IPL 12 ಫೈನಲ್ ಟಿಕೆಟ್’ಗೆ ಚೆನ್ನೈ-ಮುಂಬೈ ಫೈಟ್

By Web DeskFirst Published May 7, 2019, 11:18 AM IST
Highlights

ತಲಾ ಮೂರು ಬಾರಿಯ ಐಪಿಎಲ್ ಚಾಂಪಿಯನ್ಸ್’ಗಳಾದ ಮುಂಬೈ ಇಂಡಿಯನ್ಸ್-ಚೆನ್ನೈ ಸೂಪರ್’ಕಿಂಗ್ಸ್ ಮತ್ತೊಮ್ಮೆ ಫೈನಲ್ ಪ್ರವೇಶಿಸುವ ಹೊಸ್ತಿಲಲ್ಲಿವೆ. ಚೆಪಾಕ್’ನಲ್ಲಿ ನಡೆಯಲಿರುವ ಪಂದ್ಯದಲ್ಲಿ ಗೆದ್ದ ತಂಡ ನೇರವಾಗಿ ಫೈನಲ್ ಪ್ರವೇಶಿಸಲಿದೆ. 

ಚೆನ್ನೈ(ಮೇ.07): ಐಪಿಎಲ್ 12ನೇ ಆವೃತ್ತಿ ರೋಚಕ ಹಂತಕ್ಕೇರಿದೆ. ಈ ಹಂತಕ್ಕೇರಿರುವ ತಂಡಗಳು ಸ್ವಲ್ಪ ಎಡವಟ್ಟು ಮಾಡಿದರೂ, ಟ್ರೋಫಿ ಕೈ ಜಾರಲಿದೆ. ಮಂಗಳವಾರದಿಂದ ಪ್ಲೇ-ಆಫ್ ಹಂತದ ಪಂದ್ಯಗಳು ಶುರುವಾಗಲಿವೆ. 

ಇಲ್ಲಿನ ಚೆಪಾಕ್ ಕ್ರೀಡಾಂಗಣದಲ್ಲಿ ನಡೆಯಲಿರುವ ಕ್ವಾಲಿಫೈಯರ್ 1ರ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಮಾಜಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ಸೆಣಸಲಿವೆ. ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಪಡೆದ ಮುಂಬೈ ಹಾಗೂ 2ನೇ ಸ್ಥಾನ ಪಡೆದ ಚೆನ್ನೈ ತಂಡಗಳು ಕ್ವಾಲಿಫೈಯರ್ 1ರಲ್ಲಿ ಆಡುವ ಅವಕಾಶ ಗಿಟ್ಟಿಸಿವೆ. ಈ ಪಂದ್ಯದಲ್ಲಿ ಗೆದ್ದ ತಂಡ ನೇರವಾಗಿ ಫೈನಲ್ ಪ್ರವೇಶಿಸಿದರೆ, ಸೋತ ತಂಡಕ್ಕೆ ಪ್ರಶಸ್ತಿ ಸುತ್ತಿಗೇರಲು ಮತ್ತೊಂದು ಅವಕಾಶ ದೊರೆಯಲಿದೆ. ಟೂರ್ನಿಯ ಬಲಿಷ್ಠ ತಂಡಗಳೆನಿಸಿರುವ ಚೆನ್ನೈ ಹಾಗೂ ಮುಂಬೈ ತಂಡಗಳ ಕಾದಾಟವನ್ನು ಸವಿಯುವ ಅವಕಾಶ ಚೆನ್ನೈ ಅಭಿಮಾನಿಗಳಿಗೆ ಸಿಗಲಿದೆ. ಒಟ್ಟಾರೆ 11 ಆವೃತ್ತಿಗಳಲ್ಲಿ ಚೆನ್ನೈ ಹಾಗೂ ಮುಂಬೈ ತಂಡಗಳು ತಲಾ 3 ಬಾರಿ ಪ್ರಶಸ್ತಿ ಜಯಿಸಿವೆ.

ಟೂರ್ನಿಯ ಆರಂಭದಲ್ಲಿ ಪ್ರಭಾವಿ ಆಟದಿಂದ ಗಮನಸೆಳೆದ ಚೆನ್ನೈ ತಂಡ, ಮೊಹಾಲಿಯಲ್ಲಿ ನಡೆದ ಲೀಗ್ ಹಂತದ ತನ್ನ ಕೊನೆಯ ಪಂದ್ಯದಲ್ಲಿ ಪಂಜಾಬ್ ವಿರುದ್ಧ 6 ವಿಕೆಟ್ ಸೋಲು ಕಂಡಿತು. ಹೀಗಾಗಿ ನೆಟ್ ರನ್‌ರೇಟ್ ಕಡಿತಗೊಂಡ ಪರಿಣಾಮ ಲೀಗ್‌ನ ಕೊನೆಯ ಪಂದ್ಯದಲ್ಲಿ ಕೆಕೆಆರ್ ವಿರುದ್ಧ 9 ವಿಕೆಟ್ ಗೆಲುವು ದಾಖಲಿಸಿದ ಮುಂಬೈ 18 ಅಂಕಗಳಿಸಿ ನೆಟ್ ರನ್ ರೇಟ್ ಆಧಾರದಲ್ಲಿ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿತು.
ಈ ಆವೃತ್ತಿಯಲ್ಲಿ ಚೆನ್ನೈ ತಂಡ ತವರಿನಲ್ಲಿ ಅದ್ಭುತ ದಾಖಲೆಯನ್ನು ಹೊಂದಿದೆ. ಮುಂಬೈ ತಂಡ ಒಟ್ಟಾರೆ ಐಪಿಎಲ್ ಟೂರ್ನಿಯಲ್ಲಿ ಚೆನ್ನೈಗಿಂತ ಹೆಚ್ಚಿನ ಜಯ ಸಾಧಿಸಿದ್ದು ಪ್ರಾಬಲ್ಯ ಸಾಧಿಸಿದೆ. 

ಹೀಗಿದೆ ನೋಡಿ ಕ್ವಾಲಿಫೈಯರ್ ವೇಳಾಪಟ್ಟಿ:

ಮಂಗಳವಾರ ಕ್ವಾಲಿಫೈಯರ್ 1ರಲ್ಲಿ ನಡೆಯುವ ಪಂದ್ಯದಲ್ಲಿ ಗೆದ್ದ ತಂಡ ನೇರವಾಗಿ ಫೈನಲ್ ಪ್ರವೇಶಿಸಲಿದೆ. ಸೋತ ತಂಡಕ್ಕೆ ಮತ್ತೊಂದು ಅವಕಾಶ ಲಭಿಸಲಿದೆ. ಎಲಿಮಿನೇಟರ್ ಪಂದ್ಯದಲ್ಲಿ ಗೆದ್ದ ತಂಡದೊಟ್ಟಿಗೆ ಸೆಣಸಲಿದೆ. ಎಲಿಮಿನೇಟರ್‌ನಲ್ಲಿ ಸೋತ ತಂಡ ಟೂರ್ನಿಯಿಂದ ಹೊರಬೀಳಲಿದೆ. ಶುಕ್ರವಾರ (ಮೇ.10) ನಡೆಯಲಿರುವ ಕ್ವಾಲಿಫೈಯರ್ 2ರಲ್ಲಿ ಎಲಿಮಿನೇಟರ್‌ನಲ್ಲಿ ಗೆದ್ದ ತಂಡ ಹಾಗೂ ಕ್ವಾಲಿಫೈಯರ್ 1ರಲ್ಲಿ ಸೋತ ತಂಡ ಎದುರಾಗಲಿದೆ. ಈ ಪಂದ್ಯದಲ್ಲಿ ಗೆದ್ದ ತಂಡ ಫೈನಲ್‌ನಲ್ಲಿ, ಕ್ವಾಲಿಫೈಯರ್ 1ರಲ್ಲಿ ಗೆದ್ದ ತಂಡವನ್ನು ಎದುರಿಸಲಿದೆ.

ಪಿಚ್ ರಿಪೋರ್ಟ್:

ಚೆಪಾಕ್ ಕ್ರೀಡಾಂಗಣದ ಪಿಚ್ ಸ್ಪಿನ್ನರ್‌ಗಳ ಪಾಲಿನ ಸ್ವರ್ಗ ಎನಿಸಿದೆ. ಇಲ್ಲಿ ಸ್ಪಿನ್ ಬೌಲರ್’ಗಳ ಪಾತ್ರ ನಿರ್ಣಾಯಕವಾಗಿದೆ. ಇಲ್ಲಿ ನಡೆದಿರುವ ಕಳೆದ 7 ಪಂದ್ಯಗಳಲ್ಲಿ ಒಂದರಲ್ಲೂ 180ಕ್ಕಿಂತ ಹೆಚ್ಚಿನ ಮೊತ್ತ ದಾಖಲಾಗಿಲ್ಲ. 2ನೇ ಬ್ಯಾಟಿಂಗ್ ಮಾಡುವ ತಂಡಕ್ಕೆ ಹೆಚ್ಚಿನ ಲಾಭ ದೊರೆಯಲಿದೆ. ಟಾಸ್ ಪ್ರಮುಖ ಪಾತ್ರ ವಹಿಸಲಿದೆ.

ಸಂಭಾವ್ಯ ತಂಡ ಹೀಗಿದೆ: 

ಚೆನ್ನೈ ಸೂಪರ್’ಕಿಂಗ್ಸ್: ಡುಪ್ಲೆಸಿ, ವಾಟ್ಸನ್, ರೈನಾ, ಧೋನಿ (ನಾಯಕ), ರಾಯುಡು, ಮುರಳಿ ವಿಜಯ್, ಬ್ರಾವೋ, ಜಡೇಜಾ, ಹರ್ಭಜನ್, ದೀಪಕ್, ತಾಹಿರ್

ಮುಂಬೈ ಇಂಡಿಯನ್ಸ್: ಡಿಕಾಕ್, ರೋಹಿತ್ (ನಾಯಕ), ಸೂರ್ಯ, ಇಶಾನ್, ಹಾರ್ದಿಕ್, ಕೃನಾಲ್, ಪೊಲ್ಲಾರ್ಡ್, ಮೆಕ್ಲೆನಾಘನ್, ರಾಹುಲ್, ಬುಮ್ರಾ, ಮಾಲಿಂಗ
 

click me!