ಈ ಋತುವಿನಲ್ಲಿ ಚೊಚ್ಚಲ ಪ್ರಶಸ್ತಿಯ ಮೇಲೆ ಕಣ್ಣಿಟ್ಟಿರುವ ಪಿ.ವಿ ಸಿಂಧು ಇದೀಗ ಇಂಡೋನೇಷ್ಯಾ ಓಪನ್ ಟೂರ್ನಿಯಲ್ಲಿ ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದಾರೆ. ಈ ಕುರಿತಾದ ವರದಿ ಇಲ್ಲಿದೆ ನೋಡಿ...
ಜಕಾರ್ತ[ಜು.19]: ಭಾರತದ ತಾರಾ ಶಟ್ಲರ್ ಪಿ.ವಿ. ಸಿಂಧು, ಇಲ್ಲಿ ನಡೆಯುತ್ತಿರುವ ಇಂಡೋನೇಷ್ಯಾ ಓಪನ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಕ್ವಾರ್ಟರ್‌ಫೈನಲ್ ಪ್ರವೇಶಿಸಿದ್ದಾರೆ.
ಗುರುವಾರ ನಡೆದ ಮಹಿಳಾ ಸಿಂಗಲ್ಸ್‌ನ ಪ್ರಿ ಕ್ವಾರ್ಟರ್‌ನಲ್ಲಿ ಸಿಂಧು, ಡೆನ್ಮಾರ್ಕ್‌ನ ಮಿಯಾ ಬ್ಲಿಚ್‌ಫೆಲ್ಟ್ ವಿರುದ್ಧ 21-14, 17-21, 21-11 ಗೇಮ್ ಗಳಲ್ಲಿ ಗೆಲುವು ಸಾಧಿಸಿದರು. ಈ ಋತುವಿನಲ್ಲಿ ಮೊದಲ ಪ್ರಶಸ್ತಿ ಗೆಲ್ಲುವ ಉತ್ಸಾಹದಲ್ಲಿರುವ ಸಿಂಧು, ಎಂಟರಘಟ್ಟದಲ್ಲಿ ಜಪಾನ್‌ನ ನಜೊಮಿ ಒಕುಹಾರರನ್ನು ಎದುರಿಸಲಿದ್ದಾರೆ.
ಪಂದ್ಯದ ಆರಂಭದಿಂದಲೂ ಭಾರತದ ಶಟ್ಲರ್ ಉತ್ತಮ ಅಂತರ ಕಾಯ್ದುಕೊಂಡರು. ಮೊದಲ ಗೇಮ್‌ನ ಒಂದು ಹಂತದಲ್ಲಿ 6-3ರಿಂದ ಮುನ್ನಡೆದಿದ್ದ ಸಿಂಧು, ಎದುರಾಳಿ ಶಟ್ಲರ್ ಎದುರು ಅಂಕಗಳನ್ನು ಕಲೆಹಾಕಿ 21-14ರಲ್ಲಿ ಮುನ್ನಡೆ ಸಾಧಿಸಿದರು. 2ನೇ ಗೇಮ್‌ನಲ್ಲಿ ಡೆನ್ಮಾರ್ಕ್ ಶಟ್ಲರ್ ಬ್ಲಿಚ್‌ಫೆಲ್ಟ್ ಸಿಂದು ರನ್ನು ಹಿಂದಿ ಕ್ಕುವಲ್ಲಿ ಯಶಸ್ವಿಯಾದರು. ಇಬ್ಬರೂ ಶಟ್ಲರ್‌ಗಳು ತಲಾ 1 ಗೇಮ್ ಗೆದ್ದು ಸಮಬಲದ ಹೋರಾಟ ನೀಡಿದರು. 3ನೇ ಹಾಗೂ ನಿರ್ಣಾಯಕ ಗೇಮ್ ನಲ್ಲಿ ಸಿಂಧು, ಬ್ಲಿಚ್‌ಫೆಲ್ಟ್‌ರನ್ನು ಹಿಂದಿಕ್ಕಿ ಪಂದ್ಯ ಗೆದ್ದರು.
ಇಂಡೋನೇಷ್ಯಾ ಓಪನ್: ಸಿಂಧು, ಶ್ರೀಕಾಂತ್ ಶುಭಾರಂಭ
ಶ್ರೀಕಾಂತ್ ಔಟ್: ಪುರುಷರ ಸಿಂಗಲ್ಸ್ 2ನೇ ಸುತ್ತಿನಲ್ಲಿ ಭಾರತದ ಕಿದಂಬಿ ಶ್ರೀಕಾಂತ್, ಹಾಂಕಾಂಗ್‌ನ ಕಾ ಲಾಂಗ್ ಅಂಗೂಸ್ ವಿರುದ್ಧ 17-21, 19-21 ಗೇಮ್‌ಗಳಲ್ಲಿ ಪರಾಭವ ಹೊಂದಿದರು. ಪುರುಷರ ಡಬಲ್ಸ್‌ನ 2ನೇ ಸುತ್ತಿನಲ್ಲಿ ಸಾತ್ವಿಕ್ ಸಾಯಿರಾಜ್ ರಂಕಿರೆಡ್ಡಿ, ಚಿರಾಗ್ ಶೆಟ್ಟಿ ಜೋಡಿ, ಸ್ಥಳೀಯ ಶಟ್ಲರ್ ಮಾರ್ಕಸ್ ಫೆರ್ನಾಲ್ಡಿ, ಕೆವಿನ್ ಸಂಜಯ ಜೋಡಿ ವಿರುದ್ಧ 15-21, 14-21 ಗೇಮ್‌ಗಳಲ್ಲಿ ಸೋಲು ಕಂಡು ಹೊರಬಿದ್ದಿತು.