ಭಾರತದ ಯುವ ಶೂಟರ್ ಮನು ಭಾಕರ್ 2020ರ ಟೋಕಿಯೋ ಒಲಿಂಪಿಕ್ಸ್‌ಗೆ ಅರ್ಹತೆಗಿಟ್ಟಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಇದರೊಂದಿಗೆ ಭಾರತದ 7 ಶೂಟರ್‌ಗಳು ಒಲಿಂಪಿಕ್ಸ್ ಟಿಕೆಟ್ ಗಿಟ್ಟಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
ಮ್ಯೂನಿಕ್(ಜರ್ಮನಿ): ಯುವ ಶೂಟರ್ ಮನು ಭಾಕರ್, ಇಲ್ಲಿ ನಡೆಯುತ್ತಿರುವ ಐಎಸ್‌ಎಸ್‌ಎಫ್ ಶೂಟಿಂಗ್ ವಿಶ್ವಕಪ್‌ನ ಮಹಿಳೆಯರ 10ಮೀ. ಏರ್ ಪಿಸ್ತೂಲ್ ಸ್ಪರ್ಧೆಯಲ್ಲಿ 4ನೇ ಸ್ಥಾನ ಪಡೆಯುವ ಮೂಲಕ 2020ರ ಟೋಕಿಯೋ ಒಲಿಂಪಿಕ್ಸ್‌ಗೆ ಅರ್ಹತೆ ಗಿಟ್ಟಿಸಿದ್ದಾರೆ.
ಭರ್ಜರಿ ಬೇಟೆ - ವಿಶ್ವದಾಖಲೆಯೊಂದಿಗೆ ಸೌರಭ್‌ಗೆ ಚಿನ್ನ
ಪದಕ ಜಯಿಸದೆ ಇದ್ದರೂ 17 ವರ್ಷದ ಮನು ಭಾಕರ್ 201.0 ಅಂಕಗಳಿಸಿ ಒಲಿಂಪಿಕ್ಸ್ ಸ್ಥಾನ ಖಚಿತಪಡಿಸಿಕೊಂಡರು. ಇದಕ್ಕೂ ಮುನ್ನ ನಡೆದಿದ್ದ ಅರ್ಹತಾ ಪಂದ್ಯಾವಳಿಗಳಲ್ಲಿ ಮನು ಒಲಿಂಪಿಕ್ಸ್‌ನಲ್ಲಿ ಸ್ಥಾನ ಪಡೆಯಲು ವಿಫಲರಾಗಿದ್ದರು. ಈವರೆಗೂ ಭಾರತದಿಂದ 2020ರ ಒಲಿಂಪಿಕ್ಸ್‌ಗೆ ಒಟ್ಟು 7 ಶೂಟರ್‌ಗಳು ಅರ್ಹತೆ ಪಡೆದಿದ್ದಾರೆ.
ಅರ್ಹತಾ ಸುತ್ತಿನಲ್ಲಿ ಮನು 582 ಅಂಕಗಳಿಸಿ 3ನೇ ಸ್ಥಾನದೊಂದಿಗೆ ಫೈನಲ್ ಪ್ರವೇಶಿಸಿದರು. ಇದೇ ಸ್ಪರ್ಧೆಯಲ್ಲಿ ಜೂನಿಯರ್ ವಿಶ್ವಕಪ್ ಪ್ರಶಸ್ತಿ ವಿಜೇತೆ ಯಶಸ್ವಿನಿ 22ನೇ ಸ್ಥಾನ ಹಾಗೂ ಹೀನಾ ಸಿಧು 45ನೇ ಸ್ಥಾನ ಪಡೆದು ಫೈನಲ್‌ಗೇರುವಲ್ಲಿ ವಿಫಲರಾದರು.