ಭರ್ಜರಿ ಬೇಟೆ - ವಿಶ್ವದಾಖಲೆಯೊಂದಿಗೆ ಸೌರಭ್‌ಗೆ ಚಿನ್ನ

By Web DeskFirst Published May 28, 2019, 11:34 AM IST
Highlights

ಪುರುಷರ 10 ಮೀ. ಏರ್‌ ಪಿಸ್ತೂಲ್‌ ಫೈನಲ್‌ನಲ್ಲಿ ಸೌರಭ್‌, 246.3 ಅಂಕಗಳೊಂದಿಗೆ ಚಿನ್ನ ಜಯಿಸಿದರು. ಇದರೊಂದಿಗೆ ತಮ್ಮ ಹೆಸರಿನಲ್ಲೇ ಇದ್ದ 245 ಅಂಕಗಳ ವಿಶ್ವ ದಾಖಲೆಯನ್ನು ಉತ್ತಮಗೊಳಿಸಿಕೊಂಡರು. ಇನ್ನು ಮಹಿಳೆಯರ ವಿಭಾಗದಲ್ಲಿ ಮತ್ತೋರ್ವ ಶೂಟರ್ ರಾಹಿ ಸರ್ನೊಬತ್‌ ಚಿನ್ನ ಗೆಲ್ಲುವುದರೊಂದಿಗೆ 2020ರ ಟೋಕಿಯೋ ವಿಶ್ವಕಪ್‌ಗೆ ಅರ್ಹತೆಗಿಟ್ಟಿಸಿಕೊಂಡರು.  

ಮ್ಯೂನಿಕ್‌(ಜರ್ಮನಿ): ಸೌರಭ್‌ ಚೌಧರಿ ಹಾಗೂ ರಾಹಿ ಸರ್ನೊಬತ್‌, ಇಲ್ಲಿ ನಡೆಯುತ್ತಿರುವ ಐಎಸ್‌ಎಸ್‌ಎಫ್‌ ಶೂಟಿಂಗ್‌ ವಿಶ್ವಕಪ್‌ನಲ್ಲಿ ಚಿನ್ನದ ಬೇಟೆಯಾಡಿದ್ದಾರೆ. ಇವರಿಬ್ಬರ ಆಕರ್ಷಕ ಪ್ರದರ್ಶನದೊಂದಿಗೆ ಭಾರತದ ಪದಕ ಖಾತೆಗೆ ಮತ್ತೆರಡು ಚಿನ್ನ ಸೇರ್ಪಡೆಗೊಂಡಿದ್ದು 3 ಪದಕಗಳೊಂದಿಗೆ ಭಾರತ ಪದಕ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ.

ಸೋಮವಾರ ನಡೆದ ಪುರುಷರ 10 ಮೀ. ಏರ್‌ ಪಿಸ್ತೂಲ್‌ ಫೈನಲ್‌ನಲ್ಲಿ ಸೌರಭ್‌, 246.3 ಅಂಕಗಳೊಂದಿಗೆ ಚಿನ್ನ ಜಯಿಸಿದರು. ಇದರೊಂದಿಗೆ ತಮ್ಮ ಹೆಸರಿನಲ್ಲೇ ಇದ್ದ 245 ಅಂಕಗಳ ವಿಶ್ವ ದಾಖಲೆಯನ್ನು ಉತ್ತಮಗೊಳಿಸಿಕೊಂಡರು. 10 ಮೀ. ಏರ್‌ ಪಿಸ್ತೂಲ್‌ನ ಹಿರಿಯ ಹಾಗೂ ಕಿರಿಯ ಎರಡೂ ವಿಭಾಗಗಳ ವಿಶ್ವ ದಾಖಲೆ 17 ವರ್ಷದ ಸೌರಭ್‌ ಹೆಸರಲ್ಲೇ ಇರುವುದು ವಿಶೇಷ. ಸೋಮವಾರ, ಬೆಳ್ಳಿ ಗೆದ್ದ ರಷ್ಯಾದ ಆರ್ಟೆಮ್‌ ಚೆರ್ನೊವ್ಸೊವ್‌ಗಿಂತ 2.5 ಅಂಕ ಅಂತರ ಕಾಯ್ದುಕೊಂಡಿದ್ದು, ಸೌರಭ್‌ ಗುರಿ ಎಷ್ಟು ನಿಖರವಾಗಿತ್ತು ಎನ್ನುವುದಕ್ಕೆ ಸಾಕ್ಷಿ. ಫೈನಲ್‌ ಪ್ರವೇಶಿಸಿದ್ದ ಮತ್ತಬ್ಬ ಭಾರತೀಯ ಶಾಹ್ಜಾರ್‌ ರಿಜ್ವಿ 5ನೇ ಸ್ಥಾನಕ್ಕೆ ತೃಪ್ತಿಪಟ್ಟರು.

ಫೆಬ್ರವರಿಯಲ್ಲಿ ನವದೆಹಲಿಯಲ್ಲಿ ನಡೆದಿದ್ದ ವಿಶ್ವಕಪ್‌ನಲ್ಲಿ ಚಿನ್ನ ಜಯಿಸಿದ್ದ ಸೌರಭ್‌, ಕಳೆದ ತಿಂಗಳು ಚೀನಾದ ಬೀಜಿಂಗ್‌ನಲ್ಲಿ ನಡೆದಿದ್ದ ವಿಶ್ವಕಪ್‌ನ ಮಿಶ್ರ ತಂಡ ವಿಭಾಗದಲ್ಲಿ ಮನು ಭಾಕರ್‌ ಜತೆ ಸೇರಿ ಚಿನ್ನ ಜಯಿಸಿದ್ದರು.

ರಾಹಿಗೆ ಸಿಹಿ, ಮನುಗೆ ಕಹಿ!: ಮಹಿಳೆಯರ 25 ಮೀ. ಪಿಸ್ತೂಲ್‌ ವಿಭಾಗದ ಫೈನಲ್‌ನಲ್ಲಿ 37 ಅಂಕ ಗಳಿಸಿದ ರಾಹಿ ಸರ್ನೊಬತ್‌ ಚಿನ್ನಕ್ಕೆ ಮುತ್ತಿಟ್ಟರು. ಇದಕ್ಕಿಂತ ಮುಖ್ಯವಾಗಿ 2020ರ ಟೋಕಿಯೋ ಒಲಿಂಪಿಕ್ಸ್‌ಗೆ ಅರ್ಹತೆ ಗಿಟ್ಟಿಸಿದರು. ಮುಂದಿನ ವರ್ಷದ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದ ಭಾರತದ 6ನೇ ಶೂಟರ್‌ ಎನ್ನುವ ಹಿರಿಮೆಗೆ ಅವರು ಪಾತ್ರರಾದರು. ಭಾರಿ ಪೈಪೋಟಿಯಿಂದ ಕೂಡಿದ್ದ ಫೈನಲ್‌ನಲ್ಲಿ 5ನೇ ಸುತ್ತಿನ ವರೆಗೂ ಭಾರತದ ಯುವ ಶೂಟರ್‌ ಮನು ಭಾಕರ್‌ ಮುನ್ನಡೆಯಲ್ಲಿದ್ದರು. ಆದರೆ 2ನೇ ಹಂತದ ಎಲಿಮಿನೇಷನ್‌ ವೇಳೆ ಅವರ ಪಿಸ್ತೂಲ್‌ ಜಾಮ್‌ ಆದ ಕಾರಣ, ಸ್ಪರ್ಧೆಯಿಂದ ಹೊರಬೀಳಬೇಕಾಯಿತು. ಉಕ್ರೇನ್‌ನ ಒಲೆನಾ ಕೊಸ್ಟೆವಿಚ್‌ರಿಂದ ಕಠಿಣ ಸ್ಪರ್ಧೆ ಎದುರಿಸಿದರೂ, 1 ಅಂಕದ ಅಂತರದಲ್ಲಿ ರಾಹಿ ಸ್ವರ್ಣ ಪದಕ ತಮ್ಮದಾಗಿಸಿಕೊಂಡರು.
 

click me!