ಡೈಮಂಡ್ ಲೀಗ್ ಫೈನಲ್‌ನಲ್ಲಿ ಚಿನ್ನದ ಪದಕ ಜಯಿಸಿದ ನೀರಜ್ ಚೋಪ್ರಾ
ಸದ್ಯ ಸ್ವಿಟ್ಜರ್‌ಲ್ಯಾಂಡ್‌ನಲ್ಲಿ ಬಿಡುವಿನ ಸಮಯ ಎಂಜಾಯ್ ಮಾಡುತ್ತಿರುವ ಚಿನ್ನದ ಹುಡುಗ
ಈಗಾಗಲೇ ನ್ಯಾಷನಲ್ ಗೇಮ್ಸ್‌ನಿಂದ ಹಿಂದೆ ಸರಿಯಲು ತೀರ್ಮಾನಿಸಿರುವ ನೀರಜ್ ಚೋಪ್ರಾ
ಝೂರಿಚ್(ಸೆ.14): ಭಾರತದ ಭರವಸೆಯ ಜಾವೆಲಿನ್ ಥ್ರೋ ಪಟು ನೀರಜ್ ಚೋಪ್ರಾ, ಇತ್ತೀಚೆಗಷ್ಟೇ ಮುಕ್ತಾಯವಾದ ಡೈಮಂಡ್ ಲೀಗ್ ಫೈನಲ್‌ನಲ್ಲಿ ಚಿನ್ನದ ಪದಕ ಗೆಲ್ಲುವ ಮೂಲಕ ಐತಿಹಾಸಿಕ ಸಾಧನೆ ಮಾಡಿದ್ದರು. ಇದರೊಂದಿಗೆ ಈ ಋತುವಿನ ಅಭಿಯಾನವನ್ನು ಮುಗಿಸಿರುವ ನೀರಜ್ ಚೋಪ್ರಾ, ಇದೀಗ ಬಿಡುವಿನ ರಜಾ ದಿನಗಳನ್ನು ಭರ್ಜರಿಯಾಗಿಯೇ ಎಂಜಾಯ್ ಮಾಡುತ್ತಿದ್ದಾರೆ. ತಮ್ಮ ಅಧಿಕೃತ ಇನ್‌ಸ್ಟಾಗ್ರಾಂ ಖಾತೆಯಲ್ಲಿ ನೀರಜ್ ಚೋಪ್ರಾ, ಸ್ನೋ ಪಾಲ್ ನಡುವೆ ನಿಂತಿರುವ ಫೋಟೋವನ್ನು ಪೋಸ್ಟ್ ಮಾಡಿದ್ದು, ಅಭಿಮಾನಿಗಳ ಮೆಚ್ಚುಗೆಗೆ ಪಾತ್ರವಾಗಿದೆ.
ಟೋಕಿಯೋ ಒಲಿಂಪಿಕ್ಸ್ ಚಿನ್ನದ ಪದಕ ವಿಜೇತ ನೀರಜ್ ಚೋಪ್ರಾ, ಝೂರಿಚ್‌ನಲ್ಲಿ ನಡೆದ ಡೈಮಂಡ್ ಲೀಗ್ ಫೈನಲ್‌ನಲ್ಲಿ ಪ್ರತಿಷ್ಠಿತ ಪ್ರಶಸ್ತಿ ಜಯಿಸುವ ಮೂಲಕ ಚಾರಿತ್ರಿಕ ಸಾಧನೆ ಮಾಡಿದ್ದರು. ಇದೀಗ ನೀರಜ್ ಚೋಪ್ರಾ, ಯೂರೋಪಿನ ತುತ್ತ ತುದಿಯಲ್ಲಿರುವ ಸ್ವಿಟ್ಜರ್‌ಲ್ಯಾಂಡ್‌ನ ಜುಂಗ್‌ಫ್ರೌಜೋಕ್‌ನಲ್ಲಿ ಜಾವೆಲಿನ್ ಕೈಯಲ್ಲಿ ಹಿಡಿದುಕೊಂಡು ಫೋಟೋಗೆ ಫೋಸ್ ನೀಡಿದ್ದಾರೆ.
ನೀರಜ್ ಚೋಪ್ರಾ ಮೊದಲ ಪ್ರಯತ್ನದಲ್ಲಿ ಪೌಲ್ ಮಾಡಿದರು. ಇನ್ನು ಜೇಕಬ್ ವಾಡ್ಲೆಜೆಕ್ ಮೊದಲ ಪ್ರಯತ್ನದಲ್ಲಿ 84.15 ಮೀಟರ್ ದೂರ ಎಸೆಯುವ ಮೂಲಕ ಮುನ್ನಡೆ ಸಾಧಿಸಿದರು. ಆದರೆ ನೀರಜ್ ಚೋಪ್ರಾ, ಎರಡನೇ ಪ್ರಯತ್ನದಲ್ಲಿ 88.44 ಮೀಟರ್ ದೂರ ಎಸೆಯುವ ಮೂಲಕ ಡೈಮಂಡ್ ಲೀಗ್ ಫೈನಲ್‌ನಲ್ಲಿ ತಮ್ಮ ಗೆಲುವನ್ನು ಖಚಿತಪಡಿಸಿಕೊಂಡರು. ಇದಾದ ಬಳಿಕ ಯಾವೊಬ್ಬ ಜಾವೆಲಿನ್ ಥ್ರೋ ಪಟು ಕೂಡಾ ನೀರಜ್ ಅವರನ್ನು ಮೀರಿಸಲು ಸಾಧ್ಯವಾಗಲಿಲ್ಲ. ಇನ್ನುಳಿದಂತೆ ನೀರಜ್ ಚೋಪ್ರಾ, ಮೂರನೇ ಪ್ರಯತ್ನದಲ್ಲಿ 88.00 ಮೀಟರ್, ನಾಲ್ಕನೇ ಪ್ರಯತ್ನದಲ್ಲಿ 86.11 ಮೀಟರ್, ಐದನೇ ಪ್ರಯತ್ನದಲ್ಲಿ 87.00 ಮೀಟರ್ ಹಾಗೂ ಆರನೇ ಮತ್ತು ಕೊನೆಯ ಪ್ರಯತ್ನದಲ್ಲಿ 86.94 ಮೀಟರ್ ದೂರ ಜಾವೆಲಿನ್ ಎಸೆದರು. ಇನ್ನು ಜೆಕ್ ಗಣರಾಜ್ಯದ ಜೇಕಬ್ ವಾಡ್ಲೆಜೆಕ್ 86.94 ಮೀಟರ್ ದೂರ ಜಾವೆಲಿನ್ ಎಸೆಯುವ ಮೂಲಕ ಎರಡನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡರು.
ನ್ಯಾಷನಲ್ ಗೇಮ್ಸ್‌ನಿಂದ ಹೊರಗುಳಿಯಲು ತೀರ್ಮಾನಿಸಿದ ನೀರಜ್ ಚೋಪ್ರಾ
ನೀರಜ್ ಚೋಪ್ರಾ ಕಳೆದ 13 ತಿಂಗಳಲ್ಲಿ ಅವಿಸ್ಮರಣೀಯ ಕ್ಷಣಗಳಿಗೆ ಸಾಕ್ಷಿಯಾಗಿದ್ದಾರೆ. 2021ರ ಆಗಸ್ಟ್ 7ರಂದು ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಐತಿಹಾಸಿಕ ಚಿನ್ನ ಗೆದ್ದ ನೀರಜ್, ಕಳೆದ ತಿಂಗಳು ಅಮೆರಿಕದ ಯೂಜೀನ್‌ನಲ್ಲಿ ನಡೆದ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ಬೆಳ್ಳಿ ಪದಕ ಗೆದ್ದರು. ಒಲಿಂಪಿಕ್ಸ್, ವಿಶ್ವ ಚಾಂಪಿಯನ್‌ಶಿಪ್ ಬಳಿಕ ಅತಿಹೆಚ್ಚು ಮಹತ್ವ ಪಡೆದಿರುವ ಡೈಮಂಡ್ ಲೀಗ್ ಫೈನಲ್ಸ್‌ನಲ್ಲಿ ಚಿನ್ನದ ಸಾಧನೆ ಮಾಡಿದ್ದರು.
ನ್ಯಾಷನಲ್ ಗೇಮ್ಸ್‌ನಿಂದ ಹೊರಗುಳಿಯಲು ತೀರ್ಮಾನಿಸಿದ ನೀರಜ್ ಚೋಪ್ರಾ:
ಗಾಯದ ಸಮಸ್ಯೆಯಿಂದ ಸಂಪೂರ್ಣ ಚೇತರಿಸಿಕೊಂಡು 2023ರಲ್ಲಿ ನಡೆಯಲಿರುವ ಮಹತ್ವದ ಟೂರ್ನಿಗಳನ್ನು ಗಮನದಲ್ಲಿಟ್ಟುಕೊಂಡು ಈ ಬಾರಿಯ ನ್ಯಾಷನಲ್ ಗೇಮ್ಸ್‌ನಲ್ಲಿ ಪಾಲ್ಗೊಳ್ಳದಿರಲು ನೀರಜ್ ಚೋಪ್ರಾ ತೀರ್ಮಾನಿಸಿದ್ದಾರೆ. 36ನೇ ನ್ಯಾಷನಲ್ ಗೇಮ್ಸ್ ಕ್ರೀಡಾಕೂಟವು ಗುಜರಾತ್‌ನಲ್ಲಿ ನವೆಂಬರ್ 27ರಿಂದ ಅಕ್ಟೋಬರ್ 10ರ ವರೆಗೆ ನಡೆಯಲಿದೆ. ಗುಜರಾಥ್‌ನ 6 ನಗರಗಳಾದ ಗಾಂಧಿನಗರ, ಅಹಮದಾಬಾದ್, ಸೂರತ್, ವಡೋದರಾ, ರಾಜ್‌ಕೋಟ್ ಹಾಗೂ ಭಾವ್‌ನಗರಗಳಲ್ಲಿ ಈ ಬಾರಿಯ ನ್ಯಾಷನಲ್ ಗೇಮ್ಸ್ ಚಾಂಪಿಯನ್‌ಶಿಪ್ ಜರುಗಲಿದೆ.