ರಾಜಸ್ಥಾನಕ್ಕೆ ಮಾಡು ಇಲ್ಲವೇ ಮಡಿ ಪಂದ್ಯ!

By Web DeskFirst Published May 4, 2019, 11:50 AM IST
Highlights

ತಾರಾ ಆಟಗಾರರ ಅನುಪಸ್ಥಿತಿಯಲ್ಲಿ ಕಣಕ್ಕಿಳಿಯಲಿರುವ ರಾಜಸ್ಥಾನ, ಈ ಪಂದ್ಯ ಗೆದ್ದರಷ್ಟೇ ಪ್ಲೇ-ಆಫ್‌ ಆಸೆ ಜೀವಂತವಾಗಿರಿಸಿಕೊಳ್ಳಲು ಹೋರಾಡಿದರೆ, ಡೆಲ್ಲಿ ಈ ಪಂದ್ಯವನ್ನು ಗೆದ್ದು ಟಾಪ್ 2 ಪಟ್ಟಿಯಲ್ಲಿ ಸ್ಥಾನ ಪಡೆಯಲು ಯತ್ನಿಸುತ್ತಿದೆ. 

ನವದೆಹಲಿ[ಮೇ.04]: ಪ್ಲೇ-ಆಫ್‌ನಲ್ಲಿ ಸ್ಥಾನ ಖಚಿತಪಡಿಸಿಕೊಂಡಿರುವ ಡೆಲ್ಲಿ ಕ್ಯಾಪಿಟಲ್ಸ್‌, ಶನಿವಾರ ಇಲ್ಲಿನ ಫಿರೋಜ್‌ ಶಾ ಕೋಟ್ಲಾ ಮೈದಾನದಲ್ಲಿ ರಾಜಸ್ಥಾನ ರಾಯಲ್ಸ್‌ ವಿರುದ್ಧ ದೊಡ್ಡ ಗೆಲುವು ಸಾಧಿಸುವ ಮೂಲಕ ಅಂಕಪಟ್ಟಿಯಲ್ಲಿ ಮತ್ತೆ 2ನೇ ಸ್ಥಾನಕ್ಕೇರಲು ಕಾತರಿಸುತ್ತಿದೆ. ಮತ್ತೊಂದೆಡೆ ತಾರಾ ಆಟಗಾರರ ಅನುಪಸ್ಥಿತಿಯಲ್ಲಿ ಕಣಕ್ಕಿಳಿಯಲಿರುವ ರಾಜಸ್ಥಾನ, ಈ ಪಂದ್ಯ ಗೆದ್ದರಷ್ಟೇ ಪ್ಲೇ-ಆಫ್‌ ಆಸೆ ಜೀವಂತವಾಗಿ ಉಳಿಯಲಿದೆ.

ರಾಯಲ್ಸ್‌ನ ತಂಡವನ್ನು ಮುನ್ನಡೆಸುತ್ತಿದ್ದ ಸ್ಟೀವ್‌ ಸ್ಮಿತ್‌, ವಿಶ್ವಕಪ್‌ ಶಿಬಿರಕ್ಕಾಗಿ ತವರಿಗೆ ವಾಪಸಾಗಿದ್ದಾರೆ. ಟೂರ್ನಿ ಮಧ್ಯೆ ನಾಯಕತ್ವ ಕಳೆದುಕೊಂಡಿದ್ದ ಅಜಿಂಕ್ಯ ರಹಾನೆ, ಮತ್ತೊಮ್ಮೆ ನಾಯಕತ್ವದ ಚುಕ್ಕಾಣಿ ಹಿಡಿಯಲಿದ್ದಾರೆ. ಕಳೆದ ಪಂದ್ಯಕ್ಕೇ ಜೋಪ್ರಾ ಆರ್ಚರ್‌, ಬೆನ್‌ ಸ್ಟೋಕ್ಸ್‌ ಸೇವೆ ಲಭ್ಯವಾಗಿರಲಿಲ್ಲ. ದೇಸಿ ತಾರೆಯರನ್ನು ನೆಚ್ಚಿಕೊಂಡು ರಾಯಲ್ಸ್‌ ಅದೃಷ್ಟ ಪರೀಕ್ಷೆಗಿಳಿಯಲಿದೆ.

ಮತ್ತೊಂದೆಡೆ ಚೆನ್ನೈ ವಿರುದ್ಧದ ಹೀನಾಯ ಸೋಲು, ಪ್ಲೇ-ಆಫ್‌ಗೂ ಮುನ್ನ ಡೆಲ್ಲಿ ತಂಡದ ಕಣ್ತೆರೆಸಿದೆ. ಈ ಆವೃತ್ತಿಯ ಗರಿಷ್ಠ ವಿಕೆಟ್‌ ಸರದಾರ ಕಗಿಸೋ ರಬಾಡ ಬೆನ್ನು ನೋವಿನ ಕಾರಣ, ತವರಿಗೆ ಹಿಂದಿರುಗಿದ್ದಾರೆ. ರಬಾಡ ಇಲ್ಲದ ಬೌಲಿಂಗ್‌ ಪಡೆ ರಾಯಲ್ಸ್‌ ವಿರುದ್ಧ ಯಶಸ್ಸು ಸಾಧಿಸಲಿದೆಯೇ ಎನ್ನುವ ಕುತೂಹಲ ಒಂದು ಕಡೆಯಾದರೆ, ಮತ್ತೊಂದೆಡೆ ತವರಿನಲ್ಲಿ ತಂಡದ ಸಾಧಾರಣ ಪ್ರದರ್ಶನ ಅಭಿಮಾನಿಗಳಲ್ಲಿ ಆತಂಕ ಮೂಡಿಸಿದೆ.

ಪಿಚ್‌ ರಿಪೋರ್ಟ್‌

ಕೋಟ್ಲಾ ಪಿಚ್‌ನಲ್ಲಿ ಮೊದಲು ಫೀಲ್ಡ್‌ ಮಾಡುವ ತಂಡಕ್ಕೆ ಲಾಭ ಹೆಚ್ಚು. ಮೊದಲು ಬ್ಯಾಟ್‌ ಮಾಡುವ ತಂಡ 190ಕ್ಕಿಂತ ಹೆಚ್ಚಿನ ಮೊತ್ತ ದಾಖಲಿಸಿದರೆ ರಕ್ಷಿಸಿಕೊಳ್ಳುವ ಸಾಧ್ಯತೆ ಹೆಚ್ಚಿರಲಿದೆ. ಈ ಆವೃತ್ತಿಯಲ್ಲಿ ಇಲ್ಲಿ ನಡೆದಿರುವ 6 ಪಂದ್ಯಗಳಲ್ಲಿ ಒಮ್ಮೆಯೂ 200ಕ್ಕಿಂತ ಹೆಚ್ಚು ಮೊತ್ತ ದಾಖಲಾಗಿಲ್ಲ. ಸ್ಪಿನ್ನರ್‌ಗಳಿಗೆ ಪಿಚ್‌ ಹೆಚ್ಚಿನ ನೆರವು ನೀಡಲಿದೆ.


ಒಟ್ಟು ಮುಖಾಮುಖಿ: 19

ಡೆಲ್ಲಿ: 08

ರಾಜಸ್ಥಾನ: 11

ಸಂಭವನೀಯ ಆಟಗಾರರ ಪಟ್ಟಿ

ಡೆಲ್ಲಿ: ಪೃಥ್ವಿ, ಧವನ್‌, ಶ್ರೇಯಸ್‌ (ನಾಯಕ), ರಿಷಭ್‌ ಪಂತ್‌, ಇನ್‌ಗ್ರಾಂ, ಅಕ್ಷರ್‌, ರುದರ್‌ಫೋರ್ಡ್‌, ಮೋರಿಸ್‌, ಸುಚಿತ್‌, ಮಿಶ್ರಾ, ಟ್ರೆಂಟ್‌ ಬೌಲ್ಟ್‌ .

ರಾಜಸ್ಥಾನ: ಸ್ಯಾಮ್ಸನ್‌, ಲಿವಿಂಗ್‌ಸ್ಟೋನ್‌, ರಹಾನೆ (ನಾಯಕ), ಟರ್ನರ್‌, ರಿಯಾನ್‌, ಲಾಮ್ರೊರ್‌, ಬಿನ್ನಿ, ಶ್ರೇಯಸ್‌, ಉನಾದ್ಕತ್‌, ಆ್ಯರೋನ್‌, ಥಾಮಸ್‌.

ಸ್ಥಳ: ನವದೆಹಲಿ
ಪಂದ್ಯ ಆರಂಭ: ಸಂಜೆ 4ಕ್ಕೆ
ನೇರ ಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್ 1

click me!