ಅಂತಾರಾಷ್ಟ್ರೀಯ ಓಟಗಾರ್ತಿ ಕನ್ನಡತಿಗೆ ಬೇಕಿದೆ ನೆರವಿನ ಹಸ್ತ

By Web DeskFirst Published Aug 4, 2018, 6:07 PM IST
Highlights

ಕರ್ನಾಟಕದ ಪ್ರತಿಭಾನ್ವಿತ ಓಟಗಾರ್ತಿ ಶೀತಲ, ಮಲೇಷ್ಯಾದಲ್ಲಿ ನಡೆಯಲಿರುವ ಏಷ್ಯಾ ಫೆಸಿಫಿಕ್ ಮಾಸ್ಟರ್ಸ್ ಗೇಮ್ಸ್ ಆಯ್ಕೆಯಾಗಿದ್ದಾಳೆ. ಆದರೆ ಆರ್ಥಿಕ ಸಂಕಷ್ಟ ಶೀತಲಾಗೆ ಇನ್ನಿಲ್ಲದೆ ಕಾಡುತ್ತಿದೆ. ಈ ಪ್ರತಿಭೆ ಇದೀಗ ನೆರವಿ ಅವಶ್ಯಕತೆ ಇದೆ.

ಬೆಳಗಾವಿ(ಆ.04): ಮಲೇಷ್ಯಾದ ಪೆನಾಂಗ್‌ನಲ್ಲಿ ಮುಂಬರುವ ಸೆಪ್ಟೆಂಬರ್‌ನಲ್ಲಿ ನಡೆಯುವ ಏಷ್ಯಾ ಫೆಸಿಫಿಕ್ ಮಾಸ್ಟರ್ಸ್ ಗೇಮ್ಸ್-2018 ರಲ್ಲಿ ರಾಷ್ಟ್ರವನ್ನು ಪ್ರತಿನಿಧಿಸುವ ಸುವರ್ಣ ಅವಕಾಶ ದೊರೆತಿರುವ ಬೆಳಗಾವಿಯ ಅಂತಾರಾಷ್ಟ್ರೀಯ ಓಟಗಾರ್ತಿ ಶೀತಲ ದಿನೇಶ ಕೊಲ್ಲಾಪುರೆ ಅವರಿಗೆ ಆರ್ಥಿಕ ಸಂಕಷ್ಟ ಎದುರಾಗಿದೆ.

ಮನೆಯಲ್ಲಿ ಬಡತನ ಇದ್ದರೂ ಕ್ರೀಡೆಯಲ್ಲಿ ಏನಾದರೂ ಸಾಧನೆ ಮಾಡಬೇಕೆಂಬ ಆದಮ್ಯ ಉತ್ಸಾಹ ಇದೆ. ಇದರಿಂದಲೇ ಅವರು ರಾಷ್ಟ್ರ ಮತ್ತು ರಾಜ್ಯಮಟ್ಟದ ಕ್ರೀಡಾಕೂಟಗಳಲ್ಲಿ ಪಾಲ್ಗೊಂಡು 100 ಕ್ಕೂ ಅಧಿಕ ಪದಕಗಳನ್ನು ಬಾಚಿಕೊಂಡಿದ್ದಾಳೆ. ಇದೀಗ ಮಲೇಷ್ಯಾದಲ್ಲಿ ನಡೆಯುವ ಏಷ್ಯಾ ಫೆಸಿಫಿಕ್ ಮಾಸ್ಟರ್ಸ್ ಗೇಮ್ಸ್- 2018ಕ್ಕೆ ಶೀತಲ ಆಯ್ಕೆಯಾಗಿದ್ದರೂ ಆರ್ಥಿಕ ಅಡಚಣೆಯಿಂದಾಗಿ ಮುಂದೆ ಓಡಲು ಆಗುತ್ತಿಲ್ಲ. ಆದರೆ, ಇಂತಹ ಸುವರ್ಣಾವಕಾಶ ಕೈತಪ್ಪಿ ಹೋದರೆ ಮತ್ತೆ ಸಿಗುವ ಅವಕಾಶಗಳೇ ಇಲ್ಲ. ಹೀಗಾಗಿ ಆರ್ಥಿಕ ಸಮಸ್ಯೆ ಅವರ ಧೈರ್ಯವನ್ನು ಕುಂದುವಂತೆ ಮಾಡಿದೆ.

ರಾಷ್ಟ್ರಮಟ್ಟದಲ್ಲಿ 1500 ಮೀ. ರನ್ನಿಂಗ್ ಸ್ಪರ್ಧೆಯಲ್ಲಿ ಪದಕ ಪಡೆದಿರುವ ಇವರಿಗೆ ಸದ್ಯ ಕ್ರಿಡಾಪಟುಗಳು ಸೇವಿಸಬೇಕಾದ ನಿಗದಿತ ಆಹಾರ ಸೇವಿಸುವುದಕ್ಕೂ ಹಣಕಾಸಿನ ಕೊರತೆ ಎದುರಾಗಿದೆ. ಈಗ ಅವರಿಗೆ ದಾನಿಗಳು ಆರ್ಥಿಕ ನೆರವು ನೀಡಿದರೆ ಮಾತ್ರ ಏಷ್ಯಾ ಫೆಸಿಫಿಕ್ ಮಾಸ್ಟರ್ಸ್ ಗೇಮ್ಸ್‌ನಲ್ಲಿ ಪಾಲ್ಗೊಳ್ಳಬಹುದು. ಇಲ್ಲದಿದ್ದರೆ, ಅವರ ಸಾಧನೆಯ ಕನಸು ಕಮರಿ ಹೋಗುವುದರಲ್ಲಿ ಎರಡು ಮಾತಿಲ್ಲ.

ಶತಕ ಪದಕದ ಸಾಧಕಿ: ಶೀತಲ ಕೊಲ್ಲಾಪುರ ರಾಜ್ಯ, ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಕ್ರೀಡಾಕೂಟಗಳಲ್ಲಿ ಪಾಲ್ಗೊಂಡು ಸಾಧನೆ ಮಾಡಿದ್ದಾಳೆ. ಈ ವರೆಗೆ ಅವರು ಸುಮಾರು 100 ಪದಕಗಳನ್ನು ತನ್ನ ಮುಡಿಗೇರಿಸಿಕೊಂಡಿದ್ದಾಳೆ. ಕಳೆದ ವರ್ಷ ನ್ಯೂಜಿಲೆಂಡ್‌ನಲ್ಲಿ ನಡೆದ ವಿಶ್ವ ಮಾಸ್ಟರ್ ಗೇಮ್ಸ್- 2017ರಲ್ಲಿ ಮೂರು ಪದಕ ಪಡೆದಿದ್ದರು.

ಇತ್ತೀಚೆಗಷ್ಟೇ 38ನೇ ರಾಷ್ಟ್ರೀಯ ಮಾಸ್ಟರ್ಸ್ ಅಥ್ಲೆಟಿಕ್ಸ್ ಚಾಂಪಿಯನಶಿಪ್‌ನಲ್ಲಿ 30ಕ್ಕೂ ಅಧಿಕ ವಯಸ್ಸಿನ ಮಹಿಳೆಯರ ವಿಭಾಗದಲ್ಲಿ ಭಾಗವಹಿಸಿ 1500 ಮೀ. ಮತ್ತು ರಿಲೇಯಲ್ಲಿ 2 ಚಿನ್ನ, 800, 400 ಮೀಟರ್ ಓಟದ ಸ್ಪರ್ಧೆಯಲ್ಲಿ 2 ಬೆಳ್ಳಿ ಪದಕ ಪಡೆದು ಕೀರ್ತಿ ತಂದಿದ್ದಾರೆ. ಶಾಲಾ ದಿನದಿಂದ ಕ್ರೀಡಾ ಆಸಕ್ತಿಯಿಂದ ಜಿಲ್ಲೆ, ರಾಜ್ಯ ಮತ್ತು ದೇಶವನ್ನು ಪ್ರತಿನಿಧಿಸಿದ್ದಾರೆ.

ಇಬ್ಬರ ಮಕ್ಕಳ ತಾಯಿ: ಇಬ್ಬರು ಮಕ್ಕಳ ತಾಯಿಯಾಗಿರುವ ಶೀತಲ್, ಸದ್ಯ ತಮ್ಮ ಕುಟುಂಬ ನಿರ್ವಹಣೆಗಾಗಿ ಬೆಳಗಾವಿಯ ಖಾಸಗಿ ಶಾಲೆಯೊಂದರಲ್ಲಿ ದೈಹಿಕ ಶಿಕ್ಷಣ ಶಿಕ್ಷಕಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಅಲ್ಲಿಯೂ ಕಡಿಮೆ ಸಂಬಳವಿದೆ. ಆದರೆ, ಯಾವುದೇ ಸರ್ಕಾರವಾಗಲಿ, ಸಂಘ ಸಂಸ್ಥೆಗಳಾಗಲಿ ಈಕೆಯ ಸಾಧನೆಯನ್ನು ಗುರುತಿಸಿ, ಪ್ರೋತ್ಸಾಹಿಸಲು ಮುಂದೆ ಬರುತ್ತಿಲ್ಲ. ಶೀತಲ ಅವರ ಪತಿ ದಿನೇಶ ಕೂಡ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದು, ಪತ್ನಿಯ ಸಾಧನೆ ಪ್ರೋತ್ಸಾಹಿಸುತ್ತಲೇ ಬಂದಿದ್ದಾರೆ. ಆದರೆ, ಇವರಿಗೆ ಆರ್ಥಿಕ ಸಮಸ್ಯೆ ಕಾಡುತ್ತಿದೆ.

ಕ್ರೀಡಾಪಟುಗಳೇ ಹಣ ಭರಿಸಬೇಕು: ಏಷ್ಯಾ ಫೆಸಿಫಿಕ್ ಮಾಸ್ಟರ್ಸ್ ಗೇಮ್ಸ್‌ನಲ್ಲಿ ಭಾಗವಹಿಸುವ ಕ್ರೀಡಾಪಟುಗಳೇ ಸಂಪೂರ್ಣ ಖರ್ಚು ವೆಚ್ಚ ಭರಿಸಬೇಕಾಗುತ್ತದೆ ಎಂದು ಇಂಡಿಯಾ ಮಾಸ್ಟರ್ ಅಥ್ಲೆಟಿಕ್ಸ್ ಅಸೋಸಿಯೇಶನ್ ಹೇಳಿದೆ. ಈ ಗೇಮ್ಸ್‌ನಲ್ಲಿ ಭಾಗವಹಿಸಲು ಕನಿಷ್ಠ ₹3 ಲಕ್ಷದವರೆಗೆ ಖರ್ಚು ಆಗಬಹುದು ಎಂದು ಅಂದಾಜಿಸಲಾಗಿದೆ. 

ಈ ಕ್ರೀಡಾ ಸಾಧಕಿಗೆ ನೆರವು ನೀಡುವವರು ದಿ.ಸಾರಸ್ವತ ಕೋ ಆಪರೇಟಿವ್ ಬ್ಯಾಂಕ್ ಲಿಮಿಟೆಡ್, ಟಿಳಕವಾಡಿ, (ಎಸ್‌ಬಿ ಖಾತೆ) SBI- 86200100004513  (IFSC code- SRCB0000086) ಈ ಬ್ಯಾಂಕ್ ಖಾತೆಗೆ ಹಣ ಜಮಾ ಮಾಡಬಹುದು. ಇಲ್ಲವೇ ಮೊಬೈಲ್ 8095518552 ಸಂಪರ್ಕಿಸಬಹುದು.

ವರದಿ: ಶ್ರೀಶೈಲ ಮಠದ, ಕನ್ನಡಪ್ರಭ

click me!