ಈಡನ್’ನಲ್ಲಿಂದು KKRಗೆ ರಾಯಲ್ ಚಾಲೆಂಜ್

By Web DeskFirst Published Apr 19, 2019, 12:20 PM IST
Highlights

ಉಳಿದಿರುವ 6 ಪಂದ್ಯಗಳಲ್ಲಿ ಆರ್‌ಸಿಬಿ ಗೆದ್ದರೂ, ಪ್ಲೇ-ಆಫ್‌ಗೇರುವುದು ಕಷ್ಟ ಸಾಧ್ಯ. ಆದರೆ ಆರ್‌ಸಿಬಿ ಗೆಲುವು ಇನ್ನುಳಿದ ತಂಡಗಳ ಪ್ಲೇ-ಆಫ್‌ ಲೆಕ್ಕಾಚಾರವನ್ನು ತಲೆಕೆಳಗು ಮಾಡುವ ಸಾಧ್ಯತೆ ಇದೆ. ಹೀಗಾಗಿ ಪಂದ್ಯ ರೋಚಕತೆಯನ್ನು ಹುಟ್ಟುಹಾಕಿದೆ.

ಕೋಲ್ಕತಾ[ಏ.19]: 8 ಪಂದ್ಯಗಳಲ್ಲಿ 7ರಲ್ಲಿ ಸೋತು ಪ್ಲೇ-ಆಫ್‌ನಿಂದ ಬಹುತೇಕ ಹೊರಬಿದ್ದಿರುವ ರಾಯಲ್‌ ಚಾಲೆಂಜ​ರ್ಸ್ ಬೆಂಗಳೂರು ತಂಡ, ಶುಕ್ರವಾರ ಇಲ್ಲಿನ ಈಡನ್‌ ಗಾರ್ಡನ್ಸ್‌ ಮೈದಾನದಲ್ಲಿ ಕೋಲ್ಕತಾ ನೈಟ್‌ರೈಡರ್ಸ್ ವಿರುದ್ಧ ಸೆಣಸಲಿದೆ. 
ಉಳಿದಿರುವ 6 ಪಂದ್ಯಗಳಲ್ಲಿ ಆರ್‌ಸಿಬಿ ಗೆದ್ದರೂ, ಪ್ಲೇ-ಆಫ್‌ಗೇರುವುದು ಕಷ್ಟ ಸಾಧ್ಯ. ಆದರೆ ಆರ್‌ಸಿಬಿ ಗೆಲುವು ಇನ್ನುಳಿದ ತಂಡಗಳ ಪ್ಲೇ-ಆಫ್‌ ಲೆಕ್ಕಾಚಾರವನ್ನು ತಲೆಕೆಳಗು ಮಾಡುವ ಸಾಧ್ಯತೆ ಇದೆ.

ಉದಾಹರಣೆಗೆ ಹ್ಯಾಟ್ರಿಕ್‌ ಸೋಲಿನಿಂದಾಗಿ ಕೆಕೆಆರ್‌ 2ನೇ ಸ್ಥಾನದಿಂದ 6ನೇ ಸ್ಥಾನಕ್ಕೆ ಕುಸಿದಿದೆ. ಉಳಿದಿರುವ 6 ಪಂದ್ಯಗಳಲ್ಲಿ ಕನಿಷ್ಠ 4ರಲ್ಲಿ ಗೆದ್ದರಷ್ಟೇ ಕೆಕೆಆರ್‌ ಪ್ಲೇ-ಆಫ್‌ಗೇರಲು ಸಾಧ್ಯ. ಆತ್ಮವಿಶ್ವಾಸದ ಕೊರತೆ ಎದುರಿಸುತ್ತಿರುವ ದಿನೇಶ್‌ ಕಾರ್ತಿಕ್‌ ಪಡೆ, ಆರ್‌ಸಿಬಿ ವಿರುದ್ಧದ ಪಂದ್ಯದಲ್ಲಿ ಸೋತರೆ, ಪ್ಲೇ-ಆಫ್‌ ಲೆಕ್ಕಾಚಾರ ಮತ್ತಷ್ಟು ಜಟಿಲಗೊಳ್ಳಲಿದೆ. ಆರ್‌ಸಿಬಿ ಗೆಲುವು ಮತ್ತಷ್ಟು ತಂಡಗಳಿಗೆ ಸಮಸ್ಯೆಯಾಗಲೂಬಹುದು.

ರಸೆಲ್‌ ಹೊರಗುಳಿಯುವ ಭೀತಿ: ಒಂದೆಡೆ ಸತತ ಸೋಲು ಕೆಕೆಆರ್‌ ತಂಡದ ಆಡಳಿತದಲ್ಲಿ ಗೊಂದಲ ಸೃಷ್ಟಿಸಿದ್ದರೆ, ಬುಧವಾರ ಅಭ್ಯಾಸದ ವೇಳೆ ಭುಜದ ಗಾಯಕ್ಕೆ ತುತ್ತಾದ ತಂಡದ ಟ್ರಂಪ್‌ಕಾರ್ಡ್‌ ಆ್ಯಂಡ್ರೆ ರಸೆಲ್‌ ಆರ್‌ಸಿಬಿ ವಿರುದ್ಧದ ಪಂದ್ಯಕ್ಕೆ ಅಲಭ್ಯರಾಗುವ ಸಾಧ್ಯತೆ ಇದೆ. ಈ ಆವೃತ್ತಿಯ ಮೊದಲ ಮುಖಾಮುಖಿಯಲ್ಲಿ ಆರ್‌ಸಿಬಿ ನೀಡಿದ್ದ 206 ರನ್‌ ಗುರಿಯನ್ನು ಕೆಕೆಆರ್‌ ಯಶಸ್ಸಿ ಬೆನ್ನತ್ತಿ ಗೆಲುವು ಸಾಧಿಸಲು ರಸೆಲ್‌ ನಿರ್ಣಾಯಕ ಪಾತ್ರ ವಹಿಸಿದ್ದರು. 13 ಎಸೆತಗಳಲ್ಲಿ 48 ರನ್‌ ಚಚ್ಚಿ ಆರ್‌ಸಿಬಿಯನ್ನು ಬೆಚ್ಚಿ ಬೀಳಿಸಿದ್ದರು. ವಿಂಡೀಸ್‌ ದೈತ್ಯನ ಮೇಲೆ ಕೆಕೆಆರ್‌ ಅತಿಯಾಗಿ ಅವಲಂಬಿತಗೊಂಡಿದೆ ಎನ್ನುವುದು ಪದೇ ಪದೇ ಸಾಬೀತಾಗುತ್ತಿದೆ. ರಸೆಲ್‌ ಹೊರಗುಳಿದರೆ ಸುನಿಲ್‌ ನರೈನ್‌, ಕ್ರಿಸ್‌ ಲಿನ್‌, ರಾಬಿನ್‌ ಉತ್ತಪ್ಪ, ಶುಭ್‌ಮನ್‌ ಗಿಲ್‌ ಮೇಲೆ ಹೆಚ್ಚಿನ ಒತ್ತಡ ಬೀಳಲಿದೆ.

ವಿಶ್ವಕಪ್‌ ತಂಡದಲ್ಲಿ ಸ್ಥಾನ ಪಡೆದಿರುವ ದಿನೇಶ್‌ ಕಾರ್ತಿಕ್‌, ಇಂಗ್ಲೆಂಡ್‌ಗೆ ವಿಮಾನ ಹತ್ತುವ ಮೊದಲು ಲಯ ಕಂಡುಕೊಳ್ಳಲು ಎದುರು ನೋಡುತ್ತಿದ್ದಾರೆ.

ಆರ್‌ಸಿಬಿಗೆ ಸ್ಟೈನ್‌ ಬಲ: ವಿರಾಟ್‌ ಕೊಹ್ಲಿ ಹಾಗೂ ಎಬಿ ಡಿವಿಲಿಯ​ರ್ಸ್ ಇಬ್ಬರನ್ನೇ ನೆಚ್ಚಿಕೊಂಡಿದ್ದ ಆರ್‌ಸಿಬಿಗೆ ಈ ಪಂದ್ಯದಿಂದ ದ.ಆಫ್ರಿಕಾ ವೇಗಿ ಡೇಲ್‌ ಸ್ಟೈನ್‌ ಬಲವೂ ಸಿಗಲಿದೆ. ತಂಡ ಕೂಡಿಕೊಂಡಿರುವ ಸ್ಟೈನ್‌, 2 ವರ್ಷಗಳ ಬಳಿಕ ಐಪಿಎಲ್‌ನಲ್ಲಿ ಆಡಲು ಕಾತರಿಸುತ್ತಿದ್ದಾರೆ. ಈಡನ್‌ ಗಾರ್ಡನ್ಸ್‌ನಲ್ಲಿ ಸ್ಪಿನ್ನರ್‌ಗಳ ಪಾತ್ರ ಪ್ರಮುಖವೆನಿಸಲಿದ್ದು, ಭಾರತ ವಿಶ್ವಕಪ್‌ ತಂಡದಲ್ಲಿರುವ ಮುಂಚೂಣಿ ಸ್ಪಿನ್ನರ್‌ಗಳಾದ ಯಜುವೇಂದ್ರ ಚಹಲ್‌ ಹಾಗೂ ಕುಲ್ದೀಪ್‌ ಯಾದವ್‌ ನಡುವಿನ ಪೈಪೋಟಿ ಎಲ್ಲರ ಕುತೂಹಲ ಹೆಚ್ಚಿಸಿದೆ.

ಪಿಚ್‌ ರಿಪೋರ್ಟ್‌

ಈಡನ್‌ ಗಾರ್ಡನ್ಸ್‌ ಪಿಚ್‌ ಬ್ಯಾಟಿಂಗ್‌ ಸ್ನೇಹಿಯಾಗಿದ್ದು, ಇಲ್ಲಿ ದೊಡ್ಡ ಮೊತ್ತ ದಾಖಲಾಗುವ ಸಾಧ್ಯತೆ ಹೆಚ್ಚು. ನಿಧಾನಗತಿಯ ಬೌಲಿಂಗ್‌ಗೆ ನೆರವು ಸಿಗಲಿದೆ. ಮೊದಲು ಬ್ಯಾಟ್‌ ಮಾಡುವ ತಂಡ 190ರಿಂದ 200 ರನ್‌ ಗಳಿಸಿದರಷ್ಟೇ ಗೆಲ್ಲುವ ಸಾಧ್ಯತೆ ಹೆಚ್ಚಿರಲಿದೆ. 2ನೇ ಬ್ಯಾಟಿಂಗ್‌ ಮಾಡುವ ತಂಡಕ್ಕೆ ಲಾಭ ಹೆಚ್ಚು.

ಒಟ್ಟು ಮುಖಾಮುಖಿ: 23

ಆರ್‌ಸಿಬಿ: 09

ಕೆಕೆಆರ್‌: 14

ಸಂಭವನೀಯ ಆಟಗಾರರ ಪಟ್ಟಿ

ಆರ್‌ಸಿಬಿ: ವಿರಾಟ್‌ ಕೊಹ್ಲಿ(ನಾಯಕ), ಪಾರ್ಥೀವ್‌ ಪಟೇಲ್‌, ಎಬಿ ಡಿವಿಲಿಯ​ರ್‍ಸ್, ಮೋಯಿನ್‌ ಅಲಿ, ಮಾರ್ಕಸ್‌ ಸ್ಟೋಯ್ನಿಸ್‌, ಅಕ್‌್ಷದೀಪ್‌ ನಾಥ್‌, ಪವನ್‌ ನೇಗಿ, ಉಮೇಶ್‌ ಯಾದವ್‌, ಡೇಲ್‌ ಸ್ಟೈನ್‌, ಯಜುವೇಂದ್ರ ಚಹಲ್‌, ನವ್‌ದೀಪ್‌ ಸೈನಿ.

ಕೆಕೆಆರ್‌: ಕ್ರಿಸ್‌ ಲಿನ್‌, ಸುನಿಲ್‌ ನರೈನ್‌, ನಿತೀಶ್‌ ರಾಣಾ, ರಾಬಿನ್‌ ಉತ್ತಪ್ಪ, ದಿನೇಶ್‌ ಕಾರ್ತಿಕ್‌ (ನಾಯಕ), ಆ್ಯಂಡ್ರೆ ರಸೆಲ್‌, ಶುಭ್‌ಮನ್‌ ಗಿಲ್‌, ಪೀಯೂಷ್‌ ಚಾವ್ಲಾ, ಕುಲ್ದೀಪ್‌ ಯಾದವ್‌, ಪ್ರಸಿದ್ಧ್ ಕೃಷ್ಣ, ಹ್ಯಾರಿ ಗರ್ನಿ.

ಸ್ಥಳ: ಕೋಲ್ಕತಾ
ಪಂದ್ಯ ಆರಂಭ: ರಾತ್ರಿ 8ಕ್ಕೆ
ನೇರ ಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್ 1

click me!