ಚೆನ್ನೈ ವಿರುದ್ಧ ಗೆದ್ದರೂ ಪಂಜಾಬ್ ಟೂರ್ನಿಯಿಂದ ಔಟ್!

By Web DeskFirst Published May 5, 2019, 7:28 PM IST
Highlights

ಚೆನ್ನೈ ಸೂಪರ್ ಕಿಂಗ್ಸ್ ವಿರುದ್ದದ ಐಪಿಎಲ್ ಲೀಗ್ ಪಂದ್ಯದ ಅಂತಿಮ ದಿನದ ಹೋರಾಟದಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ಗೆಲುವು ಸಾಧಿಸಿದೆ. ಪಂಜಾಬ್ ಗೆದ್ದರೂ ಪ್ಲೇ ಆಫ್ ಅವಕಾಶ ಸಿಗಲಿಲ್ಲ.  

ಮೊಹಾಲಿ(ಮೇ.05): ಕೆಎಲ್ ರಾಹುಲ್ ಸ್ಫೋಟಕ ಬ್ಯಾಟಿಂಗ್‌ನಿಂದ ಕಿಂಗ್ಸ್ ಇಲೆವೆನ್ ಪಂಜಾಬ್ ತನ್ನ ಅಂತಿಮ ಲೀಗ್ ಪಂದ್ಯದಲ್ಲಿ 6 ವಿಕೆಟ್  ಗೆಲುವು ಸಾಧಿಸಿದೆ. ಬಲಿಷ್ಠ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ದ ಗೆಲುವು ಸಾಧಿಸಿರುವ ಪಂಜಾಬ್ ಇದೀಗ 12 ಅಂಕ ಸಂಪಾದಿಸಿದೆ. ಆದರೆ ಸನ್‌ರೈಸರ್ಸ್ ಹೈದರಾಬಾದ್ ಹಾಗೂ ಕೆಕೆಆರ್ ತಂಡದ ಈಗಾಗಲೇ 12 ಅಂಕ ಸಂಪಾದಿಸಿದೆ. ಇಷ್ಟೇ ಅಲ್ಲ ರನ್‌ರೇಟ್ ಕೂಡ ಉತ್ತಮವಾಗಿದೆ. ಹೀಗಾಗಿ ಪಂಜಾಬ್ ತಂಡದ ಪ್ಲೇ ಆಫ್ ಕನಸು ನುಚ್ಚುನೂರಾಗಿದೆ.

ಗೆಲುವಿಗೆ 171 ರನ್ ಟಾರ್ಗೆಟ್ ಪಡೆದ ಕಿಂಗ್ಸ್ ಇಲೆವೆನ್ ಪಂಜಾಬ್‌ಗೆ ಕೆಎಲ್ ರಾಹುಲ್ ಹಾಗೂ ಕ್ರಿಸ್ ಗೇಲ್ ಸ್ಫೋಟಕ ಆರಂಭ ನೀಡಿದರು. ಇವರಿಬ್ಬರ ಜೊತೆಯಾಟ ಚೆನ್ನೈ ತಂಡಕ್ಕೆ ನುಂಗಲಾರದ ತುತ್ತಾಗಿ ಪರಿಣಮಿಸಿತು. ರಾಹುಲ್ ಬೌಂಡರಿ, ಸಿಕ್ಸರ್ ಮೂಲಕ ಅಬ್ಬರಿಸಿದರೆ, ಗೇಲ್ ನಿಧಾನಗತಿಯಲ್ಲಿ ಬ್ಯಾಟ್ ಬೀಸಿದರು.

ಅದ್ಬುತ ಪ್ರದರ್ಶನ ನೀಡಿದ ರಾಹುಲ್ ಹಾಫ್ ಸೆಂಚುರಿ ಸಿಡಿಸಿದರು. ರಾಹುಲ್ 36 ಎಸೆತದಲ್ಲಿ 7 ಬೌಂಡರಿ ಹಾಗೂ 5 ಸಿಕ್ಸರ್ ಮೂಲಕ 71 ರನ್ ಸಿಡಿಸಿ ಔಟಾದರು. ರಾಹುಲ್ ಬೆನ್ನಲ್ಲೇ ಗೇಲ್ ವಿಕೆಟ್ ಕೈಚೆಲ್ಲಿದರು. ಗೇಲ್ 28 ರನ್ ಸಿಡಿಸಿ ಔಟಾದರು. ಮಯಾಂಕ್ ಅಗರ್ವಾಲ್ ಕೇವಲ 8 ರನ್ ಸಿಡಿಸಿ ಔಟಾದರು.

ಯಾವ ಹಂತದಲ್ಲೂ ಪಂಜಾಬ್ ಸಂಕಷ್ಟಕ್ಕೆ ಸಿಲುಕಲಿಲ್ಲ. ನಿಕೋಲಸ್ ಪೂರನ್ 36 ರನ್ ಚಚ್ಚಿದರು. ಈ ಮೂಲಕ ಪಂಜಾಬ್ ಗೆಲುವಿನ ಹಾದಿ ಸುಗಮವಾಯಿತು. ಮನ್ದೀಪ್ ಸಿಂಗ್ ಹಾಗೂ ಸ್ಯಾಮ್ ಕುರ್ರನ್ ಅಜೇಯ ಬ್ಯಾಟಿಂಗ್‌ನಿಂದ ಪಂಜಾಬ್ 2 ಓವರ್ ಬಾಕಿ ಇರುವಂತೆ 6 ವಿಕೆಟ್ ಗೆಲುವು ಸಾಧಿಸಿತು. ಪಂದ್ಯ ಗೆದ್ದರೂ ಪಂಜಾಬ್ ಟೂರ್ನಿಯಿಂದ ಹೊರಬಿತ್ತು.

click me!