟೇಡಿಯಾ ಅರೇನಾದಲ್ಲಿ ನಡೆಯುತ್ತಿರುವ ಟೂರ್ನಿಯ ಎರಡನೇ ದಿನವಾದ ಶನಿವಾರದ ಮೊದಲ ಪಂದ್ಯದಲ್ಲಿ ಬಾಂಗ್ಲಾದೇಶ 52-18 ಅಂಕಗಳಿಂದ ಇಂಗ್ಲೆಂಡ್ ತಂಡವನ್ನು ಮಣಿಸಿತು. ಭರ್ಜರಿ 34 ಅಂಕಗಳ ಅಂತರದಲ್ಲಿ ಜಯಗಳಿಸಿದ ಬಾಂಗ್ಲಾ ಅಂಕಪಟ್ಟಿಯಲ್ಲಿ ಖಾತೆ ತೆರೆದಿದೆ.
ಪಂದ್ಯದ ಆರಂಭದಿಂದಲೂ ಪ್ರಭಾವಿ ಆಟಕ್ಕೆ ಮುಂದಾದ ಬಾಂಗ್ಲಾದೇಶ ತಂಡ 15ನೇ ನಿಮಿಷದಲ್ಲಿ ಇಂಗ್ಲೆಂಡ್ ತಂಡವನ್ನು ಆಲೌಟ್ ಮಾಡುವಲ್ಲಿ ಸಫಲವಾಗಿ 17-6ರಲ್ಲಿ ಮುನ್ನಡೆ ಸಾಧಿಸಿತು. 19ನೇ ನಿಮಿಷದಲ್ಲಿ ಬಾಂಗ್ಲಾದ ಜಾಕೀರ್ ಹುಸೇನ್ ಸೂಪರ್ ರೈಡ್‌ನಿಂದ 3 ಅಂಕ ಪಡೆದು ಮೊದಲಾರ್ಧದಲ್ಲಿ 23-9 ಅಂಕಗಳಿಂದ ಇಂಗ್ಲೆಂಡ್ ತಂಡವನ್ನು ಹಿಂದಿಕ್ಕಿತು.
ಮೊದಲ ಅವಧಿಯಲ್ಲಿ 14 ಅಂಕ ಮುನ್ನಡೆ ಸಾಧಿಸಿದ ಬಾಂಗ್ಲಾ ತಂಡ ಯಾವ ಹಂತದಲ್ಲಿಯೂ ಎಚ್ಚರ ತಪ್ಪಲಿಲ್ಲ. ದ್ವಿತೀಯಾರ್ಧದ ಆಟದಲ್ಲೂ ಪ್ರಭಾವಿ ಆಟವಾಡಿದ ಬಾಂಗ್ಲಾ ಆಟಗಾರರು, ಇಂಗ್ಲೆಂಡ್ ಮೇಲೆ ಸವಾರಿ ಮಾಡಿದರು. ಅಲ್ಲದೇ ಆಂಗ್ಲ ತಂಡವನ್ನು ಎರಡು ಬಾರಿ ಆಲೌಟ್‌ಗೆ ಗುರಿಪಡಿಸಿ ಲೋನಾ ಅಂಕಗಳೊಂದಿಗೆ ಉತ್ತಮ ಮುನ್ನಡೆ ಕಾಯ್ದುಕೊಂಡರು. ಇಂಗ್ಲೆಂಡ್ ಅಂಕಗಳಿಸಲು ಸಾಧ್ಯವಾಗದೆ ಅಂತಿಮವಾಗಿ ಸೋಲೊಪ್ಪಿಕೊಂಡಿತು. ಪಂದ್ಯದಲ್ಲಿ ಮುನ್ಶಿ ಮತ್ತು ಸಬುಜ್ ತಲಾ 8 ಅಂಕಗಳೊಂದಿಗೆ ಜಯದಲ್ಲಿ ಮಹತ್ವದ ಪಾತ್ರವಹಿಸಿದರು.
ಪೋಲೆಂಡ್ ಮಣಿಸಿದ ಕೀನ್ಯಾ
ಇನ್ನು ದಿನದ ಎರಡನೇ ಪಂದ್ಯದಲ್ಲಿ ಕೀನ್ಯಾ ತಂಡ 54-48 ಅಂಕಗಳಿಂದ ಪೋಲೆಂಡ್ ಎದುರು ಜಯ ಸಾಧಿಸಿತು. ರೋಚಕ ಹೋರಾಟ ಕಂಡುಬಂದ ಪಂದ್ಯದಲ್ಲಿ ಎರಡೂ ತಂಡಗಳ ಆಟಗಾರರು ಉತ್ತಮ ಪ್ರದರ್ಶನ ತೋರಿದರು. ಮೊದಲಾರ್ಧದ ಅಂತ್ಯದಲ್ಲಿ ಕೀನ್ಯಾ 27-27 ಅಂಕಗಳಿಂದ ಪೋಲೆಂಡ್ ಎದುರು ಸಮಬಲ ಸಾಧಿಸಿತ್ತು. ದ್ವಿತೀಯಾರ್ಧದ ಕೊನೆಯಲ್ಲಿ ಕಂಡುಬಂದ ಎಡವಟ್ಟುಗಳಿಂದ ಪೋಲೆಂಡ್ ಸೋಲುಂಡಿತು.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.