
ದೋಹಾ(ಜ.08): ತೀವ್ರ ಕೌತುಕ ಕೆರಳಿಸಿದ್ದ ಕತಾರ್ ಓಪನ್ ಟೆನಿಸ್ ಪಂದ್ಯಾವಳಿಯಲ್ಲಿ ಸರ್ಬಿಯಾ ಆಟಗಾರ ಹಾಗೂ ವಿಶ್ವದ ಮಾಜಿ ನಂ.1 ಟೆನಿಸಿಗ ನೊವಾಕ್ ಜೊಕೊವಿಚ್ ಹೊಸ ಋತುವನ್ನು ಗೆಲುವಿನೊಂದಿಗೆ ಆರಂಭಿಸಿದರು.
ವಿಶ್ವದ ನಂ.1 ಆಟಗಾರ ಆ್ಯಂಡಿ ಮರ್ರೆ ವಿರುದ್ಧದ ಅಂತಿಮ ಸುತ್ತಿನ ಹಣಾಹಣಿಯಲ್ಲಿ ಬ್ರಿಟನ್ ಅಟಗಾರನನ್ನು 6-3, 5-7, 6-4 ಸೆಟ್‌ಗಳಿಂದ ಮಣಿಸಿದ ಜೊಕೊವಿಚ್, ಮತ್ತೊಮ್ಮೆ ಕತಾರ್ ಓಪನ್ ಅನ್ನು ಉಳಿಸಿಕೊಳ್ಳುವಲ್ಲಿ ಸಫಲವಾದರು.
ವಿಶ್ವದ ಇಬ್ಬರು ಪ್ರತಿಭಾವಂತ ಆಟಗಾರರ ಕಾದಾಟ ನೀಡುವ ರೋಚಕತೆಯ ಸವಿಯನ್ನು ಸವಿಯಲು ಕ್ರೀಡಾಂಗಣದಲ್ಲಿ ಕಿಕ್ಕಿರಿದು ತುಂಬಿದ್ದ ಕ್ರೀಡಾಪ್ರೇಮಿಗಳನ್ನು ಕಡೆಗೂ ನಿರಾಸೆಗೊಳಿಸದ ಆ್ಯಂಡಿ ಮರ್ರೆ ಮತ್ತು ನೊವಾಕ್ ಜೊಕೊವಿಚ್ ಪ್ರೇಕ್ಷಕರಿಗೆ ರಸದೌತಣ ನೀಡಿದರು. ಸರಿಸುಮಾರು ಮೂರು ತಾಸುಗಳವರೆಗೆ ನಡೆದ ಸೆಣಸಾಟದಲ್ಲಿ ಕೊನೆಗೂ ಜೊಕೊವಿಚ್ ಮೇಲುಗೈ ಮೆರೆದರು.
ಮೊದಲ ಸೆಟ್ ಅನ್ನು ಸುಲಭವಾಗಿಯೇ ಜಯಿಸಿದ ನೊವಾಕ್ ವಿರುದ್ಧ ಮರ್ರೆ ದ್ವಿತೀಯ ಸೆಟ್'ನಲ್ಲಿ ಪ್ರಬಲವಾಗಿ ತಿರುಗಿಬಿದ್ದರು. ಅದರೆ, ಎರಡನೇ ಸೆಟ್'ನಲ್ಲಿ ನಿರ್ಣಾಯಕ ಪಾಯಿಂಟ್ಸ್‌ಗಳನ್ನು ಹೆಕ್ಕಿದ ಮರ್ರೆ, ಜೊಕೊವಿಚ್'ಗೆ ತಿರುಗೇಟು ನೀಡಿ ಪಂದ್ಯದಲ್ಲಿ ಹಿಡಿತ ಸಾಧಿಸಿದರು. ಆದರೆ, ಮೂರನೇ ಸೆಟ್‌ನಲ್ಲಿ ಜೊಕೊವಿಚ್ ಮತ್ತೊಮ್ಮೆ ಆಕ್ರಮಣಕಾರಿಯಾದರು. ಅಷ್ಟೊತ್ತಿಗೆ ಸಾಕಷ್ಟು ಬಳಲಿದಂತೆ ಕಂಡುಬಂದ ಮರ್ರೆ, ಕೆಲವೊಂದು ಅನಗತ್ಯ ತಪ್ಪುಗಳನ್ನು ಎಸಗಿ ಸುಲಭವಾಗಿ ಪಾಯಿಂಟ್ಸ್‌ಗಳನ್ನು ಧಾರೆ ಎರೆದರು. ಪರಿಣಾಮ ಜೊಕೊವಿಚ್ ಕೈ ಮೇಲಾಗಿ ಪಂದ್ಯದಲ್ಲಿ ರೋಚಕ ಗೆಲುವು ಸಾಧಿಸಿದರಲ್ಲದೆ, ಇದರೊಂದಿಗೆ 209.665 ಡಾಲರ್'ಗಳನ್ನು ಬಹುಮಾನವಾಗಿ ಪಡೆದರು. ಅಂದಹಾಗೆ ಮರ್ರೆ ವಿರುದ್ಧದ ಈ ಗೆಲುವು ಜೊಕೊವಿಚ್'ಗೆ ವೃತ್ತಿಬದುಕಿನಲ್ಲಿ 25ನೆಯದು.
ಏತನ್ಮಧ್ಯೆ, ಈ ಕತಾರ್ ಓಪನ್ ಸೋಲಿನಿಂದಾಗಿ ಮರ್ರೆ ವಿಶ್ವ ಟೆನಿಸ್ ಶ್ರೇಯಾಂಕದಲ್ಲಿನ ತನ್ನ ಅಗ್ರಸ್ಥಾನವನ್ನೇನೂ ಕಳೆದುಕೊಂಡಿಲ್ಲ. ಸದ್ಯ, ಅವರು ಆಸ್ಟ್ರೇಲಿಯಾ ಓಪನ್ ಅನ್ನು ಗುರಿಯಾಗಿಸಿಕೊಂಡಿದ್ದಾರೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.