ಇಂಡಿಯಾ ಓಪನ್: ಫೈನಲ್’ನಲ್ಲಿ ಎಡವಿದ ಶ್ರೀಕಾಂತ್

By Web DeskFirst Published Apr 1, 2019, 12:01 PM IST
Highlights

ಬರೋಬ್ಬರಿ 17 ತಿಂಗಳುಗಳ ಬಳಿಕ ಪ್ರಶಸ್ತಿ ಗೆಲ್ಲುವ ಉತ್ಸಾಹದಲ್ಲಿದ್ದ ಭಾರತದ ಸ್ಟಾರ್ ಬ್ಯಾಡ್ಮಿಂಟನ್ ಪಟು ಕಿದಂಬಿ ಶ್ರೀಕಾಂತ್’ಗೆ ನಿರಾಸೆ ಎದುರಾಗಿದೆ, ಮಾಜಿ ನಂ.1 ಪಟು ಡೆನ್ಮಾರ್ಕ್‌ನ ವಿಕ್ಟರ್ ಅಕ್ಸೆಲ್ಸನ್ ವಿರುದ್ಧ ಸೋತು ಪ್ರಶಸ್ತಿಯಿಂದ ವಂಚಿತರಾದರು. 

ನವದೆಹಲಿ(ಏ.01): ಇಂಡಿಯಾ ಓಪನ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಪ್ರಶಸ್ತಿ ಗೆಲ್ಲುವ ಭಾರತದ ತಾರಾ ಶಟ್ಲರ್ ಕಿದಂಬಿ ಶ್ರೀಕಾಂತ್ ಕನಸು ಭಗ್ನವಾಗಿದೆ. ಭಾನುವಾರ ಇಲ್ಲಿ ನಡೆದ ಪುರುಷರ ಸಿಂಗಲ್ಸ್ ಫೈನಲ್‌ನಲ್ಲಿ ವಿಶ್ವ ಮಾಜಿ ನಂ.1 ಡೆನ್ಮಾರ್ಕ್‌ನ ವಿಕ್ಟರ್ ಅಕ್ಸೆಲ್ಸನ್ ವಿರುದ್ಧ 7-21, 20-22 ಗೇಮ್‌ಗಳ ಹೀನಾಯ ಸೋಲು ಅನುಭವಿಸಿದರು.

ಇಂಡಿಯಾ ಓಪನ್‌: ಫೈನಲ್‌ಗೆ ಶ್ರೀಕಾಂತ್‌ ಲಗ್ಗೆ

ಶ್ರೀಕಾಂತ್ ಕೊನೆ ಬಾರಿಗೆ ಪ್ರಶಸ್ತಿ ಜಯಿಸಿದ್ದು 2017ರ ಫ್ರೆಂಚ್ ಓಪನ್'ನಲ್ಲಿ. 17 ತಿಂಗಳುಗಳ ಬಳಿಕ ಪ್ರಶಸ್ತಿ ಜಯಿಸುವ ಉತ್ತಮ ಅವಕಾಶವನ್ನು ಭಾರತದ ನಂ.1 ಶಟ್ಲರ್ ಕೈಚೆಲ್ಲಿದರು. ವಿಕ್ಟರ್ ವಿರುದ್ಧ ಉತ್ತಮ ದಾಖಲೆ ಹೊಂದಿರುವ ಶ್ರೀಕಾಂತ್, ಭಾನುವಾರ ಸಂಪೂರ್ಣ ವೈಫಲ್ಯ ಅನುಭವಿಸಿದರು.

ಮೊದಲ ಗೇಮ್‌ನಲ್ಲಿ 7-21ರಲ್ಲಿ ಸೋಲುಂಡ ಶ್ರೀಕಾಂತ್ ಆತ್ಮವಿಶ್ವಾಸ ಕಳೆದುಕೊಂಡರು. ಬಿಡುವಿನ ವೇಳೆಗೆ 11-7ರಿಂದ ಮುಂದಿದ್ದ ವಿಕ್ಟರ್, ಸುಲಭ ಗೆಲುವು ಸಾಧಿಸಿದರು. ದ್ವಿತೀಯ ಗೇಮ್‌ನಲ್ಲಿ ಹೋರಾಟ ಪ್ರದರ್ಶಿಸಿದರೂ ಅಕ್ಸೆಲ್ಸನ್‌ರ ಬಿರುಸಿನ ಹೊಡೆತಗಳಿಗೆ ಉತ್ತರಿಸಲು ಶ್ರೀಕಾಂತ್‌ರಿಂದ ಸಾಧ್ಯವಾಗಲಿಲ್ಲ. ಬಿಡುವಿನ ವೇಳೆಗೆ 9-11ರಿಂದ ಹಿಂದಿದ್ದ ಶ್ರೀಕಾಂತ್, 2 ಗೇಮ್ ಪಾಯಿಂಟ್‌ಗಳನ್ನು ಪಡೆದು ಕೊಂಡರು. ಆದರೆ ಅವಕಾಶ ಕೈಚೆಲ್ಲಿ ಪಂದ್ಯ ಬಿಟ್ಟುಕೊಟ್ಟರು.
 

click me!