ಬೈಕ್ ರೈಡರ್‌ಗಳಿಗೆ ಬಂದಿದೆ ರೆಕಿ ಆ್ಯಪ್; ವಿಶ್ವದಲ್ಲೇ ಮೊದಲು!

By Web Desk  |  First Published Aug 23, 2019, 2:36 PM IST

ಬೈಕ್ ರೈಡರ್‌ಗಳಿಗೆ ಇದು ಅತ್ಯಂತ ಉಪಯುಕ್ತ. ವಿಶ್ವದ ಯಾವ ಮೂಲೆಯಲ್ಲಿದ್ದರೂ ರೆಕಿ ಆ್ಯಪ್ ಇದ್ದರೆ ಸಾಕು, ಆಫ್ ರೋಡ್, ಆನ್ ರೋಡ್ ರೈಡ್‌ ಮಾತ್ರವಲ್ಲ, ಮೆಕಾನಿಕ್, ಪೆಟ್ರೋಲ್, ಹೊಟೆಲ್ ಸೇರಿದಂತೆ ಎಲ್ಲಾ ಮಾಹಿತಿ ಇದರಲ್ಲಿ ಲಭ್ಯ. ಗೂಗಲ್ ಮ್ಯಾಪ್‌ನಲ್ಲಿ ಇಲ್ಲದೇ ಇರೋ ರಸ್ತೆಗಳು ಈ ರೆಕಿ ಆ್ಯಪ್‌ನಲ್ಲಿ ಸಿಗಲಿದೆ. ಈ ನೂತನ ಆ್ಯಪ್‌ನ್ನು ಭಾರತದ ನಂ.1 ಬೈಕ್ ರೈಡರ್, ಕನ್ನಡಿಗ ಸಿಎಸ್ ಸಂತೋಷ್ ಬಿಡುಗಡೆ ಮಾಡಿದ್ದಾರೆ.


ಬೆಂಗಳೂರು(ಆ.23): ವಿಶ್ವದಲ್ಲಿ ಎಲ್ಲಿಂದ ಎಲ್ಲಿಗೆ ಹೋಗಬೇಕು ಎಂದರೂ ಗೂಗಲ್‌ ಮ್ಯಾಪ್‌ ಸಹಾಯ ಮಾಡುತ್ತದೆ. ಆದರೆ ಗೂಗಲ್‌ ಮ್ಯಾಪ್‌ನಲ್ಲೂ ಸಿಗದ ಸ್ಥಳಗಳಿಗೆ ಹೋಗಬೇಕಿದ್ದರೆ ನೀವು ‘ರೆಕಿ’ ಆ್ಯಪ್‌ ಬಳಸಬೇಕು. ಬೈಕ್‌ನಲ್ಲಿ ದೇಶ, ವಿದೇಶಗಳನ್ನು ಸುತ್ತುವ ಕನಸಿರುವವರಿಗೆಂದೇ ಭಾರತದ ನಂ.1 ಬೈಕ್‌ ರೈಡರ್‌, ಕನ್ನಡಿಗ ಸಿ.ಎಸ್‌.ಸಂತೋಷ್‌ ಹೊಸ ಮೊಬೈಲ್‌ ಆ್ಯಪ್‌ ಹೊರತಂದಿದ್ದಾರೆ. ಗುರುವಾರ ಅವರು ಇಲ್ಲಿನ ಖಾಸಗಿ ಹೋಟೆಲ್‌ನಲ್ಲಿ ಆ್ಯಪ್‌ ಬಿಡುಗಡೆ ಮಾಡಿದರು. ಕೇವಲ 3 ತಿಂಗಳಲ್ಲಿ ಸಿದ್ಧಪಡಿಸಿರುವ ಆ್ಯಪ್‌, ಮುಂದಿನ ದಿನಗಳಲ್ಲಿ ಬೈಕ್‌ ರೈಡಿಂಗ್‌ನ ಗ್ರಂಥಾಲಯವಾಗಲಿದೆ ಎನ್ನುವ ವಿಶ್ವಾಸ ಸಂತೋಷ್‌ ಅವರದ್ದು.

ಇದನ್ನೂ ಓದಿ: ಬೆಂಗ್ಳೂರಿನ ಬೈಕ್‌ ರೇಸರ್‌ಗೆ ವಿಶ್ವ ಕಿರೀಟ!

Latest Videos

undefined

ಈ ಆ್ಯಪ್‌ ಬಳಕೆಯಿಂದ ನಿಮಗೂ ಉಪಯೋಗವಿದೆ. ನೀವೂ ಬೇರೆಯವರಿಗೆ ಸಹಾಯ ಮಾಡಬಹುದು. ಹಲವು ದೇಶಗಳಲ್ಲಿ ಬೈಕ್‌ ಓಡಿಸಿ ಅನುಭವವಿರುವ ಸಂತೋಷ್‌ ಪ್ರಕಾರ, ವಿಶ್ವದಲ್ಲಿ ಈ ರೀತಿಯ ಮೊಬೈಲ್‌ ಆ್ಯಪ್‌ ಬಿಡುಗಡೆಯಾಗಿರುವುದು ಇದೇ ಮೊದಲು.

ಬಳಕೆದಾರರಿಗೆ ಏನು ಲಾಭ?
ಹಲವು ಆಟೋಮೊಬೈಲ್‌ ಸಂಸ್ಥೆಗಳು ಕೈಗೆಟುಕುವ ದರದಲ್ಲಿ ಸ್ಪೋರ್ಟ್ಸ್ ಬೈಕ್‌ಗಳನ್ನು ಮಾರುಕಟ್ಟೆಗೆ ಪರಿಚಯಿಸುತ್ತಿವೆ. ದಿನೇ ದಿನೇ ಬೈಕ್‌ ರೈಡಿಂಗ್‌ನತ್ತ ಯುವ ಜನಾಂಗದ ಆಸಕ್ತಿ ಹೆಚ್ಚುತ್ತಿದೆ. ವಾರಾಂತ್ಯದಲ್ಲಿ ಬೈಕ್‌ ರೈಡ್‌ ಹೋಗುವವರ ಸಂಖ್ಯೆಯೂ ಕಡಿಮೆ ಏನಿಲ್ಲ. ಆದರೆ ಹೋಗುವುದು ಎಲ್ಲಿಗೆ ಎನ್ನುವ ಬಗ್ಗೆ ಗೊಂದಲವಿದ್ದರೆ ‘ರೆಕಿ’ ಆ್ಯಪ್‌ ನೆರವಾಗಲಿದೆ. ಉದಾಹರಣೆಗೆ ಕೇರಳದ ಯಾವುದೋ ಅರಣ್ಯ ಪ್ರದೇಶದಲ್ಲೋ, ಘಾಟ್‌ಗಳಲ್ಲೂ ಬೈಕ್‌ ಓಡಿಸುವ ಆಸೆ ಇದ್ದು, ಮಾರ್ಗ ಗೊತ್ತಿಲ್ಲದಿದ್ದರೆ ಈ ಆ್ಯಪ್‌ನಿಂದ ಮಾಹಿತಿ ಸಿಗಲಿದೆ. ಭಾರತ ಸೇರಿದಂತೆ ವಿಶ್ವದ ಬೇರೆ ಬೇರೆ ದೇಶಗಳಲ್ಲಿರುವ ಅನನ್ವೇಶಿತ ಸ್ಥಳಗಳ ವಿವರ ಆ್ಯಪ್‌ ಮೂಲಕ ದೊರೆಯಲಿದೆ. ಮಾರ್ಗ, ಎಷ್ಟುದೂರವಿದೆ, ಮಾರ್ಗ ಮಧ್ಯೆ ಸಿಗುವ ರಮಣೀಯ ಸ್ಥಳಗಳು ಯಾವುವು ಎನ್ನುವ ವಿವರಗಳು ಲಭ್ಯವಾಗಲಿವೆ.

ಇದನ್ನೂ ಓದಿ: ದಕ್ಷಿಣ ಡೇರ್ ರ‍್ಯಾಲಿ: ಗೌರವ್ ಗಿಲ್ ಮಡಿಲಿಗೆ ಚಾಂಪಿಯನ್ ಪ್ರಶಸ್ತಿ!

ನೀವು ಹೇಗೆ ನೆರವಾಗಬಹುದು?
‘ರೆಕಿ’ ಆ್ಯಪ್‌ ಬಳಕೆದಾರರ ಸ್ನೇಹಿಯಾಗಿದ್ದು, ನೀವು ಕ್ರಮಿಸುವ ಮಾರ್ಗವನ್ನು ಲೈವ್‌ ರೆಕಾರ್ಡ್‌ ಮಾಡಿಕೊಳ್ಳಬಹುದು. ಜತೆಗೆ ನಿಮಗಿಷ್ಟಬಂದ ಸ್ಥಳಗಳಲ್ಲಿ ಫೋಟೋಗಳನ್ನು ತೆಗೆದು ಅಪ್‌ಲೋಡ್‌ ಮಾಡಬಹುದು. ನೀವು ಒಮ್ಮೆ ಈ ಆ್ಯಪ್‌ ಬಳಸಲು ಶುರು ಮಾಡಿದರೆ ಅದರಲ್ಲಿ ನಿಮ್ಮದೊಂದ ಪ್ರೊಫೈಲ್‌ ಸೃಷ್ಟಿಯಾಗುತ್ತದೆ. ಅಂದರೆ ಫೇಸ್‌ಬುಕ್‌, ಇನ್‌ಸ್ಟಾಗ್ರಾಂ ರೀತಿಯ ಖಾತೆ ಆರಂಭವಾಗುತ್ತದೆ. ಆ ಮುಖಾಂತರ ಮಾರ್ಗಗಳು, ನೋಡಲೇಬೇಕಾದ ಸ್ಥಳಗಳ ವಿವರ, ರಮಣೀಯ ಚಿತ್ರಗಳು ಎಲ್ಲವನ್ನೂ ಹಾಕಬಹುದು. ನಿಮ್ಮ ಖಾತೆಯನ್ನು ಇತರ ಬಳಕೆದಾರರು ವೀಕ್ಷಿಸಬಹುದು. ನೀವು ಕೈಗೊಂಡ ಬೈಕ್‌ ಪ್ರವಾಸ, ಆಯ್ಕೆ ಮಾಡಿಕೊಂಡ ಮಾರ್ಗ, ಫೋಟೋಗಳು ಎಲ್ಲವನ್ನೂ ನೋಡಬಹುದು. ಇದರಿಂದ ಅವರಿಗೂ ಪ್ರವಾಸ ಕೈಗೊಳ್ಳಲು ಅನುಕೂಲವಾಗಲಿದೆ.

ಇದನ್ನೂ ಓದಿ: ಸುಜುಕಿ ಡರ್ಟ್ OFF-Road ಬೈಕ್ ಬಿಡುಗಡೆ - ಕವಾಸಕಿಗೆ ಪೈಪೋಟಿ!

ಆ್ಯಪ್‌ ಬಳಕೆಯ ಪ್ರಯೋಜನಗಳೇನು?
ಪೆಟ್ರೋಲ್‌ ಎಲ್ಲಿ ಸಿಗುತ್ತೆ?: ದುರ್ಗಮ ಹಾದಿಯಲ್ಲಿ, ತಿಳಿಯದೆ ಊರುಗಳಲ್ಲಿ ಬೈಕ್‌ ರೈಡ್‌ಗೆ ಹೋದಾಗ ಪೆಟ್ರೋಲ್‌ ಎಲ್ಲಿ ಸಿಗುತ್ತೆ ಎನ್ನುವುದನ್ನು ತಿಳಿಯುವುದು ದೊಡ್ಡ ಸಾಹಸ. ಬೈಕ್‌ ರೈಡ್‌ಗೆ ಹೋದವರಿಗೆ ಈ ಅನುಭವವಾಗಿರುತ್ತದೆ. ‘ರೆಕಿ’ ಆ್ಯಪ್‌ ಮೂಲಕ ಈ ವಿವರಗಳನ್ನು ಪಡೆಯಬಹುದು. ಬಾಡಿಗೆಗೆ ಬೈಕ್‌ಗಳು ಎಲ್ಲಿ ಸಿಗುತ್ತವೆ ಎನ್ನುವ ವಿವರಗಳು ಇದರಲ್ಲಿ ಲಭ್ಯವಿರಲಿದೆ.

ಮೆಕಾನಿಕ್‌ ಎಲ್ಲಿ ಸಿಗುತ್ತಾರೆ?: ರೈಡ್‌ ವೇಳೆ ಮಧ್ಯ ದಾರಿಯಲ್ಲಿ ಬೈಕ್‌ ಕೈಕೊಟ್ಟರೆ ಮೆಕಾನಿಕ್‌ ಸಿಗುವುದು ಕಷ್ಟ. ಆದರೆ ಈ ಆ್ಯಪ್‌ನಲ್ಲಿ ಹತ್ತಿರದಲ್ಲಿ ಮೆಕಾನಿಕ್‌ ಎಲ್ಲಿದ್ದಾರೆ?. ಅವರನ್ನು ಸಂಪರ್ಕಿಸುವುದು ಹೇಗೆ? ಎನ್ನುವ ವಿವರಗಳು ಸಿಗಲಿವೆ. ವಾಹನವನ್ನು ಟೋಯಿಂಗ್‌ ಮೂಲಕ ಕೊಂಡೊಯ್ಯಬೇಕಿದ್ದರೆ ಆ ಮಾಹಿತಿಯೂ ಲಭ್ಯವಾಗಲಿದೆ.

ಅಪಘಾತವಾದರೆ ತಕ್ಷಣ ಮಾಹಿತಿ: ಬೈಕ್‌ ರೈಡ್‌ಗಳಿಗೆ ಹೋದಾಗ ಅಪಘಾತವಾಗುವ ಸಾಧ್ಯತೆ ಇರಲಿದೆ. ಅಂತಹ ಸಂದರ್ಭದಲ್ಲಿ ಈ ಆ್ಯಪ್‌ನಿಂದ ಹತ್ತಿರದಲ್ಲಿ ವೈದ್ಯರೆಲ್ಲಿದ್ದಾರೆ. ಪ್ರಾಥಮಿಕ ಚಿಕಿತ್ಸೆ ಎಲ್ಲಿ ಸಿಗುತ್ತದೆ ಎನ್ನುವ ಮಾಹಿತಿ ಪಡೆಯಬಹುದು. ಜತೆಗೆ ಆನ್‌ಲೈನ್‌ ಇದ್ದರೆ ಅಪಘಾತಕ್ಕೊಳಗಾದ ಮಾಹಿತಿ ಅವರ ಕುಟುಂಬ ಸದಸ್ಯರು, ಸ್ನೇಹಿತರಿಗೂ ತಿಳಿಸುವ ವ್ಯವಸ್ಥೆಯೂ ಸಿಗಲಿದೆ.

‘ರೆಕಿ’ ಆ್ಯಪ್‌ ಮೋಟಾರ್‌ ಸೈಕಲಿಸ್ಟ್‌ಗಳಿಗೆಂದೇ ಆರಂಭಿಸಿರುವ ವಿಶ್ವದ ಮೊದಲ ಆ್ಯಪ್‌. ಬೈಕ್‌ ರೈಡ್‌ ಹೋಗುವವರಿಗೆ ಎಲ್ಲಾ ಮಾಹಿತಿಯೂ ಒಂದೇ ಕಡೆ ಸಿಗಬೇಕು ಎನ್ನುವುದು ನನ್ನ ಉದ್ದೇಶ. ಶೀಘ್ರದಲ್ಲೇ ಹೋಟೆಲ್‌, ಲಾಡ್ಜ್‌ಗಳು ಸೇರಿದಂತೆ ಇನ್ನಿತರ ಮಾಹಿತಿಗಳೂ ಆ್ಯಪ್‌ನಲ್ಲಿ ಲಭ್ಯವಾಗಲಿದೆ.

ಸಿ.ಎಸ್‌.ಸಂತೋಷ್‌ ಯಾರು ಸಂತೋಷ್‌?
ಬೆಂಗಳೂರಿನ ಸಿ.ಎಸ್‌.ಸಂತೋಷ್‌, ಹಲವು ಬಾರಿ ರಾಷ್ಟ್ರೀಯ ಮೋಟಾರ್‌ ರಾರ‍ಯಲಿ ಚಾಂಪಿಯನ್‌ ಆದವರು. ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತದ ಕೀರ್ತಿ ಪತಾಕೆ ಹಾರಿಸಿದ ಹಿರಿಮೆ ಇವರಿಗೆ ಸಲ್ಲುತ್ತದೆ. ವಿಶ್ವದ ಅತ್ಯಂತ ಅಪಾಯಕಾರಿ ಮೋಟಾರ್‌ ರಾರ‍ಯಲಿಯಲ್ಲಿ ಪಾಲ್ಗೊಂಡು, ಮೂರು ಬಾರಿ ರಾರ‍ಯಲಿ ಪೂರ್ಣಗೊಳಿಸಿದ ಮೊದಲ ಭಾರತೀಯ ಎನ್ನುವ ದಾಖಲೆ ಸಂತೋಷ್‌ ಹೆಸರಿನಲ್ಲಿದೆ. ದೇಶದ ಹಲವು ಯುವ ಬೈಕ್‌ ರೈಡರ್‌ಗಳಿಗೆ ತರಬೇತಿಯನ್ನೂ ನೀಡುತ್ತಿದ್ದಾರೆ.

click me!