ಭಾರತದ ಪುರುಷರ ಹಾಕಿ ತಂಡದ ಬಳಿಕ, ಭಾರತದ ಮಹಿಳಾ ಹಾಕಿ ತಂಡ ಎಫ್ಐಎಚ್ ಸೀರೀಸ್ ಫೈನಲ್ಸ್ ಹಾಕಿ ಟೂರ್ನಿಯಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಈ ಕುರಿತಾದ ಒಂದು ವರದಿ ಇಲ್ಲಿದೆ ನೋಡಿ...
ಹಿರೋಶಿಮಾ: ಜೂನ್ 23 ದೇಶದೆಲ್ಲೆಡೆ ಒಲಿಂಪಿಕ್ ದಿನವನ್ನು ಆಚರಿಸಲಾಗುತ್ತಿದೆ. ಈ ದಿನದಂದೇ ಭಾರತ ಮಹಿಳಾ ಹಾಕಿ ತಂಡ, ಎಫ್ಐಎಚ್ ಸೀರೀಸ್ ಫೈನಲ್ಸ್ ಹಾಕಿ ಟೂರ್ನಿಯಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಇದರೊಂದಿಗೆ 2020ರ ಟೋಕಿಯೋ ಒಲಿಂಪಿಕ್ಸ್ ಅರ್ಹತಾ ಟೂರ್ನಿಯಲ್ಲಿ ಭಾರತ ನೇರ ಪ್ರವೇಶ ಪಡೆದಿದೆ.
ಫೈನಲ್ ತಲುಪಿದಾಗಲೇ ಒಲಿಂಪಿಕ್ಸ್ ಅರ್ಹತಾ ಟೂರ್ನಿಗೆ ಭಾರತಕ್ಕೆ ಪ್ರವೇಶ ಸಿಕ್ಕಿತ್ತು. ಎಫ್‌ಐಎಚ್ ಟೂರ್ನಿಯಲ್ಲಿ ಒಂದೂ ಪಂದ್ಯದಲ್ಲಿ ಸೋಲದ ಭಾರತ ಮಹಿಳಾ ತಂಡ ಅಜೇಯವಾಗಿ ಪ್ರಶಸ್ತಿ ಜಯಿಸಿದೆ. ಇಲ್ಲಿ ಭಾನುವಾರ ಮುಕ್ತಾಯವಾದ ಎಫ್‌ಐಎಚ್ ಟೂರ್ನಿಯ ಫೈನಲ್ ಪಂದ್ಯದಲ್ಲಿ ಭಾರತ, ಆತಿಥೇಯ ಜಪಾನ್ ವಿರುದ್ಧ 3-1 ಗೋಲುಗಳಿಂದ ಜಯಭೇರಿ ಬಾರಿಸಿತು. ಭಾರತ ಪರ ರಾಣಿ ರಾಂಪಾಲ್ (3ನೇ ನಿ.), ಗುರ್ಜಿತ್ (45, 60ನೇ ನಿ.) ಗೋಲು ಗಳಿಸಿದರು. ಜಪಾನ್ ತಂಡದ ಪರ ಕೇನಾನ್ (11ನೇ ನಿ.) ಗೋಲು ಬಾರಿಸಿದರು.
ಪಂದ್ಯ ಆರಂಭವಾಗಿ 3ನೇ ನಿಮಿಷಕ್ಕೆ ರಾಣಿ, ಎದುರಾಳಿ ಜಪಾನ್ ತಂಡಕ್ಕೆ ಶಾಕ್ ನೀಡಿದರು. ಅದ್ಭುತ ಗೋಲುಗಳಿಸಿದ ರಾಣಿ ಭಾರತದ ಖಾತೆ ತೆರೆದರು. ಈ ಸಂತಸ ಹೆಚ್ಚು ಹೊತ್ತು ಉಳಿಯಲಿಲ್ಲ. 11ನೇ ನಿಮಿಷದಲ್ಲಿ ಜಪಾನ್‌ನ ಕೇನಾನ್ ಗೋಲುಗಳಿಸಿ ಒಂದು ಒಂದರಿಂದ ಸಮಬಲ ಸಾಧಿಸಿದರು. 2ನೇ ಕ್ವಾರ್ಟರ್‌ನಲ್ಲಿ ಗೋಲು ಮೂಡಲಿಲ್ಲ. 3ನೇ ಕ್ವಾರ್ಟರ್‌ನ ಅಂತ್ಯಕ್ಕೆ ಗುರ್ಜಿತ್ ಗೋಲುಗಳಿಸಿ ಮುನ್ನಡೆ ನೀಡಿದರು.ಪಂದ್ಯ ಮುಕ್ತಾಯದ ಕೊನೆ ನಿಮಿಷದಲ್ಲಿ ಗುರ್ಜಿತ್ ಮತ್ತೊಂದು ಗೋಲುಗಳಿಸಿ ಅಂತರ ಕಾಯ್ದುಕೊಂಡರು. ಅಂತಿಮವಾಗಿ ಇದೇ ಅಂತರ ಕಾಯ್ದುಕೊಂಡ ಭಾರತ ಜಯ ಸಾಧಿಸಿತು.
FIH ಹಾಕಿ ಸೀರೀಸ್ ಫೈನಲ್ಸ್: ಭಾರತ ಚಾಂಪಿಯನ್
ಇತ್ತೀಚೆಗಷ್ಟೇ ಭಾರತ ಪುರುಷರ ತಂಡ ಕೂಡ ಎಫ್‌ಐಎಚ್ ಸೀರೀಸ್ ಹಾಕಿ ಫೈನಲ್ಸ್ ಟೂರ್ನಿಯಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿತ್ತು.